News Kannada
Wednesday, December 06 2023
ಲೇಖನ

ಹಾಸನ: ಪವಾಡ ಸೃಷ್ಟಿಯ ಹಾಸನದ ಹಾಸನಾಂಬೆ

The Hasanamba temple was officially closed on October 27.
Photo Credit : By Author

ಹಾಸನ: ಪ್ರತಿವರ್ಷದಂತೆ ಈ ಬಾರಿಯೂ ಹಾಸನದ ಹಾಸನಾಂಬ ದೇವಿಯ ದೇಗುಲದ ಬಾಗಿಲನ್ನು ಅಕ್ಟೋಬರ್ 13 ರಿಂದ ತೆರೆಯಲಾಗುತ್ತಿದ್ದು, ಸುಮಾರು ಹನ್ನೊಂದು ದಿನಗಳ ಕಾಲ ಭಕ್ತರು ದೇವಿಯನ್ನು ದರ್ಶನ ಮಾಡಲು ಬಾಗಿಲು ತೆರೆಯುವ ಮತ್ತು ಮುಚ್ಚುವ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಕೊರೊನಾ ಕಾರಣದಿಂದಾಗಿ ಎರಡು ವರ್ಷಗಳ ಕಾಲ ಭಕ್ತರಿಗೆ ದೇವಿಯ ದರ್ಶನ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಸುಧಾರಿಸಿರುವ ಕಾರಣ ಭಕ್ತರು ದೇವಿಯ ದರ್ಶನವನ್ನು ಪಡೆಯಬಹುದಾಗಿದ್ದು, ಭಕ್ತರ ದಂಡೇ ಹರಿದು ಬರುವ ಸಾಧ್ಯತೆಯಿದೆ.

ಇನ್ನು ಐತಿಹಾಸಿಕ ಹಾಸನಾಂಬ ದೇವಿಯ ದರ್ಶನದ ಬಗ್ಗೆ ಮತ್ತು ಸ್ಥಳ ಮಹಿಮೆಯ ಬಗ್ಗೆ ಹೇಳುವುದಾದರೆ ವರ್ಷಕ್ಕೊಮ್ಮೆ ಮಾತ್ರ ಸಿಗುತ್ತದೆ. ದೇಗುಲದ ಬಾಗಿಲನ್ನು ಪ್ರತಿವರ್ಷ ಅಶ್ವೀಜ ಮಾಸ ಪೂರ್ಣಿಮೆಯ ನಂತರ ಬರುವ ಗುರುವಾರದಂದು (ಈ ಬಾರಿ ಅ.13) ತೆಗೆದು ದೀಪಾವಳಿಯ ಬಲಿಪಾಡ್ಯಮಿಯ ಮಾರನೇ ದಿನ (ಅ.27) ಬಾಗಿಲನ್ನು ಮುಚ್ಚಲಾಗುತ್ತದೆ. ದೇವಸ್ಥಾನದ ಬಾಗಿಲನ್ನು ಮುಚ್ಚುವಾಗ ಹಚ್ಚಿದ್ದ ದೀಪ ಮತ್ತೆ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೆ ಗರ್ಭಗುಡಿಯಲ್ಲಿ ಆರದೆ ಉರಿಯುತ್ತಿರುತ್ತದೆ ಎಂಬ ನಂಬಿಕೆ ಈಗಲೂ ಇದೆ.

ಇನ್ನು ದೇವಿಯ ಬಾಗಿಲನ್ನು ತೆರಯುವಾಗ ಮತ್ತು ಮುಚ್ಚುವ ದಿನ ವಿಧಿ ವಿಧಾನದಂತೆ ಪೂಜಾ ಕೈಂಕರ್ಯಗಳು ನಡೆಯುವುದನ್ನು ನಾವು ಕಾಣಬಹುದಾಗಿದೆ. ದೇವಾಲಯದ ಬಾಗಿಲು ತೆರೆಯುವ ದಿನದಂದು ಮೊದಲಿಗೆ ತಳವಾರ ಮನೆತನದವರು ದೇಗುಲದ ಬಳಿ ನೆರೆಯುತ್ತಾರೆ ನಂತರ ದೇವಿಯ ಗರ್ಭಗುಡಿಯ ಮುಂದೆ ಬಾಳೆಕಂದನ್ನು ಅರಸು ಮನೆತನದವರು ನೆಟ್ಟು ಹಾಸನಾಂಬೆಯನ್ನು ಪ್ರಾರ್ಥಿಸಿ ಬಳಿಕ ಬಾಳೆಕಂದನ್ನು ಕತ್ತರಿಸುವುದರೊಂದಿಗೆ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ.

ಹಾಸನಾಂಬೆ ದೇಗುಲದ ಬಾಗಿಲು ತೆರೆದ ನಂತರ ಮೊದಲ ದಿನದಂದು ತಾಯಿ ಹಾಸನಾಂಬೆಗೆ ಯಾವುದೇ ರೀತಿಯ ಆಭರಣಗಳನ್ನು ಧರಿಸುವ ಸಂಪ್ರದಾಯವಿಲ್ಲ. ಆದರೆ ಎರಡನೆಯ ದಿನ ಜಿಲ್ಲಾ ಖಜಾನೆಯಿಂದ ದೇವಿಯ ಆಭರಣ ವಸ್ತ್ರಗಳನ್ನು ಪಲ್ಲಕಿಯಲ್ಲಿ ತಂದು ಅಲಂಕರಿಸಿ ಪೂಜೆ ಮಾಡಿ ನೈವೇದ್ಯ ಅರ್ಪಿಸಲಾಗುವುದು. ಹಾಸನಾಂಬೆಯನ್ನು ಕುಂಭಗಳ ರೂಪದಲ್ಲಿ ಪ್ರತಿಷ್ಠಾಪಿಸಿ ಈ ಕುಂಭಗಳಿಗೆ ಹೆಣ್ಣು ದೇವತೆಯಂತೆ ಮುಖವಾಡಗಳನ್ನು ಮಾಡಿ ಅಲಂಕರಿಸುವುದು ಇಲ್ಲಿನ ವಿಶೇಷತೆಯಾಗಿದೆ.

ಸಾಮಾನ್ಯವಾಗಿ ಎಲ್ಲ ದೇಗುಲ ಮತ್ತು ಅಲ್ಲಿ ಪ್ರತಿಷ್ಠಾಪನೆಯಾಗಿರುವ ದೇವರ ಕುರಿತಂತೆ ಕಥೆಗಳು ಪ್ರಚಲಿತದಲ್ಲಿರುತ್ತವೆ. ಅದರಂತೆ ಹಾಸನಾಂಬೆ ಕುರಿತಂತೆ ದಂತಕಥೆಯೊಂದು ಇದೆ. ಅದು ಏನೆಂದರೆ ಸದಾ ಅತ್ತೆಯ ಕಿರುಕುಳದಿಂದ ಬೇಸತ್ತಿದ್ದ ಸೊಸೆ ದೇವಿಯ ಮುಂದೆ ಮಂಡಿಯೂರಿ ತನ್ನ ನೋವನ್ನು ತೋಡಿಕೊಳ್ಳುತ್ತಾ ದೇವಿಯನ್ನು ಪ್ರಾರ್ಥಿಸುತ್ತಿದ್ದಳಂತೆ. ಒಮ್ಮೆ ಪ್ರತಿದಿನವೂ ದೇವಿಯ ದರ್ಶನಕ್ಕೆ ತೆರಳುತ್ತಿದ್ದ ಸೊಸೆಯ ಮೇಲೆ ಅನುಮಾನಗೊಂಡ ಅತ್ತೆ ಸೊಸೆಯನ್ನು ಹಿಂಬಾಲಿಸಿ ಬಂದಳಂತೆ. ಈ ವೇಳೆ ಸೊಸೆ ದೇವಿಯ ಮುಂದೆ ಪ್ರಾರ್ಥಿಸುತ್ತಿದ್ದದ್ದು ಕಂಡು ಬಂದಿತಂತೆ. ಇದರಿಂದ ಕೋಪಗೊಂಡ ಅತ್ತೆ ನಿನಗೆ ಮನೆಯ ಕೆಲಸಕ್ಕಿಂತ ಈ ದೇವಿಯ ಪ್ರಾರ್ಥನೆ ಜಾಸ್ತಿ ಆಯಿತಾ ಎಂದು ಕೋಪದಿಂದ ಪಕ್ಕದಲ್ಲಿದ್ದ ಚಂದ್ರಬಟ್ಟಲನ್ನು ತೆಗೆದು ಧ್ಯಾನದಲ್ಲಿದ್ದ ಸೊಸೆಯ ಮೇಲೆ ಕುಕ್ಕಿದಳಂತೆ.

See also  ಸ್ಟ್ರಿಂಗ್ ಆರ್ಟ್‌ನಲ್ಲಿ ತನ್ನ ಗುರುತನ್ನು ಕಂಡುಕೊಂಡ ಹೆಬ್ರಿಯ ಹುಡುಗಿ ರಂಜಿತಾ

ಈ ವೇಳೆ ಸೊಸೆ ನೋವು ತಾಳಲಾರದೆ ಹಾಸನಾಂಬೆ ಎಂದು ಚೀರಿದಳಂತೆ. ಸೊಸೆಯ ಕಷ್ಟ ನೋಡಲಾರದೆ ಮತ್ತು ಆಕೆಯ ಭಕ್ತಿಗೆ ಮೆಚ್ಚಿ ದೇವಿಯೇ ಪ್ರತ್ಯಕ್ಷಳಾಗಿ ನಿನ್ನ ಕಾವಲಿಗೆ ನಾನಿರುವುದಾಗಿ ವಾಗ್ದಾನ ಮಾಡಿ ಕಲ್ಲಾಗಿ ನೆಲೆಸಿದಳೆಂಬ ಕಥೆಯೂ ಪ್ರಚಲಿತದಲ್ಲಿದೆ. ಇನ್ನು ದೇವಿಯ ದರ್ಶನದ ಕೊನೆಯ ದಿನ ಹಚ್ಚಿದ ದೀಪ ಆರದೆ, ಹೂವು ಬಾಡದೆ ಮುಂದಿನ ವರ್ಷ ದೇಗುಲದ ಬಾಗಿಲು ತೆರೆಯುವ ತನಕ ಇರುತ್ತದೆ ಎಂಬ ನಂಬಿಕೆಯೂ ಇದ್ದು, ಈ ಬಗ್ಗೆ ಹಿಂದೆ ವಿವಾದವೂ ಏರ್ಪಟ್ಟಿತ್ತು. ದೇವರ ಪವಾಡವನ್ನು ಬಯಲು ಮಾಡುವಂತೆಯೂ ಕೆಲವರು ಒತ್ತಾಯಿಸಿದ್ದರು. ಆ ನಂತರ ವಿವಾದ ತಣ್ಣಗಾಯಿತು.

ಕೆಲವರ ಪ್ರಕಾರ ಹಾಸನಾಂಬೆ ದೇವಿ ಪ್ರತಿಷ್ಠಾಪನೆಗೊಂಡ ಸ್ಥಳದಿಂದ ಪ್ರತೀ ವರ್ಷವೂ ಭತ್ತದ ಕಾಳಿನ ತುದಿಯಷ್ಟು ಚಲಿಸುವಳೆಂದೂ, ದೇವಿಯ ಪಾದ ತಲುಪಿದ ಕ್ಷಣದಲ್ಲೇ ಕಲಿಯುಗ ಅಂತ್ಯವಾಗುತ್ತದೆ ಎಂಬ ಮಾತುಗಳಿವೆ. ಅದು ಏನೇ ಇರಲಿ ಶಕ್ತಿ ದೇವತೆಯಾಗಿ ಹಾಸನವನ್ನು ಕಾಪಾಡುತ್ತಿರುವ ಹಾಸನಾಂಬೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿರುವುದಂತು ಸತ್ಯ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು