ಮಡಿಕೇರಿ ; ರೋಟರಿ 3181 ಜಿಲ್ಲೆಯು ಈ ಸಾಲಿನಲ್ಲಿ ಸಂಸ್ಕಾರ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸುಮಾರು 75 ಸಿಲಿಕಾನ್ ಚೇಂಬರ್ ಗಳನ್ನು ಅಳವಡಿಸುವ ಗುರಿ ಹೊಂದಿದೆ ಎಂದು ಗವರ್ನರ್ ಏ ಆರ್ ರವೀಂದ್ರ ಭಟ್ ಅವರು ಹೇಳಿದರು.
ಇಂದು ಸೋಮವಾರಪೇಟೆ ಹಿಲ್ಸ್ ರೋಟರಿ ಕ್ಲಬ್ ಗೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಈಗಾಗಲೇ 23 ಸಿಲಿಕಾನ್ ಚೇಂಬರ್ ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಪ್ರತಿಯೊಂದು ಸಿಲಿಕಾನ್ ಚೇಂಬರ್ ನಿರ್ಮಾಣಕ್ಕೆ 10 ರಿಂದ 20 ಲಕ್ಷ ರೂಪಾಯಿಗಳ ವರೆಗೂ ವೆಚ್ಚ ಮಾಡಲಾಗುತಿದ್ದು ಎಲ್ಲಾ ಸಿಲಿಕಾನ್ ಚೇಂಬರ್ ನ್ನು ಧರ್ಮಸ್ಥಳ ದ ಧರ್ಮಾದ್ಯಕ್ಷರಾದ ಡಾಕ್ಟರ್ ಡಿ ವೀರೇಂದ್ರ ಹೆಗ್ಗಡೆ ಅವರು ಕೊಡುಗೆಯಾಗಿ ನೀಡುತಿದ್ದು ಉಳಿದ ಎಲ್ಲ ನಿರ್ಮಾಣ ಕಾರ್ಯವನ್ನು ರೋಟರಿ ಸಂಸ್ಥೆಯು ದಾನಿಗಳ ನೆರವಿನೊಂದಿಗೆ ಮಾಡುತ್ತಿದೆ ಎಂದರು. ಈ ರೋಟರಿ ಜಿಲ್ಲೆಯಲ್ಲಿ ಒಟ್ಟು 90 ಕ್ಲಬ್ ಗಳಿದ್ದು ಕನಿಷ್ಟ 75 ಸಿಲಿಕಾನ್ ಚೇಂಬರ್ ಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ರೋಟರಿ ಸಂಸ್ಥೆಯು ಈಗಾಗಲೇ ದೇಶಾದ್ಯಂತ ಪೋಲೀಯೋ ನಿರ್ಮೂಲನೆಯಲ್ಲಿ ಶೇಕಡಾ 100 ರಷ್ಟು ಗುರಿ ಸಾಧಿಸಿದ್ದು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದರು. ಈ ಬಾರಿ ರೋಟರಿ ಜಿಲ್ಲೆಯು ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಿದ್ದು ಬಿದಿರಿನ ಗಿಡಗಳನ್ನು ಬಿತ್ತನೆ ಮಾಡಿದೆ ಎಂದರು. ಒಂದು ಕೆಜಿ ಬಿದಿರಿನ ಬೀಜದಲ್ಲಿ 80 ಸಾವಿರ ಸಸಿಗಳು ಬೆಳೆಯುತ್ತವೆ.
ಈ ಬಾರಿ ಒಟ್ಟು 1050 ಕೆಜೆ ಬಿದಿರಿನ ಬೀಜಗಳನ್ನು ಬಿತ್ತನೆ ಮಾಡಲಾಗಿದ್ದು ಒಟ್ಟು 8 ಕೋಟಿ ನಾಲ್ಕು ಲಕ್ಷ ಸಸಿಗಳು ಬೆಳೆಯುತ್ತವೆ. ಆದರೆ ಹವಾಮಾನ ವೈಪರೀತ್ಯ , ಇನ್ನಿತರ ಕಾರಣದಿಂದಾಗಿ ಎಲ್ಲ ಗಿಡಗಳೂ ಬೆಳೆಯುವುದಿಲ್ಲ. ಕನಿಷ್ಟ 4 ರಿಂದ 8 ಲಕ್ಷ ಬಿದಿರಿನ ಗಿಡಗಳು ಅರಣ್ಯದಲ್ಲಿ ಬೆಳೆದು ಮುಂದಿನ ವರ್ಷಗಳಲ್ಲಿ ಪ್ರಾಣಿಗಳಿಗೆ ಆಹಾರವಾಗಲಿವೆ ಎಂದು ಹೇಳಿದರು.
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಮತ್ತು ವಿಜ್ಞಾನ ಪಠ್ಯವನ್ನೊಳಗೊಂಡ ವಿದ್ಯಾ ಸೇತು ಎಂಬ 250 ರೂಪಾಯಿ ಮುಖಬೆಲೆಯ ಪುಸ್ತಕವನ್ನು ವಿವಿಧ ಸಂಸ್ಥೆಗಳ ನೆರವಿನೊಂದಿಗೆ ಕೇವಲ ನೂರು ರೂಪಾಯಿಗಳಿಗೆ 5.5 ಲಕ್ಷ ವಿದ್ಯಾರ್ಥಿಗಳಿಗೆ ನೀಡಿದೆ ಎಂದರು.
ಇದಲ್ಲದೆ ಸುಮಾರು 10 ಲಕ್ಷ ಜನರಿಂದ ರಕ್ತದಾನ ಮತ್ತು ವೈದ್ಯಕೀಯ ಪರೀಕ್ಷೆ ಗಳನ್ನು ನಡೆಸಲಾಗಿದೆ ಎಂದರು. ಸಮಾಜಮುಖಿ ಕಾರ್ಯಕ್ರಮಗಳಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು ಇದರಿಂದ ಕಟ್ಟ ಕಡೆಯ ವ್ಯಕ್ತಿಗೂ ಸವಲತ್ತು ತಲುಪಲು ಸಹಾಯಕವಾಗುತ್ತದೆ ಎಂದರು.
ರೋಟರಿ ಸಹಾಯಕ ಗವರ್ನರ್ ಹೆಚ್ ಟಿ ಅನಿಲ್ , ಸೋಮವಾರಪೇಟೆ ಹಿಲ್ಸ್ ರೋಟರಿ ಕ್ಲಬ್ ನ ಅದ್ಯಕ್ಷ ಎಂ ಎಂ ಪ್ರಕಾಶ್ ಕುಮಾರ್ ಕಾರ್ಯದರ್ಶಿ ಡಿ ಪಿ ಧರ್ಮಪ್ಪ ಉಪಸ್ಥಿತರಿದ್ದರು.