ನವದೆಹಲಿ: ಮಾರ್ಚ್ 4, 2023 ರಂದು, ಬಿಹಾರದ ಸೀತಾಮರ್ಹಿ ನಿವಾಸಿ 22 ವರ್ಷದ ಸುರೇಂದ್ರ ಕುಮಾರ್ ಅವರು ವೇದಿಕೆಯ ಮೇಲೆ ತನ್ನ ವಧುವಿಗೆ ಹಾರ ಬದಲಾಯಿಸಿದ ನಂತರ ಹೃದಯಾಘಾತದಿಂದ ನಿಧನರಾದರು. ಸಮಾರಂಭದಲ್ಲಿ ಮೊಳಗುತ್ತಿದ್ದ ಡಿಜೆ ಸಂಗೀತದ ಅಬ್ಬರದಿಂದ ವರ ಕುಸಿದು ತೀರಿಕೊಂಡಿದ್ದಾನೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದರು.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, ತೆಲಂಗಾಣದಲ್ಲಿ 19 ವರ್ಷದ ಯುವಕ ತನ್ನ ಸಂಬಂಧಿಕರ ಮದುವೆಯಲ್ಲಿ ನೃತ್ಯ ಮಾಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಕಳೆದ ವರ್ಷ ನವೆಂಬರ್ 25 ರಂದು ವಾರಣಾಸಿಯ ಪಿಪ್ಲಾನಿ ಕತ್ರಾದಲ್ಲಿ ಮದುವೆ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದರು.
ಕಳೆದ ಕೆಲವು ತಿಂಗಳುಗಳಲ್ಲಿ, ಭಾರತದಲ್ಲಿ ಹಲವಾರು ಆಘಾತಕಾರಿ ಘಟನೆಗಳು ಕಂಡುಬಂದಿವೆ, ಇದರಲ್ಲಿ ಜನರು ಇದ್ದಕ್ಕಿದ್ದಂತೆ ಕುಸಿದು ಬೀಳುತ್ತಿರುವುದನ್ನು ಮತ್ತು ಕೆಲವು ಸಂದರ್ಭಗಳಲ್ಲಿ, ಜೋರಾಗಿ ಸಂಗೀತವನ್ನು ಸಹಿಸಲಾರದೆ ಕುಸಿದು ಬಿದ್ದು ಹೃದಯ ಸ್ತಂಭನದಿಂದ ಸಾವನ್ನಪ್ಪುತ್ತಿರುವುದನ್ನು ಗಮನಿಸಬಹುದು.
ನವೆಂಬರ್ 2019 ರಲ್ಲಿ, ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ಪ್ರಕಾರ ಜೋರಾದ ಸಂಗೀತವು ಹೃದಯಕ್ಕೆ ಘಾಸಿ ಮಾಡುತ್ತದೆ ಎಂದು ತಿಳಿಸಿದೆ.
500 ಆರೋಗ್ಯವಂತ ವಯಸ್ಕರ ಮೇಲೆ ಸಂಶೋಧಕರು ಅಧ್ಯಯನವನ್ನು ನಡೆಸಲಾಗಿತ್ತು. ಅವರು ಬಿಡುವಿಲ್ಲದ ಮಾರುಕಟ್ಟೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು ಮತ್ತು ನಿರಂತರವಾಗಿ ಜೋರಾದ ಸಂಗೀತಕ್ಕೆ ಒಡ್ಡಿಕೊಳ್ಳುತ್ತಿದ್ದರು. ಜೋರಾದ ಸಂಗೀತ ಕಾರ್ಯಕ್ರಮಗಳು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಗಂಭೀರ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವಿವರಿಸಲಾಗಿದೆ.