ಈಗ ಎಲ್ಲೆಡೆ ಫಿಟ್ನೆಸ್ ಮಂತ್ರ ಜಪಿಸುವುದು ಕಂಡು ಬರುತ್ತಿದೆ. ಪ್ರತಿಯೊಬ್ಬರೂ ಝೀರೋ ಬಾಡಿಯನ್ನು ಬಯಸುತ್ತಾರೆ. ಶರೀರವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತಿರುತ್ತಾರೆ.
ಹೇಗೇಗೋ ದೇಹ ಇರಲು ಇಷ್ಟಪಡುವುದಿಲ್ಲ. ಎತ್ತರ, ಗಾತ್ರಕ್ಕೆ ತಕ್ಕಂತೆ ತೂಕವನ್ನು ಕಾಪಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿರುತ್ತಾರೆ. ಮುಂಜಾನೆ ಸುಖ ನಿದ್ದೆಗೆ ಜಾರುವ ಬದಲಿಗೆ ಎದ್ದು ದೇಹದಂಡನೆ ಮಾಡುತ್ತಾರೆ. ಆ ಮೂಲಕ ತನ್ನ ದೇಹದಾಢ್ರ್ಯವನ್ನು ಕಾಪಾಡಿಕೊಳ್ಳುತ್ತಾರೆ.
ಮತ್ತೆ ಕೆಲವರು ದೇಹದಂಡನೆ ಮಾಡಲು ತಯಾರಿರುವುದಿಲ್ಲ. ಅವರು ಯಾವುದೋ ಕಂಪನಿಯ ಜಾಹೀರಾತು ನೋಡಿ ಔಷಧಿ ಸೇವಿಸಿ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಯತ್ನ ಮಾಡುತ್ತಾರೆ. ಆದರೆ ಅದು ಅಪಾಯಕಾರಿ ಎಂಬುವುದನ್ನು ಅರಿಯಬೇಕು.
ಸಾಮಾನ್ಯವಾಗಿ ದೈಹಿಕ ಶ್ರಮದ ಕೆಲಸ ಮಾಡುವವರ ದೇಹ ದಢೂತಿಯಾಗಿರುವುದಿಲ್ಲ. ಹೆಚ್ಚು ಹೊತ್ತು ಕುಳಿತಲ್ಲೇ ಕುಳಿತು ಕೆಲಸ ಮಾಡುವವರ ತೂಕ ಹೆಚ್ಚಾಗುತ್ತಲೇ ಹೋಗುತ್ತದೆ. ಬಹಳಷ್ಟು ಮಹಿಳೆಯರು ಮನೆಯಲ್ಲಿ ಕುರುಕು ತಿಂಡಿ ತಿನ್ನುತ್ತಾ ಟಿವಿ ನೋಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಅಂಥ ಮಹಿಳೆಯರಲ್ಲಿ ದೇಹದ ತೂಕ ಹೆಚ್ಚಾಗುವುದು ಸಹಜ.
ಹೆಚ್ಚು ಸಣ್ಣವಾಗಿಯೂ ಇಲ್ಲದೆ, ಅತಿ ದಪ್ಪವೂ ಅಲ್ಲದೆ ವೈದ್ಯಲೋಕ ದೃಢಪಡಿಸುವ ದೇಹದ ತೂಕವನ್ನು ಹೊಂದುವುದು ಎಲ್ಲರಿಗೂ ಸಾಧ್ಯವಿಲ್ಲ. ಅದೊಂದು ರೀತಿಯ ಕಲೆ. ದೇಹ ದಣಿಸಿ ಶ್ರಮದ ಕೆಲಸ ಮಾಡುವವರು ಸದಾ ಆರೋಗ್ಯವಾಗಿರುತ್ತಾರೆ. ಮತ್ತೆ ಕೆಲವರು ಜಿಮ್, ವಾಕಿಂಗ್, ಆಟೋಟದಲ್ಲಿ ಪಾಲ್ಗೊಂಡು ದೇಹವನ್ನು ದಂಡಿಸಿ ಫಿಟ್ನೆಸ್ ಕಾಪಾಡಿಕೊಳ್ಳುತ್ತಾರೆ.
ವಕರ್ೌಟ್ ಮೂಲಕ ದೇಹದ ತೂಕವನ್ನು ಕಡಿಮೆ ಮಾಡುವುದು ಒಂದು ಕಡೆಯಾದರೆ, ಸದೃಢ ದೇಹ ಕಾಪಾಡಿಕೊಳ್ಳಲು ಎಂತಹ ರೀತಿಯ ಆಹಾರ ಸೇವಿಸಬೇಕು ಎನ್ನುವುದರ ಬಗ್ಗೆ ಒಂದಿಷ್ಟು ಮಾಹಿತಿ ಪಡೆದುಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳಲು ಆಹಾರ ಸೇವನೆಯಲ್ಲಿ ಒಂದಷ್ಟು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಅಷ್ಟೇ ಅಲ್ಲ ವೈದ್ಯರು ಹೇಳುವ ಸಲಹೆ ಮತ್ತು ಆಹಾರ ಕ್ರಮಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ.
ವೈದ್ಯರು ಹೇಳುವ ಆಹಾರ ಕ್ರಮಗಳಂತೆ ಎಣ್ಣೆ, ಬೆಣ್ಣೆ, ಜಿಡ್ಡಿನ ಪದಾರ್ಥಗಳಷ್ಟೇ ಅಲ್ಲದೆ ಅಗತ್ಯಕ್ಕಿಂತ ಹೆಚ್ಚು ಕಾಬರ್ೋಹೈಡ್ರೇಟ್ಗಳು, ಪ್ರೋಟೀನ್ಗಳ ಅಂಶವುಳ್ಳ ಆಹಾರ ಪದಾರ್ಥವನ್ನು ದೂರವಿಡಬೇಕು.
ಕುರುಕು ತಿಂಡಿಗಳನ್ನು ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಬೆಳಗ್ಗಿನ ಆಹಾರವನ್ನು ಸರಿಯಾದ ಸಮಯಕ್ಕೆ ಮಾಡಬೇಕು. ಅದನ್ನು ತಪ್ಪಿಸಿದರೆ ಸಣ್ಣಗಾಗುತ್ತಾರೆ ಎನ್ನುವುದು ಭ್ರಮೆ. ರಾತ್ರಿ ವೇಳೆ ಊಟವಾದ ತಕ್ಷಣವೇ ಮಲಗುವುದು ಒಳ್ಳೆಯ ಅಭ್ಯಾಸವಲ್ಲ. ಒಂದಷ್ಟು ಹೊತ್ತು ಅಡ್ಡಾಡಿ ಬಳಿಕ ಮಲಗುವ ಅಭ್ಯಾಸ ರೂಢಿಸಿಕೊಳ್ಳಬೇಕು. ಟಿವಿ ನೋಡುತ್ತಾ, ಪುಸ್ತಕ ಓದುತ್ತಾ ಊಟ ಮಾಡುವ ಅಭ್ಯಾಸ ಒಳ್ಳೆಯದಲ್ಲ. ಗಬಗಬನೆ ತಿಂದು ಎದ್ದು ಹೋಗುವ ಅಭ್ಯಾಸ ಬಿಟ್ಟು ನಿಧಾಮವಾಗಿ ಅಗಿದು ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು.
ಕೊಬ್ಬಿನ ಅಂಶವನ್ನು ಸಂಪೂರ್ಣ ಕಡಿಮೆ ಮಾಡದೆ ಸಮತೋಲನೆ ಕಾಯ್ದುಕೊಳ್ಳಬೇಕು, ಸಕ್ಕರೆ ಪ್ರಮಾಣ ಕಡಿಮೆಯಿದ್ದಷ್ಟು ಒಳಿತು. ಕೃತಕ, ಸಂಸ್ಕರಿಸಿದ, ಬೇಕರಿಯ ಪದಾರ್ಥಗಳು, ಐಸ್ಕ್ರೀಂ, ಫಿಜ್ಹಾ, ಬರ್ಗರ್ನಂತಹ ತಿನಿಸುಗಳಿಂದ ಆದಷ್ಟು ದೂರವಿರಬೇಕು.
ಕೊಬ್ಬರಿ, ಎಳ್ಳು, ಕಡ್ಲೆಕಾಯಿ, ಗೋಡಂಬಿ, ಬಾದಾಮಿ ಮೊದಲಾದ ಡ್ರೈಫ್ರೂಟ್ಸ್ ಸೇವನೆ ಕಡಿಮೆ ಮಾಡಬೇಕು. ತುಪ್ಪ, ಚೀಸ್, ಪನ್ನೀರ್ ಸೇವಿಸದೆ ಕೆನೆ ತೆಗೆದಹಾಲು, ಕಡಿದ ಮಜ್ಜಿಗೆ ಸೇವಿಸಬೇಕು. ಕೊಬ್ಬಿನ ಅಂಶವಿರುವ ಮಾಂಸ ಸೇವನೆ ಕಡಿಮೆ ಮಾಡಿದಷ್ಟು ಉತ್ತಮ. ಉಪ್ಪಿನ ಅಂಶ ಹೆಚ್ಚಿರುವ ಉಪ್ಪಿನ ಕಾಯಿ, ಸಂಡಿಗೆ, ಹಪ್ಪಳ ಮೊದಲಾದವುಗಳನ್ನು ದೂರವಿಡಬೇಕು.
ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ವಜರ್ಿಸಿ ಹಬೆಯಲ್ಲಿ ಬೇಯಿಸಿದ ಪದಾರ್ಥಗಳಿಗೆ ಆದ್ಯತೆ ನೀಡಬೇಕು. ದಿನಕ್ಕೆ ಎಂಟರಿಂದ ಹತ್ತು ಲೋಟ ನೀರು ಸೇವಿಸಲೇ ಬೇಕು. ಊಟಕ್ಕೆ ಮುಂಚಿತವಾಗಿ ಒಂದು ಲೋಟ ನೀರು ಕುಡಿದು ಮತ್ತೆ ಊಟ ಮಾಡುವುದು ಒಳ್ಳೆಯದು.
ಇದೆಲ್ಲದರ ಜತೆಗೆ ಮುಂಜಾನೆ ವಾಕಿಂಗ್ ಮಾಡುವ ಅಭ್ಯಾಸ ಮಾಡಿಕೊಳ್ಳುವುದು ಅಗತ್ಯ. ಇವತ್ತಿನ ಬದುಕಿನಲ್ಲಿ ಎಲ್ಲದಕ್ಕೂ ವಾಹನಗಳನ್ನೇ ಬಳಸುವ ಕಾರಣದಿಂದಾಗಿ ನಡಿಗೆ ಅಪರೂಪವಾಗುತ್ತಿದೆ. ಇದರಿಂದ ದೇಹಕ್ಕೆ ವ್ಯಾಯಾಮ ಸಿಗದೆ ಬೊಜ್ಜು ಬೆಳೆಯುತ್ತಿದೆ ಎಂದರೆ ತಪ್ಪಾಗಲಾರದು.
ನಮ್ಮ ದೇಹದ ಮೇಲೆ ನಾವೇ ನಿಗಾವಹಿಸಬೇಕೆ ಹೊರತು ಬೇರೆಯವರಲ್ಲ. ಹೀಗಾಗಿ ಕಷ್ಟವಾದರೂ ವ್ಯಾಯಾಮವನ್ನು ಇಷ್ಟಪಟ್ಟು ರೂಢಿಸಿಕೊಳ್ಳುವ ಮೂಲಕ ಆರೋಗ್ಯವಾಗಿರಲು ಪ್ರಯತ್ನಿಸಬೇಕು. ಅದು ಅನಿವಾರ್ಯವೂ ಆಗಿದೆ