ಕುಂದಾಪುರ: ಬೈಂದೂರು ತಾಲೂಕಿನ ಕಿರಿಮಂಜೇಶ್ವರ ವಲಯದ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಒಕ್ಕೂಟಗಳ ಪದಗ್ರಹಣ ಕಾರ್ಯಕ್ರಮ ನಾಗೂರು ಒಡೆಯರ ಮಠ ಶ್ರೀ ಗೋಪಾಲಕೃಷ್ಣ ಕಲಾಭವನದಲ್ಲಿ ಶುಕ್ರವಾರ ನಡೆಯಿತು.
ಧಾರ್ಮಿಕ ಮುಖಂಡ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಾತ್ರ ದೊಡ್ಡದಾಗಿದೆ ಗ್ರಾಮಾಂತರ ಪ್ರದೇಶದಲ್ಲಿರುವ ಜನರಿಗೆ ಬದುಕನ್ನು ಕಟ್ಟಿಕೊಳ್ಳಲು ಸಾಕಷ್ಟು ಸಹಕಾರಿ ಆಗಿದೆ ಎಂದು ಹೇಳಿದರು.
ಬೈಂದೂರು ಕ್ಷೇತ್ರದ ಶಾಸಕರಾದ ಬಿ.ಎಂ ಸುಕುಮಾರ್ ಶೆಟ್ಟಿ ಮಾತನಾಡಿ ಮಹಿಳೆಯರು ಇಂದು ಆರ್ಥಿಕವಾಗಿ,ಸಾಮಾಜಿಕವಾಗಿ ಅಭಿವೃದ್ಧಿಯಾಗಿರುವುದಕ್ಕೆ ಯೋಜನೆಯ ಪಾತ್ರ ಬಹಳಷ್ಟು ಇದೆ ಎಂದು ತಿಳಿಸಿದರು.
ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಶುಭಹಾರೈಸಿದರು. ಗೋಪಾಲಕೃಷ್ಣ ಭಟ್ ಪ್ರಾಧ್ಯಾಪಕರು ಧಾರ್ಮಿಕ ಪ್ರವಚನ ನೀಡಿದರು.
ಪೂಜಾ ಸಮಿತಿ ಅಧ್ಯಕ್ಷ ಎನ್.ವಿ ಪ್ರಕಾಶ್ ಐತಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಭಾಭವನದ ಮಾಲೀಕರಾದ ಮಂಜುನಾಥ ಐತಾಳ್, ಯೋಜನಾಧಿಕಾರಿ ಕೆ ವಿನಾಯಕ ಪೈ,ಕೇಂದ್ರ ಸಮಿತಿ ಅಧ್ಯಕ್ಷ ಕೆ ರಘುರಾಮ್ ಪೂಜಾರಿ, ಜನಜಾಗೃತಿ ವಲಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಪೂಜಾ ಸಮಿತಿ ಗೌರವಾಧ್ಯಕ್ಷ ಸುಬ್ಬಣ್ಣ ಶೆಟ್ಟಿ, ವಲಯಾಧ್ಯಕ್ಷ ದಿನೇಶ್ ಆಚಾರ್ಯ, ಭಜನಾ ಪರಿಷತ್ ಕಾರ್ಯದರ್ಶಿ ಮಂಜುನಾಥ್,ಕಿರಿಮಂಜೇಶ್ವರ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ನರಸಿಂಹ ದೇವಾಡಿಗ, ಕಿರಿಮಂಜೆಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೇಖರ್ ಖಾರ್ವಿ, ಹೇರೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯಕ್ , ಜನಜಾಗೃತಿ ಸದಸ್ಯೆ ಶ್ಯಾಮಲ ಕುಂದರ್ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳಿಗೆ ಒಕ್ಕೂಟದ ಪುಸ್ತಕವನ್ನು ಹಸ್ತಾಂತರ ಮಾಡುವ ಮುಖೇನ ಪದಗ್ರಹಣ ಮಾಡಲಾಯಿತು. 200 ಕ್ಕೂ ಹೆಚ್ಚು ಜೋಡಿಗಳು ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ವೃತ್ತದಾರಿಗಳಾಗಿ ಭಾಗವಹಿಸಿದ್ದರು.
ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ಒಕ್ಕೂಟವನ್ನು ಅಭಿನಂದಿಸಲಾಯಿತು, ವಲಯ ಅಧ್ಯಕ್ಷರಾದ ದಿನೇಶ್ ಆಚಾರ್ಯ ಸ್ವಾಗತಸಿದರು. ಮೇಲ್ವಿಚಾರಕ ರಾಘವೇಂದ್ರ ವರದಿ ಮಂಡನೆ ಮಾಡಿದರು. ಕಿರಿಮಂಜೆಶ್ವರ ಒಕ್ಕೂಟ ಅಧ್ಯಕ್ಷ ರಾಘವೇಂದ್ರ ವಂದಿಸಿದರು.