ಬೀದರ್: ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮವನ್ನು (ಆರ್‌ಬಿಎಸ್‌ಕೆ) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಪರಿಣಾಮ ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಜಿಲ್ಲೆಯಲ್ಲಿ ತಗ್ಗಿದೆ.
2019ರಲ್ಲಿ ಜಿಲ್ಲೆಯಲ್ಲಿ 39,491 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. 2023ರ ಆಗಸ್ಟ್ 25ರ ಮಾಹಿತಿ ಪ್ರಕಾರ, ಈಗ ಕಡಿಮೆ ತೂಕ ಹೊಂದಿರುವ 15,627 ಮಕ್ಕಳು ಜಿಲ್ಲೆಯಲ್ಲಿ ಇದ್ದಾರೆ.
2020ನೇ ಸಾಲಿನಲ್ಲಿ 27,921, 2021ರಲ್ಲಿ 28,268 ಕಡಿಮೆ ತೂಕ ಹೊಂದಿದ ಮಕ್ಕಳು ಜಿಲ್ಲೆಯಲ್ಲಿ ಇದ್ದರು. ಇದರಲ್ಲಿ ಸಾಧಾರಣ ಮತ್ತು ತೀವ್ರ ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಮಕ್ಕಳೂ ಸೇರಿದ್ದಾರೆ. ಈ ಎರಡೂ ವರ್ಷಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಕಂಡು ಬಂದಿರಲಿಲ್ಲ.
2022ನೇ ಸಾಲಿನಲ್ಲಿ 15,318 ಕಡಿಮೆ ತೂಕ ಹೊಂದಿದ ಮಕ್ಕಳು ಜಿಲ್ಲೆಯಲ್ಲಿ ಇದ್ದರು. 2023ನೇ ವರ್ಷ ಕೊನೆಗೊಳ್ಳಲು ಇನ್ನೂ ನಾಲ್ಕು ತಿಂಗಳುಗಳಿವೆ. ಆಗಸ್ಟ್ ಅಂತ್ಯಕ್ಕೆ 15,627 ಕಡಿಮೆ ತೂಕ ಹೊಂದಿದವರನ್ನು ಗುರುತಿಸಲಾಗಿದೆ. ಹಿಂದಿನ ನಾಲ್ಕು ವರ್ಷಗಳಲ್ಲಿ ಉತ್ತಮ ಸಾಧನೆ ಆಗಿದೆ. ಆದರೆ, ಕಳೆದೊಂದು ವರ್ಷದಿಂದ ವಿರುದ್ಧ ದಿಕ್ಕಿಗೆ ಹೋಗುತ್ತಿದೆ.
ಅಪೌಷ್ಟಿಕತೆ ನಿವಾರಣೆಗೆ ಜಿಲ್ಲಾ ಹಾಗೂ ಎಲ್ಲಾ ತಾಲ್ಲೂಕು ಕೇಂದ್ರಗಳ ಆಸ್ಪತ್ರೆಗಳಲ್ಲಿ ‘ನ್ಯೂಟ್ರಿಷನ್ ರಿಹ್ಯಾಬಿಲಿಟೇಶನ್ ಸೆಂಟರ್’ ತೆರೆಯಲಾಗಿದೆ. ಅಲ್ಲಿ ಒಬ್ಬ ತಜ್ಞ ವೈದ್ಯರು, ದಾದಿಯರು ಮಕ್ಕಳಿಗೆ ಉಪಚಾರ ಮಾಡುತ್ತಾರೆ. ಆರ್‌ಬಿಎಸ್‌ಕೆ ಅಡಿ 8ರಿಂದ 15 ದಿನಗಳವರೆಗೆ ಕೇಂದ್ರದಲ್ಲಿ ಇರಿಸಿಕೊಂಡು ಮಗುವಿಗೆ ಅಗತ್ಯವಾಗಿ ಬೇಕಿರುವ ಪೌಷ್ಟಿಕಾಂಶ ಆಹಾರ ಕೊಡಲಾಗುತ್ತದೆ. ಏನಾದರೂ ಆರೋಗ್ಯ ಸಮಸ್ಯೆಗಳಿದ್ದರೆ ಅದಕ್ಕೂ ಚಿಕಿತ್ಸೆ ಕೊಡಲಾಗುತ್ತದೆ. ಮಗುವಿನೊಂದಿಗೆ ತಾಯಿಗೂ ಅಲ್ಲಿ ಇರಲು ಅವಕಾಶ ಇದೆ. ಅಲ್ಲದೇ ನಿತ್ಯ ಅವರ ಖಾತೆಗೆ ಹಣ ಕೂಡ ಜಮೆ ಮಾಡಲಾಗುತ್ತದೆ.
ಮಕ್ಕಳ ಪತ್ತೆ ಹೇಗೆ?
ಕಡಿಮೆ ತೂಕ ಹೊಂದಿದ ಮಕ್ಕಳನ್ನು ಗುರುತಿಸುವಲ್ಲಿ ಅಂಗನವಾಡಿಗಳ ಪಾತ್ರ ಪ್ರಮುಖವಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿಗಳಲ್ಲಿ ಪ್ರತಿ ಹದಿನೈದು ದಿನಗಳಿಗೊಮ್ಮೆ ಮಕ್ಕಳ ತೂಕ ಪರೀಕ್ಷಿಸಲಾಗುತ್ತದೆ. ಕಡಿಮೆ ತೂಕ ಇದ್ದವರ ವಿವರ ದಾಖಲಿಸುತ್ತಾರೆ. ಆರ್‌ಬಿಎಸ್‌ಕೆಯ ಆಯುರ್ವೇದಿಕ್ ವೈದ್ಯ ಹಾಗೂ ಸ್ಟಾಫ್ ನರ್ಸ್ ಕೂಡ ಮೇಲಿಂದ ಮೇಲೆ ಅಂಗನವಾಡಿಗಳಿಗೆ ಭೇಟಿ ಕೊಟ್ಟು ಮಾಹಿತಿ ಕಲೆ ಹಾಕುತ್ತಾರೆ. ಒಂದು ವೇಳೆ ಅಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುವ ಕಡಿಮೆ ತೂಕ ಹೊಂದಿರುವ ಮಕ್ಕಳು ಇದ್ದರೆ ‘ನ್ಯೂಟ್ರಿಷನ್ ರಿಹ್ಯಾಬಿಲಿಟೇಶನ್ ಸೆಂಟರ್’ಗೆ ಕಳಿಸಿಕೊಡಲು ಸಲಹೆ ಮಾಡುತ್ತಾರೆ. ಆರು ವರ್ಷದೊಳಗಿನ ಮಕ್ಕಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತಾರೆ.
‘ಜಿಲ್ಲೆಯಲ್ಲಿ ಆರ್‌ಬಿಎಸ್‌ಕೆ ಉತ್ತಮ ರೀತಿಯಿಂದ ಕೆಲಸ ಮಾಡುತ್ತಿದೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ, ಈ ಕಾರ್ಯಕ್ರಮದ ಕುರಿತು ಗ್ರಾಮೀಣ ಭಾಗದವರಿಗೆ ಹೆಚ್ಚಿನ ಮಾಹಿತಿಯೇ ಇಲ್ಲ. ಪ್ರಚಾರದ ಕೊರತೆ ಇದೆ. ಜನರಿಗೆ ಇದರ ಮಹತ್ವ ತಿಳಿಸಿಕೊಟ್ಟರೆ ಯಾವೊಂದು ಮಗು ಕೂಡ ಅಪೌಷ್ಟಿಕತೆ ಸಮಸ್ಯೆಯಿಂದ ಬಳಲುವುದಿಲ್ಲ. ಇದಕ್ಕೆ ಸರ್ಕಾರ ಸಾಕಷ್ಟು ಅನುದಾನ ನಿಗದಿಪಡಿಸಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಹಿರಿಯ ವೈದ್ಯರೊಬ್ಬರು ತಿಳಿಸಿದರು.