ಬೇಸಿಗೆ ದಿನಗಳಲ್ಲಿ ನಾವು ಆರೋಗ್ಯದ ಬಗ್ಗೆ ಎಷ್ಟೇ ಎಚ್ಚರ ವಹಿಸಿದರೂ ಸಾಲದಾಗುತ್ತದೆ. ತಿನ್ನುವ ಆಹಾರ, ಕುಡಿಯುವ ನೀರು, ದೇಹವನ್ನು ಸ್ಪರ್ಶಿಸುವ ಸೂರ್ಯನ ಕಿರಣಗಳು ಕೂಡ ನಮ್ಮ ದೇಹದ, ಆರೋಗ್ಯದ ಮೇಲೆ ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ.
ಒಂದೆಡೆ ಬಿಸಿಲಿಗೆ ಸಿಕ್ಕಿ ದೇಹ ಬೆವರುತ್ತಿದ್ದರೆ, ಮತ್ತೊಂದೆಡೆ ನಮ್ಮನ್ನು ಮುತ್ತಿಕೊಳ್ಳುವ ಧೂಳು ಕೂಡ ದೇಹದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯದಲ್ಲಿ ಆರೋಗ್ಯದೊಂದಿಗೆ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳುವುದು ಕೂಡ ಸವಾಲಿನ ಕೆಲಸವಾಗುತ್ತದೆ. ಅದರಲ್ಲೂ ಹೊರಗಡೆ ಹೋಗಿ ಕೆಲಸ ಮಾಡುವವರಿಗಂತು ಬೇಸಿಗೆ ಹಲವು ರೀತಿಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಪ್ರತಿಯೊಬ್ಬ ಮನುಷ್ಯ ಹೆಣ್ಣಾಗಲಿ, ಗಂಡಾಗಲಿ ತಾನು ಸುಂದರವಾಗಿ ಕಾಣಬೇಕೆಂದು ಬಯಸುವುದು ಸಹಜ. ಅಷ್ಟೇ ಅಲ್ಲ ಅದರತ್ತ ಕಾಳಜಿ ವಹಿಸುವುದು ಮಾಮೂಲಿ. ಆದರೆ ಬೇಸಿಗೆಯ ದಿನಗಳಲ್ಲಿ ಒಂದಲ್ಲ ಒಂದು ಕಾರಣಕ್ಕೆ ಚರ್ಮದ ಮೇಲೆ ಒಂದಲ್ಲೊಂದು ಪರಿಣಾಮ ಬೀರುತ್ತಲೇ ಇರುತ್ತದೆ. ಹೀಗಾಗಿ ದೇಹದ ಆರೋಗ್ಯದೊಂದಿಗೆ ಹೊರಗೆ ಎಲ್ಲರಿಗೂ ಕಾಣುವ ಚರ್ಮದ ಆರೋಗ್ಯ ಕಾಪಾಡುವುದು ಬಹುಮುಖ್ಯವಾಗುತ್ತದೆ.
ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವ ಕಾರಣ ದೇಹದ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ಆಹಾರ ಸೇವನೆಯಲ್ಲಿಯೂ ಹೆಚ್ಚಿನ ಮುತುವರ್ಜಿ ವಹಿಸುವುದು ಅಗತ್ಯ. ಏಕೆಂದರೆ ನಾವು ಸೇವಿಸುವ ಆಹಾರ ಕೂಡ ನಮ್ಮ ಸುಂದರ ತ್ವಚೆಯನ್ನು ಕಾಪಾಡುವ ಕೆಲಸ ಮಾಡುತ್ತದೆ. ದೇಹವು ಹಲವು ಸತ್ವಗಳನ್ನು ನಿರೀಕ್ಷಿಸುತ್ತದೆ. ಅದು ಸಿಗದಿದ್ದಾಗ ಚರ್ಮದ ಮೇಲೆ ಪರಿಣಾಮ ಬೀರುತ್ತದೆ.
ಜೀವಸತ್ವಗಳು ಕಾಳುಗಳು, ಬಾಳೆ ಹಣ್ಣು, ಬೆಳ್ಳುಳ್ಳಿ, ಈರುಳ್ಳಿ ಮೊದಲಾದವುಗಳನ್ನು ಸೇವಿಸುವುದರಿಂದ ಅದರಲ್ಲಿರುವ ಜೀವ ಸತ್ವಗಳು ದೇಹದಲ್ಲಿ ಸೇರ್ಪಡೆಯಾಗಿ ಸೋಂಕು ತರುವ ಬ್ಯಾಕ್ಟೀರಿಯಾಗಳೊಂದಿಗೆ ಹೋರಾಡಿ ಆರೋಗ್ಯವನ್ನು ಕಾಪಾಡುತ್ತದೆ.
ಸರಿಯಾಗಿ ಊಟ ಮಾಡದಿರುವುದರಿಂದ ರಕ್ತಹೀನತೆವುಂಟಾಗಿ ಅದರಿಂದ ತ್ವಚೆ ಕಾಂತಿ ಕಳೆದುಕೊಳ್ಳುತ್ತದೆ. ಈ ಸಂದರ್ಭ ಪೌಷ್ಠಿಕಾಂಶಗಳುಳ್ಳ ಹಾಲು ಮೊಸರು, ತುಪ್ಪ, ಮೊಟ್ಟೆ ಮೊದಲಾದ ಪದಾರ್ಥಗಳನ್ನು ಸೇವಿಸಬೇಕು. ನೀರನ್ನು ಹೇರಳವಾಗಿ ಸೇವಿಸಿದರೆ ಇದು ಚರ್ಮದ ರಕ್ಷಣೆಯನ್ನು ಮಾಡುವುದಲ್ಲದೇ ಅದರ ಹೊಳಪನ್ನು ಹೆಚ್ಚಿಸುತ್ತದೆ.
ಬ್ಲಾಕ್ ಬೆರ್ರಿ, ಬ್ಲೂ ಬೆರ್ರಿ, ಹುಳಿಯಿಲ್ಲದ ದಾಕ್ಷಿ ಹಣ್ಣುಗಳು, ಸ್ಟ್ರಾ ಬೆರ್ರಿ, ಟೊಮೇಟೊದಲ್ಲಿರುವ ಲೈಕೊಪಿನ್, ದಾಳಿಂಬೆಯಲ್ಲಿರುವ ಪಾಲಿಫೆನಾಲ್ಸ್ ಇವೆಲ್ಲವೂ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕಾರಿಯಾಗಿವೆ ಆದ್ದರಿಂದ ಈ ಹಣ್ಣುಗಳನ್ನು ಬೇಸಿಗೆಯಲ್ಲಿ ಅತಿ ಹೆಚ್ಚಾಗಿ ಸೇವಿಸುವುದು ಒಳ್ಳೆಯದು.
ಮೊಟ್ಟೆ, ಸ್ಪಿನಾಚ್, ಮೊಟ್ಟೆ ಬಿಳಿ ಭಾಗ, ಕಡಿಮೆ ಕೊಬ್ಬಿನಂಶ ಹೊಂದಿರುವ ಡೈರಿ ಉತ್ಪನ್ನಗಳು, ಬ್ರೊಕೋಲಿ, ಕ್ಯಾರೆಟ್ ನಲ್ಲಿರುವ ಕೆರೊಟೆನಾಯಿಡ್ಸ್ ಚರ್ಮದ ಬಿಗಿತಕ್ಕೆ ಕಾರಣವಾಗುವಂತಹ ಅಂಶಗಳನ್ನು ಹೊಂದಿರುವುದರಿಂದ ಅವುಗಳನ್ನು ಸೇವಿಸಬಹುದಾಗಿದೆ. ನೆಲ್ಲಿಕಾಯಿ, ಸೀಬೆ ಕಾಯಿ, ಸಿಟ್ರಿಕ್ ಆಸಿಡ್ ಇರುವಂತಹ ಹಣ್ಣುಗಳು, ವಿಟಮಿನ್ ಈ ಭರಿತ ತರಕಾರಿಗಳು, ಎಣ್ಣೆಗಳು, ಬೀಜಗಳು ಅದರಲ್ಲಿ ಬಾದಾಮಿ, ಸೂರ್ಯಕಾಂತಿ ಎಣ್ಣೆ, ಆಲಿವ್, ಇವೆಲ್ಲವೂ ಸುಕ್ಕನ್ನು ನಿವಾರಿಸುವ ಅಂಶಗಳನ್ನು ಹೊಂದಿದೆ.
ತಣ್ಣನೆಯ ನೀರು, ಮಾಂಸಭರಿತ ಸಾಲೋಮನ್ ಮೀನು, ಆಲಿವ್, ಅವಕಡ, ಗಾಢ ಹಸಿರು ಬಣ್ಣದ ಎಲೆಗಳಿರುವ ತರಕಾರಿಗಳನ್ನು ನಮ್ಮ ನಿತ್ಯದ ಆಹಾರಗಳಲ್ಲಿ ಬಳಕೆ ಮಾಡಿಕೊಳ್ಳಬೇಕು. ಬಿ.ಕಾಂಪ್ಲೆಕ್ಸ್ ಅಂಶ ಹೊಂದಿರುವ ಆಹಾರದ ಕಡೆಗೂ ಆದ್ಯತೆ ನೀಡಬೇಕು ಗ್ರೀನ್ ಟೀ ಸೇವನೆ ಉತ್ತಮ. ಇದೆಲ್ಲದರ ಜೊತೆಗೆ ಸಮಯಕ್ಕೆ ಸರಿಯಾಗಿ ನಿದ್ದೆ, ಊಟ ಮುಂಜಾನೆ ಒಂದಷ್ಟು ಹೊತ್ತು ವ್ಯಾಯಾಮ ಕೂಡ ಚರ್ಮದ ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹ ಆರೋಗ್ಯವಾಗಿದ್ದರೆ ಚರ್ಮ ಆರೋಗ್ಯದಿಂದ ಕೂಡಿ ಕಾಂತಿಯುತವಾಗಿರಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಬೇಸಿಗೆಯ ದಿನಗಳಲ್ಲಿ ದೇಹಕ್ಕೆ ಉಪಯುಕ್ತವಾಗುವ ಆಹಾರವನ್ನು ಸೇವಿಸುವತ್ತ ಗಮನಹರಿಸುವುದು ಒಳ್ಳೆಯದು…