NewsKarnataka
Sunday, September 26 2021

ವಿಶೇಷ

ಡಾ. ಸರ್ವಪಲ್ಲಿ ರಾಧಾಕೃಷ್ಣನ್… ಶಿಕ್ಷಕರ ಸ್ಫೂರ್ತಿಯ ಚಿಲುಮೆ

ನಾವೆಲ್ಲರೂ ಮೊನ್ನೆ, ಮೊನ್ನೆ ಓದಿದ ಕಾಲೇಜು ಅಲ್ಲಿನ ಉಪನ್ಯಾಸಕರು, ಪ್ರಾಧ್ಯಾಪಕರನ್ನು ಬೇಕಾದರೂ ಮರೆತು ಬಿಡುತ್ತೇವೆ. ಆದರೆ ಒಂದನೇ ತರಗತಿ ಸೇರಿದ ದಿನ ಮತ್ತು ಅವತ್ತು ನಮಗೆ ಅ, ಆ ಇ, ಈ ಹೇಳಿಕೊಟ್ಟ ಟೀಚರ್ ನ್ನು ನಾವ್ಯಾರು ಮರೆಯಲು ಸಾಧ್ಯವೇ ಇಲ್ಲ.

ಅಂತಹ ಶಿಕ್ಷಕರಿಗೊಂದು ನಮನ ಹೇಳುವ ದಿನ ಬಂದಿದೆ. ಇವತ್ತು (ಸೆ.5) ನಾವೆಲ್ಲರೂ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ನಮಗೆ ವಿದ್ಯೆ ಮಾತ್ರವಲ್ಲದೆ, ಬದುಕುವುದನ್ನು ಕಲಿಸಿದವರು ಶಿಕ್ಷಕರಾಗಿದ್ದಾರೆ.

ನಾವೆಲ್ಲರೂ ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣರಾದವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್. ಅವರು ಅಂತಹದೊಂದು ತೀರ್ಮಾನ ಕೈಗೊಳ್ಳದೆ ಹೋಗಿದ್ದಿದ್ದರೆ ನಮಗೆ ಶಿಕ್ಷಕರನ್ನು ನೆನೆಯಲು ಒಂದು ದಿನ ಅಂಥ ಇರುತ್ತಲೇ ಇರಲಿಲ್ಲವೇನೋ?

ಇಷ್ಟಕ್ಕೂ ಶಿಕ್ಷಕರ ದಿನಾಚರಣೆ ಹೇಗೆ ಜಾರಿಗೆ ಬಂತು ಎಂಬುದನ್ನು ನೋಡುವುದಾದರೆ.. 1951ರಲ್ಲಿ ದೇಶದ ಮೊದಲ ಉಪರಾಷ್ಟ್ರಪತಿಯಾಗಿ , 1962ರಲ್ಲಿ ರಾಧಾಕೃಷ್ಣನ್ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಅವರ ಶಿಷ್ಯಕೋಟಿ ಬಯಸಿತು.  ಆದರೆ ಆಗ ರಾಧಾಕೃಷ್ಣರು ಶಿಕ್ಷಕ ಮತ್ತು ಶಿಕ್ಷಣ ಕ್ಷೇತ್ರದ ಮೇಲೆ ತಮಗಿದ್ದ ಅಭಿಮಾನದಿಂದ ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಸಲಹೆ ನೀಡಿದರು.  ಅದರಂತೆ ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ.  ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಗಳಾದರೂ ಶಿಕ್ಷಕರಾಗಿಯೇ ರಾರಾಜಿಸಿದವರು.

ಶಿಕ್ಷಕನೆಂಬುವ ಹೇಗಿರಬೇಕೆಂಬುದಕ್ಕೆ ಬಹುದೊಡ್ಡ ಉದಾಹರಣೆಯಾಗಿ ಉಧಾತ್ತ ಧ್ಯೇಯದೊಡನೆ ಶಿಕ್ಷಕ ವೃತ್ತಿಯನ್ನು ಬಹಳ ಬಹಳವಾಗಿ ಗೌರವಿಸುತ್ತಾ ಭಾರತೀಯ ಶಿಕ್ಷಣ ಕ್ಷೇತ್ರಕ್ಕೊಂದು ಸಾರ್ಥಕವೆನಿಸುವ ಅರ್ಥಪೂರ್ಣ ಚೌಕಟ್ಟನ್ನು ನೀಡುವ ಮೂಲಕ ಶಿಕ್ಷಣ ಕ್ಷೇತ್ರದ ಸರ್ವತೋಮುಖ ಪ್ರಗತಿಗಾಗಿ ತಮ್ಮ ಜೀವನವನ್ನು ಮೀಸಲಿಟ್ಟಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಓರ್ವ ಶ್ರೇಷ್ಠ ಶಿಕ್ಷಕ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞ ಮಾತ್ರ ಆಗಿರಲಿಲ್ಲ.  ಅಪಾರ ಅನುಭವವುಳ್ಳ, ಅಸಾಧಾರಣ ಅಧ್ಯಯನವುಳ್ಳ ತತ್ವಜ್ಞಾನಿಯೂ ಆಗಿದ್ದರು.  ಈ ದಿಸೆಯಲ್ಲಿ ಇವರು ರಚಿಸಿದ್ದ ’ದಿ ಎಥಿಕ್ಸ್ ಆಫ್ ವೇದಾಂತ’ ಪ್ರಬಂಧ ಪುಸ್ತಕ ಮತ್ತು ’ಜಿನ್ಯೂನ್ ಮ್ಯಾನಿಫೆಸ್ಟೇಷನ್ ಆಫ್ ಇಂಡಿಯನ್ ಸ್ಪಿರಿಟ್’ ಹಾಗೂ ’ದಿ ರೀಜನ್ ಆಫ್ ರಿಲಿಜಿಯನ್ ಇನ್ ಕಾಂಟೆಂಪರರಿ ಫಿಲಾಸಫಿ’ ಮುಂತಾದ ಕೃತಿಗಳು ಮಹತ್ವವೆನಿಸಿದ್ದು ವಿಶ್ವ ಮನ್ನಣೆಗಳಿಸಿವೆ.  ಯಾವುದೇ ವ್ಯಕ್ತಿಯಾಗಲಿ ಬಡವನಾಗಿ ಹುಟ್ಟಿರಲಿ, ಸಿರಿವಂತನಾಗಿ ಹುಟ್ಟಿರಲಿ ಸಾಧನೆಗೆ ಇದಾವುದೂ ಅಡ್ಡಿಯಾಗದು.  ಗುರಿ ಸಾಧಿಸುವ ಛಲದ ಜೊತೆ ಇಚ್ಛಾಶಕ್ತಿ, ಕ್ರಿಯಾಶಕ್ತಿ ಹಾಗೂ ಜ್ಞಾನಶಕ್ತಿ ಇದ್ದರೆ ಎಂಥಾ ಅದ್ಭುತವನ್ನಾದರೂ ಸಾಧಿಸಬಹುದು ಎಂಬುದಕ್ಕೆ ರಾಧಾಕೃಷ್ಣನ್ ಅವರ ಜೀವನವೊಂದು ಮಹಾಪಠ್ಯವಾಗಿ ನಮ್ಮ ಮುಂದಿದೆ.  ಪ್ರತಿಯೊಬ್ಬರೂ ಅದನ್ನು ಅರಿತು ನಡೆಯಬೇಕಷ್ಟೆ.

ಇವತ್ತು ಆದರ್ಶ ಸಮಾಜದ ಕನಸುಗಳನ್ನು ಹೊತ್ತಿದ್ದ ಶಿಷ್ಯ ಪ್ರೀತಿಯ ರಾಧಾಕೃಷ್ಣನ್‌ಅವರಂಥ ಶಿಕ್ಷಕರನ್ನು ನಾವಿಂದು ಕಾಣಲಾದೀತೆ? ಬೋಧನಾ ವೃತ್ತಿಯನ್ನೇ ಉಪ ಕಸುಬು ಮಾಡಿಕೊಂಡು, ಬಡ್ಡಿ ಲೇವಾದೇವಿ, ಲ್ಯಾಂಡ್ ಡೆವಲಪರ್, ರಾಜಕೀಯದಂತಹ ಇತರೇ ಚಟುವಟಿಕೆಗಳನ್ನು ಮುಖ್ಯ ಕಸುಬು ಮಾಡಿಕೊಂಡು ಪವಿತ್ರವಾದ ಶಿಕ್ಷಕ ವೃತ್ತಿಗೆ ದ್ರೋಹವೆಸಗುತ್ತಿರುವ ಶಿಕ್ಷಕರೇ ಹೆಚ್ಚು ತುಂಬಿರುವ ಶಿಕ್ಷಣ ಕ್ಷೇತ್ರದಲ್ಲಿ ಆದರ್ಶ ಶಿಕ್ಷಕರನ್ನು ಭೂತಗನ್ನಡಿ ಹಿಡಿದು ಹುಡುಕಬೇಕಷ್ಟೇ! ಇಲ್ಲವೆಂದಲ್ಲ, ಕಾರ್ಗತ್ತಲಲ್ಲಿ ಕಾಣುವ ಬೆಳಕಿನ ಹನಿಗಳಂತೆ ಅಲ್ಲೊಬ್ಬರು, ಇಲ್ಲೊಬ್ಬರು ಸಿಗುತ್ತಾರಷ್ಟೆ.  ಆದರೆ ಇಂಥ ಆದರ್ಶ ಶಿಕ್ಷಕರನ್ನು ಹೆಚ್ಚಿಸುವ ದಿಶೆಯಲ್ಲಿ ಶಿಕ್ಷಕರಷ್ಟೇ ಅಲ್ಲ ವಿದ್ಯಾರ್ಥಿಗಳೂ ಸೇರಿದಂತೆ ಪ್ರತಿಯೊಬ್ಬ ಪ್ರಜೆಯೂ ಪ್ರಾಮಾಣಿಕವಾಗಿ ಇಂದು ಚಿಂತಿಸಬೇಕಾಗಿದೆ.  ಏಕೆಂದರೆ ಒಂದು ನಾಡಿನ ಸುಸಂಸ್ಕೃತಿಯನ್ನು ಸಂವೃದ್ಧಿಗೊಳಿಸುವಲ್ಲಿ ಅಲ್ಲಿನ ಗುರು-ಶಿಷ್ಯ ಪರಂಪರೆಯ ಪಾತ್ರ ದೊಡ್ಡದು.  ಅದರಲ್ಲೂ ಗುರುವಿನ ಪಾತ್ರ ಬಹು ಮಹತ್ವದ್ದು ಎಂಬುದನ್ನು ಯಾರು ಮರೆಯಲಾರದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!