ನಾವು ಎಷ್ಟೇ ಮನಸ್ಸನ್ನು ನಿಯಂತ್ರಣದಲ್ಲಿಟ್ಟರೂ ಕೆಲವೊಮ್ಮೆ ನಮ್ಮನ್ನು ಕಾಮ, ಕ್ರೋಧ, ಪ್ರಲೋಭನೆ, ಲೋಭ ಮುಂತಾದವುಗಳಲ್ಲಿ ಯಾವುದಾದರೊಂದು ನಮ್ಮನ್ನು ಸೆಳೆಯದೆ ಬಿಡಲಾರದು.
ದಿನ ನಿತ್ಯದ ಬದುಕಿನಲ್ಲಿ ಜೀವನ ಸಾಗುತ್ತಿರುವಾಗ ಮನಸ್ಸು ಹುಚ್ಚು ಕುದುರೆಯಂತೆ ಎಲ್ಲೆಂದರಲ್ಲಿ ಓಡಾಡುತ್ತಿರುತ್ತದೆ. ಅದು ಹಾದಿ ತಪ್ಪಿ ಹಿಡಿತ ಮೀರಿದ ಪ್ರಲೋಭನೆಗೆ ಒಳಗಾಗಿ ಬದುಕನ್ನೇ ಹಾಳು ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ಪ್ರಲೋಭನೆಗಳಿಂದ ದೂರವಾಗಬೇಕಾದರೆ ನಮ್ಮ ಮನಸ್ಸನ್ನು ಒಂದಷ್ಟು ಒಳ್ಳೆಯ ಹಾಗೂ ಪ್ರಶಂಶನೀಯವಾದ ಸಂಗತಿಗಳ ಕಡೆಗೆ ತಿರುಗಿಸಬೇಕು. ಮನಸ್ಸಿನೊಳಗೆ ಪ್ರವೇಶಿಸುವ ಸದ್ಭಾವನೆಗಳು ಹೃದಯದಲ್ಲಿ ತುಂಬಿಕೊಂಡಿದ್ದೇ ಆದರೆ, ಅವುಗಳು ಎಲ್ಲ ಪ್ರಲೋಭನೆಗಳನ್ನು ಹಾಗೂ ದುರಾಲೋಚನೆಗಳನ್ನು ದೂರ ಅಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಬಹಳಷ್ಟು ಜನ ಆರೋಗ್ಯವಾಗಿರುವುದೆಂದರೆ ಯಾವುದೇ ಕಾಯಿಲೆಯಿಲ್ಲದೆ ಇರುವುದು ಎಂದರ್ಥವಲ್ಲ. ಒಳ್ಳೆಯ ಆರೋಗ್ಯಯುತ ಜೀವನ ಕಟ್ಟಿಕೊಳ್ಳುವುದಾಗಿದೆ. ಇವತ್ತು ಹೆಚ್ಚಿನ ಜನರು ಎಲ್ಲ ಇದ್ದರೂ ಪ್ರಲೋಭನೆಗೊಳಗಾಗಿ ಸಂಕಷ್ಟ ಅನುಭವಿಸುತ್ತಾರೆ. ಹಾಗಾದರೆ ಈ ಪ್ರಲೋಭನೆಯನ್ನಯ ಪ್ರಲೋಭನೆಗಳನ್ನು ತಡೆಯುವ ಸಿದ್ಧೌಷಧಿ ಯಾವುದು ಎಂಬ ಪ್ರಶ್ನೆ ಎಲ್ಲರನ್ನು ಕಾಡಬಹುದು. ನಮ್ಮ ಮೇಲೆ ದಾಳಿ ಮಾಡುವ ಪ್ರಲೋಭನೆಯ ಉರುಬನ್ನು ಶಮನಗೊಳಿಸಬೇಕಾದರೆ ದೃಢನಿರ್ಧಾರ ಆಗಬೇಕಾಗಿದೆ. ನಾವು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳನ್ನು, ಪಾಪಕೃತ್ಯಗಳನ್ನು ಮಾಡಿರುತ್ತೇವೆ. ಆದರೆ ಅದು ತಪ್ಪು ಎಂದು ಗೊತ್ತಾದಾಗ ಅದರ ಪರಿಹಾರಕ್ಕೆ ಮುಂದಾಗಬೇಕು. ಇಲ್ಲದೆ ಹೋದರೆ ನಮ್ಮೊಳಗಿನಿಂದಲೇ ಉದ್ಭವಿಸುವ ಕೆಟ್ಟ ಆಲೋಚನೆಗಳು, ಚಿತ್ತದಸ್ವಾಸ್ಥ್ಯವನ್ನೇ ಕೆಡಿಸುತ್ತವೆ. ಆದರೆ ಅವುಗಳಿಗೆ ವಶವಾಗದಂತೆ ನಮ್ಮನ್ನು ಕಾಯ್ದುಕೊಳ್ಳುವುದು ಬಹುಮುಖ್ಯವಾದ ಸಂಗತಿಯಾಗಿದೆ. ಕೆಲವೊಮ್ಮೆ ಕೆಟ್ಟ ಆಲೋಚನೆಗಳು ನಮ್ಮಲ್ಲಿ ಮೂಡುವುದು ಸಹಜ. ಅದು ಪಾಪವೂ ಅಲ್ಲ. ಆದರೆ ಅದಕ್ಕೆ ತಲೆಬಾಗಿ ಅದನ್ನು ಒಪ್ಪಿಕೊಂಡು ಮುನ್ನಡೆಯುವುದು ಮಾತ್ರ ಪಾಪವೇ..
ಭಗವಂತನ ಭಜನೆ ಹಾಗೂ ನಾಮಜಪ ಮಾಡಿದರೆ ಸಾಕು. ಎಲ್ಲ ಪಾಪಗಳೂ ಪರಿಹಾರವಾಗುತ್ತವೆ. ಈ ದೇಹವೆಂಬ ಮರದಲ್ಲಿ ಪಾಪವೆಂಬ ಹಕ್ಕಿಗಳು ಗೂಡು ಕಟ್ಟಿಕೊಂಡಿವೆ. ಭಜನೆ ಮಾಡುವುದು ಚಪ್ಪಾಳೆ ತಟ್ಟಿದಂತೆ. ಚಪ್ಪಾಳೆ ತಟ್ಟಿದಾಗ ಮರದ ಮೇಲಿನ ಹಕ್ಕಿಗಳು ಹಾರಿ ಹೋಗುವಂತೆ ಭಗವನ್ನಾಮಸ್ಮರಣೆಯಿಂದ ಪಾಪಗಳೆಲ್ಲವೂ ಹಾರಿಹೋಗುತ್ತವೆ ಎಂದು ರಾಮಕೃಷ್ಣರು ಉಪದೇಶವೊಂದರಲ್ಲಿ ಹೇಳಿದ್ದಾರೆ.
ಜಪ, ತಪ, ಇವು ದೈನಂದಿನ ಚಟುವಟಿಕೆಗಳ ನಡುವೆ ಚಕ್ರವಾಗಿ ತಿರುಗುತ್ತಲೇ ಇರಬೇಕು. ಆಗ ನಮ್ಮ ಹೃದಯದ ಬೇಗೆಯೆಲ್ಲವೂ ತಣ್ಣಗಾಗುತ್ತದೆ. ಭಗವಂತನ ನಾಮಜಪದಲ್ಲಿ ಆಶ್ರಯ ಪಡೆದು ಎಷ್ಟೋ ಪಾಪಿಗಳೂ ಪಾಪ ಮುಕ್ತರೂ ಆಗಿದ್ದಾರೆ ಎಂಬುದನ್ನು ಮರೆಯುವಂತಿಲ್ಲ. ಮನಸ್ಸಿನೊಳಗೆ ಅನಪೇಕ್ಷಣೀಯವಾದ ವಿಚಾರಗಳೂ ಹಾಗೂ ಚಾಂಚಲ್ಯಗಳೂ ಪ್ರವೇಶಿಸದಂತೆ ಎಚ್ಚರಿಕೆ ವಹಿಸಬೇಕು. ಯಾವಾಗ ಇವು ನಮ್ಮ ಮನಸ್ಸಿನೊಳಕ್ಕೆ ನುಗ್ಗಲು ಪ್ರಯತ್ನಿಸುತ್ತವೆಯೋ ಆಗ ನಮ್ಮ ಮನಸ್ಸನ್ನು ಭಗವಂತನ ಕಡೆಗೆ ತಿರುಗಿಸಿ ಪ್ರಾರ್ಥಿಸಬೇಕು. ಹೀಗೆ ಮಾಡುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ನಮ್ಮನ್ನು ಮುತ್ತಿಕೊಳ್ಳುವ ವಿನಾಶಕಾರಿ ಶಕ್ತಿಗಳಿಂದ ಬಿಡಿಸಿಕೊಳ್ಳಬಹುದು ಎಂಬುವುದಾಗಿ ಶ್ರೀ ಸ್ವಾಮಿ ಬ್ರಹ್ಮಾನಂದರು ತಿಳಿಸಿದ್ದಾರೆ.
ದೇವರಲ್ಲಿ ಶರಣು ಹೋಗುವುದರಿಂದ ಬಹಳಷ್ಟು ಸಾರಿ ದೈಹಿಕ ಮತ್ತು ಮಾನಸಿಕ ವೇದನೆಗಳಿಂದ ಮುಕ್ತಿಹೊಂದಬಹುದು. ಭಗವದ್ಗೀತೆಯಲ್ಲಿ ಕೃಷ್ಣ ಮಾಡಿರುವ ಉಪದೇಶದಲ್ಲಿ ನಾನು ನಿನ್ನನ್ನು ಸರ್ವಪಾಪಗಳಿಂದಲೂ ಬಿಡಿಸುತ್ತೇನೆ. ಅಷ್ಟೇ ಅಲ್ಲ ನನ್ನ ಭಕ್ತನಾದವನು ಎಂದೂ ನಾಶ ಹೊಂದುವುದಿಲ್ಲ ಎಂದು ಹೇಳಿದ್ದಾನೆ.
ಬನ್ನಿ ನಮ್ಮಲ್ಲಿಗೆ ಯಾರು ದುಃಖ ಭಾರದಿಂದ ಪರಿತಪಿಸುತ್ತಿದ್ದಿರೋ ಅವರೆಲ್ಲರಿಗೂ ನಾನು ಆಶ್ರಯವಾಗುತ್ತೇನೆ ಎಂದು ಏಸು ಕ್ರಿಸ್ತ ಹೇಳಿದ್ದಾನೆ. ಹೀಗೆ ದೇವರ ಕಡೆಯಿಂದ ಸ್ಪಷ್ಟವಾದ ಆಶ್ವಾಸನೆಗಳಿರುವಾಗ ಸುಖಾ ಸುಮ್ಮನೆ ಸಂಕಟಪಡದೆ ದೇವರತ್ತ ಮುಖ ಮಾಡುವುದು ಒಳ್ಳೆಯದು. ಸದಾ ಒಳ್ಳೆ ಕೆಲಸದಲ್ಲಿ ತೊಡಗಿಸಿಕೊಂಡು ಮುನ್ನಡೆಯುವುದರಿಂದ ಮನಸ್ಸಿನಲ್ಲೇಳುವ ಪ್ರಲೋಭನೆಯಿಂದ ಮುಕ್ತರಾಗಲು ಸಾಧ್ಯವಾಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ