ಮಡಿಕೇರಿ: ಜೇನು ಕೃಷಿ ಸವಾಲ್ ಆದರೂ ಅದರಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲು ಸಾಧ್ಯವಿದೆ ಎಂಬುದನ್ನು ತಳ್ಳಿಹಾಕಲಾಗದು. ಕೃಷಿಕರು ಉಪಕಸುಬಾಗಿ ಇದನ್ನು ಮಾಡಿದರೆ ತಮ್ಮ ಜಮೀನಿನಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವಾಗುವುದಲ್ಲದೆ ಶುದ್ಧ ಜೇನನ್ನು ಪಡೆಯಲು ಅವಕಾಶವಿದೆ.
ಜೇನು ಮನುಷ್ಯನಿಗೆ ಹಲವು ವಿಧದಲ್ಲಿ ಉಪಯೋಗಕಾರಿಯಾಗಿದೆ. ಶುದ್ಧವಾದ ಆರೋಗ್ಯಕರ ಸಿಹಿ ಜೇನನ್ನು ಮಾತ್ರ ನೀಡುವುದಲ್ಲದೆ, ಬೆಳೆಗಳಿಗೆ ಪರಾಗಸ್ಪರ್ಶದ ಮೂಲಕ ಹೆಚ್ಚಿನ ಇಳುವರಿ ಪಡೆಯಲು ಕೂಡ ಅನುಕೂಲ ಮಾಡಿಕೊಡುತ್ತದೆ. ಒಂದೆರಡು ದಶಕಗಳ ಹಿಂದೆ ಮಲೆನಾಡಿನಲ್ಲಿ ಜೇನು ಕೃಷಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಕ್ರಮೇಣ ನಾಶವಾದ ಪರಿಸರ, ಕ್ರಿಮಿನಾಶಕಗಳ ಬಳಕೆ, ಜೇನು ಹುಳುಗಳಿಗೆ ತಗುಲಿದ ವೈರಸ್ ಹೀಗೆ ಹಲವು ಕಾರಣದಿಂದ ಜೇನು ಕೃಷಿ ಕಷ್ಟವಾಗಿ ಪರಿಣಮಿಸಲಾರಂಭಿಸಿತ್ತು.
ಮೊದಲೆಲ್ಲ ಪ್ರತಿ ಕೃಷಿಕರ ಮನೆಯಲ್ಲಿಯೂ ಜೇನು ಪೆಟ್ಟಿಗೆಗಳು ಇರುತ್ತಿದ್ದವು. ಎಲ್ಲರೂ ಜೇನು ಕೃಷಿಯನ್ನು ಉಪಕಸುಬಾಗಿ ಮಾಡಿಕೊಂಡಿದ್ದರು. ತಾವು ಉತ್ಪಾದಿಸಿದ ಜೇನಿನಲ್ಲಿ ತಮ್ಮ ಖರ್ಚಿಗಿಟ್ಟುಕೊಂಡು ಉಳಿದ ಜೇನನ್ನು ಮಾರಾಟ ಮಾಡುತ್ತಿದ್ದರು. ಇದು ಶುದ್ಧ ಜೇನಾಗಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಜೇನು ಕೃಷಿ ಕಷ್ಟವಾಗಿ ಪರಿಣಮಿಸುತ್ತಿದೆ. ಜೇನು ಪೆಟ್ಟಿಗೆಗಳಲ್ಲಿ ಮೊದಲಿನಂತೆ ಜೇನು ಉತ್ಪಾದನೆಯಾಗುತ್ತಿಲ್ಲ.
ಇನ್ನು ಜೇನುಗೂಡುಗಳನ್ನು ರಕ್ಷಣೆ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಇರುವೆಗಳು ದಾಳಿ ಮಾಡಿ ಜೇನು ಕುಟುಂಬಗಳು ಪೆಟ್ಟಿಗೆಯನ್ನು ಬಿಟ್ಟು ಹೊರ ಹೋಗುವಂತೆ ಮಾಡಿಬಿಡಬಹುದು. ಹೀಗಾಗಿ ಜೇನುಹುಳುಗಳನ್ನು ಇರುವೆ ಕಾಟದಿಂದ ಪರಾಗುವಂತೆ ಮಾಡುವುದು ಸವಾಲಿನ ಕೆಲಸವಾಗಿದೆ. ಒಂದು ವೇಳೆ ಮನೆಯಲ್ಲಿರುವ ಜೇನು ಹುಳುಗಳಿಗೆ ಇರುವೆಯ ಕಾಟವಾದರೆ ಅದಕ್ಕೊಂದು ಸಲಹೆಯಿದೆ.
ಜೇನುಪೆಟ್ಟಿಗೆಯನ್ನು ಇಡಲು ಅನುಕೂಲವಾಗುವಂತೆ ಕಬ್ಬಿಣದ ಸ್ಟ್ಯಾಂಡ್ ನ್ನು ತಯಾರಿಸಬೇಕು. ಸ್ಟ್ಯಾಂಡ್ ನ ಕೆಳಭಾಗದಲ್ಲಿ ಪಾತ್ರೆಯನ್ನು ಜೋಡಿಸಬೇಕು ಅದರಲ್ಲಿ ವೇಸ್ಟ್ ಆಯಿಲ್ ಹಾಕಿಡಬೇಕು. ಹೀಗೆ ಮಾಡಿದರೆ ಭೂಮಟ್ಟದಿಂದ ಮೇಲಕ್ಕೇರುವ ಇರುವೆಗಳನ್ನು ತಡೆಯಲು ಸಾಧ್ಯವಿದೆ. ಜೇನು ಪೆಟ್ಟಿಗೆಯತ್ತ ಬರುವ ಇರುವೆಗಳು ವೇಸ್ಟ್ ಆಯಿಲ್ ಹಾಕಿದ ಪಾತ್ರೆಯನ್ನು ದಾಟಲು ಸಾಧ್ಯವಾಗದೆ ಬಿದ್ದು ಸಾಯುತ್ತವೆ.
ಇವತ್ತು ಜೇನುಪೆಟ್ಟಿಗೆಯನ್ನು ಖರೀದಿಸುವುದು ಕೃಷಿಕರಿಗೆ ಕಷ್ಟವಾಗುವುದಿಲ್ಲ. ಆದರೆ ಆ ಪೆಟ್ಟಿಗೆಗೆ ಜೇನು ಕುಟುಂಬವನ್ನು ಸೇರಿಸುವುದೇ ಸವಾಲ್ ಆಗಿದೆ. ಹೀಗಿರುವಾಗ ಇರುವ ಜೇನುಕುಟುಂಬವನ್ನು ಇರುವೆಗಳಿಂದ ರಕ್ಷಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ.
ಜೇನು ನೊಣಗಳಿಲ್ಲದ ವಿಶ್ವದಲ್ಲಿ ಮಾನವ ಕೇವಲ 4 ವರ್ಷಗಳು ಮಾತ್ರ ಬದುಕಬಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಹೀಗಿರುವಾಗ ಜೇನು ನೊಣಗಳ ರಕ್ಷಣೆಯತ್ತ ಗಮನಹರಿಸುವುದು ಮತ್ತು ಅವುಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.