News Kannada
Friday, October 07 2022

ಆರೋಗ್ಯ

ಸಿಗರೇಟ್ ತ್ಯಜಿಸಿ ಆರೋಗ್ಯ ಕಾಪಾಡಿಕೊಳ್ಳಿ! - 1 min read

Photo Credit :

ಸಿಗರೇಟ್ ತ್ಯಜಿಸಿ ಆರೋಗ್ಯ ಕಾಪಾಡಿಕೊಳ್ಳಿ!

ನಾವೆಲ್ಲರೂ ಆರೋಗ್ಯವಂತರಾಗಿರಬೇಕೆಂದು ಬಯಸುತ್ತೇವೆ ಮತ್ತು ಸದಾ ಆರೋಗ್ಯದತ್ತ ಕಾಳಜಿಯನ್ನು ವಹಿಸುತ್ತಿರುತ್ತೇವೆ. ಆದರೂ ಕೆಲವೊಮ್ಮೆ ನಮಗೆ ಗೊತ್ತಿಲ್ಲದೆ ಕೆಲವು ಕಾಯಿಲೆಗಳು ಅಡರಿಕೊಳ್ಳುತ್ತವೆ. ನನಗೆ ಯಾವ ದುರಭ್ಯಾಸಗಳಿಲ್ಲ ಆದರೂ ಏಕೆ ಈ ಕಾಯಿಲೆ ಬಂತು ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತೇವೆ.

ಯಾವುದೇ ದುಶ್ಚಟಗಳಿಲ್ಲದವರೇ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರಬೇಕಾದರೆ ಆಗಾಗ್ಗೆ ಸಿಗರೇಟ್, ಬೀಡಿ ಸೇವನೆ ಮಾಡುವವರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿದರೆ ಭಯವಾಗುತ್ತದೆ. ಈಗೀಗ ಸಿಗರೇಟ್ ಸೇವನೆ ಯುವಕರಿಗೆ ಫ್ಯಾಷನ್ ಆಗಿದೆ. ಅಷ್ಟೇ ಅಲ್ಲ ಸಿಗರೇಟ್ ಇಲ್ಲಾಂದ್ರೆ ಅವರು ನೆಮ್ಮದಿಯಾಗಿರಲಾರರು. ಇಂತಹ ಸ್ಥಿತಿಗೆ ಬಂದು ತಲುಪಿದ್ದಾರೆ.

ಏನೇ ಕೆಲಸ ಮಾಡುವ ಮುನ್ನ ಸಿಗರೇಟ್ ಸೇದಿಯೇ ಮಾಡೋಣ ಎಂಬ ಮನೋಭಾವ ಬಂದಿರುವ ಕಾರಣ ಅಂಥವರು ಸಿಗರೇಟ್ ಇಲ್ಲದೆ ಕ್ಷಣ ಕಾಲವೂ ಇರಲಾಗದೆ ಚಡಪಡಿಸುತ್ತಾರೆ. ಇಷ್ಟಕ್ಕೂ ಸಿಗರೇಟ್ ಸೇವನೆಯಿಂದ ಅಂತಹದೊಂದು ಕಿಕ್ ಸಿಗುತ್ತಾ? ರಿಲ್ಯಾಕ್ಸ್ ಆಗುತ್ತಾ? ಅದನ್ನು ಏತಕ್ಕಾಗಿ ಸೇದಬೇಕು? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟುಕೊಳ್ಳುತ್ತಾ ಹೋಗುತ್ತದೆ. ಆದರೆ ಸಿಗರೇಟ್ ಸೇದುವವರು ಇಂತಹದಕ್ಕೆಲ್ಲ ಉತ್ತರ ಕೊಡಲಾರರು. ಅದು ಆಯಾಯ ವ್ಯಕ್ತಿಗೆ ಸಂಬಂಧಿಸಿದಷ್ಟೆ.

ಒಮ್ಮೆ ಅಭ್ಯಾಸ ಮೈಗೆ ಅಂಟಿಕೊಂಡಿತೆಂದರೆ ಕೂತರೂ ಸಿಗರೇಟ್ ಸೇದುತ್ತಾರೆ ನಿಂತರೂ ಸೇದುತ್ತಾರೆ. ಅದು ಆಗ ಈಗ ಎನ್ನುವುದಕ್ಕಿಂತ ಒಟ್ಟಾರೆ ಸಿಗರೇಟ್ ಸೇದಬೇಕು ಎನ್ನುವುದಷ್ಟೆ ಅವರಿಗೆ ಮುಖ್ಯವಾಗಿರುತ್ತದೆ.

ಗೆಳೆಯರೊಂದಿಗೆ ಪಾರ್ಟಿನಲ್ಲಿ ಬೆರೆಯುವಾಗಲೋ ಅಥವಾ ತಮಾಷೆಗೆ, ಖುಷಿಗೆ ಹೀಗೆ ಒಂದೊಂದು ಕಾರಣಕ್ಕೆ ಆರಂಭವಾಗುವ ಸಿಗರೇಟಿನ ಚಟ ಬಳಿಕ ಯಾರು ಇರಲಿ ಇಲ್ಲದಿರಲಿ ನಾನೊಂದು ಸಿಗರೇಟ್ ಸೇದಿಬಿಡೋಣ ಎನಿಸತೊಡಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಮಲೆನಾಡಿನಲ್ಲಿ ಸಿಗರೇಟ್, ಬೀಡಿ ಸೇದುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಇವರು ಕೆಮ್ಮು, ಅಸ್ತಮಾ ಮೊದಲಾದ ರೋಗಗಳಿಂದ ಬಳಲುತ್ತಿದ್ದರೂ ಧೂಮಪಾನವನ್ನು ಮಾತ್ರ ತ್ಯಜಿಸುವುದಿಲ್ಲ. ಪರಿಣಾಮ ಆರೋಗ್ಯ ಕ್ಷೀಣಗೊಂಡು ಅವರು ಮಾತ್ರ ಹಾಳಾಗುವುದಲ್ಲದೆ, ಇಡೀ ಕುಟುಂಬದ ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತಾರೆ.

ಹವ್ಯಾಸಕ್ಕೂ ದುಶ್ಚಟಕ್ಕೂ ವ್ಯತ್ಯಾವಿದೆ. ಹವ್ಯಾಸಗಳು ಬದುಕಿಗೆ ಉತ್ಸಾಹ ಮತ್ತು ನೆಮ್ಮದಿಯನ್ನು ತಂದುಕೊಟ್ಟರೆ ದುಶ್ಚಟ ದುಂದುವೆಚ್ಚ ಮತ್ತು ಆರೋಗ್ಯವನ್ನು ಕಿತ್ತುಕೊಳ್ಳುತ್ತದೆ. ಆರೋಗ್ಯವನ್ನು ಕೀಳುವ ದುಶ್ಚಟಗಳು ನಮಗೆ ಬೇಕಾ? ಅದಕ್ಕೆ ಖರ್ಚು ಮಾಡುವ ಹಣವನ್ನು ಆರೋಗ್ಯ ನೀಡುವ ಆಹಾರಪದಾರ್ಥಗಳಿಗೆ ಬಳಸಿದರೆ ಮನೆಯ ಆರ್ಥಿಕ ಹೊರೆ ಕಡಿಮೆಯಾಗುವುದಿಲ್ಲವೆ? ಹೀಗೆ ಆಲೋಚಿಸಿದರೆ ಬಹುಶಃ ದುಶ್ಚಟದಿಂದ ಮುಕ್ತಿಹೊಂದಲು ಸಾಧ್ಯವಿದೆ.

ಇವತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೂ, ಬೀಡಿ ಸಿಗರೇಟಿನ ಬೆಲೆ ಗಗನಕ್ಕೇರಿದ್ದರೂ ಅದರ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಗೊತ್ತಿದ್ದರೂ ಅದನ್ನು ಬಿಟ್ಟು ಬದುಕುವವರು ಕಡಿಮೆಯೇ.

ಕೆಲವರನ್ನು ಮಾತನಾಡಿಸಿದರೆ ಸಿಗರೇಟ್ ಸೇದುವುದರಿಂದ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಟೆನ್ಶನ್ ದೂರವಾಗುತ್ತದೆ ಎನ್ನುತ್ತಾರೆ. ಮತ್ತೆ ಕೆಲವರು ಖುಷಿಗೆ ಸೇದುತ್ತಿರುವುದಾಗಿ ಹೇಳುತ್ತಾರೆ. ತಮ್ಮ ಸಂಪಾದನೆಯಲ್ಲಿ ಕಾಲು ಭಾಗವನ್ನು ಸಿಗರೇಟಿಗೆ ಸುರಿಯುತ್ತಾರೆ. ಇನ್ನು ಧೂಮಪಾನ ಚಟವನ್ನು ಮೈಗೆ ಅಂಟಿಸಿಕೊಂಡ ವ್ಯಕ್ತಿ ಅದು ಇಲ್ಲದೆ ಹೋದರೆ ವಿಚಿತ್ರವಾಗಿ ವರ್ತಿಸುತ್ತಾನೆ. ಏನೋ ಕಳೆದುಕೊಂಡಂತೆ ಒದ್ದಾಡುತ್ತಾನೆ.

See also  ಬೊಜ್ಜು ದೇಹವನ್ನು ಕರಗಿಸಲು ಈ ಆಹಾರಗಳ ಸೇವನೆ ಮಾಡಿ

ವಿದ್ಯಾರ್ಥಿಗಳು ಈ ಚಟಕ್ಕೆ ಹೆಚ್ಚಾಗಿ ಒಳಗಾಗುತ್ತಾರೆ. ಮುಂದುವರಿದ ಈ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ಸಿಗರೇಟ್ ಸೇದುವ ಚಟವನ್ನು ರೂಢಿಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಸಿಗರೇಟ್ ಹೊಗೆ ಗಂಡಸರಿಗಿಂತಲೂ ಹೆಣ್ಣು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

ಇಷ್ಟಕ್ಕೂ ಸಿಗರೇಟ್ ಸೇದಿದರೆ ಅದರಿಂದ ಏನೋ ಒಂದು ಮಜಾ ಸಿಗುತ್ತೆ ಎಂಬ ಭ್ರಮೆಯಲ್ಲಿರುತ್ತಾರೆ ಇದಕ್ಕೆ ಸಿಗರೇಟಿನಲ್ಲಿರುವ ನಿಕೋಟಿನ್ ಕಾರಣವಂತೆ ಇದು ಸಿಗರೇಟ್‍ನ್ನು ಮತ್ತೆ ಮತ್ತೆ ಸೇದುವಂತೆ ಮಾಡುತ್ತದೆ. ಇದರಿಂದ ಮುಂದೆ ಉಸಿರಾಟಕ್ಕೆ ಅಡಚಣೆ, ಕೆಮ್ಮು, ಕಫ, ಶ್ವಾಸಕೋಸದ ತೊಂದರೆ, ಕ್ಯಾನ್ಸರ್, ದೈಹಿಕ ಅಸಮರ್ಥತೆ ಹೀಗೆ ಹತ್ತು ಹಲವು ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಸಿಗರೇಟ್ ಸೇದುವುದರಿಂದ ತಮ್ಮ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿದ್ದರೂ ಅದನ್ನು ಬಿಡುವ ಆಲೋಚನೆ ಮಾಡದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಆರೋಗ್ಯವಿದ್ದಾಗ ಸಿಗರೇಟ್ ಸೇದುವುದರಿಂದಾಗುವ ಪರಿಣಾಮಗಳು ಗೊತ್ತಾಗುವುದಿಲ್ಲ ಒಮ್ಮೆ ಆರೋಗ್ಯ ತಪ್ಪಿದಾಗ ಸಿಗರೇಟ್‍ನ ಚಮತ್ಕಾರ ಗೊತ್ತಾಗಿ ಬಿಡುತ್ತದೆ. ಕಾಯಿಲೆಯಲ್ಲಿ ಅದರ ಪಾತ್ರ ಎಷ್ಟಿದೆ ಎಂಬುದು ಅರಿವಿಗೆ ಬರುತ್ತದೆ. ಅದರಿಂದ ಹೇಗೋ ಬಿಡುಗಡೆಗೊಂಡು ಇನ್ನುಮುಂದೆ ಸಿಗರೇಟ್ ಸಹವಾಸ ಬೇಡಪ್ಪಾ ಎಂದು ದುಶ್ಚಟ ಬಿಟ್ಟವರು ಬದುಕಿಕೊಳ್ಳಬಲ್ಲರು.

ಮನಸ್ಸು ಮಾಡಿದರೆ ಯಾವುದೂ ಅಸಾಧ್ಯವಲ್ಲ. ಇವತ್ತಿನ ದಿನಗಳಲ್ಲಿ ಬೀಡಿ ಸಿಗರೇಟ್ ದುಬಾರಿಯಾಗಿದೆ. ಅದನ್ನು ಬಿಟ್ಟರೆ ಆರೋಗ್ಯ ಮಾತ್ರವಲ್ಲ, ಆರ್ಥಿಕವಾಗಿಯೂ ಸದೃಢರಾಗಲು ಸಾಧ್ಯವಿದೆ. ದುಶ್ಚಟಗಳನ್ನು ಕಲಿಯುವುದು ಸುಲಭ ಆದರೆ ಅದನ್ನು ತ್ಯಜಿಸುವುದು ಕಷ್ಟದ ಕೆಲಸ. ಆದರೆ ಗಟ್ಟಿ ಮನಸ್ಸು ಮಾಡಿ ಅದಕ್ಕೆ ತಿಲಾಂಜಲಿ ಹೇಳುವುದು ಇಂದಿನ ಅನಿವಾರ್ಯತೆಯಾಗಿದೆ. ಬಹಳಷ್ಟು ಮಂದಿ ಇವತ್ತು ಧೂಮಪಾನ ಸೇವನೆ ಬಿಟ್ಟು ಉತ್ತಮ ಆರೋಗ್ಯ ಕಂಡು ಕೊಂಡಿದ್ದಾರೆ.

ಸಿಗರೇಟ್ ಸೇವನೆ ಬಿಟ್ಟರೆ, ಆ ನಂತರ ವಿಟಮಿನ್- ಇ ಮಾತ್ರೆಗಳನ್ನು ಒಂದಷ್ಟು ಪ್ರಮಾಣದಲ್ಲಿ ಸೇವಿಸಬೇಕಂತೆ. ಇದರಿಂದ ಹೃದಯದ ಆರೋಗ್ಯಕ್ಕೆ ಹಾನಿಯಾಗುವುದಿಲ್ಲವಂತೆ. ಈ ಸಂಗತಿಯನ್ನು ಅಮೆರಿಕದಲ್ಲಿರುವ ಓಹಿಯೋ ಸ್ಟೇಟ್ ಯೂನಿವರ್ಸಿಟಿ ಸಂಶೋಧಕರು ತಿಳಿಸಿದ್ದಾರೆ. ಇ ವಿಟಮಿನ್ ನಿಂದ ಹೃದಯಕ್ಕೆ ಯಾವುದೇ ಸಮಸ್ಯೆ ಉಂಟಾಗದು. ರಕ್ತ ಪ್ರಸಾರ ಸುಗಮವಾಗಿರುತ್ತದೆ ಎಂದು ಅಧ್ಯಯನ ಸಂದರ್ಭದಲ್ಲಿ ಗಮನಿಸಿದ್ದಾರಂತೆ ಅಲ್ಲದೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಶೇ. 19 ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ. ಒಂದು ವಾರದಷ್ಟು ಸಮಯ ಧೂಮಪಾನ ಮಾಡದೆ ಇದ್ದವರಲ್ಲಿ ಶೇ.2.8 ರಷ್ಟು ರಕ್ತ ಪ್ರಸಾರದ ವ್ಯವಸ್ಥೆ ಸುಗಮವಾಗಿರುತ್ತಂತೆ. ವಿಟಮಿನ್ ‘ಇ’ ಯನ್ನು ಗಾಮ ಟೋಕೋಫೆರಾಲ್ ರೂಪದಲ್ಲಿ ಸೇವಿಸಿದರಲ್ಲಿ ಶೇ. 1.5 ರಷ್ಟು ವೃದ್ಧಿ ಕಂಡು ಬಂದ ಸಂಗತಿಯನ್ನು ವಿಜ್ಞಾನಿಗಳು ಹೇಳಿದ್ದಾರೆ.

ದುಶ್ಚಟಗಳಿಂದ ಮುಕ್ತಿ ಹೊಂದಬೇಕಾದರೆ ಬೇರೆಯವರ ಸಲಹೆಗಳೊಂದಿಗೆ ತಾನು ಬಿಟ್ಟೇ ಬಿಡುತ್ತೇನೆ ಎಂಬ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕು ಆಗ ಮಾತ್ರ ಸಾಧ್ಯ. ಇಷ್ಟಕ್ಕೂ ದೃಢಮನಸ್ಸಿದ್ದರೆ ಯಾವುದೂ ಕಷ್ಟವಲ್ಲ. ಮನಸ್ಸಿದ್ದರೆ ಮಾರ್ಗ ಎಂಬುದನ್ನು ಯಾರೂ ಮರೆಯಬಾರದು.

See also  ಉತ್ತಮ ಆರೋಗ್ಯಕ್ಕೆ ಬೆಳ್ಳುಳ್ಳಿಯನ್ನು ಸೇವಿಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು