NewsKarnataka
Saturday, July 31 2021

ಆರೋಗ್ಯ

ನೆಮ್ಮದಿಯಾಗಿ ನಿದ್ದೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ

ನೆಮ್ಮದಿಯಾಗಿ ನಿದ್ದೆ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ
ಮಾ.19 ವಿಶ್ವ ನಿದ್ರೆ ದಿನವಂತೆ. ಮನುಷ್ಯನ ಆರೋಗ್ಯದಲ್ಲಿ ನಿದ್ದೆಗೆಷ್ಟು ಪ್ರಾಮುಖ್ಯತೆಯಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ ನಾವು ಇತ್ತೀಚೆಗಿನ ದಿನಗಳಲ್ಲಿ ಸುಖಾ ಸುಮ್ಮನೆ ಟಿವಿ, ಮೊಬೈಲ್ ನೋಡುತ್ತಾ ತಡ ರಾತ್ರಿವರೆಗೆ ನಿದ್ದೆ ಮಾಡದೆ ಇನ್ಯಾವುದೋ ಸಮಯದಲ್ಲಿ ನಿದ್ದೆ ಮಾಡುತ್ತಾ ಬೇಕು ಬೇಕಂತಲೇ ಆರೋಗ್ಯ ಹಾಳು ಮಾಡಿಕೊಳ್ಳುವವರು ಇಲ್ಲದಿಲ್ಲ.

ಆರೋಗ್ಯದ ವಿಷಯಕ್ಕೆ ಬಂದರೆ ನಾವು ಸೇವಿಸುವ ಆಹಾರದೊಂದಿಗೆ ನಿಯಮಿತ ನಿದ್ದೆಯೂ ಪ್ರತಿಯೊಬ್ಬರಿಗೂ ಅವಶ್ಯಕ. ಒಂದು ವೇಳೆ ನಿದ್ದೆಯಲ್ಲಿ ಏರುಪೇರಾದರೆ ಅದರ ಪರಿಣಾಮ ನೇರವಾಗಿ ನಮ್ಮ ಆರೋಗ್ಯದ ಮೇಲೆ ಬೀರುತ್ತದೆ. ನಿದ್ದೆ ಏಕೆ ಮಾಡಬೇಕು? ನಿದ್ದೆ ಮಾಡದಿದ್ದರೆ ದೈಹಿಕವಾಗಿ ಏನೆಲ್ಲಾ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದನ್ನು ನೋಡುವುದಾದರೆ ನಿದ್ದೆ ಕಡಿಮೆ ಮಾಡುವವರಲ್ಲಿ ಖಿನ್ನತೆ, ಉದ್ವೇಗ, ಅಶಾಂತಿ ತಾಂಡವವಾಡುತ್ತಿರುತ್ತದೆ. ಮತ್ತೊಂದೆಡೆ ಸ್ವಾಭಾವಿಕ ನಿದ್ದೆ ದೇಹದಿಂದ ದೂರವಾಗಿ ನಿದ್ರೆ ಮಾತ್ರೆಯ ಮೂಲಕ ನಿದ್ದೆ ಮಾಡುವಂತಹ ಪರಿಸ್ಥಿತಿಯೂ ಬಂದೊದಗುತ್ತದೆ. ನಿದ್ದೆಯಿಂದ ದೇಹಕ್ಕೆ ವಿಶ್ರಾಂತಿ ದೊರೆಯುತ್ತದೆ. ಆಳವಾದ ನಿದ್ದೆಯಿಂದ ಒಬ್ಬ ವ್ಯಕ್ತಿಯು ಉದ್ವೇಗದಿಂದ ಮುಕ್ತಿ ಪಡೆಯುತ್ತಾನೆ. ಏಕೆಂದರೆ ಮೆದುಳು ಮತ್ತು ಶರೀರಗಳಿಗೆ ಸಂಪೂರ್ಣವಾದ ವಿಶ್ರಾಂತಿ ನಿದ್ದೆಯಿಂದ ದೊರೆಯುತ್ತದೆ.

ಆರೋಗ್ಯವಂತ ಮನುಷ್ಯನಿಗೆ  6ರಿಂದ 8ಗಂಟೆಗಳ ನಿದ್ದೆ ಅವಶ್ಯವಿರುತ್ತದೆ. ಅಷ್ಟೇ ಅಲ್ಲ ವಯಸ್ಸಿಗೆ ಅನುಗುಣವಾಗಿ ನಿದ್ದೆಯು ಬೇಕಾಗುತ್ತದೆ.  ಅದರಂತೆ ಒಂದು ತಿಂಗಳ ಮಗುವಿಗೆ  21ಗಂಟೆ, ಆರು ತಿಂಗಳ ಮಗುವಿಗೆ 18ಗಂಟೆ, ಒಂದು ವರ್ಷದ ಮಗುವಿಗೆ 12ಗಂಟೆ, ನಾಲ್ಕು ವರ್ಷದ ಮಗುವಿಗೆ 11ಗಂಟೆ, 12 ವರ್ಷ ಮೇಲ್ಪಟ್ಟವರಿಗೆ 10ಗಂಟೆ, 16ವರ್ಷದವರಿಗೆ 8ಗಂಟೆ, 30ವರ್ಷ ಮೇಲ್ಪಟ್ಟವರಿಗೆ 6ರಿಂದ 8ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆಯಿರುತ್ತದೆ. ರಾತ್ರಿಯೆಲ್ಲಾ ನಿದ್ದೆ ಮಾಡಿದ್ದೇ ಆದರೆ, ಮುಂಜಾನೆ ಶರೀರ ಹಗುರವಾಗಿ ಉಲ್ಲಾಸ ಮೂಡುತ್ತದೆ. ನಿದ್ದೆಯ ಅಭಾವವಾದರೆ ಮನುಷ್ಯರಲ್ಲಿ ಸಿಡುಕು ಸ್ವಭಾವ ಮೂಡಬಹುದು. ಶರೀರದಲ್ಲಿ ಸ್ನಾಯುಗಳು ದುರ್ಬಲವಾಗಿ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಎಷ್ಟೇ ಪ್ರಯತ್ನ ಮಾಡಿದರೂ ನಿದ್ದೆ ಬಾರದಿರುವುದು,  ರಾತ್ರಿಯೆಲ್ಲಾ ಎಚ್ಚರವಾಗಿರುವುದು ಅಥವಾ ರಾತ್ರಿಯೆಲ್ಲಾ ನಿದ್ದೆಬಾರದೆ ಬೆಳಗಿನ ಜಾವ ತಡವಾಗಿ ನಿದ್ದೆ ಬರುವುದು ಇದು ಇನ್‍ಸೋಮ್ನಿಯಾ(ಅನಿದ್ದೆ) ರೋಗದ ಲಕ್ಷಣಗಳಾಗಿವೆ.

ಈ ರೋಗ ಹಲವು ಕಾರಣಗಳಿದ್ದಾಗ ಬರುತ್ತದೆ. ಶರೀರದಲ್ಲಿ ಅತಿಯಾದ ವೇದನೆ, ಹಳೆಯ ಕೆಮ್ಮು, ಮಾನಸಿಕ ವಿಕೃತಿ, ಡಿಪ್ರೆಷನ್ ಮುಂತಾದವು ಅನಿದ್ದೆಗೆ ಕಾರಣವಾಗುತ್ತದೆ.  ಅನಿದ್ದೆಯನ್ನು ನಿವಾರಿಸಲು ಉತ್ತಮ ನಿದ್ದೆಯನ್ನು ಪಡೆಯಲು ಯೋಗದಲ್ಲಿ ಕೆಲವು ಕ್ರಮಗಳನ್ನು ವಿವರಿಸಲಾಗಿದೆ. ನಿದ್ದೆ ಬಾರದಿದ್ದಾಗ ಔಷಧಿಗೆ ಶರಣಾಗದೆ ಯೋಗ ವಿಜ್ಞಾನದಲ್ಲಿ ಹೇಳಲಾಗಿರುವ  ಕೆಲವು ವಿಶೇಷ ರೀತಿಯ ಆಸನಗಳನ್ನು ಮಾಡುವುದರ ಮೂಲಕ ನಿದ್ದೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಶಾರೀರಿಕ ಹಾಗೂ ಮಾನಸಿಕವಾಗಿ ದಣಿಯುವವರಿಗೆ ನಿದ್ದೆಯು ಚೆನ್ನಾಗಿ ಬರುತ್ತದೆ. ನಿದ್ದೆಯಿಂದ ಆರೋಗ್ಯ ದೊರೆಯುತ್ತದೆ. ಹಾಗೆಂದು ಸದಾ ನಿದ್ದೆಯಲ್ಲೇ ತೊಡಗುವುದು ಆಲಸ್ಯ, ಸೋಮಾರಿತನವನ್ನು ಹುಟ್ಟು ಹಾಕುತ್ತದೆ. ಇದು ಆರೋಗ್ಯಕ್ಕೆ ಅಹಿತಕರವಾಗಿ ಪರಿಣಮಿಸುತ್ತದೆ. ಆದುದರಿಂದ ಸದಾ ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿ ನಿರ್ದಿಷ್ಟ ಸಮಯವನ್ನು ನಿದ್ದೆಗೆ ತೆಗೆದಿಡುವುದು ಒಳ್ಳೆಯದು.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.