ಈಗ ಬೆಳಿಗ್ಗೆ ಚಳಿ ಇದ್ದರೆ ಮಧ್ಯಾಹ್ನದ ವೇಳೆಗೆ ಸೆಕೆ ಕಾಣಿಸಿಕೊಂಡು ಮೈಯೆಲ್ಲ ಉರಿಯುವಂತೆ ಮಾಡಿ ಬಿಡುತ್ತದೆ. ಜತೆಗೆ ದೇಹದಲ್ಲಿ ಉಷ್ಣಾಂಶ ಕಾಣಿಸಿಕೊಳ್ಳುವುದರಿಂದ ಸಮತೋಲನ ಕಾಪಾಡಿಕೊಳ್ಳುವುದು ಸವಾಲ್ ಆಗಿದೆ.
ಈಗಿನ ಪರಿಸ್ಥಿತಿಯಲ್ಲಿ ನಮ್ಮ ಆರೋಗ್ಯದ ದೃಷ್ಠಿಯಿಂದ ಹೆಚ್ಚು ಹೆಚ್ಚಾಗಿ ಹಣ್ಣು-ತರಕಾರಿ ಸೇವಿಸುವುದನ್ನು ರೂಢಿಸಿಕೊಳ್ಳಬೇಕು. ಇವು ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗುತ್ತವೆ. ಇದರಲ್ಲಿರುವ ಲವಣಗಳು, ವಿಟಮಿನ್‌ಗಳಂತಹ ಪೌಷ್ಠಿಕ ಪದಾರ್ಥಗಳು ಶರೀರಕ್ಕೆ ಪೋಷಕ ಶಕ್ತಿಯನ್ನು ನೀಡುತ್ತವೆ. ನಮ್ಮ ಆಹಾರದೊಂದಿಗೆ ಕನಿಷ್ಠ ಒಂದು ರೀತಿಯ ಹಣ್ಣನ್ನಾದರೂ ಸೇವಿಸುವುದು ಒಳ್ಳೆಯದು.
ಕೆಲವು ಹಣ್ಣುಗಳನ್ನು ನಿಯಮಬದ್ಧವಾಗಿ ಸೇವಿಸುತ್ತಾ ಬಂದರೆ ಮಧುಮೇಹ, ಬೊಜ್ಜು, ಎದೆನೋವು ಮತ್ತಿತರ ಕಾಯಿಲೆಗಳು ದೂರವಾಗುವುವು. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಕಂಡು ಬರುತ್ತದೆ. ಏಕೆಂದರೆ ಈ ಹಣ್ಣು ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಹೇರಳವಾದ ಲವಣಗಳು ಹಾಗೂ ವಿಟಮಿನ್‌ಗಳಿವೆ. ಅಷ್ಟೇ ಅಲ್ಲ ದ್ರವ ಪದಾರ್ಥವೂ ಇದೆ. ಬಾಳೆಹಣ್ಣಿನಲ್ಲಿರುವ ವಿಟಮಿನ್‌ಗಳು ಜೀರ್ಣಕ್ರಿಯೆಯಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.
ಆರೋಗ್ಯವನ್ನು ವೃದ್ಧಿಸುವ ಪೌಷ್ಠಿಕಾಂಶಗಳು ಹಣ್ಣು, ತರಕಾರಿಯಲ್ಲಿವೆ. ಇವು ಶರೀರದೊಳಗೆ ಸೇರಿರುವ ವಿಷಪದಾರ್ಥಗಳನ್ನು ಹೊರ ಹಾಕುತ್ತವೆ. ತಾಜಾ ಸೊಪ್ಪು, ಹಸಿಬಟಾಣಿ, ಆಲೂಗೆಡ್ಡೆ, ಟೊಮೇಟೋದೊಂದಿಗೆ ಕೂಡಿದ ಸಲಾಡ್ ಶರೀರಕ್ಕೆ ಆರೋಗ್ಯ ನೀಡುತ್ತದೆ. ಆಗಾಗ್ಗೆ ಸೌತೆಕಾಯಿ ತಿನ್ನುವುದು ಕೂಡ ಒಂದು ಒಳ್ಳೆಯ ಅಭ್ಯಾಸವೇ ಆಯಾಯ ಕಾಲಕ್ಕೆ ತಕ್ಕಂತೆ ನಾವು ಕೂಡ ನಮ್ಮ ನಿತ್ಯ ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ.
ಮುಂದಿನ ದಿನಗಳಲ್ಲಿ ಬೇಸಿಗೆಯ ದಿನಗಳು ಆಗಿರುವುದರಿಂದ ಸೂರ್ಯನ ಪ್ರಖರತೆ ಹೆಚ್ಚಾಗಿ ಸ್ವಲ್ಪ ದೂರ ಕ್ರಮಿಸಿದರೆ, ಕೆಲಸ ಮಾಡಿದರೆ ಬಾಯಾರಿಕೆ, ಸುಸ್ತು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಹಣ್ಣು ಮತ್ತು ಹಣ್ಣಿನಿಂದ ಮಾಡಿದ ಜ್ಯೂಸ್ ಗಳನ್ನು ಸೇವಿಸುವುದು, ಹಸಿ ತರಕಾರಿಗಳನ್ನು ಉಪಯೋಗಿಸಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.