ಮೆದುಳಿನಲ್ಲಿ ಸ್ಟ್ರೋಕ್ ತುಂಬಾ ಗಂಭೀರವಾದ ಕಾಯಿಲೆಯಾಗಿದೆ. ಇದರ ಪರಿಣಾಮಗಳು ಆರೋಗ್ಯದ ಮೇಲೆ ದೀರ್ಘಕಾಲದವರೆಗೆ ಇರುತ್ತದೆ. ಮೆದುಳಿನಲ್ಲಿ ಸ್ಟ್ರೋಕ್ ಅನ್ನು ಮೆದುಳಿನ ದಾಳಿ ಎಂದೂ ಕರೆಯುತ್ತಾರೆ. ಇದರಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಅನೇಕ ಸಂದರ್ಭಗಳಲ್ಲಿ ಇದು ಸಾವಿಗೆ ಸಹ ಕಾರಣವಾಗುತ್ತದೆ.
ದೌರ್ಬಲ್ಯ, ಕುರುಡುತನ, ತಲೆನೋವು, ತಲೆತಿರುಗುವಿಕೆ ಮುಂತಾದ ರೋಗಲಕ್ಷಣಗಳು ಸ್ಟ್ರೋಕ್ ನರಮಂಡಲದಲ್ಲಿ ಅಸಮರ್ಪಕ ಕ್ರಿಯೆಯನ್ನು ಸೂಚಿಸುತ್ತದೆ ಎಂದು ನರವಿಜ್ಞಾನಿಗಳು ವಿವರಿಸುತ್ತಾರೆ. ಇದು ನಿಮ್ಮ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಯಿಂದಾಗಿರಬಹುದು ಅಥವಾ ರಕ್ತನಾಳಗಳ ಛಿದ್ರದಿಂದಾಗಿರಬಹುದು.
ಪಾರ್ಶ್ವ ವಾಯು ಸಂಭವಿಸುವುದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ. ಮೊದಲನೆಯದಾಗಿ ಮೆದುಳಿನ ಮೂಲಕ ರಕ್ತದ ಹರಿವಿನ ಬದಲಾವಣೆ ಪಾರ್ಶ್ವವಾಯು ಸಂಭವಿಸುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳು ಮೆದುಳಿನ ಕೋಶಕ್ಕೆ ತಲುಪಲು ರಕ್ತದ ಅರಿವು ಸಹಾಯ ಮಾಡುತ್ತದೆ ಆದರೆ ಈ ಹರಿವಿನಲ್ಲಿ ಅಡಚಣೆ ಉಂಟಾದಾಗ ಜೀವಕೋಶಗಳಿಗೆ ಆಮ್ಲಜನಕದ ಸಪ್ಲೈ ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ಪಾರ್ಶ್ವವಾಯು ಆರಂಭವಾಗುತ್ತದೆ.
ಹೆಚ್ಚಿದ ರಕ್ತದಲ್ಲಿನ ಸಕ್ಕರೆಯು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಮಧುಮೇಹ ಇರುವವರಲ್ಲಿ ಸ್ಟ್ರೋಕ್ ಸಂಭವವು ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ.
ಏಕೆಂದರೆ ದೀರ್ಘಕಾಲದವರೆಗೆ ದೇಹದಲ್ಲಿ ಹೆಚ್ಚಿನ ಸಕ್ಕರೆಯ ಮಟ್ಟದ ಕಾರಣದಿಂದಾಗಿ ರಕ್ತದ ಅಪಧಮನಿಗಳು ಹಾನಿಗೊಳಗಾಗಲು ಪ್ರಾರಂಭಿಸುತ್ತವೆ.
ಸಿಡಿಸಿ ಪ್ರಕಾರ, ಅಧಿಕ ರಕ್ತದೊತ್ತಡವು ರಕ್ತನಾಳದ ಅಡಚಣೆ ಅಥವಾ ಛಿದ್ರವನ್ನು ಉಂಟುಮಾಡಬಹುದು. ಇದು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ವರದಿಯ ಪ್ರಕಾರ, ಸ್ಟ್ರೋಕ್ನಿಂದ ಸಾಯುವ ಪ್ರತಿ 10 ಜನರಲ್ಲಿ 4 ಜನರ ರಕ್ತದೊತ್ತಡ ನಾರ್ಮಲ್ ಆಗಿದ್ದರೆ ಅವರನ್ನು ಉಳಿಸಬಹುದು.
ರಕ್ತದಲ್ಲಿನ ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ ಹೃದಯಾಘಾತ ಸೇರಿದಂತೆ ಪಾರ್ಶ್ವವಾಯು ಅಪಾಯವು ಹಲವಾರು ಪಟ್ಟು ಹೆಚ್ಚಾಗುತ್ತದೆ. ಏಕೆಂದರೆ ಇದು ರಕ್ತನಾಳವನ್ನು ನಿರ್ಬಂಧಿಸಲು ಕೆಲಸ ಮಾಡುತ್ತದೆ, ಇದರಿಂದಾಗಿ ಸಾಕಷ್ಟು ರಕ್ತದ ಪೂರೈಕೆ ಇಲ್ಲದೆ ಮತ್ತು ನರಗಳು ಸಾಯಲು ಪ್ರಾರಂಭಿಸುತ್ತವೆ.
ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ನಿಮ್ಮ ಆಕಾರವನ್ನು ಹಾಳು ಮಾಡುವುದಲ್ಲದೆ, ರಕ್ತನಾಳಗಳನ್ನು ಕುಗ್ಗಿಸುತ್ತದೆ. ಒಂದು ವರದಿಯ ಪ್ರಕಾರ, ಬಾಡಿ ಮಾಸ್ ಇಂಡೆಕ್ಸ್ನಲ್ಲಿನ ಪ್ರತಿ ಘಟಕ ಹೆಚ್ಚಳವು ಪಾರ್ಶ್ವವಾಯು ಅಪಾಯವನ್ನು 5 ಪ್ರತಿಶತದಷ್ಟು ಹೆಚ್ಚಿಸುತ್ತದೆ.
ವಯಸ್ಸು ಹೆಚ್ಚಾದಂತೆ ಪಾರ್ಶ್ವವಾಯು ಬರುವ ಸಾಧ್ಯತೆಯೂ ಹೆಚ್ಚುತ್ತದೆ. 55 ವರ್ಷಗಳ ನಂತರ, ಪ್ರತಿ 10 ವರ್ಷಗಳಿಗೊಮ್ಮೆ ಪಾರ್ಶ್ವವಾಯು ಬರುವ ಸಾಧ್ಯತೆಯು ದ್ವಿಗುಣಗೊಳ್ಳುತ್ತದೆ. ಆದಾಗ್ಯೂ, ಚಿಕ್ಕ ವಯಸ್ಸಿನಲ್ಲಿ ಅನೇಕ ಜನರು ಪಾರ್ಶ್ವವಾಯುವಿಗೆ ಒಳಗಾಗುತ್ತಿದ್ದಾರೆ.