ಬೇಸಿಗೆ ಬಂತೆಂದರೆ ಕೆಲವರಿಗೆ ಮುಜುಗರ ಶುರುವಾಗುತ್ತದೆ ಅದಕ್ಕೆ ಕಾರಣ ಅವರ ಮೈಬಿಸಿಲಿಗೆ ಬೆವರಿ ದುರ್ಗಂಧ ಬೀರುತ್ತಿರುತ್ತದೆ. ಹೀಗಾಗಿ ನಾಲ್ಕು ಜನರ ಮಧ್ಯೆ ಇದ್ದಾಗ ಅವರೇನು ತಿಳಿಯುತ್ತಾರೋ ಎಂಬ ಭಯ ಕಾಡುತ್ತಿರುತ್ತದೆ.
ಸಾಮಾನ್ಯವಾಗಿ ಬೇಸಿಗೆಯ ಬಿಸಿಲಲ್ಲಿ ಓಡಾಡಿದಾಗ ಬೆವರು ಬರುವುದು ಇದ್ದೇ ಇರುತ್ತದೆ. ಕೆಲವರಿಗೆ ಎಷ್ಟೇ ಬೆವರಿದರೂ ಮೈದುರ್ಗಂಧ ಬರುವುದಿಲ್ಲ. ಆದರೆ ಇನ್ನು ಕೆಲವರು ಸ್ವಲ್ಪ ಬೆವರಿದರೂ ಸಾಕು ಮೈ ದುರ್ಗಂಧ ಬೀರುತ್ತದೆ. ಇಂತಹವರು ಅಯ್ಯೋ ಈ ಬೇಸಿಗೆ ಯಾಕಪ್ಪಾ ಬರುತ್ತದೆ ಎಂದು ಮನಸ್ಸಿನಲ್ಲೇ ಬೇಸರ ಮಾಡಿಕೊಳ್ಳುತ್ತಿರುತ್ತಾರೆ.
ಕಚೇರಿಗಳಲ್ಲಿ ಜತೆಯಲ್ಲಿ ಕೆಲಸ ಮಾಡುವಾಗ ಮೈದುರ್ಗಂಧ ಬೀರುತ್ತಿದ್ದರೆ ಅದು ಸಹವರ್ತಿಗಳಿಗೆ ಅಸಹ್ಯವೆನಿಸದಿರದು. ಹಾಗಾಗಿ ನಾವುಗಳು ಅದರತ್ತ ಹೆಚ್ಚು ಗಮನಹರಿಸಿ ಆದಷ್ಟು ನಮ್ಮ ಮೈದುರ್ಗಂಧ ಬೀರದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ಬಹಳಷ್ಟು ಜನಕ್ಕೆ ತಮ್ಮ ಮೈ ದುರ್ಗಂಧ ಬೀರುತ್ತಿದ್ದು ಅದು ಬೇರೆಯವರಿಗೆ ಮುಜುಗರ ತರುತ್ತಿದೆ ಎಂಬ ಅರಿವೇ ಇರುವುದಿಲ್ಲ. ಒಂದೊಮ್ಮೆ ಮುಖದ ಕಾಳಜಿ ವಹಿಸಿ ಒಂದಷ್ಟು ಕ್ರೀಮ್, ಪೌಡರ್ ಬಳಸಿ ಸುಂದರವಾಗಿ ಕಾಣುವಂತೆ ನೋಡಿಕೊಂಡರೂ ತಮ್ಮ ಶರೀರದ ಬಗ್ಗೆ ಗಮನಹರಿಸುವುದಿಲ್ಲ. ಇದು ಕೆಲವೊಮ್ಮೆ ಮೈ ದುರ್ಗಂಧ ಬೀರಲು ಕಾರಣವಾಗುತ್ತದೆ.
ಮೊದಲಿಗೆ ನಾವು ಶರೀರದ ದುರ್ಗಂಧವನ್ನು ತಡೆಗಟ್ಟಬೇಕಾದರೆ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶರೀರ ಬೆವರಿ ಅಲ್ಲಲ್ಲೆ ನಿಂತುಕೊಳ್ಳುವುದರಿಂದಲೂ ಶರೀರದಿಂದ ದುರ್ವಾಸನೆ ಬರಬಹುದು. ಹೀಗಾಗಿ ನಾವು ನಮ್ಮ ಬಗ್ಗೆ ಒಂದಷ್ಟು ಆಸಕ್ತಿ ಮತ್ತು ಕಾಳಜಿ ವಹಿಸಿ ಶರೀರವನ್ನು ಶುಚಿಯಾಗಿಟ್ಟುಕೊಳ್ಳುವ ಮೂಲಕ ಇದನ್ನು ತಡೆಯಲು ಮುಂದಾಗಬೇಕು. ನಮ್ಮ ಸೌಂದರ್ಯ, ಆಕರ್ಷಣೆ ಎಲ್ಲವೂ ನಮ್ಮ ಶರೀರ ಬೀರುವ ದುರ್ಗಂಧದ ಮುಂದೆ ಗೌಣವಾಗಿ ಬಿಡುವುದರಿಂದ ಒಂದಷ್ಟು ಕ್ರಮಗಳನ್ನು ಅನುಸರಿಸುವುದರಿಂದ ಇದನ್ನು ತಡೆಯಲು ಸಾಧ್ಯವಿದೆ.
ಬೀಡಿ, ಸಿಗರೇಟ್, ಗುಟ್ಕಾ, ನಶ್ಯ ಮುಂತಾದ ದುಶ್ಚಟ ಹೊಂದಿರುವವರು ಅದನ್ನು ಮೊದಲು ತ್ಯಜಿಸಬೇಕು. ತಾವು ಸೇದಿ ಬಂದ ಸಿಗರೇಟ್ನ ವಾಸನೆ ನೀವು ಎದುರು ನಿಂತು ಮಾತನಾಡುತ್ತಿರುವ ವ್ಯಕ್ತಿಗೆ ವಾಕರಿಕೆ ತರಬಹುದು. ಇನ್ನು ಮೂಗು, ಕಿವಿ, ಬಾಯಿ, ಚರ್ಮಗಳಿಗೆ ಸಂಬಂಧಿಸಿದಂತೆ ಕಾಯಿಲೆಗಳಿದ್ದರೆ ವೈದ್ಯರಿಗೆ ತೋರಿಸಿ ಅವರು ನೀಡುವ ಸಲಹೆಗಳನ್ನು ಅನುಸರಿಸಬೇಕು. ಹೆಚ್ಚಿನ ಜನರಿಗೆ ಕಂಕುಳಿನಿಂದಲೇ ದುರ್ವಾಸನೆ ಬರುತ್ತದೆ. ಕಾರಣ ಕಂಕುಳಲ್ಲಿ ಬೆಳೆಯುವ ಅನಗತ್ಯ ಕೂದಲುಗಳನ್ನು ತೆಗೆಯದಿರುವುದಾಗಿದೆ. ಇದನ್ನು ಆಗಾಗ್ಗೆ ತೆಗೆದು ಸ್ವಚ್ಛಗೊಳಿಸುವುದು ಅಗತ್ಯವಾಗಿದೆ.
ಪ್ರತಿದಿನ ಕನಿಷ್ಟ ಎರಡು ಲೀಟರ್ ನಷ್ಟು ನೀರನ್ನು ಕುಡಿಯಬೇಕು. ತಲೆ ಕೂದಲು ಕೂಡ ವಾಸನೆ ಬೀರುತ್ತದೆ. ಆದ್ದರಿಂದ ಯುವಕರಾದರೆ ಚಿಕ್ಕದಾಗಿ ಕ್ಷೌರ ಮಾಡಿ ತಲೆಯಲ್ಲಿನ ಹೊಟ್ಟನ್ನು ನಿಯಂತ್ರಿಸಲು ಮುಂದಾಗಬೇಕು. ಸ್ನಾನ ಮಾಡುವಾಗ ಕಂಕುಳು, ಕಿವಿ, ಸೇರಿದಂತೆ ಇನ್ನಿತರ ಭಾಗಗಳನ್ನು ಚೆನ್ನಾಗಿ ಸೋಪು ಬಳಸಿ ತೊಳೆಯಬೇಕು. ವ್ಯಾಯಾಮ, ಮುಂಜಾನೆ ವಾಕಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬಿಗಿಯಾದ ಉಡುಪುಗಳನ್ನು ಧರಿಸದೆ, ಶರೀರಕ್ಕೆ ಗಾಳಿಯಾಡುವ ಹಾಗೂ ಹತ್ತಿಬಟ್ಟೆಗೆ ಆದ್ಯತೆ ನೀಡಬೇಕು. ಬೇರೆಯವರು ಬಳಸಿದ ಟವಲ್ ಬಳಸದೆ ಒಗೆದು ಒಣಗಿಸಿ ಬಳಸಬೇಕು. ಬೇರೆಯವರಿಗೆ ಅಸಹ್ಯ ಎನಿಸದ ಉತ್ತಮ ಸುವಾಸನೆ ಬೀರುವ ಸುಗಂಧ ದ್ರವ್ಯಗಳನ್ನು ಲೇಪಿಸಿಕೊಳ್ಳಬೇಕು. ಅವು ಶರೀರಕ್ಕೆ ಒಗ್ಗುವಂತಿದ್ದರೆ ಮಾತ್ರ ಬಳಸಬೇಕು. ವೈದ್ಯರ ಸಲಹೆಯೂ ಅಗತ್ಯವಾಗಿರುತ್ತದೆ.
ಹಲ್ಲಿನ ಅಥವಾ ಒಸಡುಗಳ ತೊಂದರೆಯಿದ್ದರೆ ದಂತ ವೈದ್ಯರ ಸಲಹೆಯಂತೆ ಸೂಕ್ತ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವುದು ಅಗತ್ಯ. ಹಲ್ಲಿನ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಕೆಲವು ಚುಯಿಂಗಮ್ ಅಗೆಯುವುದರಿಂದ ಬಾಯಿಯಲ್ಲಿ ಜೊಳ್ಳುರಸದೊಂದಿಗೆ ದುರ್ವಾಸನೆ ಸಮಸ್ಯೆ ಕಡಿಮೆಯಾಗಲು ಸಾಧ್ಯವಾಗುತ್ತದೆ. ಬಾಯಿಯಲ್ಲಿ ಲವಂಗದ ಚೂರುಗಳನ್ನು ಚಪ್ಪರಿಸುವುದರಿಂದ ದುರ್ವಾಸನೆ ತಡೆಯಬಹುದು.
ಬಾಯಿಯೊಳಗೆ ಸಿಂಪಡಿಸುವ ಕೆಲವು ರಾಸಾಯನಿಕ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಅದನ್ನು ಕೂಡ ಉಪಯೋಗಿಸಬಹುದು. ಆದರೆ ಉಪಯೋಗಿಸುವ ಮುನ್ನ ವೈದ್ಯರ ಸಲಹೆ ಅಗತ್ಯ. ಬಹಳಷ್ಟು ಜನರಿಗೆ ದೇಹದ ದುರ್ಗಂಧ ರೋಗವಲ್ಲ ಅದು ನಾವು ಶುಚಿತ್ವಕ್ಕೆ ಗಮನ ನೀಡದ್ದರಿಂದ ಬಂದಿರುವ ತೊಂದರೆ ಎಂಬುದರ ಅರಿವಿಲ್ಲ. ಮೊದಲಿಗೆ ನಮ್ಮ ಶರೀರದ ಬಗ್ಗೆ ಕಾಳಜಿ ವಹಿಸಿದ್ದೇ ಆದರೆ ಇದನ್ನು ಸುಲಭವಾಗಿ ತಡೆಯಲು ಸಾಧ್ಯವಾಗುತ್ತದೆ.
ಬೇಸಿಗೆಯಲ್ಲಿ ಶರೀರ ಸದಾ ಉಷ್ಣತೆಯಿಂದ ಕೂಡಿರುವುದರಿಂದ ಟೀ, ಕಾಫಿ, ಸೇವನೆಯನ್ನು ಆದಷ್ಟು ಕಡಿಮೆ ಮಾಡಿ ಎಳನೀರು, ಜ್ಯೂಸ್ ನಂತಹ ತಂಪು ಪಾನೀಯ ಮತ್ತು ಹಣ್ಣು, ಹಸಿತರಕಾರಿಗಳನ್ನು ಸೇವಿಸುವುದು ತುಂಬಾ ಒಳ್ಳೆಯದಾಗುತ್ತದೆ ಎಂಬುದನ್ನು ಮರೆಯಬಾರದು.