News Kannada
Saturday, October 08 2022

ಆರೋಗ್ಯ

ಬಹು ಉಪಕಾರಿ ದಾಸವಾಳ, ಏನೆಲ್ಲ ಪ್ರಯೋಜನ ಗೊತ್ತಾ? - 1 min read

Photo Credit :

ಬಹು ಉಪಕಾರಿ ದಾಸವಾಳ, ಏನೆಲ್ಲ ಪ್ರಯೋಜನ ಗೊತ್ತಾ?

ಬೇಸಿಗೆಯ ದಿನಗಳಲ್ಲಿ ನೆತ್ತಿ ಸುಡುವ ಬಿಸಿಲಿನಿಂದ ತಪ್ಪಿಸಿಕೊಂಡು ದಣಿದ ದೇಹವನ್ನು ತಂಪಾಗಿಸಿಟ್ಟುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಹಿಂದಿನ ಕಾಲದಲ್ಲಿ ತಮ್ಮ ಸುತ್ತಮುತ್ತ ದೊರೆಯುವ ಗಿಡ, ಮರ, ಬಳ್ಳಿಗಳ ಮಹತ್ವ ಅರಿತು ಅವುಗಳನ್ನು ಸದುಪಯೋಗಿಸಿಕೊಳ್ಳುವ ಮೂಲಕ ಬಿಸಿಲಿಗೆ ಸೆಡ್ಡು ಹೊಡೆದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು.

ಮನುಷ್ಯರ ದೇಹವನ್ನು ತಂಪಾಗಿಸುವ ಗುಣ ಕೇವಲ ಹಣ್ಣು ತರಕಾರಿಯಲ್ಲಿ ಮಾತ್ರವಲ್ಲದೆ ಹೂಗಿಡಗಳಲ್ಲಿಯೂ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರಲ್ಲೂ ದಾಸವಾಳವಂತು ಹತ್ತು ಹಲವು ರೀತಿಯಲ್ಲಿ ಮನುಷ್ಯನಿಗೆ ಉಪಯೋಗಕ್ಕೆ ಬರುತ್ತದೆ. ಇದು ಸುಂದರ ಹೂಗಳನ್ನು ನೀಡುವುದಲ್ಲದೆ, ಉತ್ತಮ ಆರೋಗ್ಯವನ್ನು ನೀಡುವಲ್ಲಿಯೂ ಸಹಕಾರಿ ಎಂಬುದನ್ನು ನಾವು ಮರೆಯಬಾರದು.

ದಾಸವಾಳ ಹೂ, ಎಲೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದ್ದು, ಇದನ್ನರಿತು ಸಕಾಲದಲ್ಲಿ ಅದನ್ನು ಬಳಸಿಕೊಂಡಿದ್ದೇ ಆದರೆ ಹಲವು ರೋಗಗಳಿಂದ ದೂರವಿರಲು ಸಾಧ್ಯವಾಗಲಿದೆ. ದಾಸವಾಳದಲ್ಲಿ ಹಲವು ಜಾತಿಯ ಗಿಡಗಳಿದ್ದು ಅವುಗಳಲ್ಲಿ ಬಿಳಿದಾಸವಾಳ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಹೂ ಎಲೆ ಬೇರು ಸರ್ವ ವಿಧದಲ್ಲಿಯೂ ಉಪಯೋಗಕಾರಿಯಾಗಿದೆ.

ದಾಸವಾಳದಲ್ಲಿ ತಂಪುಕಾರಕ ಗುಣಗಳು ಅಧಿಕ ಪ್ರಮಾಣದಲ್ಲಿರುವ ಕಾರಣ ಇದನ್ನು ಬೇಸಿಗೆಯ ದಿನಗಳಲ್ಲಿ ಬಳಸಿಕೊಳ್ಳುವುದು ಒಳ್ಳೆಯದು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು ಸಹಜ. ಇದರಿಂದ ತಲೆನೋವು, ಉರಿಮೂತ್ರ, ಸಮರ್ಪಕವಾಗಿ ಮಲವಿಸರ್ಜನೆಯಾಗದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ.

ತಲೆಯಲ್ಲಿ ಏನೋ ಭಾರವಾದಂತೆ ಕೆಲವೊಮ್ಮೆ ಭಾಸವಾಗುತ್ತಿರುತ್ತದೆ. ಜತೆಗೆ ತುರಿಕೆಯೂ ಕಾಣಿಸಿಕೊಳ್ಳಬಹುದು. ಇನ್ನು ದೇಹದ ಉಷ್ಣಾಂಶವು ಹೆಚ್ಚಾಗಬಹುದು ಇದನ್ನು ಕಡಿಮೆ ಮಾಡಿ ಹಗುರವಾಗಬೇಕಾದರೆ ದಾಸವಾಳದ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಅದನ್ನು ಕಿವುಚಿ ಎಲೆಗಳನ್ನು ಬೇರ್ಪಡಿಸಿ ಲೋಳೆಯಾದ ನೀರನ್ನು ಶೇಖರಿಸಿಟ್ಟುಕೊಂಡು ಸ್ನಾನ ಮಾಡುವ ವೇಳೆ ಮೊದಲಿಗೆ ಆ ನೀರನ್ನು ತಲೆಗೆ ಸುರಿದುಕೊಂಡರೆ ತಂಪಾದ ಅನುಭವವಾಗುತ್ತದೆ. ಒಂದೈದು ನಿಮಿಷಗಳ ಕಾಲ ನೀರು ಹಾಕಿ ತೊಳೆದು ಬಳಿಕ ಸ್ನಾನ ಮಾಡಿದರೆ ತಲೆಯೆಲ್ಲ ಹಗುರವಾಗುತ್ತದೆ. ದೇಹದಲ್ಲಿ ಉಲ್ಲಾಸವಿರುತ್ತದೆ. ಇದು ಕೂದಲು ಉದುರುವುದು, ಹೊಟ್ಟಿನ ಸಮಸ್ಯೆಗೂ ಸಹಕಾರಿಯಾಗುತ್ತದೆ. ಶಾಂಪುಗಳು ಇನ್ನೂ ಮಾರುಕಟ್ಟೆಯನ್ನು ಆಕ್ರಮಿಸದ ಕಾಲದಲ್ಲಿ ಹಳ್ಳಿಗಳಲ್ಲಿ ಹಿಂದಿನ ಕಾಲದವರು ಇದನ್ನೇ ಬಳಸುತ್ತಿದ್ದರು.

ದಾಸವಾಳದಲ್ಲಿ ಗರ್ಭವೃದ್ಧಿ ಮಾಡುವ, ಕೂದಲನ್ನು ಬೆಳೆಸುವ, ದಾಹ ತಣಿಸುವ, ಧಾತು ವೃದ್ಧಿಸುವ ಗುಣವೂ ಇದೆ ಎನ್ನಲಾಗುತ್ತಿದೆ. ಹೂಗಳು, ಬೇರು, ಎಲೆಗಳು ಉಪಯುಕ್ತವಾಗಿದ್ದು, ಎಲೆಗಳನ್ನು ಹಿಂಡಿ ಪ್ರತಿದಿನ ಐದಾರು ಚಮಚದಷ್ಟು ರಸವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಇನ್ನು ಇದೇ ರಸದೊಂದಿಗೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ. ಬಿಳಿದಾಸವಾಳದ ಬೇರನ್ನು ಹಸುವಿನ ಹಾಲಿನಲ್ಲಿ ಅರೆದು ಸೇವಿಸಿದರೆ ಗರ್ಭಧಾರಣೆಗೆ ಸಹಕಾರಿ.

ಬೇರಿನ ರಸವನ್ನು ಗೋಪಿ ಚಂದನದ ಜೊತೆ ಸೇವಿಸಿದರೆ ಗರ್ಭಸ್ರಾವ ತಡೆಯಲು ಸಾಧ್ಯವಾಗುತ್ತದೆ. ದಾಸವಾಳದ ಎಲೆಯನ್ನು ಅರೆದು ತಲೆಗೆ ಲೇಪಿಸಿದರೆ ಕೂದಲು ಉದುರುವುದನ್ನು ತಡೆಗಟ್ಟಬಹುದು. ಬಿಳಿದಾಸವಾಳದ ಹೂವುಗಳನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಮೂಲವ್ಯಾಧಿಯನ್ನು ನಿಯಂತ್ರಿಸಬಹುದಾಗಿದೆ. ಎಲೆ ಮತ್ತು ಹೂಗಳನ್ನು ಕಲ್ಲು ಸಕ್ಕರೆಯೊಂದಿಗೆ ಅರೆದು ಸೇವಿಸುತ್ತಾ ಬಂದರೆ ಹೊಟ್ಟೆಯಲ್ಲಿ ಕಾಣಿಸುವ ಕೆಲವೊಂದು ತೊಂದರೆಗಳು ಮಾಯವಾಗುವುವು.

See also  ಮಕ್ಕಳ ಮೇಲೆ ಅತಿಯಾದ ಒತ್ತಡ ಒಳ್ಳೆಯದಲ್ಲ!

ಹಳ್ಳಿಗಳಲ್ಲಿ ದಾಸವಾಳವನ್ನು ತಮ್ಮ ಮನೆಯ ಸುತ್ತ ನೆಟ್ಟು ಬೆಳೆಸುತ್ತಾರೆ. ಇವು ಸುಂದರ ಹೂಗಳನ್ನು ನೀಡುವುದು ಮಾತ್ರವಲ್ಲದೆ ಆರೋಗ್ಯದ ಹಿತದೃಷ್ಠಿಯಿಂದಲೂ ಪ್ರಯೋಜನಕಾರಿ ಎಂಬುದನ್ನು ಮರೆಯಬಾರದು

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು