ಮಂಗಳೂರು: ರಾತ್ರಿ ವೇಳೆ ಧ್ವನಿವರ್ಧಕ ಬಳಕೆ ಮಿತಿ ಹೇರಿದ್ದು ಯಕ್ಷಗಾನ ಮೇಳಕ್ಕೂ ತಟ್ಟಿದೆ , ರಾಜ್ಯ ಸರಕಾರದ ಆದೇಶದಂತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ 6ಯಕ್ಷಗಾನ ಮೇಳಗಳ ಪ್ರದರ್ಶನ ವನ್ನು ಕಾಲಮಿತಿಗೆ ಬದಲಾಯಿಸಲು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ.
ಇಡೀ ರಾತ್ರಿ ಯಕ್ಷಗಾನ ನಡೆಸುವ ಬದಲು ಸಂಜೆಯಿಂದ ರಾತ್ರಿ 11 ಗಂಟೆ ವೇಳೆಗೆ ಮುಗಿಸಲು ನಿರ್ಧರಿಸಲಾಗಿದೆ. ರಾತ್ರಿ ಗಂಟೆ 10.30 ರಿಂದ 5 ಡಿಸಿಬಲ್ ಗಿಂತ ಹೆಚ್ಚಿನ ಮಿತಿಯ ಧ್ವನಿವರ್ಧಕ ಬಳಸಬಾರದೆಂದು ಸರಕಾರದಿಂದ ಈಗಾಗಲೇ ದೇವಸ್ಥಾನಗಳಿಗೆ ಸೂಚನೆ ಬಂದಿದೆ ಈ ನಿಟ್ಟಿನಲ್ಲಿ ಯಕ್ಷಗಾನ ಪ್ರದರ್ಶನದ ಸಮಯವನ್ನು ಬದಲಾಯಿಸಲು ಕಟೀಲು ದೇವಳದ ಯಕ್ಷಗಾನ ಮೇಳಗಳ ಆಡಳಿತ ಮಂಡಳಿಯು ನಿರ್ಧಾರಕ್ಕೆ ಬಂದಿದೆ.
ಪ್ರತಿ ವರ್ಷ ನವೆಂಬರ್ ನಿಂದ ತೊಡಗಿ ಮೇ ಕೊನೆಯವರೆಗೂ 6ತಿಂಗಳ ಕಾಲ ಯಕ್ಷಗಾನ ಮೇಳಗಳ ತಿರುಗಾಟ ಇರುತ್ತದೆ . ರಾತ್ರಿ 10 ರಿಂದ ತೊಡಗಿ ಬೆಳಗಿನ 6 ಗಂಟೆವರೆಗೂ ಯಕ್ಷಗಾನ ಇರುತ್ತದೆ. ಧ್ವನಿವರ್ಧಕಕ್ಕೆ ಮಿತಿಯೇರುವುದು ಮತ್ತು ರಾತ್ರಿಯಿಡಿ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದ್ದರಿಂದ ಕಾಲಮಿತಿ ಯಕ್ಷಗಾನ ಹೆಚ್ಚು ಪ್ರಚಲಿತವಾಗುತ್ತಿದೆ , ಇದೇ ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಸಂಜೆ 5,30 ರಿಂದ ರಾತ್ರಿ 10.30 ರವರೆಗೆ ಕಟೀಲು ಮೇಳದ ಯಕ್ಷಗಾನ ಸೇವೆ ನಡೆಸಲು ನಿರ್ಧರಿಸಲಾಗಿದೆ ಎಂದು ಕಟೀಲು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.