ಮಡಿಕೇರಿ: ದ್ರಾವಿಡ ಭಾಷೆಗಳ ಪರಿವಾರಕ್ಕೆ ಸೇರಿದ ಪ್ರಾದೇಶಿಕ ಭಾಷೆಯೆಂದೇ ಗುರುತಿಸಬಹುದಾದ ಅರೆಭಾಷೆಗೆ ನೂರಾರು ವರ್ಷದ ಇತಿಹಾಸ ಇದೆಯೆಂದು ವಿದ್ವಾಂಸರು ಹೇಳುತ್ತಾರೆ. ಒಂದು ಭಾಷೆ ವಿಕಾಸ ಆಗಬೇಕಾದರೆ ಅದನ್ನು ಮಾತನಾಡುವ ನಾಗರಿಕರಿಂದ ಸಾಧ್ಯವೆಂದು ತಿಳಿದುಕೊಳ್ಳಬೇಕು. ಮತ್ತು ಅದು ಆ ಭಾಷೆಯನ್ನು ಓದಿದ ಜನರ ಸಂಪ್ರದಾಯವೆಂಧು ಅರ್ಥೈಸಬೇಕು. ರಾಜಕೀಯ ಮತ್ತು ಸಾಮಾಜಿಕ ಕಾರಣದಿಂದಾಗಿ ಅರೆಭಾಷೆಯಲ್ಲಿ ಬರಹ ಸಾಹಿತ್ಯ ರಚನೆ ಆಗದಿದ್ದರೂ ಅರೆಭಾಷಿಗರ ಸೃಜನಶೀಲತೆಗೆ ಅದರಿಂದ ಏನೂ ಕಡಿಮೆಯಾಗಿಲ್ಲ.
ಸಂಸ್ಕೃತಿಯ ವಿಚಾರಕ್ಕೆ ಬಂದಾಗ ಅವೆಲ್ಲವೂ ಜನಪದ ವಸ್ತುವೆಂದೇ ತಿಳಿಯಬೇಕು. ಈ ಜನಪದ ವಸ್ತುಗಳು ಜನರ ಬದುಕಿನಲ್ಲಿ ಮತ್ತು ಆಚರಣೆಗಳಲ್ಲಿ ಇವೆ. ಅವರ ಬಾಯಿಮಾತಿನಲ್ಲಿರುವ ಹಾಡು, ಕತೆ, ಗಾದೆ, ಒಗಟು, ನುಡಿಗಟ್ಟು ಇತ್ಯಾದಿ ಪ್ರಕಾರದ ಮೌಖಿಕ ಸಾಹಿತ್ಯಗಳು ಹೆಚ್ಚಾಗಿವೆ.
ವಾರ್ಷಿಕಾವರ್ತನ ಮತ್ತು ಜೀವನಾವರ್ತನಕ್ಕೆ ಸಂಬಂಧಿಸಿದ ಬೇಸಾಯ, ಮದುವೆ, ಹಬ್ಬ ಇಂತಹ ಸಾಮೂಹಿಕ ಕಾರ್ಯಗಳು ಕುಣಿತ, ಆಟ, ವಿನೋದ ಇತ್ಯಾದಿ ಅನೇಕ ಪ್ರಕಾರದ ಪದ ಸಂಪತ್ತು ಅರೆಭಾಷಿಗರಲ್ಲಿ ಪಾರಂಪರಿಕವಾಗಿ ಇದ್ದು ಇವುಗಳಿಗೆ ಸಂಬಂಧಿಸಿದ ಅರೆಭಾಷಿಕ ಪದಗಳು ಜನರ ಮಾತುಕತೆಗಳು ಅಳಿವಿನಂಚಿನಲ್ಲಿವೆ. ಅಂತಹ ಪದಗಳನ್ನು ಸಂಗ್ರಹಿಸಿ ಅವುಗಳ ಮೂಲ, ಪದನಿಷ್ಪತ್ತಿ, ಸಮಾನಾರ್ಥಗಳು ಮತ್ತು ಜ್ಞಾತಿ ಪದಗಳನ್ನು ಕರಾವಳಿ ಮಲೆನಾಡು ಪ್ರದೇಶದಲ್ಲಿ ಅಧ್ಯಯನಕ್ಕೆ ಒಳಪಡಿಸುವ ಅಗತ್ಯ ಇದೆ. ಇದರಿಂದ ದ್ರಾವಿಡ ಮೂಲರೂಪಕ್ಕೂ ಅರೆಭಾಷೆ ಮತ್ತು ಇತರ ಪ್ರಾದೇಶಿಕ ಪದಗಳಿಗಿರುವ ಮೂಲ ರೂಪವನ್ನು ಕಂಡುಕೊಳ್ಳಲು ಸಹಕಾರಿಯಾಗಬಹುದು.
ಅರೆಭಾಷೆ ಪದಕೋಶ ರಚನೆ ಯೋಜನೆ ತಯಾರಿ :
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ 15 ಡಿಸೆಂಬರ್ 2011ರಲ್ಲಿ ಕರ್ನಾಟಕ ಸರ್ಕಾದ ಸಂಸ್ಕೃತಿ ಇಲಾಖೆಯ ನಿರ್ದೇಶನದಲ್ಲಿ ಅಧಿಕೃತವಾಗಿ ಆರಂಭಗೊಂಡಿತು. ಅರೆಭಾಷೆ ಪದಕೋಶ ತಯಾರು ಮಾಡುವ ಚರ್ಚೆ ಅಕಾಡೆಮಿಯಲ್ಲಿ ಆರಂಭದಿಂದಲೇ ಇತ್ತು. ಅಕ್ಟೋಬರ್ 2019ರಲ್ಲಿ ಲಕ್ಷ್ಮೀನಾರಾಯಣ ಕಜೆಗದ್ದೆ ನೇತೃತ್ವಲದಲ್ಲಿ ಆರಂಭವಾದ ನಾಲ್ಕನೆಯ ಅವಧಿಯ ಅಕಾಡೆಮಿ ಕ್ರಿಯಾಯೋಜನೆಲಯಲ್ಲಿ ತುಳುವಿನಂತೆ ಲೆಕ್ಷಿಕನ್ ಮಾದರಿಯಲ್ಲಿ ಅರೆಭಾಷೆ ಪದಕೋಶನ(ಅರೆಭಾಷೆ, ಕನ್ನಡ, ಇಂಗ್ಲಿಷ್ ಡಿಕ್ಷನರಿ) ತಯಾರಿ ಮಾಡಬೇಕೆಂದು ಚರ್ಚೆಯಾಯಿತು. ಕೋಡಿ ಕುಶಾಲಪ್ಪ ಗೌಡರ ಸಲಹೆಯಂತೆ ಸುಳ್ಯ ಮತ್ತು ಮಡಿಕೇರಿಯಲ್ಲಿ ಅರೆಭಾಷೆ ವಿದ್ವಾಂಸರ ಸಭೆ ಮಾಡಿ ಸಂಶೋಧನಾ ಸಹಾಯಕರಿಂದ ಕ್ಷೇತ್ರಕಾರ್ಯ ಮಾಡಿಸಿ ಪದ ಸಂಗ್ರಹ ಮಾಡಲಾಯಿತು.
ಅರೆಭಾಷೆ ಪದಕೋಶ ರಚನೆಯ ಪೂರ್ವತಯಾರಿ :
ಮದ್ರಾಸ್ ವಿಶ್ವವಿದ್ಯಾಲಯ ವಿಶ್ರಾಂತ ಪ್ರಾದ್ಯಾಪಕರಾದ ಪ್ರೊ. ಚೆ. ರಾಮಸ್ವಾಮಿಯವರ ಮಾರ್ಗದರ್ಶನದಲ್ಲಿ ಸುಳ್ಯ ಮತ್ತು ಮಡಿಕೇರಿಯಲ್ಲಿ ನವೆಂಬರ್ ೨೦೨೦ರಲ್ಲಿ ಅರೆಭಾಷೆ ಪದಕೋಶ ರಚನೆಗೆ ಪೂರ್ವತಯಾರಿ ಸಭೆ ಮತ್ತು ಪದಕೋಶ ತಯಾರಿ ಕಮ್ಮಟವನ್ನು ನಡೆಸಲಾಯಿತು. ಈ ಕಮ್ಮಟದಲ್ಲಿ ೮ ಮಂದಿ ಸಂಶೋಧನಾ ಸಹಾಯಕರು ಸತತ ನಾಲ್ಕು ವಾರಗಳಲ್ಲಿ ೧೪ ಸಾವಿರ ಪದಗಳನ್ನು ಸಂಗ್ರಹಿಸಿ ಕೊಟ್ಟರು. ಅಲ್ಲದೆ ಈಗಾಗಲೇ ಪ್ರಕಟವಾದ ಕೆ.ಆರ್. ಗಂಗಾಧರರ ಅರೆಭಾಷೆ, ಕನ್ನಡ, ಇಂಗ್ಲಿಷ್ ಶಬ್ದಕೋಶ, ಹಲವಾರು ಸಂಶೋಧನೆ ಮತ್ತು ಪ್ರಕಟಿತ ಪುಸ್ತಗಳಿಂದ ಪದಗಳನ್ನು ಸಂಪಾದಿಸಿ ೧೮ ಸಾವಿರ ಪದಗಳನ್ನು ಅರೆಭಾಷೆ ಪದಕೋಶದಲ್ಲಿ ಅಧ್ಯಯನಕ್ಕೆ ಒಳಪಡಿಸಲಾಯಿತು. ಪ್ರಸ್ತುತ ಅರೆಭಾಷೆ ಪದಕೋಶದಲ್ಲಿ ೧೫೦೦ಕ್ಕಿಂತ ಹೆಚ್ಚು ಗಾದೆಗಳು ೭೫೦ಕ್ಕಿಂದ ಹೆಚ್ಚು ಒಗಟು ನುಡಿಗಟ್ಟುಗಳು ಹಾಗೂ ೧೮ ಸಾವಿರ ಪದಗಳಿಗೂ ಪ್ರಯೋಗ ವಾಕ್ಯಗಳನ್ನು ನೀಡಲಾಗಿದೆ. ಪದಕೋಶದಲ್ಲಿ ೯೦೦ಕ್ಕಿಂತ ಹೆಚ್ಚು ಮನೆತನ, ೧೦೦೦ಕ್ಕಿಂತ ಹೆಚ್ಚು ಸ್ಥಳನಾಮ ಹಾಗೂ ೧೫೦ಕ್ಕಿಂತ ಹೆಚ್ಚು ವ್ಯಕ್ತಿನಾಮಗಳು ಇವೆ.
ಪದ ಸಂಗ್ರಹ ಮತ್ತು ಸಂಪಾದನೆ ವಿಧಾನ :
ಸಾಮಾನ್ಯವಾಗಿ ಪದಗಳನ್ನು ಕಾರ್ಡ್ ಮೂಲಕ ಬರೆದು ಅಕಾರಾದಿಯಾಗಿ ಜೋಡಿಸಿ ಪದಕೋಶ ಮಾಡುವ ಕ್ರಮ. ಆದರೆ ಕೊರೋನಾ ಕಾಲದಲ್ಲಿ ಕ್ಷೇತ್ರಕಾರ್ಯದಿಂದ ಸಂಗ್ರಹಿಸಿದ ಪದಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡುವ ಸೂಚನೆಯನ್ನು ನೀಡಲಾಯಿತು. ಹಾಗಾಗಿ ಕ್ಷೇತ್ರಕಾರ್ಯ ಮಾಡುವವರಿಗೆ ಮೊಬೈಲ್ ತಂತ್ರಜ್ಞಾನ ಬಳಸಿ ಆಯಾ ದಿನ ಪದ ಸಂಗ್ರಹಿಸಿ ಅಪ್ಲೋಡ್ ಮಾಡುವ ತರಬೇತಿಯನ್ನೂ ನೀಡಲಾಯಿತು. ಸಂಶೋಧನಾ ಸಹಾಯಕರಿಗೆ ಆಗಾಗ ಗೂಗಲ್ ಮೀಟ್ ಮೂಲಕ ಸಲಹೆ ಸೂಚನೆಗಳನ್ನು ನೀಡಿ ಸಂಗ್ರಹಕಾರ್ಯದ ವೇಗವನ್ನು ಹೆಚ್ಚಿಸಲಾಯಿತು. ಹೀಗೆ ಡಿಸೆಂಬರ್ ೨೦೨೦ರಿಂದ ಮಾರ್ಚ್ ೨೦೨೧ರ ನಾಲ್ಕು ತಿಂಗಳ ಅವಧಿಯಲ್ಲಿ ೩೦ಕ್ಕಿಂತ ಹೆಚ್ಚು ಪದಗಳ ಸಂಗ್ರಹವಾಯಿತು.
ಅರೆಭಾಷೆ ಪದಕೋಶ ಮತ್ತು ಆನ್ಲೈನ್ ಸಂಪಾದನೆ ವಿಧಾನ :
ಕೋವಿಡ್ ಎರಡನೇ ಅಲೆಯಿಂದಾಗಿ ಯಾರೂ ಮನೆಯಿಂದಲೇ ಹೊರಡುವಂತಿರಲಿಲ್ಲ. ಆಗ ಆಯಾ ಜಾಗದಿಂದ ಆನ್ಲೈನ್ ಸಂಪಾದನೆಯ ಕೆಲಸಕ್ಕೆ ತೊಡಗಿದೆವು. ೩೦ ಸಾವಿರ ಪದಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ ೧೮ ಸಾವಿರದಷ್ಟು ಪದಗಳಿಗೆ ಪದ, ವ್ಯಾಕರಣ ವಿಶೇಷ, ಐಪಿಎ, ರೋಮನ್ ಇಟಾಲಿಕ್, ಸಾಂಸ್ಕೃತಿಕ ಪದ, ಕನ್ನಡ, ಇಂಗ್ಲಿಷ್ ಅರ್ಥ, ಗಾದೆ, ನುಡಿಗಟ್ಟು, ಒಗಟು, ವಾಕ್ಯಪ್ರಯೋಗ, ಪದಪ್ರಯೋಗ ಹೀಗೆ ಹಲವು ಭಾಗಗಳಲ್ಲಿ ಸಂಪಾದಿಸಲಾಯಿತು. ಮುಖ್ಯ ಸಂಪಾದನಾ ಜವಾಬ್ದಾರಿಯನ್ನು ಡಾ. ವಿಶ್ವನಾಥ ಬದಿಕಾನ ವಹಿಸಿಕೊಂಡಿದ್ದರು. ಸಂಪಾದಕರಾಗಿ ಭರತೇಶ ಅಲಸಂಡೆಮಜಲು, ಇಂಗ್ಲಿಷ್ ಸಂಪಾದಕರಾಗಿ ಡಾ. ಎನ್. ಗಿರೀಶ್, ಅರೆಭಾಷೆ ಸಂಪಾದಕರಾಗಿ ಕೇಂಜನ ಮಮತಾ ಪ್ರಸಾದ್ ಇವರೆಲ್ಲರೂ ಬೇರೆಬೇರೆ ಸ್ಥಳಗಳಲ್ಲಿ ಕುಳಿತು ಸಂಪಾದನೆಗೆ ತೊಡಗಿದರು. ಕರಡು ಪ್ರತಿ ತಿದ್ದುವ ಸಂದರ್ಭದಲ್ಲಿ ಹಲವರು ಒಟ್ಟಾಗಿ ಕುಳಿತು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಿ ಎಲ್ಲರೂ ನೋಡಿ ತಿದ್ದುವ ಕೆಲಸವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಕರಡು ಪ್ರತಿ ತಿದ್ದಲು ಅಕಾಡೆಮಿ ಸದಸ್ಯರಾದ ಪುರುಷೋತ್ತಮ ಕಿರ್ಲಾಯ, ಕಿರಣ ಕುಂಬಲ್ಚೇರಿ, ಡಾ. ಪುರುಷೋತ್ತಮ ಕೆ.ವಿ. ಕರಂಗಲ್ಲು, ವಿದ್ವಾಂಸರಾದ ಪ್ರೊ. ಚೆ. ರಾಮಸ್ವಾಮಿ, ಭಾಷಾ ಪರಿಣತರಾದ ಬಾರಿಯಂಡ ಜೋಯಪ್ಪ, ಸೀತಾರಾಮ ಕೇವಳ, ಸರೋಜ ಎಂ.ಕೆ., ಮನೋಜ್ ಕುಡೆಕಲ್ಲು ಸಹಕರಿಸಿದರು.
ಪದಕೋಶದ ಪದಗಳ ಸಂಗ್ರಹಣೆಯ ವ್ಯಾಪ್ತಿ :
ಕೊಡಗು ಜಿಲ್ಲೆ : ಆಲೂರು ಸಿದ್ಧಾಪು, ಐಗೂರು, ಕಾಜೂರು, ಕೊಡ್ಲಿಪೇಟೆ, ಸೋಮವಾರಪೇಟೆ, ಶನಿವಾರ ಸಂತೆ ಭಾಗಮಂಡಲ, ಮರಗೋಡು, ತೊಡಿಕಾನ, ಪೆರಾಜೆ, ಮಡಿಕೇರಿ, ಗಾಳಿಬೀಡು, ಮದನಾಡು, ಬೆಟ್ಟತ್ತೂರು, ಕುಶಾಲನಗರ, ಶುಂಟಿಕೊಪ್ಪ, ನಾಪೊಕ್ಲು, ಪೊನ್ಂಪೇಟೆ, ವಿರಾಜಪೇಟೆ, ಪಾಲಿಬೆಟ್ಟು, ಗೋಣಕೊಪ್ಪ
ದಕ್ಷಿಣಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆ : ಕೊಲ್ಲಮೊಗ್ರ, ನಡುಗಲ್ಲ್, ಬಾಳ್ಗೋಡು, ಹರಿಹರ ಪಲ್ಲತಡ್ಕ, ಕಂದ್ರಪ್ಪಾಡಿ, ಗುತ್ತಿಗಾರು, ದೇವಚಳ್ಳ, ಪಂಬೆತ್ತಾಡಿ, ಉಪ್ಪುಕಳ, ಮೆಂಟೆಕಜೆ, ಕಪ್ಪಡ್ಕ, ಕಡಮಕಲ್ಲು, ಕರಂಗಲ್ಲು, ದೊಡ್ಡತೋಟ, ಮಡಪ್ಪಾಡಿ, ಎಲಿಮಲೆ, ಪೈಲಾರ್, ಚೊಕ್ಕಾಡಿ, ಕುಕ್ಕುಜಡ್ಕ, ನಾರ್ಣಕಜೆ(ಗುತ್ತಿಗಾರು ಜಿಲ್ಲಾ ಪಂಚಾಯತ್); ಅರಂತೋಡು, ಮರ್ಕಂಜ, ಉಬರಡ್ಕ, ಆಲೆಟ್ಟಿ, ಬಡ್ಡಡ್ಕ, ಸುಳ್ಯ, ಐವರ್ನಾಡ್, ಚೊಕ್ಕಾಡಿ–ನಿಂತಿಕಲ್ಲು, ಬೆಳ್ಳಾರೆ (ಅರಂತೋಡು ಮತ್ತು ಬೆಳ್ಳಾರೆ ಜಿಲ್ಲಾ ಪಂಚಾಯತ್); ಕಣ್ಕೂರು, ಕೋಲ್ಚಾರ್, ಬಂದಡ್ಕ, ಕನಕಮಜಲು, ಜಾಲ್ಸೂರು, ಪಂಜಿಕಲ್ಲು, ಅಜ್ಜಾವರ, ಅಡೂರು, ಪರಪ್ಪೆ, ಮಂಡೆಕೋಲು, ಮುಡೂರು(ಜಾಲ್ಸೂರು ಜಿಲ್ಲಾ ಪಂಚಾಯತ್ ಮತ್ತು ಕಾಸರಗೋಡಿನ ಗಡಿ ಭಾಗ) ಕಡಬ, ಸುಬ್ರಹ್ಮಣ್ಯ, ಏಣೆಕಲ್ಲು, ಪಂಜ, ಬಳ್ಪ, ಬಳ್ಳಕ್ಕ(ಕುಕ್ಕೆ ಸುಬ್ರಹ್ಮಣ್ಯ ಮತ್ತು ಕಡಬ).
ನ್ಯೂಸ್ ಕರ್ನಾಟಕದ ಜೊತೆ ಮಾತನಾಡಿದ ಅರೆಭಾಷೆ ಪದಕೋಶದ ಸಂಪಾದಕರಾದ ಭರತೇಶ ಅಲಸಂಡೆಮಜಲು 18 ತಿಂಗಳಲ್ಲಿ ತಯಾರು ಮಾಡಿದ ಪದಕೋಶ ಇದಾಗಿದ್ದು ಎಂಟು ಜನ ರಿಸರ್ಚ್ ಅಸೋಸಿಯೇಟ್ ಗಳ ಮೂಲಕ ಮಾಡಲಾಗಿದೆ. ನುಡಿ ಬಳಸದೆ ಕೇವಲ ಯೂನಿಕೋಡ್ ಮುಖಾಂತರ ಈ ಪರಿಭಾಷೆ ಪದಕೋಶವನ್ನು ತಯಾರು ಮಾಡಿದ್ದೇವೆ. ಈ ಪದಕೋಶದಲ್ಲಿ ಗಾದೆ ಮನೆತನದ ಹೆಸರು ನುಡಿಗಟ್ಟು ಒಗಟುಗಳನ್ನು ಒಳಗೊಂಡಿದೆ. ಎಂದು ಹೇಳಿದರು.
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಅತ್ಯಲ್ಪ ಅವಧಿಯಲ್ಲಿ ಒಂದು ಒಳ್ಳೆಯ ಪದಕೋಶವನ್ನು ತಯಾರು ಮಾಡಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಷ್ಕರಣೆ ಗೊಳ್ಳಲಿದೆ. ಅರೆಭಾಷೆ ಪದಕೋಶ ಕಾಗಿ ಎರಡು ಪ್ರಮುಖ ಸಭೆಗಳನ್ನು ಕರೆದಿದ್ದು, ಅವುಗಳಲ್ಲಿ ಬೇಕಾದ ಮಾಹಿತಿಗಳನ್ನು ಪಡೆದುಕೊಂಡು ಎರಡು ದಿನದ ಕ್ಷೇತ್ರ ಕಾರ್ಯಾಗಾರವನ್ನು ನಡೆಸಿ ಪದಗಳನ್ನು ಸಂಗ್ರಹ ಮಾಡಿದ್ದೇವೆ ಎಂದರು.
ನ್ಯೂಸ್ ಕನ್ನಡದ ಜೊತೆ ಮಾತನಾಡಿದ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಪಕರಾದ ವಿಶ್ವನಾಥ ಬದಿಕ್ಕಾನ ಈ ಅರೆಭಾಷೆ ಪದಕೋಶದ ಮುಖ್ಯ ಉದ್ದೇಶವೇ ಮುಂದೆ ಭವಿಷ್ಯದಲ್ಲಿ ಭಾಷಾ ವಿಜ್ಞಾನದ ಅಭ್ಯಾಸ ಮಾಡುವವರಿಗೆ ಉಪಯುಕ್ತವಾಗಲಿ ಎನ್ನುವುದು. ಇದರ ಜೊತೆಗೆ ಬೇರೆ ಭಾಷೆಯ ಪ್ರಭಾವದಿಂದ ಪ್ರಾದೇಶಿಕ ಆಡು ಭಾಷೆಯ ಹಲವಾರು ಮೂಲ ಪದಗಳು ನಶಿಸಿಹೋಗುತ್ತಿವೆ ಇವುಗಳನ್ನು ನಶಿಸಿಹೋಗದಂತೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು.