News Kannada
Sunday, September 25 2022

ಆರೋಗ್ಯ

ಚಳಿಗಾಲದಲ್ಲಿ ಸಂಧಿವಾತದಿಂದ ಪಾರಾಗುವುದು ಹೇಗೆ? - 1 min read

Photo Credit :

ಚಳಿಗಾಲದಲ್ಲಿ ಸಂಧಿವಾತದಿಂದ ಪಾರಾಗುವುದು ಹೇಗೆ?

ಚಳಿಗಾಲ ಆರಂಭವಾಗಿರುವುದರಿಂದ ಈ ವಾತಾವರಣದಿಂದ ಕೆಲವರಲ್ಲಿ ಸಂಧಿವಾತಗಳು ತೀವ್ರಗತಿಯಲ್ಲಿರುತ್ತವೆ. ಹೀಗಾಗಿ ಒಂದಷ್ಟು ಎಚ್ಚರಿಕೆ ಮತ್ತು ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು.

ಮನುಷ್ಯನನ್ನು ಕಾಡುವ ರೋಗಗಳಲ್ಲಿ ಸಂಧಿವಾತವೂ ಒಂದಾಗಿದ್ದು, ಇದನ್ನು ಶಾಶ್ವತವಾಗಿ ಗುಣಪಡಿಸಲಾಗದಿದ್ದರೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದರೆ ನಿಯಂತ್ರಿಸಬಹುದಾಗಿದೆ. ಈ ಕುರಿತಂತೆ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಸಂಧಿವಾತ ಸಲಹಾ ತಜ್ಞೆ ಡಾ.ಕೆಎನ್ ಸಂಗೀತ ಅವರು ಒಂದಷ್ಟು ಉಪಯುಕ್ತ ಮಾಹಿತಿ ನೀಡಿದ್ದು, ಅದು ಹೀಗಿದೆ.

ಸಂಧಿವಾತ ಎನ್ನುವುದು ಕೀಲುಗಳ ಉರಿಯೂತವಾಗಿದೆ. ಇದು ಬಾವು ಮತ್ತು ಗಡುಸಾಗುವಿಕೆಯಿಂದ ಕೂಡಿದ ಕೀಲು ನೋವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಆರಂಭದಿಂದಲೂ ನಿರ್ಲಕ್ಷಿಸದೆ ಬೇಗನೆ ಚಿಕಿತ್ಸೆ ನೀಡಿದರೆ ಉತ್ತಮ. ಇಲ್ಲದೆ ಹೋದರೆ ರೋಗಿಯನ್ನು ಇನ್ನಿಲ್ಲದಂತೆ ಕಾಡಬಹುದು. ಇಲ್ಲಿ ಮುಖ್ಯವಾದ ವಿಷಯ ಏನೆಂದರೆ ಸಂಧಿವಾತ ಪುರುಷರಿಗಿಂತ ಮಹಿಳೆಯರಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆಯಂತೆ. ಸಂಧಿವಾತವನ್ನು ಆರಂಭದಿಂದಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯದೆ ಹೋದರೆ ಕೈ, ಪಾದ, ಮಣಿಕಟ್ಟು, ಭುಜಗಳು, ಮೊಣಕಾಲು ಮತ್ತು ಪಾದದ ಸಣ್ಣಕೀಲುಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಬೆನ್ನೆಲುಬುಗೂ ತೊಂದರೆಯಾಗುವ ಸಾಧ್ಯತೆಯೂ ಇದೆ. ಸಂಧಿವಾತಕ್ಕೆ ಧೂಮಪಾನ ಒಂದು ಪ್ರಮುಖ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ನಿತ್ಯದ ವ್ಯಾಯಾಮ, ನಡೆಯುವುದು, ದೇಹದ ತೂಕ ಇಳಿಸಿಕೊಳ್ಳುವುದರಿಂದ ಸಂಧಿವಾತದ ನೋವನ್ನು ಕಡಿಮೆ ಮಾಡಿಕೊಳ್ಳಬಹುದು.

ನೋವು, ಗಡುಸಾಗುವಿಕೆ, ಬಾವು, ಕೆಂಪಾಗುವುದು ಮತ್ತು ಚಲನೆಯ ವ್ಯಾಪ್ತಿ ಕಡಿಮೆಯಾಗುವುದು ಮೊದಲಾದ ಲಕ್ಷಣಗಳ ಮೂಲಕ ಯಾವ ವಿಧದ ಸಂಧಿವಾತ ಎಂಬುದನ್ನು ಹೇಳಬಹುದಾಗಿದೆ. ಹಲವು ರೀತಿಯ ಸಂಧಿವಾತಗಳಿದ್ದರೂ, ಎರಡು ಸಾಮಾನ್ಯ ರೂಪಗಳೆಂದರೆ ಅಸ್ಥಿ ಸಂಧಿವಾತ ಮತ್ತು ರ್ಯುಮಟಾಯ್ಡ್ ಸಂಧಿವಾತಗಳು.  ಇವು ಕೀಲುಗಳಿಗೆ ಬೇರೆ ಬೇರೆ ರೀತಿಯಲ್ಲಿ ಹಾನಿಯುಂಟು ಮಾಡಬಹುದು. ಗೌಟಿ ಸಂಧಿವಾತ, ಸೋರಿಯಾಟಿಕ್ ಸಂಧಿವಾತ, ಸ್ಪಾಂಡಿಲೊ ಸಂಧಿವಾತ, ಪ್ರತಿಕ್ರಿಯಾತ್ಮಕ ಸಂಧಿವಾತಗಳು ಕಾಣಿಸಿಕೊಳ್ಳುವುದು ಕಡಿಮೆ. ಸೋಂಕು ಕೂಡ ಸಂಧಿವಾತಕ್ಕೆ ಕಾರಣವಾಗ ಬಹುದು, ಇದಕ್ಕೊಂದು ಉದಾಹರಣೆ ಎಂದರೆ ಚಿಕುನ್ ಗುನ್ಯಾ ಸಂಧಿವಾತವಾಗಿದೆ.

 

ಅತ್ಯಂತ ಸಾಮಾನ್ಯವಾದ ಅಸ್ಥಿ ಸಂಧಿವಾತದಲ್ಲಿ ಕೀಲುಗಳ ಮೃದುವಾದ ಎಲುಬುಗಳಿಗೆ ಮತ್ತು ಕೀಲಾಗಿ ರೂಪುಗೊಳ್ಳುವ ಮೂಳೆಗಳ ತುದಿಯಲ್ಲಿ ದೃಢವಾದ, ನುಣುಪಾದ ಲೇಪನಕ್ಕೆ ಸಹಜ ಹಾನಿಯಾಗುತ್ತದೆ. ಮೃದುವಾದ ಎಲುಬುಗಳು ಮೂಳೆಗಳ ತುದಿಯನ್ನು ಮೆದುವಾಗಿಸುತ್ತವೆ ಮತ್ತು ಯಾವುದೇ ಘರ್ಷಣೆಯಿಲ್ಲದ ಕೀಲಿನ ಚಲನೆಗೆ ಅನುವು ಮಾಡಿಕೊಡುತ್ತವೆ, ಆದರೆ ಮೂಳೆ ತಿರುಗುವುದರ ಪರಿಣಾಮವಾಗಿ ಹೆಚ್ಚಿನ ಹಾನಿಯಾಗಬಹುದು, ಇದರಿಂದ ನೋವಾಗುವುದರ ಜೊತೆಗೆ ಚಲನೆಗೆ ಅಡ್ಡಿಯಾಗಬಹುದು. ಈ ಸಹಜ ಹಾನಿ ಹಲವಾರು ವರ್ಷಗಳಲ್ಲಿ ಆಗಬಹುದು ಮತ್ತು ಇಡೀ ಕೀಲಿಗೆ ಹಾನಿಯಾಗಬಹುದು. ರ್ಯುಮಟಾಯ್ಡ್ ಸಂಧಿವಾತದಲ್ಲಿ ಕೀಲಿನ ಕ್ಯಾಪ್ಸೂಲ್ ನ ಒಳಪದರದ ಮೇಲೆ ದೇಹದ ರೋಗ ನಿರೋಧಕ ಶಕ್ತಿ ದಾಳಿ ಮಾಡುತ್ತದೆ. ಈ ರೋಗ ಪ್ರಕ್ರಿಯೆ ನಿಧಾನವಾಗಿ ಮೃದು ಎಲುಬುಗಳನ್ನು ಮತ್ತು ನಿರ್ಧಿಷ್ಟ ಜಾಗದೊಳಗಿನ ಎಲುಬನ್ನು ನಾಶಪಡಿಸಬಹುದು. ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೇ ಹೋದರೆ ಇದು ಶ್ವಾಸಕೋಶ, ನರಗಳು, ಚರ್ಮ, ಕಣ್ಣುಗಳನ್ನೂ ಕೂಡ ಬಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ.

See also  ಬೇಸಿಗೆಯಲ್ಲಿ ಜೀವಸತ್ವಗಳುಳ್ಳ ಆಹಾರ ಸೇವಿಸಿ!

ಶಿಸ್ತಿಯಿಲ್ಲದ ಜೀವನಶೈಲಿ, ಕುಟುಂಬದ ಹಿನ್ನೆಲೆ, ವಯಸ್ಸು, ಮಿತಿಮೀರಿ ಆಲ್ಕೋಹಾಲ್ ಸೇವಿಸುವುದು, ಹಳೆಯ ಕೀಲು ನೋವುಗಳು ಮತ್ತು ಬೊಜ್ಜು. ಗಂಭೀರವಾದ ಸಂಧಿವಾತಕ್ಕೆ ಕಾರಣವಾಗಬಹುದು. ಇನ್ನು ಸಂಧಿವಾತ ಯಾವುದೇ ವಯಸ್ಸು, ಲಿಂಗ, ಜನಾಂಗ, ಅಥವಾ ಯಾವುದೇ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯಲ್ಲೂ ಬರಬಹುದು. ಆದರೂ ಕೆಲವು ತರಹದ ಸಂಧಿವಾತಗಳು ಸಾಮಾಜಿಕ- ಆರ್ಥಿಕವಾಗಿ ಮೇಲಿನ ಸ್ಥಾನದಲ್ಲಿರುವವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಒಟ್ಟಾರೆ, ಸಂಧಿವಾತ ಹೆಂಗಸರಲ್ಲಿ ಸಾಮಾನ್ಯವಾಗಿದೆ.

ಮುಂಜಾನೆ ಮತ್ತು ಚಳಿಗಾಲದಲ್ಲಿ ಸಂಧಿವಾತದ ನೋವು ತೀವ್ರವಾಗಿರುತ್ತದೆ. ಹೀಗಾಗಿ, ಬಿಸಿನೀರಿನ ಶಾಖ, ಬಿಸಿನೀರಲ್ಲಿ ಕೈ ಅಥವಾ ಕಾಲನ್ನು ಮುಳುಗಿಸುವುದು, ಬಿಸಿ ನೀರಸ್ನಾನ ಮಾಡುವುದು ಒಳ್ಳೆಯದು. ತೀವ್ರವಾದ ಸಂಧಿವಾತದಲ್ಲಿ ಕೀಲುಗಳು ಬೆಚ್ಚಗಿದ್ದರೆ ಕೋಲ್ಡ್ ಪ್ಯಾಕ್ ಮಾಡಬಹುದಾಗಿದೆ. ವ್ಯಾಯಾಮ ಒಳ್ಳೆಯದಾದರೂ ನೋವು ತೀವ್ರವಿದ್ದಾಗ ಮಾಡುವುದು ಒಳ್ಳೆಯದಲ್ಲ. ಹಲವು ಕೀಲುಗಳಲ್ಲಿ ನೋವಿದ್ದಾಗ ಫಿಸಿಯೋಥೆರಪಿಯಲ್ಲಿ ಸೂಚಿಸುವ ವ್ಯಾಕ್ಸ್ ಬಾತ್ ನೆರವಿಗೆ ಬರಬಹುದು.

ಒಟ್ಟಾರೆಯಾಗಿ ಹೇಳಬೇಕೆಂದರೆ ಸಂಧಿವಾತ ಕಾಣಿಸಿಕೊಂಡ ಆರಂಭದಲ್ಲಿಯೇ ತಜ್ಞವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವುದು ಮತ್ತು ವೈದ್ಯರು ಹೇಳಿದ ಕ್ರಮಗಳನ್ನು ತಮ್ಮ ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು