ಮನುಷ್ಯನನ್ನು ಕಾಡುವ ಹಲವು ಬಗೆಯ ರೋಗಗಳಲ್ಲಿ ಪಾರ್ಕಿನ್ಸನ್ಸ್ ರೋಗವೂ ಒಂದಾಗಿದೆ. ಈ ರೋಗ ಗಂಭೀರ ಮತ್ತು ಭಯಾನಕ ರೋಗವಾಗಿದ್ದು ಇದು ಬಂದರೆ ಮನುಷ್ಯ ನಲುಗಿ ಹೋಗುವುದಂತು ಸತ್ಯ.
ಈ ರೋಗದಿಂದ ಬಳಲುವ ವ್ಯಕ್ತಿಗೆ ಆಹಾರ ನುಂಗಲು ಕಷ್ಟವಾಗುತ್ತದೆ, ಮಾತನಾಡುವ ಧ್ವನಿಯೂ ಕ್ಷೀಣಿಸುತ್ತದೆ. ನಿರಂತರ ನಡುಕ, ಹೆಜ್ಜೆ ಹಾಕಲು ಅಸಾಧ್ಯವಾಗಿ ತನ್ನ ಚಲನೆಯನ್ನೇ ಕಳೆದುಕೊಳ್ಳುತ್ತಾನೆ.
ಪಾರ್ಕಿನ್ಸನ್ಸ್ ರೋಗವನ್ನು ಸಂಕ್ಷಿಪ್ತವಾಗಿ ಪಿಡಿ ಎನ್ನುತ್ತಾರೆ. ಈ ರೋಗವು ತಗುಲಿದರೆ ಮೊದಲಿಗೆ ಅದು ಮೆದುಳಿನ ನರಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಮೇಲ್ಮೋಟಕ್ಕೆ ವ್ಯಕ್ತಿ ಆರೋಗ್ಯವಂತನಂತೆ ಕಂಡು ಬಂದರೂ ಆತನ ಮುಖ್ಯ ಅಂಗವಾದ ನರಗಳ ಮೇಲೆಯೇ ದಾಳಿ ಮಾಡುವುದರಿಂದ ತನ್ನ ಶಕ್ತಿಯನ್ನೇ ಕಳೆದುಕೊಂಡು ಬಿಡುತ್ತಾನೆ. ಮೆದುಳಿನ ನರಗಳು ತನ್ನ ಕಾರ್ಯದಲ್ಲಿ ವೈಫಲತೆ ಕಾಣುವುದರಿಂದ ದೇಹದ ಚಟುವಟಿಕೆ ಕುಗ್ಗಿ ಕ್ರಮೇಣ ಸಾವಿಗೆ ಶರಣಾಗುತ್ತಾನೆ.
ಪಾರ್ಕಿನ್ಸನ್ಸ್ ಮೊದಲು ಸಬ್ ಸ್ಟೆನ್ಷಿಯಾ ನಿಗ್ರಾ ಎಂದು ಕರೆಯಲಾಗುವ ಮೆದುಳಿನಲ್ಲಿರುವ ನರಗಳನ್ನು ಬಾಧಿಸುತ್ತದೆ. ಇವುಗಳಲ್ಲಿ ಮರಣಿಸುತ್ತಿರುವ ಕೆಲವು ನರಗಳು ಚಲನೆ ಮತ್ತು ಸಂಯೋಜನೆಯನ್ನು ನಿಯಂತ್ರಿಸುವ ಮೆದುಳಿನ ಭಾಗಕ್ಕೆ ಸಂದೇಶವನ್ನು ಕಳುಹಿಸುವ ಡೋಪಮಿನ್ ಎನ್ನುವ ರಾಸಾಯನಿಕವನ್ನು ಉತ್ಪಾದಿಸುತ್ತವೆ. ಪಾರ್ಕಿನ್ಸನ್ಸ್ ರೋಗ ಉಲ್ಭಣವಾದಂತೆಲ್ಲ ಮೆದುಳಿನಲ್ಲಿ ಉತ್ಪಾದನೆಯಾಗುವ ಈ ರಾಸಾಯನಿಕದ ಪ್ರಮಾಣ ಶೇ 80ರಷ್ಟು ಕ್ಷೀಣಿಸುತ್ತದೆ. ಇದರಿಂದ ಮಾನಸಿಕ ಮತ್ತು ದೈಹಿಕವಾಗಿಯೂ ವ್ಯಕ್ತಿ ಕುಗ್ಗುವುದಲ್ಲದೆ ತನ್ನ ಸಾಧಾರಣ ಚಲನೆಯನ್ನೇ ಕಳೆದುಕೊಳ್ಳುತ್ತಾನೆ.
ಪಾರ್ಕಿನ್ಸನ್ಸ್ ರೋಗ ಆರಂಭದಲ್ಲೇ ಪತ್ತೆಯಾದರೆ ವೈದ್ಯರು ಚಿಕಿತ್ಸೆ ನೀಡುವ ಮೂಲಕ ನಿಯಂತ್ರಿಸಲು ಸಾಧ್ಯವಾಗುತ್ತದೆ. ಉಲ್ಭಣದ ಹಂತಕ್ಕೆ ಬಂದ ಬಳಿಕ ಚಿಕಿತ್ಸೆ ನೀಡಿದರೆ ಒಂದಷ್ಟು ಆಯುಷ್ಯವನ್ನು ಮುಂದಕ್ಕೆ ಹಾಕಬಹುದು ಬಿಟ್ಟರೆ ವ್ಯಕ್ತಿ ಮೊದಲಿನಂತೆ ಆರೋಗ್ಯವಾಗಿ ಬದುಕುವುದು ಕಷ್ಟ ಸಾಧ್ಯವಾಗುತ್ತದೆ. ಈ ರೋಗವನ್ನು ನಿಯಂತ್ರಿಸುವಲ್ಲಿ ನಾವು ಸೇವಿಸುವ ಆಹಾರದ ಪಾತ್ರವಿದೆಯಾ ಎಂಬುದು ಸಾಮಾನ್ಯ ಜನರನ್ನು ಕಾಡಬಹುದಾದ ಪ್ರಶ್ನೆಯಾಗಿದೆ. ಎಲ್ಲ ರೋಗಗಳನ್ನು ನಿಯಂತ್ರಿಸುವ ಮತ್ತು ಉಲ್ಭಣವಾಗುವಂತೆ ಮಾಡುವ ಶಕ್ತಿಗಳು ನಾವು ಸೇವಿಸುವ ಆಹಾರಕ್ಕಿದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ಪಾರ್ಕಿನ್ಸನ್ಸ್ ರೋಗವನ್ನು ನಿಯಂತ್ರಣ ಮಾಡಬೇಕಾದರೆ ಒಂದಷ್ಟು ಆಹಾರ ಪದಾರ್ಥಗಳನ್ನು ತ್ಯಜಿಸುವುದು ಒಳ್ಳೆಯದು. ಪಾರ್ಕಿನ್ಸನ್ಸ್ ರೋಗದಿಂದ ಬಳಲುವ ರೋಗಿಗಳು ಮೊಟ್ಟೆಯನ್ನು ತಿನ್ನಬಾರದು ಏಕೆಂದರೆ ಇದರಲ್ಲಿ ಪ್ರೊಟೀನ್ ಜಾಸ್ತಿಯಿದ್ದು, ಕಾಯಿಲೆಗೆ ನೀಡುವ ಲೆವೊಡೊಪಾ ಚಿಕಿತ್ಸೆಗೆ ಅಪಾಯಕಾರಿಯಾಗಿದೆಯಂತೆ. ಲೆವೊಡೊಪಾ ಮತ್ತು ಪ್ರೊಟೀನ್ ಗಳು ಕರಳು ಮತ್ತು ಮೆದುಳಿನಲ್ಲಿ ಹೀರಲು ಸ್ಪರ್ಧಿಸುತ್ತವೆ. ಹೀಗಾಗಿ ಲೆವೊಡೊಪಾ ಚಿಕಿತ್ಸೆ ತೊಡಕಾಗುತ್ತದೆಯಂತೆ.
ಕೆಂಪು ಮಾಂಸದಲ್ಲಿ ಕಬ್ಬಿಣದ ಅಂಶ ಜಾಸ್ತಿಯಿರುತ್ತದೆ. ಈ ಕಬ್ಬಿಣದ ಅಂಶವು ಮೆದುಳಿನಲ್ಲಿ ಹೆಚ್ಚಾದಷ್ಟು ಆಕ್ಸಿಡೇಟಿವ್ ಅಪಾಯಗಳನ್ನುಂಟು ಮಾಡುತ್ತದೆ. ಹೀಗಾಗಿ ಮಾಂಸ ಸೇವನೆ ತ್ಯಜಿಸುವುದು ಒಳ್ಳೆಯದು. ಕೆಂಪು ಮಾಂಸದಂತೆ ಯಕೃತ್ ಕೂಡ ಅಪಾಯಕಾರಿ ಇದರಲ್ಲಿ ಕೊಲೆಸ್ಟ್ರಾಲ್, ಕಬ್ಬಿಣ, ಸತು, ತಾಮ್ರ ಎಲ್ಲವೂ ಇರುವುದರಿಂದ ಸೇವನೆಯನ್ನು ಬಿಟ್ಟು ಬಿಡಬೇಕು.
ಇನ್ನು ಹಾಲು, ಬೆಣ್ಣೆ, ಚೀಸ್ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಇದರ ಜೊತೆಗೆ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಗಳನ್ನು ಕುಕೀಸ್ ಹೊಂದಿರುವುದರಿಂದ ಅದರ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಎಲೆಕೋಸು ಮತ್ತು ಹಸಿರೆಲೆ ಈ ತರಕಾರಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲುಟೇನ್ ಎನ್ನುವ ಸ್ವಾಭಾವಿಕ ವರ್ಣದ್ರವ್ಯವಿದ್ದು, ಪಾರ್ಕಿನ್ಸನ್ಸ್ ರೋಗ ಹೆಚ್ಚಾಗಲು ಸಹಕಾರಿಯಾಗಿದೆ.
ಗೋಧಿಯಲ್ಲಿ ಪ್ರೊಟೀನ್ ಮತ್ತು ಕಬ್ಬಿಣ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದು, ಇದು ಮೆದುಳಿನ ಕೋಶಗಳಿಗೆ ಆಕ್ಸಿಡೇಟಿವ್ ಒತ್ತಡಕ್ಕೆ ಕಾರಣವಾಗಿದ್ದು, ರೋಗದ ಚಿಕಿತ್ಸೆಗೆ ವಿರುದ್ಧವಾಗಿ ಕಾರ್ಯ ನಿರ್ವಹಿಸುವುದರಿಂದ ತ್ಯಜಿಸುವ ಅಗತ್ಯವಿದೆ. ಶೆಲ್ಫಿಶ್, ಚಪ್ಪರದ ಅವರೆ, ಸಿಹಿತಿನಿಸುಗಳು, ಚಾಕೋಲೆಟ್ ಗಳು ಮೊದಲಾದವುಗಳೆಲ್ಲವೂ ಅಪಾಯಕಾರಿಯಾಗಿರುವುದರಿಂದ ಅವುಗಳನ್ನು ಹಿತಮಿತವಾಗಿ ಬಳಸುವುದು ಉತ್ತಮ.
ಇನ್ನು ಕಾಫಿ ಸೇವನೆ ಒಳ್ಳೆಯದಂತೆ ಇದರಲ್ಲಿರುವ ಕೆಫೀನ್ ಅಂಶ ಮಾನಸಿಕ ಜಾಗೃತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆಯಂತೆ, ವಿಟಮಿನ್ ಇ ಅಧಿಕವಾಗಿ ಹೊಂದಿರುವ ಪ್ಲಮ್ಗಳು ಆಕ್ಸಿಡೇಟಿವ್ ಹಾನಿಯಿಂದಾಗಿ ನಾಶವಾಗುವ ನರಕೋಶಗಳನ್ನು ರಕ್ಷಿಸುತ್ತವೆ. ಕಿತ್ತಳೆ ಹಣ್ಣು ಮತ್ತು ದಪ್ಪ ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಪ್ರಯೋಜನಕಾರಿಯಾಗಿದೆ. ಒಮೆಗಾ 3ನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಸಾಲ್ಮನ್ ಮೀನು ಕೂಡ ಪೋಷಕ ಆಹಾರವಾಗಿದೆ.
ಬ್ಲೂಬೆರಿ, ಸ್ಟ್ರಾಬೆರಿ ಹಣ್ಣುಗಳು, ಒಣಹಣ್ಣುಗಳಾದ ವಾಲ್ನಟ್, ಬಾದಾಮಿ, ಗೋಡಂಬಿ, ಕಡಲೆಕಾಯಿ ಮೊದಲಾದವುಗಳು ಮೆದುಳಿಗೆ ಹೆಚ್ಚಿನ ಪ್ರಮಾಣದಲ್ಲಿ ಡೋಪಮಿನ್ ಉತ್ಪಾದಿಸಲು ಪ್ರಚೋದಿಸುವುದರಿಂದ ರೋಗವನ್ನು ನಿಯಂತ್ರಿಸಲು ಸಾಧ್ಯವಾಗಿದೆ.