ಬೇಸಿಗೆಯಲ್ಲಿ ನಿಂಬೆಹಣ್ಣಿನ ಪಾನೀಯವನ್ನು ಸೇವಿಸುವುದು ಬಹಳಷ್ಟು ಉಪಕಾರಿಯಾಗಿದೆ. ಇದು ಬರೀ ದಾಹ ನೀಗುವುದು ಮಾತ್ರವಲ್ಲದೆ, ಹಲವು ರೀತಿಯಲ್ಲಿ ದೇಹಕ್ಕೆ ಪೋಷಕ ಶಕ್ತಿಯನ್ನು ನೀಡುತ್ತದೆ.
ಇಷ್ಟಕ್ಕೂ ನಿಂಬೆ ಹಣ್ಣಿನಲ್ಲಿರುವ ಆರೋಗ್ಯಕಾರಿ ಗುಣಗಳ ಪಟ್ಟಿ ಮಾಡುತ್ತಾ ಹೋದರೆ ಅದು ಬೆಳೆಯುತ್ತಾ ಹೋಗುತ್ತದೆ. ಅಷ್ಟೇ ಅಲ್ಲ ಅದರಲ್ಲಿ ಇಷ್ಟೊಂದು ಔಷಧೀಯ ಗುಣಗಳಿವೆಯಾ ಎಂದು ಹುಬ್ಬೇರಿಸುವಂತೆ ಮಾಡಿ ಬಿಡುತ್ತದೆ.
ಬಾಯಿ ರುಚಿಗೆ ಮತ್ತು ದಾಹ ತಣಿಸಲು ಬೇರೆ ಯಾವುದೋ ತಂಪು ಪಾನೀಯಗಳನ್ನು ಸೇವಿಸುವ ಬದಲು ತಾವೇ ನಿಂಬೆ ಹಣ್ಣಿನ ಪಾನೀಯವನ್ನು ತಯಾರಿಸಿಕೊಂಡು ಕುಡಿದರೆ ನಿಜಕ್ಕೂ ಒಳ್ಳೆಯದು.
ರೋಗಗಳಿಗೆ ರಾಮಬಾಣ: ನಿಂಬೆಹಣ್ಣು ಹಲವು ರೋಗಗಳಿಗೆ ರಾಮಬಾಣವೂ ಹೌದು. ಇದನ್ನು ನಿತ್ಯದ ಬೇರೆ ಬೇರೆ ಸಂದರ್ಭಗಳಲ್ಲಿ ಸೇವಿಸುವುದರಿಂದ ಹಲವು ರೀತಿಯ ಉಪಯೋಗವಿದೆ. ನಿಂಬೆ ಹಣ್ಣಿನ ರಸದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ, ಕೊಬ್ಬು ಕರಗಿಸುವ, ವಾಂತಿಯನ್ನು ನಿಯಂತ್ರಿಸುವ, ಪಚನ ಕ್ರಿಯೆಯನ್ನು ಹೆಚ್ಚಿಸುವ ಹೀಗೆ ಹತ್ತು ಹಲವು ಉಪಯೋಗಗಳಿರುವುದನ್ನು ನಾವು ಕಾಣಬಹುದಾಗಿದೆ.
ನಿಂಬೆಹಣ್ಣಿನ ರಸದಲ್ಲಿ ಕ್ರಿಮಿಗಳನ್ನು ನಾಶ ಮಾಡುವ ಶಕ್ತಿಯೂ ಇದೆ. ಬಿಸಿಲಲ್ಲಿ ನಡೆದಾಡಿಯೋ, ಕೆಲಸ ಮಾಡಿಯೋ ಸುಸ್ತಾಗಿದ್ದರೆ ನಿಂಬೆಹಣ್ಣಿನ ರಸದ ಪಾನಕ ಸೇವಿಸಿದರೆ ಬಳಲಿಕೆ ದೂರವಾಗುತ್ತದೆ. ಉರಿಮೂತ್ರದ ಸಮಸ್ಯೆಯಿಂದ ಬಳಲುವವರು ಒಂದು ಚಮಚ ರಸದೊಂದಿಗೆ ಜೇನುತುಪ್ಪ ಬೆರೆಸಿ ಕುಡಿದರೆ ಶಮನವಾಗಲಿದೆ. ತಲೆಹೊಟ್ಟಿನ ಸಮಸ್ಯೆಯಿಂದ ಬಳಲುವವರು ನಿಂಬೆ ರಸವನ್ನು ಸೀಗೆ ಕಾಯಿಪುಡಿಯೊಂದಿಗೆ ಬೆರೆಸಿಕೊಂಡು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಹೊಟ್ಟು ಕಡಿಮೆಯಾಗುತ್ತದೆ.
ಬರೀ ನಿಂಬೆ ರಸವನ್ನು ಕೂದಲಿಗೆ ಹಚ್ಚಿ ಕೆಲವು ಸಮಯಗಳ ಬಳಿಕ ಸ್ನಾನ ಮಾಡಿದರೆ ಕೂದಲು ಮೃದುವಾಗುತ್ತದೆಯಲ್ಲದೆ, ಉದುರುವುದು ಕಡಿಮೆಯಾಗುತ್ತದೆ.