NewsKarnataka
Saturday, October 02 2021

ವಿಶೇಷ

ನಮ್ಮ ನಾಯಕರು ಗಾಂಧಿ ತತ್ವ ಪಾಲಿಸುತ್ತಿದ್ದಾರೆಯೇ?

ನಾವು ಈ ಪ್ರಶ್ನೆಗಳನ್ನು ನಮಗೆ ಕೇಳಿಕೊಳ್ಳುವ ದಿನಗಳು ಬಂದಿವೆ. ಸ್ವಾತಂತ್ರ್ಯ ನಂತರದ ಭಾರತ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿಯಲ್ಲಿ ದಾಪುಗಾಲಿಡುತ್ತಿದೆ. ಆದರೆ ಅದರ ಜತೆಗೆ ನಮ್ಮ ನಾಯಕರು ಮಹಾತ್ಮಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸಿದ್ದರೆ ಇವತ್ತು ದೇಶ ಜಗತ್ತು ತಿರುಗಿ ನೋಡುವಂತೆ ಮಾಡಬಹುದಿತ್ತು. ಆದರೆ..?

ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು, ಲಂಚಾವತಾರ, ಭ್ರಷ್ಟಚಾರ, ನಿರುದ್ಯೋಗ ಸಮಸ್ಯೆ, ವಂಚನೆ, ಕಳ್ಳತನ ಹೀಗೆ ಹತ್ತು ಸಮಸ್ಯೆಗಳು ದೇಶಕ್ಕೆ ಕಳಂಕವಾಗುತ್ತಿದೆ. ನಮ್ಮ ನಾಯಕರ ಅಧಿಕಾರದ ಲಾಲಸೆ, ಹಣಗಳಿಸುವ, ಆಸ್ತಿ ಮಾಡಿಡುವ, ಹಣ ಕೂಡಿಡುವ ದುಷ್ಟ ಬುದ್ದಿಗಳಿಂದಾಗಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಶ್ರೀಮಂತರು ಶ್ರೀಮಂತರಾಗಿಯೇ, ಬಡವರು ಬಡವರಾಗಿಯೇ ಉಳಿಯುವಂತಾಗಿದೆ.

ನಾಯಕರು ಗಾಂಧಿಯ ಸ್ಮರಣೆ ಮಾಡುವ ಮೂಲಕ ಗಾಂಧಿಯ ಭಾವಚಿತ್ರಗಳಿಗೆ, ಪ್ರತಿಮೆಗಳಿಗೆ ಹಾರ ಹಾಕಿ, ಪೂಜಿಸುವ ಮೂಲಕ ನಮನ ಸಲ್ಲಿಸಿಗಾಂಧಿಯ ಗುಣಗಾನ ದೊಂದಿಗೆ ಅವರ ತತ್ವಾ ದರ್ಶನ ಪಾಲನೆಯ ಬಗ್ಗೆ ಮಾತನಾಡುತ್ತಾರೆ. ಆದರೆ ಅದರಲ್ಲಿ ಎಳ್ಳಷ್ಟು ತಾವು ಪಾಲಿಸಿದ್ದರೆ ಬಹುಶಃ ದೇಶದ ಪ್ರಗತಿಯ ವೇಗ ಇನ್ನಷ್ಟು ಹೆಚ್ಚಾಗುತ್ತಿತ್ತೇನೋ? ಆದರೆ ಗಾಂಧಿಯ ತತ್ವಾದರ್ಶ ಕೇವಲ ಓಟು ಬ್ಯಾಂಕ್ ಗಳಾಗಿ ಬಳಕೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಬರೀ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲದೆ ಸರಳ ಜೀವನದ ಮೂಲಕ ಮಹಾತ್ಮರಾಗಿ ಬದುಕಿದ ಗಾಂಧಿಯ ನಡೆಯನ್ನು ಎಷ್ಟು ಜನ ಪಾಲಿಸುತ್ತಿದ್ದಾರೆ?

ಒಂದು ವೇಳೆ ಗಾಂಧಿ ಇವತ್ತಿನ ರಾಜಕಾರಣಿಗಳಂತೆ ಸ್ವಾರ್ಥಿಯಾಗಿದ್ದರೆ ಖಂಡಿತಾ ಅವರು ದೇಶದ ಮೊದಲ ರಾಷ್ಟ್ರಪತಿಯಾಗುತ್ತಿದ್ದರು. ಆದರೆ ಅವರಿಗೆ ಅಧಿಕಾರ ಬೇಕಿರಲಿಲ್ಲ. ದೇಶದ ಜನತೆ ಬ್ರಿಟೀಷರ ದಾಸ್ಯದಿಂದ ಮುಕ್ತಿ ಕಾಣಬೇಕೆಂಬ ಒಂದೇ ಒಂದು ಹೆಬ್ಬಯಕೆಯಾಗಿತ್ತು. ಅಹಿಂಸೆಯನ್ನೇ ಮಂತ್ರವನ್ನಾಗಿಸಿಕೊಂಡು ಇಡೀ ದೇಶವನ್ನೇ ಮುನ್ನಡೆಸಿ ಬ್ರಿಟೀಷರಿಂದ ಸ್ವಾತಂತ್ರ್ಯವನ್ನು ಭಾರತೀಯರಿಗೆ ಕೊಟ್ಟ ಭಾರತಾಂಭೆಯ ಸಂಜಾತ ಗಾಂಧಿ. ಇಂತಹ ಗಾಂಧಿಯವರ ತತ್ವ, ಆದರ್ಶ, ಅವರ ಹೋರಾಟಕ್ಕೆ ನಾವೂ ಈಗ ಸ್ವಲ್ಪವಾದರೂ ಬೆಲೆ ಕೊಡುತ್ತಿದ್ದೇವೆಯೇ?

ಇವತ್ತು ಗಾಂಧಿ ಬಗ್ಗೆ ನಮ್ಮ ನಾಯಕರಲ್ಲಿ ಎಷ್ಟು ಜನ ತಿಳಿದುಕೊಂಡಿದ್ದಾರೆ? ಯಾರೋ ಬರೆದುದನ್ನು ಓದಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಾಯಕರು ಗಾಂಧಿ ಬಗ್ಗೆ ಅಧ್ಯಯನ ಮಾಡಿದ್ದಾರಾ? ಅವರ ಸರಳತೆ ಮತ್ತು ಆದರ್ಶಗಳನ್ನು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿದ್ದಾರಾ? ತಮಗೆ ತಮ್ಮ ಮೊಮ್ಮಕ್ಕಳು ಸೇರಿದಂತೆ ತಲೆ ಮಾರಿಗೆ ಆಸ್ತಿ ಮಾಡಿಡುವ, ಸ್ವಿಸ್ ಬ್ಯಾಂಕ್ ನಲ್ಲಿ ಹಣವಿಟ್ಟು ಸದಾ ವಿದೇಶಿ ಪ್ರವಾಸದ ಮೂಲಕ ಐಷಾರಾಮಿ ಬದುಕು ನಡೆಸುತ್ತಿರುವ ನಾಯಕರಿಗೆ ವಿದೇಶಿ ಬಟ್ಟೆಗಳನ್ನು ತ್ಯಜಿಸಿದ, ದೇಶದ ಬಡ ಜನತೆಗೆ ಮೈಮುಚ್ಚಿಕೊಳ್ಳುವಷ್ಟು ಬಟ್ಟೆ ಸಿಗದಿರುವಾಗ ನಾನೇಕೆಉಡುಪುಗಳನ್ನು ಧರಿಸಬೇಕೆಂದು ತುಂಡುಡುಗೆ ತೊಟ್ಟ ಗಾಂಧಿ ಏಕೆ ನೆನಪಾಗುವುದಿಲ್ಲ?

ಸ್ವದೇಶಿ ಬಟ್ಟೆಗಳನ್ನು ತ್ಯಜಿಸಿ ಖಾದಿ ಬಟ್ಟೆಗಳನ್ನೇ ಧರಿಸಿ ಆ ಮೂಲಕ ತಮ್ಮ ದೇಶದ ನೇಕಾರರಿಗೆ ಅನ್ನಕೊಡಿ ಎಂದು ಪ್ರೆರೇಪಿಸಿದ ಗಾಂಧಿ ಅವರಲ್ಲಿದ್ದ ಕಾಳಜಿ ಇವತ್ತಿನ ನಾಯಕರಲ್ಲಿ ಏಕಿಲ್ಲ? ಪ್ರಶ್ನೆಗಳು ಉತ್ತರ ಸಿಗದೆ ನಮ್ಮಲ್ಲಿಯೇ ಉಳಿದುಬಿಡುತ್ತಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

Leave a Reply

Your email address will not be published. Required fields are marked *

Subscribe to our Brand New YouTube Channel

Subscribe Newsletter

Get latest news karnataka updates on your email.

error: Content is protected !!