ಈಗ ಬೇಸಿಗೆಯ ಕಾಲ. ಊಟಕ್ಕಿಂತ ನೀರೇ ಸೇವಿಸಬೇಕೆನ್ನುವುದು ಸಹಜ. ಹೀಗಾಗಿ ಊಟದ ಜೊತೆಗೆ ಮೊಸರು, ಹಣ್ಣು ಹಂಪಲುಗಳನ್ನು ಸೇವಿಸುವುದು ಒಳ್ಳೆಯದು.
ಸಾಮಾನ್ಯವಾಗಿ ಕಾಲಕ್ಕೆ ತಕ್ಕಂತೆ ನಮ್ಮ ಶರೀರದಲ್ಲಿಯೂ ಒಂದಷ್ಟು ಬದಲಾವಣೆಗಳಾಗುತ್ತದೆ. ಅದರಲ್ಲೂ ಬೇಸಿಗೆಯ ದಿನಗಳಲ್ಲಂತು ಒಂದಷ್ಟು ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ನಾವು ಕಾಲಕ್ಕೆ ತಕ್ಕಂತೆ ಒಂದಷ್ಟು ಎಚ್ಚರಿಕೆ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ.
ಬಿಸಿಲಿನಲ್ಲಿ ಓಡಾಡುವಾಗ, ಅಡ್ಡಾಡುವಾಗ ಆಗಿಂದಾಗ್ಗೆ ಬಾಯಾರಿಕೆ ನಮ್ಮನ್ನು ಕಾಡುವುದು ಸಹಜ. ಆಗ ಎಷ್ಟು ನೀರು ಕುಡಿದರೂ ಮತ್ತೆ ಕುಡಿಯ ಬೇಕೆನಿಸುತ್ತದೆ. ಇದಕ್ಕೆ ಶರೀರದಲ್ಲಿ ಉಷ್ಣದ ಅಂಶ ಹೆಚ್ಚುವುದೇ ಕಾರಣವಾಗಿದೆ. ಇದು ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಬಿಸಿಲಿದ್ದಾಗ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ, ಹೆಚ್ಚಾಗಿ ಹಣ್ಣು-ತರಕಾರಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಇವು ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತವೆ. ಇದರಲ್ಲಿರುವ ಲವಣಗಳು, ವಿಟಮಿನ್ ಗಳಂತಹ ಪೌಷ್ಠಿಕ ಪದಾರ್ಥಗಳು ಶರೀರಕ್ಕೆ ಪೋಷಕ ಶಕ್ತಿಯನ್ನು ನೀಡುತ್ತವೆ. ನಮ್ಮ ಆಹಾರದೊಂದಿಗೆ ಕನಿಷ್ಠ ಒಂದು ರೀತಿಯ ಹಣ್ಣನ್ನಾದರೂ ಸೇವಿಸುವುದು ಒಳ್ಳೆಯದು. ಕೆಲವು ಹಣ್ಣುಗಳನ್ನು ನಿಯಮಬದ್ಧವಾಗಿ ಸೇವಿಸುತ್ತಾ ಬಂದರೆ ಮಧುಮೇಹ, ಬೊಜ್ಜು, ಎದೆನೋವು ಮತ್ತಿತರ ಕಾಯಿಲೆಗಳು ದೂರವಾಗುವವು. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ.
ಏಕೆಂದರೆ ಈ ಹಣ್ಣು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಹೇರಳವಾದ ಲವಣಗಳು ಹಾಗೂ ವಿಟಮಿನ್ ಗಳಿವೆ. ಅಷ್ಟೇ ಅಲ್ಲ ದ್ರವ ಪದಾರ್ಥವೂ ಇದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್ ಗಳು ಜೀರ್ಣಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಆರೋಗ್ಯವನ್ನು ವೃದ್ಧಿಸುವ ಪೌಷ್ಠಿಕಾಂಶಗಳು ಹಣ್ಣು, ತರಕಾರಿಯಲ್ಲಿವೆ. ಇವು ಶರೀರದೊಳಗೆ ಸೇರಿರುವ ವಿಷ ಪದಾರ್ಥಗಳನ್ನು ಹೊರ ಹಾಕುತ್ತವೆ. ತಾಜಾ ಸೊಪ್ಪು, ಹಸಿಬಟಾಣಿ, ಆಲೂಗೆಡ್ಡೆ, ಟೊಮೇಟೋ ದೊಂದಿಗೆ ಕೂಡಿದ ಸಲಾಡ್ ಶರೀರಕ್ಕೆ ಆರೋಗ್ಯ ನೀಡುತ್ತದೆ.
ಆಗಾಗ್ಗೆ ಸೌತೆಕಾಯಿ ತಿನ್ನುವುದು ಕೂಡ ಒಂದು ಒಳ್ಳೆಯ ಅಭ್ಯಾಸವೇ ಆಯಾಯ ಕಾಲಕ್ಕೆ ತಕ್ಕಂತೆ ನಾವು ಕೂಡ ನಮ್ಮ ನಿತ್ಯ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಆರೋಗ್ಯದಿಂದ ಇರಲು ಸಾಧ್ಯ. ಆರೋಗ್ಯವಿದ್ದರೆ ಇನ್ನೇನು ಬೇಕು?