ನಮ್ಮ ಆರೋಗ್ಯ ಕಾಪಾಡುವಲ್ಲಿ ಹಣ್ಣುಹಂಪಲು, ಒಣಹಣ್ಣು, ಬೀಜಗಳೆಲ್ಲವೂ ಪ್ರಮುಖ ಪಾತ್ರವಹಿಸುತ್ತಿವೆ. ಹೀಗಾಗಿಯೇ ನಮಗೆ ಹಣ್ಣು ಹಂಪಲು, ಒಣ ಹಣ್ಣುಗಳನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ.
ಪ್ರಕೃತಿ ಸೃಷ್ಠಿಯಲ್ಲಿರುವ ಹಲವು ಹಣ್ಣು, ತರಕಾರಿ, ಬೀಜಗಳು ವಿವಿಧ ಜೀವಸತ್ವಗಳನ್ನು ಹೊಂದಿದ್ದು, ಇವು ಮನುಷ್ಯ ಆರೋಗ್ಯವನ್ನು ಕಾಪಾಡುವಲ್ಲಿ ವಿವಿಧ ರೀತಿಯಲ್ಲಿ ಸಹಕಾರಿಯಾಗಿದೆ. ಮನುಷ್ಯ ಆರೋಗ್ಯವಾಗಿರಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಒಣ ಹಣ್ಣುಗಳ ಪೈಕಿ ಬಾದಾಮಿ ತನ್ನದೇ ಪಾತ್ರವಹಿಸುತ್ತಾ ಬಂದಿದ್ದು, ಇದು ದುಬಾರಿಯಾದರೂ ಪೌಷ್ಠಿಕಾಂಶಗಳನ್ನು ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒದಗಿಸಿ ಆರೋಗ್ಯ ಕಾಪಾಡುವುದನ್ನು ಕಾಣಬಹುದು.
ಇನ್ನು ಬಾದಾಮಿಯನ್ನು ಹೇಗೆ ಬಳಸಿದರೆ ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ನೋಡುವುದಾದರೆ ಬಾದಾಮಿ ಬಾಯಿಗೆ ರುಚಿಯಾಗಿರುವುದಲ್ಲದೆ, ಇದನ್ನು ಗೋಡಂಬಿ, ದ್ರಾಕ್ಷಿಯೊಂದಿಗೆ ಬೆರೆಸಿ ತಿನ್ನಬಹುದು. ಇತರೆ ಖಾದ್ಯಗಳಲ್ಲಿ ಬಳಸಬಹುದು.
ಬಾದಾಮಿಯಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಹಾಗೂ ಫೈಬರ್ ಅಂಶ ಹೇರಳವಾಗಿದೆ. ಅಷ್ಟೇ ಅಲ್ಲ ಇ ವಿಟಮಿನ್, ಡಿ ವಿಟಮಿನ್ ಹಾಗೂ ಪೊಟ್ಯಾಷಿಯಂ, ಮೆಗ್ನೀಷಿಯಂ, ಕ್ಯಾಲ್ಸಿಯಂನಂತಹ ಖನಿಜಾಂಶಗಳು ಇದರಲ್ಲಿವೆ. ಓಮೆಗಾ 6 ಆಸಿಡ್ ಮಿಶ್ರಿತ ಕೊಬ್ಬಿನಾಂಶ ಹೊಂದಿರುವುದರಿಂದ ಮೆದುಳಿನ ಸಮರ್ಪಕ ಕಾರ್ಯನಿರ್ವಹಣೆ ಮತ್ತು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಿದೆ. ಜತೆಗೆ ಬುದ್ದಿಮತ್ತೆ ಹೆಚ್ಚಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಾದಾಮಿ ಎಣ್ಣೆಯನ್ನೂ ಬಳಸಬಹುದಾಗಿದೆ. ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದ್ದು, ಅತ್ಯುತ್ತಮ ಡಯಟ್ಗೂ ಇದು ಸಹಕಾರಿಯಾಗುವುದರಲ್ಲಿ ಎರಡು ಮಾತಿಲ್ಲ.
ಬಾದಾಮಿ ಸೇವನೆಯಿಂದ ಹೃದಯ ಮೆದುಳು ಸೇರಿದಂತೆ ದೇಹದ ಕಾರ್ಯಚಟುವಟಿಕೆ ಸಹಕಾರಿಯಾಗುತ್ತದೆ. ರೈಬೋಪ್ಲೇವಿನ್ ಮತ್ತು ಎಲ್-ಕಾನರ್ಟೈನ್ ಎಂಬ ಪೌಷ್ಠಿಕಾಂಶಗಳು ಇದರಲ್ಲಿರುವುದರಿಂದ ಮೆದುಳಿನ ಚಟುವಟಿಕೆಯನ್ನು ಉದ್ದೀಪನಗೊಳಿಸುತ್ತದೆ. ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ರಕ್ತದ ಪರಿಚಲನೆ ಸುಗಮಗೊಳಿಸುವ ಶಕ್ತಿಯನ್ನು ಹೊಂದಿದೆ. ಯಕೃತ್ತಿನ ಸಮಸ್ಯೆಯಿಂದ ಉಂಟಾಗುವ ತೊಂದರೆಗಳನ್ನು ಪರಿಹರಿಸಿ ಶಕ್ತಿ ತುಂಬುವಲ್ಲಿಯೂ ಹಾಗೂ ಗ್ಲೂಕೋಸ್ ಅಂಶ ನಿಯಂತ್ರಣಕ್ಕೆ ತಂದು ಮದುಮೇಹ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಚರ್ಮ ಸುಕ್ಕು ಕಟ್ಟುವುದನ್ನು ತಡೆದು ಕಾಂತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಅಂಶ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಹಿಮೋಗ್ಲೋಬಿನ್ ಹೆಚ್ಚಿ ಅನಿಮಿಯಾ (ರಕ್ತಹೀನತೆ)ವನ್ನು ತಡೆಗಟ್ಟುತ್ತದೆ. ರಾತ್ರಿ ವೇಳೆ ಮೂರ್ನಾಲ್ಕು ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಸಿಪ್ಪೆ ತೆಗೆದು ತಿನ್ನುವುದು ಒಳ್ಳೆಯದು. ಸದಾ ಬಾದಾಮಿಯನ್ನು ವಿವಿಧ ರೀತಿಯಲ್ಲಿ ಆಹಾರದೊಂದಿಗೆ ಸೇವಿಸುವುದರೊಂದಿಗೆ ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುವುದರಲ್ಲಿ ಎರಡು ಮಾತಿಲ್ಲ.