ಸಾಮಾನ್ಯವಾಗಿ ಬೇಸಿಗೆ ಕಾಲವೆಂದರೆ ಅದು ಒಂದು ರೀತಿಯಲ್ಲಿ ಕಾಯಿಲೆ ಹರಡುವ ಸಮಯ ಎಂದರೆ ತಪ್ಪಾಗಲಾರದು. ಸ್ವಲ್ಪ ಎಡವಿದರೂ ಒಂದಲ್ಲೊಂದು ರೋಗಕ್ಕೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಗಲಲ್ಲಿ ಶ್ರಮವಹಿಸಿ ಕೆಲಸ ಮಾಡುವಂತಿಲ್ಲ. ಬಿಸಿಲಿನ ಪ್ರಖರತೆಗೆ ಬೆವರು ದೇಹದಿಂದ ಹರಿದು ಬಂದು ಸುಸ್ತಾಗುತ್ತದೆ. ಸದಾ ಬಾಯಾರಿಕೆ, ನಿಶಕ್ತಿ ಕಾಣಿಸಿಕೊಳ್ಳುತ್ತದೆ.
ಇನ್ನು ಆಹಾರ ಸೇವನೆಯಲ್ಲಿ ಸ್ವಲ್ಪ ಎಡವಿದರೂ ವಾಂತಿ, ಭೇದಿ, ಇನ್ನಿತರ ಕಾಯಿಲೆಗಳು ಅಡರಿಕೊಳ್ಳುತ್ತವೆ. ಏನೇ ತಿಂದರೂ ಅರಗಿಸಿಕೊಳ್ಳುವ ಶಕ್ತಿ ಇಲ್ಲದೆ ಹೋದರೆ ಆರೋಗ್ಯ ಹದಗೆಡುವ ಸಂದರ್ಭವೇ ಹೆಚ್ಚು. ಬೇಸಿಗೆ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳ ಉಪಟಳವೇ ಹೆಚ್ಚಾಗಿರುವ ಕಾರಣದಿಂದ ಅವು ಕೇವಲ ಒಬ್ಬರನ್ನು ಕಾಡಿ ಹೊರಟು ಹೋಗದೆ, ಒಬ್ಬರಿಂದ ಮತ್ತೊಬ್ಬರಿಗೆ ಹರಡಿ ಬೀದಿ, ಗ್ರಾಮಗಳ ಜನರನ್ನು ಭಯಭೀತರನ್ನಾಗಿಸಿ ಬಿಡುತ್ತದೆ. ಹೀಗಾಗಿಯೇ ಬೇಸಿಗೆಯ ದಿನಗಳಲ್ಲಿ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ವೈಯಕ್ತಿಕವಾಗಿ ವ್ಯಕ್ತಿ ಎಷ್ಟೇ ಜಾಗರೂಕತೆಯಿಂದ ಇದ್ದರೂ ಕೆಲವೊಮ್ಮೆ ಸಾಂಕ್ರಾಮಿಕ ರೋಗಗಳು ಬೇರೆ ಬೇರೆ ಕಾರಣಗಳಿಗೆ ನಮ್ಮನ್ನು ಕಾಡಬಹುದು. ಬೀದಿಯಲ್ಲಿರುವ ಚರಂಡಿಗಳಲ್ಲಿ ತ್ಯಾಜ್ಯಗಳು ಸರಿಯಾಗಿ ಹರಿಯದೆ, ಸೊಳ್ಳೆ ಇನ್ನಿತರ ಕ್ರಿಮಿ ಕೀಟಗಳಿಗೆ ಆವಾಸ ಸ್ಥಾನವಾಗಿ ಮಾರ್ಪಟ್ಟು ಅದರಿಂದಲೂ ರೋಗ ಬರಬಹುದು. ಇಂತಹ ಪರಿಸ್ಥಿತಿಯಲ್ಲಿ ನಾವೆಷ್ಟೇ ಶುಚಿತ್ವ ಕಾಪಾಡಿದರೂ ಸ್ಥಳೀಯ ಸಂಸ್ಥೆ, ಎಚ್ಚೆತ್ತುಕೊಂಡು ಚರಂಡಿ, ಕಸದ ರಾಶಿ ಇನ್ನಿತರ ಅನೈರ್ಮಲ್ಯಕ್ಕೆ ಕಾರಣವಾಗಿರುವ ಸ್ಥಳಗಳನ್ನು ತೆರವುಗೊಳಿಸಿ ಶುಚಿತ್ವ ಕಾಪಾಡದೆ ಹೋದರೆ ಸಾಂಕ್ರಾಮಿಕ ರೋಗಗಳು ಹರಡಿ ಜೀವಕ್ಕೆ ಕುತ್ತು ತರುವ ಅಪಾಯಗಳಿರುತ್ತವೆ.
ಬೇಸಿಗೆಯಲ್ಲಿ ಹಲವಾರು ರೋಗಗಳು ನಮ್ಮನ್ನು ಕಾಡುತ್ತಿದ್ದು ಅವುಗಳಲ್ಲಿ ವಾಂತಿ ಭೇದಿಯೂ ಒಂದಾಗಿದ್ದು, ಈ ರೋಗ ಬಹಳಷ್ಟು ಸಾರಿ ನಾವು ಕುಡಿಯುವ ನೀರಿನಿಂದಲೇ ಹರಡಿ ಗ್ರಾಮ, ಬಡಾವಣೆ, ಬೀದಿಯ ಜನರಲ್ಲಿ ಸಾಮೂಹಿಕವಾಗಿ ಕಾಣಿಸಿಕೊಂಡು ಆಸ್ಪತ್ರೆ ಸೇರುವಂತೆ ಮಾಡಿ ಬಿಡುತ್ತದೆ. ಇದನ್ನು ತಪ್ಪಿಸುವಲ್ಲಿ ಸ್ಥಳೀಯ ಸಂಸ್ಥೆಗಳ ಮತ್ತು ಆರೋಗ್ಯ ಇಲಾಖೆಯ ಪಾತ್ರ ಬಹು ಮುಖ್ಯವಾಗಿರುತ್ತದೆ. ವಾಂತಿ, ಭೇಧಿಯನ್ನು ತಡೆಯಬೇಕಾದರೆ, ನಗರ ಪ್ರದೇಶದಲ್ಲಿ ಸರಬರಾಜು ಆಗುವ ಕುಡಿಯುವ ನೀರಿನ ಪೈಪ್ಲೈನ್ಗಳು ಸೋರಿಕೆಯಾಗದಂತೆ ಗಮನ ಹರಿಸಿ ಕುಡಿಯುವ ನೀರು ಕಲುಷಿತವಾಗದಂತೆ ಎಚ್ಚರ ವಹಿಸುವುದು ಸ್ಥಳೀಯ ಸಂಸ್ಥೆಗಳ ಜವಬ್ದಾರಿಯಾಗಿರುತ್ತದೆ. ಬೇಸಿಗೆಯಲ್ಲಿ ನೀರಿನ ಸಂಗ್ರಹಣ ಟ್ಯಾಂಕ್ ಗಳನ್ನು ಮತ್ತು ಸಿಸ್ಟಮ್ಗಳನ್ನು ಒಂದು ಬಾರಿ ತೊಳೆದು, ಸ್ವಚ್ಛಗೊಳಿಸಿ ಕ್ಲೋರಿನೇಷನ್ ಮಾಡಿಸುವುದು. ಹಾಗೂ ನಿಯಮಿತವಾಗಿ ಕಾಲ ಕಾಲಕ್ಕೆ ಕ್ಲೋರಿನೇಷನ್ನ್ನು ಮಾಡಿಸುವುದು ಅಗತ್ಯವಾಗಿರುತ್ತದೆ. ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ, ಹೆಚ್2ಎಸ್ ಮೀಡಿಯಾ ಮುಖಾಂತರ ಪರೀಕ್ಷಿಸಿ ಅದರ ಗುಣಮಟ್ಟವನ್ನು ಕಾಪಾಡುವುದು ಬಹುಮುಖ್ಯವಾಗಿರುತ್ತದೆ.
ಬ್ಲೀಚಿಂಗ್ ಪೌಡರ್ ದಾಸ್ತಾನು ನಿರ್ವಹಣೆ ಕ್ಲೋರಿನೇಷನ್ ಮಾಡಲು ಬೇಕಾಗುವ ಅಗತ್ಯ ಬ್ಲೀಚಿಂಗ್ ಪೌಡರ್ ಅನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ಮಟ್ಟದಲ್ಲಿ ನಿರ್ವಹಿಸುವುದಲ್ಲದೆ, ವಿಹೆಚ್ಎಸ್ಸಿ ಉಪಕೇಂದ್ರದ ನಿಧಿ ಹಾಗೂ ಎಆರ್ ಎಸ್ ನಿಧಿ ಲಭ್ಯತೆಯ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಲು ಸ್ಥಳೀಯ ವೈದ್ಯಾಧಿಕಾರಿಗಳು ಸಿದ್ಧರಾಗಿರಬೇಕು. ಕುಡಿಯುವ ನೀರಿನ ಸಂಗ್ರಹಣೆ ತಾಣದ ಸುತ್ತಮುತ್ತಲೂ ಸ್ವಚ್ಛತೆ ಬಗ್ಗೆ ಪರಿಶೀಲಿಸಿ ಗ್ರಾಮ ಪಂಚಾಯಿತಿ ಗಮನಕ್ಕೆ ತರುವ ಕೆಲಸವನ್ನು ಸಂಬಂಧಪಟ್ಟವರು ಅಥವಾ ಜನಪ್ರತಿನಿಧಿಗಳು ಮಾಡಬೇಕಾಗುತ್ತದೆ. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ವಾಂತಿ ಭೇದಿ ಪ್ರಕರಣಗಳನ್ನು ನಿಭಾಯಿಸಲು ಬೇಕಾಗುವ ಔಷಧಿಗಳಾದ ಓ.ಆರ್.ಎಸ್ ದ್ರಾವಣ, ಟೆಟ್ರಸೈಕ್ಲಿನ್, ಸಿಪ್ರೋಪ್ಲಾಕ್ಸಿನ್, ಐವಿ ಪ್ಲ್ಯೂಡ್ಸ್ ಇತ್ಯಾಧಿಗಳ ಅಗತ್ಯ ದಾಸ್ತಾನುಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿರಿಸಿಕೊಂಡು ತುತರ್ು ಸಂದರ್ಭಗಳಲ್ಲಿ ಜನತೆಗೆ ಅದನ್ನು ತಲುಪಿಸುವ ಕಾರ್ಯವನ್ನು ಮಾಡಬೇಕು. ಹೆಚ್ಚು ಜನ ಸೇರುವ ಮದುವೆ, ಜಾತ್ರೆ ಹೀಗೆ ಯಾವುದೇ ಸಮಾರಂಭ ನಡೆಯುವ ಸ್ಥಳಗಳಲ್ಲಿ ಕುಡಿಯುವ ನೀರು ಮತ್ತು ಆಹಾರವನ್ನು ಪರಿಶೀಲಿಸಿ ಸ್ವಚ್ಛತೆಗೆ ಆದ್ಯತೆ ನೀಡುವುದು ಒಳ್ಳೆಯದು. ಅಕ್ಷರ ದಾಸೋಹ ಕಾರ್ಯಕ್ರಮದಡಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಸಮಯದಲ್ಲಿ ಅಡುಗೆ ಮುಖ್ಯಸ್ಥರು, ಸಹಾಯಕರಿಗೆ ಅಡುಗೆ ಮಾಡುವ ಸಮಯದಲ್ಲಿ ತಲೆಗೆ ಕ್ಯಾಪ್, ಕೈಚೀಲಗಳನ್ನು ಧರಿಸುವುದು ಮುಖ್ಯ.
ಬೇಸಿಗೆಯಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತನೂ ಅರಿಯಬೇಕಾದ ಬಹುಮುಖ್ಯ ವಿಚಾರ ಏನೆಂದರೆ ನಮ್ಮ ಸುತ್ತಮುತ್ತ ನಾವೆಷ್ಟು ಸ್ವಚ್ಛತೆಯನ್ನು ಕಾಪಾಡಿಕೊಳ್ಳುತ್ತೇವೆಯೋ ಅಷ್ಟೇ ಒಳ್ಳೆಯದು.