ಮಂಡ್ಯ: ಜನರಿಗೆ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳುವ ಆರೋಗ್ಯ ಕಾರ್ಯಕ್ರಮಗಳ ಅರಿವು ಅಗತ್ಯ. ಸರ್ಕಾರ ಸಾರ್ವಜನಿಕರಿಗಾಗಿ ಹಲವು ಆರೋಗ್ಯದ ಸವಲತ್ತುಗಳನ್ನು ವಿತರಿಸುತ್ತದೆ. ಸಾರ್ವಜನಿಕರಿಗೆ ಇದರ ಮಾಹಿತಿ ಇಲ್ಲಾದಿದ್ದಲ್ಲಿ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ಕಷ್ಟಕರವಾಗುತ್ತದೆ. ಪ್ರಚಾರಕ್ಕೆ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಜಿಲ್ಲಾ ಆಶ್ರಿತರೋಗ ನಿಯಂತ್ರಣಾಧಿಕಾರಿ ಡಾ. ಭವಾನಿ ಶಂಕರ್ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಮಾಧ್ಯಮ ಮಿತ್ರರಿಗೆ ಆರೋಗ್ಯ ಕಾರ್ಯಕ್ರಮಗಳ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಬಳಿಕ ಅವರು ಮಾತನಾಡಿದರು.
ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡಿದಾಗ, ಸಾರ್ವಜನಿಕರು ಎಚ್ಚೆತ್ತುಕೊಂಡು ಆರೋಗ್ಯದ ಮೇಲೆ ನಿಗಾ ವಹಿಸುತ್ತಾರೆ ಹಾಗೂ ಸರ್ಕಾರದ ಉಚಿತ ಸೇವೆಗಳ ಸದ್ಭಳಕೆ ಮಾಡಿಕೊಳ್ಳುತ್ತಾರೆ ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಸಂಜಯ್ ಅವರು ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆರೋಗ್ಯ ಕೇಂದ್ರ, ಜಿಲ್ಲಾ ಆರೋಗ್ಯ ಕೇಂದ್ರಗಳು ಸಾರ್ವಜನಿಕರಿಗಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮುದಾಯ ಆರೋಗ್ಯಾಧಿಕಾರಿಗಳು ಗ್ರಾಮೀಣ ಪ್ರದೇಶಗಳಲ್ಲೂ ಲಭ್ಯವಿರುತ್ತಾರೆ ಗ್ರಾಮೀಣ ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಶ್ರೀರಂಗಪಟ್ಟಣ ತಾಲ್ಲೂಕಿನ ನಗುವನಹಳ್ಳಿ, ಮೇಲುಕೋಟೆ, ಚಿಕ್ಕ ಅರಸಿನಕೆರೆ ಗ್ರಾಮಗಳು ತಂಬಾಕು ಮುಕ ಗ್ರಾಮವಾಗಿದ್ದು, ಈ ಸಂಬಂಧ ರಾಜ್ಯ ಮಟ್ಟದ ಬಹುಮಾನ ಪಡೆದಿದ್ದೇವೆ. ಮಂಡ್ಯ ಜಿಲ್ಲೆಯನ್ನು ಸಂಪೂರ್ಣ ತಂಬಾಕು ಮುಕ್ತ ಜಿಲ್ಲೆಯನ್ನಾಗಿಸೋಣ ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ಕೆಲಸ ಮಾಡೋಣ ಎಂದರು.
ಇತ್ತೀಚೆಗಷ್ಟೆ ಮದ್ದೂರು ಬಳಿ ಅನಧಿಕೃತವಾಗಿ ತೆರದಿದ್ದ ಹುಕ್ಕಬಾರ್ ನ್ನು ನಿಷೇಧಿಸಿದ್ದೇವೆ. ಅಪ್ರಾಪ್ತ ಮಕ್ಕಳು ಇಂಹತ ದುಶ್ಚಟಗಳಿಗೆ ಬಲಿ ಆಗುತ್ತಿದ್ದಾರೆ. ಜಿಲ್ಲೆಯಲ್ಲಿ ಹುಕ್ಕಬಾರ್ ನ್ನು ಸಂಪೂರ್ಣ ನಿಷೇಧಿಸುವುದಕ್ಕೆ ಮಾಧ್ಯಮದವರ ಬೆಂಬಲ ಅಗತ್ಯವಿದೆ ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಆಶಾಲತಾ ಅವರು ಮಾತನಾಡಿ, ಕ್ಷಯರೋಗದವರಿಗೆ ವಿಶೇಷವಾದ ಆದ್ಯತೆ ಮೇರೆಗೆ ಪಂಚಾಯತಿಯ ಸೌಲಭ್ಯಗಳು ಸಿಗುತ್ತಿದೆ. ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷವಾದ ವಾರ್ಡ್ ಗಳಿದ್ದು, ಕ್ಷಯರೋಗಿಗಳನ್ನು ದಾಖಲು ಮಾಡಿಕೊಳ್ಳಲು ಅಧಿಕಾರಿಯನ್ನು ನೇಮಿಸಿದ್ದೇವೆ ಎಂದರು.
ಜಿಲ್ಲೆಯಲ್ಲಿ 790 ಕ್ಷಯರೋಗಿಗಳಿದ್ದು, ಅವರಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳು ಸಿಗುತ್ತಿದೆ ಎಂದರು.
ಇದಕ್ಕೂ ಮುನ್ನ ಆರೋಗ್ಯ ಶಿಕ್ಷಣಾಧಿಕಾರಿಯಾದ ಡಾ.ವೇಣುಗೋಪಾಲ ಅವರು ಆಯುಷ್ಮಾನ್ ಆರೋಗ್ಯ ಕಾರ್ಡ್, ಪ್ರಧಾನಮಂತ್ರಿ ಜನೌಷಧಿ ಕೇಂದ್ರ, ತಾಯಿ ಕಾರ್ಡ್, ಜನನಿ ಸುರಕ್ಷಾ ಯೋಜನೆ, ಭ್ರೂಣಲಿಂಗ ಪತ್ತೆ, ನಮ್ಮ ಕ್ಲಿನಿಕ್, ಈ-ಸಂಜೀವಿನಿ, ಶ್ರವಣ ದೋಷ ನಿಯಂತ್ರಣ ಮತ್ತು ನಿವಾರಣೆಯ ಬಗ್ಗೆ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ ಮಂಜುನಾಥ, ಆರೋಗ್ಯ ಇಲಾಖೆಯ ಡಾ.ಅನಿಲ್ ಕುಮಾರ್, ತಿಮ್ಮರಾಜು ಉಪಸ್ಥಿತರಿದ್ದರು.