ಸಾಮಾನ್ಯವಾಗಿ ದೇಹದಲ್ಲಿ ಏನಾದರೊಂದು ಸಮಸ್ಯೆ ಕಾಣಿಸಿಕೊಂಡಾಗ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಿ ಗುಣಪಡಿಸುತ್ತೇವೆ. ಮತ್ತೆ ಅದು ಕಾಣಿಸುತ್ತಿಲ್ಲ ಎಂಬ ಸಮಾಧಾನದಿಂದ ದಿನ ಕಳೆಯುತ್ತೇವೆ.
ನಮ್ಮ ದೇಹವನ್ನು ಬಾಧಿಸುವ ಕೆಲವು ರೋಗಗಳೇ ಹಾಗೆ. ಅವು ಚಿಕಿತ್ಸೆ ಬಳಿಕ ಸಂಪೂರ್ಣ ಗುಣವಾಗಿ ಬಿಡುತ್ತವೆ. ಮತ್ತೆ ಕೆಲವು ರೋಗಗಳು ಒಮ್ಮೆ ನಮ್ಮ ದೇಹವನ್ನು ಪ್ರವೇಶಿಸಿದರೆ ಅವು ವಾಸಿಯಾಗುವುದಿಲ್ಲ ಆಗಾಗ್ಗೆ ಕಾಡುತ್ತಲೇ ಇರುತ್ತವೆ ಇವುಗಳ ನಿಯಂತ್ರಣವನ್ನಷ್ಟೆ ಮಾಡಿಕೊಳ್ಳಬಹುದು. ಕಾಯಿಲೆಗಳು ಮನುಷ್ಯನಿಗೆ ಬಾರದೆ ಕಲ್ಲು, ಮರಕ್ಕೆ ಬರುತ್ತಾ ಎಂಬುದು ಹಿಂದಿನಿಂದಲೂ ಹೇಳಿಕೊಂಡು ಬರುತ್ತಿರುವ ಮಾತು. ಇದು ನಿಜ. ಕಾಯಿಲೆ ಬಂತೆಂದು ತಲೆಕೆಡಿಸಿಕೊಳ್ಳದೆ ಅದಕ್ಕೊಂದು ಚಿಕಿತ್ಸೆ ಮಾಡುತ್ತಾ ಅದನ್ನು ಮರೆತು ಖುಷಿಯಾಗಿ ಬದುಕೋದನ್ನು ರೂಢಿಸಿಕೊಳ್ಳಬೇಕು. ಆಗ ನಾವು ಸ್ವಲ್ಪ ಮಟ್ಟಿಗೆ ನಮ್ಮ ರೋಗದ ನೋವನ್ನು ಮರೆಯಲು ಸಾಧ್ಯವಿದೆ.
ನಮ್ಮಲ್ಲಿ ಹೆಚ್ಚು ಜನ ದೇಹಕ್ಕೆ ಅನಾರೋಗ್ಯ ಬಾಧಿಸಿದರೆ ಮಾನಸಿಕವಾಗಿ ಜರ್ಜರಿತರಾಗಿ ಬಿಡುತ್ತಾರೆ. ಕಾಯಿಲೆಗಳು ವಾಸಿಯಾಗಬೇಕಾದರೆ ಮಾನಸಿಕ ಆರೋಗ್ಯ ಮುಖ್ಯ. ಕಾಯಿಲೆ ಬಗ್ಗೆ ಯೋಚಿಸುತ್ತಾ ಕುಳಿತುಕೊಂಡರೆ ಮಾನಸಿಕ ಖಿನ್ನತೆಯುಂಟಾಗಿ ನಮ್ಮ ಮೇಲೆ ನಮಗೆ ಜಿಗುಪ್ಸೆ ಬಂದು ಅದರಿಂದ ಅನಾಹುತವೇ ಜಾಸ್ತಿ ಎಂದರೆ ತಪ್ಪಗಲಾರದು. ಆದ್ದರಿಂದ ಎಂತಹ ಪರಿಸ್ಥಿತಿಯಲ್ಲೂ ನಮ್ಮಲ್ಲಿ ಖಿನ್ನತೆ ಆವರಿಸಲು ಬಿಡಬಾರದು. ಸದಾ ನಮ್ಮಲ್ಲೊಂದು ಆಹ್ಲಾದಕರ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕು. ಇದು ನಮ್ಮಿಂದ ನಾವೇ ಮಾಡಿಕೊಳ್ಳಬೇಕಾದ ಕ್ರಿಯೆ ಆಗಿರುವುದರಿಂದ ಏನೇ ಆಗಲಿ ನಾನು ಖುಷಿಯಾಗಿಯೇ ಇರುತ್ತೇನೆ ಎಂಬ ಸಂಕಲ್ಪ ಮಾಡಬೇಕು. ನಾನು ಅನುಭವಿಸುತ್ತಿರುವ ಸಮಸ್ಯೆ ನನ್ನದೊಬ್ಬನದಲ್ಲ. ಇದಕ್ಕಿಂತ ದೊಡ್ಡ ಸಮಸ್ಯೆಯನ್ನು ಇನ್ನೆಷ್ಟೋ ಮಂದಿ ಎದುರಿಸುತ್ತಿಲ್ಲವೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಸಮಾಧಾನವನ್ನು ನಮಗೆ ನಾವೇ ಮಾಡಿಕೊಂಡರೆ ನಮ್ಮದು ಸಮಸ್ಯೆ ಎನಿಸುವುದೇ ಇಲ್ಲ.
ಮುಂಜಾನೆಯಿಂದಲೇ ನಾವು ಲವಲವಿಕೆಯಲ್ಲಿದ್ದಿದ್ದೇ ಆದರೆ ನಮ್ಮ ಮನಸ್ಸು ಪ್ರಾಂಜಲವಾಗಿದ್ದು, ಒಳ್ಳೆಯ ಕಾರ್ಯಗಳಲ್ಲಿ ತೊಡಗುವಂತೆ ಮಾಡುತ್ತದೆ. ಜತೆಗೆ ಆರೋಗ್ಯಕರ ಮನಸ್ಸನ್ನು ಹೊಂದಲು ಅನುಕೂಲ ಮಾಡಿಕೊಡುತ್ತದೆ. ಇವತ್ತು ನಮ್ಮಲ್ಲಿ ಎಲ್ಲ ರೀತಿಯ ಐಷಾರಾಮಿ ವಸ್ತುಗಳು ಇದ್ದರೂ ನಾವ್ಯಾರು ಸುಖಿಗಳಾಗಿ ಬದುಕಲು ಸಾಧ್ಯವಾಗುತ್ತಿಲ್ಲ ಏಕೆಂದರೆ ನಾವು ಸೌಲಭ್ಯಗಳನ್ನು, ಅಧಿಕಾರಗಳನ್ನು ಪಡೆದಂತೆಲ್ಲ ಸೋಮಾರಿಗಳಾಗುತ್ತಾ ಹೋಗುತ್ತಿದ್ದೇವೆ. ಜತೆಗೆ ಇನ್ನಷ್ಟು ಬೇಕೆನ್ನುವ ತಹತಹಿಕೆ ಕೂಡ ಮಾನಸಿಕವಾಗಿ ನೆಮ್ಮದಿ ಕಳೆದುಕೊಳ್ಳುವಂತೆ ಮಾಡುತ್ತಿದೆ. ನಮಗೆ ಒಂದಷ್ಟು ಸಮಯವನ್ನು ಖುಷಿಯಾಗಿ ಕಳೆಯಲು ಸಾಧ್ಯವಾಗುವುದೇ ಇಲ್ಲ.
ಇವತ್ತು ನಮ್ಮಲ್ಲಿ, ನಮ್ಮ ಕುಟುಂಬಗಳಲ್ಲಿ ಆಹ್ಲಾದಕರ ವಾತಾವರಣವೇ ನಿರ್ಮಾಣವಾಗುತ್ತಿಲ್ಲ. ನಾವು ಯಾರೊಂದಿಗೂ ಬೆರೆಯುತ್ತಿಲ್ಲ. ನಾವು ನಮ್ಮ ಅಂತಸ್ತಿಗೆ ತಕ್ಕವರೊಂದಿಗೆ ಮಾತ್ರ ಒಡನಾಟ ಇಟ್ಟುಕೊಳ್ಳಬೇಕೆಂಬ ಮನೋಭಾವವೂ ಇದಕ್ಕೆ ಕಾರಣವಾಗಬಹುದು.
ಇಂತಹ ಮನೋಭಾವ ನಮ್ಮ ಸಂಬಂಧಗಳ ನಡುವೆ ಅಂತರ ಸೃಷ್ಟಿಸಿ ಮುಂದೆ ಕಂದಕಗಳಾಗಿ ಪರಿಣಮಿಸಿದಾಗ ನಮ್ಮನ್ನು ಏಕಾಂಗಿತನ ಕಾಡುವುದಂತು ಸತ್ಯ. ಆಗ ನಾವು ಸಂಪಾದಿಸಿದ ಒಂದೊಳ್ಳೆಯ ಸಂಬಂಧ, ಸ್ನೇಹ, ಒಳ್ಳೆತನ ಹೊರತು ಪಡಿಸಿ ಮತ್ಯಾವುದೂ ನಮಗೆ ಖುಷಿ ಕೊಡಲಾರವು. ನಾವು ನಮ್ಮ ಸುತ್ತಲೂ ನಾನು, ನನ್ನದು, ಆಸ್ತಿ, ಅಂತಸ್ತು, ಅಧಿಕಾರ ಎಂಬ ಗೋಡೆಗಳನ್ನು ನಿರ್ಮಿಸಿಕೊಳ್ಳುವ ಬದಲು ಎಲ್ಲರೊಂದಿಗೆ ಬೆರೆತು ಬದುಕುವ ಒಂದು ಆಹ್ಲಾದಕರ ವಾತಾವರಣವನ್ನು ಬೆಳೆಸಿಕೊಳ್ಳೋಣ ಏಕೆಂದರೆ ನಮ್ಮನ್ನು ಕಾಪಾಡೋದು ಅದು ಮಾತ್ರ.