ಇವತ್ತು ನಾವು ಹಲವು ಮಾರ್ಗಗಳ ಮೂಲಕ ಹಣವನ್ನು ಸಂಪಾದಿಸಿ ಐಷಾರಾಮಿ ವಸ್ತು, ಅಧಿಕಾರ ಎಲ್ಲವನ್ನೂ ಪಡೆದುಕೊಳ್ಳುತ್ತಿದ್ದರೂ ಆರೋಗ್ಯವನ್ನು ಉಳಿಸಿಕೊಳ್ಳಲಾಗದೆ ಪರದಾಡುತ್ತಿರುವವರು ಬಹಳಷ್ಟು ಜನ ನಮ್ಮ ನಡುವೆ ಇದ್ದಾರೆ. ಆಸ್ಪತ್ರೆಗೆ ತೆರಳಿ ಅಲ್ಲಿ ರೋಗಿಗಳು ವಿವಿಧ ರೋಗಗಳಿಂದ ನರಳುತ್ತಿರುವವರನ್ನು ಕಂಡರೆ ನಮಗೆ ಯಾವ ಐಶ್ವರ್ಯವೂ ಬೇಡ ಆರೋಗ್ಯವಾಗಿದ್ದರೆ ಸಾಕಪ್ಪಾ ಎಂದೆನಿಸದಿರದು. ಇವತ್ತು ವೈದ್ಯಕೀಯ ಕ್ಷೇತ್ರ ವಿಸ್ತಾರವಾಗಿ ಬೆಳೆದಿದೆ. ಎಂಥ ರೋಗಗಳನ್ನಾದರೂ ಗುಣಪಡಿಸುತ್ತೇವೆ ಎಂಬ ವಿಶ್ವಾಸವೂ ವೈದ್ಯರಿಗೆ ಬಂದಿದೆ.
ಯಾವುದೇ ಆಧುನಿಕ ಸೌಲಭ್ಯಗಳಿಲ್ಲದ ಕಾಲದಲ್ಲೂ ರೋಗಿಗಳ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಹಲವು ವೈದ್ಯರು ನಮ್ಮ ನಡುವೆಯಿದ್ದಾರೆ. ಇವತ್ತು ವೈದ್ಯಕೀಯ ಲೋಕವು ದಿನದಿಂದ ದಿನಕ್ಕೆ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ನವ ವೈದ್ಯರು ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಲೇ ಇದ್ದಾರೆ.
ಹಾಗೆ ನೋಡಿದರೆ ಜುಲೈ1 ಭಾರತರತ್ನ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮಜಯಂತಿ. ಅವರ ಸಾಧನೆಯನ್ನು ಪರಿಗಣಿಸಿ ಈ ದಿನವನ್ನು ಭಾರತದಲ್ಲಿ ವೈದ್ಯರ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ಆ ಮೂಲಕ ಸದಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗಿ ಆರೋಗ್ಯ ಸೇವೆ ಮಾಡುವ ವೈದ್ಯರಿಗೆ ಗೌರವ ಸಲ್ಲಿಸಲಾಗುತ್ತಿದೆ.
ವೈದ್ಯ ವೃತ್ತಿ ಎನ್ನುವುದು ಪವಿತ್ರವಾದ ವೃತ್ತಿ. ಅದಕ್ಕೆ ತನ್ನದೇ ಆದ ಗೌರವ, ಜವಬ್ದಾರಿ ಎಲ್ಲವೂ ಇದೆ. ಹೀಗಾಗಿ ವೈದ್ಯರು ಒಂದು ಕ್ಷಣ ಎಚ್ಚರ ತಪ್ಪಿದರೂ ಅದರಿಂದ ಭಾರೀ ಅನಾಹುತ ಸಂಭವಿಸಿ ಬಿಡುತ್ತದೆ. ಹೀಗಾಗಿ ಪವಿತ್ರ ವೃತ್ತಿಯಾಗಿರುವ ವೈದ್ಯ ವೃತ್ತಿಯನ್ನು ಮಾಡುವ ಎಲ್ಲಾ ವೈದ್ಯರು ಒಂದೆಡೆ ಕಲೆತು ವೈದ್ಯರ ದಿನಾಚರಣೆ ಸಂದರ್ಭ ಮನನ ಮಾಡಿಕೊಳ್ಳಲೊಂದು ಅವಕಾಶ ದೊರೆತಂತಾಗಿದೆ.
ವೈದ್ಯರ ದಿನಾಚರಣೆಯನ್ನು ಭಾರತದಲ್ಲಿ ಜುಲೈ 1ರಂದು ಆಚರಿಸಿದರೆ, ಅಮೆರಿಕದಲ್ಲಿ ಮಾರ್ಚ್ 30ರಂದು ವೈದ್ಯ ದಿನಾಚರಣೆಯನ್ನು ಆಚರಿಸುತ್ತಾರೆ. ಏಕೆಂದರೆ ಮಾರ್ಚ್, 30-1842 ರಂದು ಡಾ.ಕ್ರಾಫರ್ಡ್ ಡಬ್ಲ್ಯು ಲಾಂಗ್ ಎನ್ನುವವರು ಮೊದಲ ಬಾರಿಗೆ ಅರಿವಳಿಕೆಯನ್ನು (ಅನೆಸ್ತೀಸಿಯ) ಪರಿಣಾಮಕಾರಿಯಾಗಿ ಬಳಸಿ ಒಂದು ಶಸ್ತ್ರಚಿಕಿತ್ಸೆಯನ್ನು ಮಾಡಿದರಂತೆ ಈ ಮಹತ್ವದ ದಿನವನ್ನು ಅವರು ರಾಷ್ಟ್ರೀಯ ವೈದ್ಯ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದಾರೆ. ಅಂದು ಅಲ್ಲಿ ರೋಗಿಗಳು ಮತ್ತು ಸಾರ್ವಜನಿಕರು ವೈದ್ಯರಿಗೆ ಕೆಂಪು ಗುಲಾಬಿ ಹೂವು ನೀಡಿ ಶುಭಾಶಯ ಹೇಳುತ್ತಾರಂತೆ ಕಾರಣ ಕೆಂಪು ಗುಲಾಬಿ ಪ್ರೀತಿ, ತ್ಯಾಗ, ಧೈರ್ಯ, ಸಾಹಸ ಹಾಗೂ ಸೇವೆಯ ಪ್ರತೀಕವಂತೆ. ಭಾರತದಲ್ಲಿ ಜುಲೈ1ನ್ನು ವೈದ್ಯರ ದಿನಾಚರಣೆಯನ್ನಾಗಿ ಆಚರಿಸುವುದರ ಹಿಂದೆ ಹಲವು ಮಹತ್ವದ ಸಂಗತಿಗಳಿವೆ. ಅದು ಮೇಲ್ನೋಟಕ್ಕೆ ಡಾ.ಬಿದನ್ ಚಂದ್ರ ರಾಯ್ ಅವರ ಜನ್ಮದಿನವಾದರೂ ಆ ದಿನವನ್ನು ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳಿವೆ. ಡಾ.ಬಿದನ್ ಚಂದ್ರ ರಾಯ್ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹಾತ್ಮ ಗಾಂಧೀಜಿಯವರ ಖಾಸಗಿ ವೈದ್ಯರೂ ಹೌದು. ಅವರು ಲಂಡನ್ನಿನಿಂದ ಎಫ್.ಆರ್.ಸಿ.ಎಸ್ ಹಾಗೂ ಎಂ.ಆರ್.ಸಿ.ಪಿ ಪದವಿಗಳೆರಡನ್ನೂ ಪಡೆದ ತಜ್ಞವೈದ್ಯ, ಶಸ್ತ್ರಚಿಕಿತ್ಸಕರಾಗಿದ್ದದ್ದು ಮತ್ತೊಂದು ವಿಶೇಷ. ಇವರು ಅನೇಕ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವುದರೊಂದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಜನಸೇವೆಯೊಂದಿಗೆ ಪ್ರತಿ ದಿನ ಸುಮಾರು 2 ಗಂಟೆಗಳ ಕಾಲ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದರು ಎಂದರೆ ಅವರ ಸೇವಾಮನೋಭಾವನೆ ಮನದಟ್ಟಾಗುತ್ತದೆ.
ಇಂತಹ ಮಹಾನ್ ವ್ಯಕ್ತಿ ಜುಲೈ 1, 1882ರಲ್ಲಿ ಜನಿಸಿ ಜುಲೈ 1, 1962ರಂದು ವಿಧಿವಶರಾದರು. ಅವರು ಜುಲೈ 1ರಂದು ಜನಿಸಿ, ಜುಲೈ 1ರಂದೇ ಇಹಲೋಕ ತ್ಯಜಿಸಿದ್ದು ವಿಶೇಷ. ಅವರ ನೆನಪು ಚಿರವಾಗಿರಲೆಂದೇ ವೈದ್ಯರ ದಿನಾಚರಣೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಇವತ್ತು ವೈದ್ಯಲೋಕ ಅಗಾಧವಾಗಿ ಬೆಳೆದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಣಸಿಗುವ ಆರೋಗ್ಯ ಕೇಂದ್ರದಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ, ಹೈಟೆಕ್ ಆಸ್ಪತ್ರೆಗಳು ನಮ್ಮ ದೇಶದಲ್ಲಿವೆ. ಬಡ, ಅನಾಥ, ವೃದ್ಧಾಶ್ರಮಗಳಿಗೆ ತೆರಳಿ ಚಿಕಿತ್ಸೆ ನೀಡುವವರು ಒಂದು ಕಡೆಯಾದರೆ ಮತ್ತೊಂದೆಡೆ ರೋಗಿಗಳಿಗೆ ಹೊರೆಯಾಗದಂತೆ ಆರೋಗ್ಯ ಸೇವೆ ನೀಡುವ ವೈದ್ಯರೂ ಇದ್ದಾರೆ. ಇಂತಹ ವೈದ್ಯರಿಗೆ ಪ್ರತಿಯೊಬ್ಬರೂ ಕೃತಜ್ಞತೆಯನ್ನು ಸಲ್ಲಿಸಲೇ ಬೇಕು.
ಡಾ.ನಾ.ಸೋಮೇಶ್ವರ್ ಹೇಳುವಂತೆ ವೈದ್ಯಕೀಯ ಒಂದು ವೃತ್ತಿಯಲ್ಲ, ಅದು ಅರಿವು, ಮಾನವೀಯತೆ, ಶ್ರದ್ಧೆ ಹಾಗೂ ಸೇವಾಮನೋಭಾವ ಮೇಳೈಸಿರುವ ಸೇವೆ. ವೈದ್ಯನಾದವನಿಗೆ ಹದ್ದಿನ ಕಣ್ಣುಗಳು, ಸಿಂಹದ ಹೃದಯ ಹಾಗೂ ಹೆಣ್ಣಿನ ಕೋಮಲ ಕರಗಳಿರಬೇಕಾಗುತ್ತದೆ. ಆಗ ಮಾತ್ರ ಅವನು ವೃತ್ತಿಗೆ ನ್ಯಾಯವನ್ನು ಒದಗಿಸಬಲ್ಲನು.
ವೈದ್ಯನು ಸದಾ ಜಾಗೃತನಾಗಿರಬೇಕು. ಅವನು ಮಾಡಬಹುದಾದ ಒಂದು ಸಣ್ಣ ತಪ್ಪು ಒಂದು ಜೀವಕ್ಕೆ (ತನ್ಮೂಲಕ ಒಂದು ಕುಟುಂಬಕ್ಕೆ) ಕುತ್ತಾಗಬಹುದು. ಹಾಗಾಗಿ ಪ್ರತಿ ಕ್ಷಣದಲ್ಲಿಯೂ ಮೈಯೆಲ್ಲ ಕಣ್ಣಾಗಿಟ್ಟುಕೊಂಡಿರಬೇಕಾಗುತ್ತದೆ. ವೈದ್ಯನು ತಾನು ಎಷ್ಟೇ ಒತ್ತಡದಲ್ಲಿರಲಿ, ಅದನ್ನು ತೋರಿಸಿಕೊಳ್ಳುವ ಹಾಗಿಲ್ಲ. ರೋಗಿಗೆ ಚಿಕಿತ್ಸೆಯನ್ನು ಹಾಗೂ ನೋವಿನಲ್ಲಿ ಪಾಲ್ಗೊಂಡು ಸಾಂತ್ವಾನವನ್ನು ನೀಡಬೇಕಾಗುತ್ತದೆ. ವೈದ್ಯ ದಿನಾಚರಣೆಯಂದು ವೈದ್ಯರು ಸಮಾಜದಲ್ಲಿ ತಮ್ಮ ಸ್ಥಾನಮಾನವನ್ನು ಅರಿತುಕೊಳ್ಳಬೇಕು. ಸೇವೆಯ ಪ್ರತಿಜ್ಞೆಯನ್ನು ಸ್ವೀಕರಿಸಿರುವುದನ್ನು ನೆನಪಿಸಿಕೊಂಡು ವೃತ್ತಿಗೆ ನ್ಯಾಯವನ್ನು ಒದಗಿಸಬೇಕು. ಇಂದು ವೈದ್ಯಕೀಯ ವೃತ್ತಿ ಕವಲುಹಾದಿಯಲ್ಲಿ ನಿಂತಿದ್ದು, ಸೇವೆಯಾಗಿ ಉಳಿಯದೇ ಉದ್ಯಮವಾಗಿದೆ. ಆದರೆ ಆ ವೃತ್ತಿಗೆ ಅಂದು-ಇಂದು-ಮುಂದು ತನ್ನದೇ ಗೌರವ ಇದ್ದೇ ಇರುತ್ತೆ ಅದನ್ನು ಮನಗಂಡು ವೈದ್ಯರು ಕಾರ್ಯನಿರ್ವಹಿಸಬೇಕು ಆಗ ವೈದ್ಯೋ ನಾರಾಯಣೋ ಹರಿಃ ಎಂಬ ಮಾತಿಗೆ ಅರ್ಥಬರುತ್ತದೆ.