News Kannada
Sunday, October 01 2023
ಪರಿಸರ

ನಿಸರ್ಗ ಪ್ರೇಮಿಗಳ ಸೆಳೆಯುವ ಕಾನನದ ಕುಸುಮ ಕುರುಂಜಿ

Kusuma Kurunji of the forest that attracts nature lovers
Photo Credit : Wikimedia

ಇತ್ತೀಚೆಗಿನ ವರ್ಷಗಳಲ್ಲಿ ಕುರುಂಜಿ ಗಿಡಗಳು ಹಲವೆಡೆ ಬೆಟ್ಟಗುಡ್ಡಗಳಲ್ಲಿ ಹೂ ಬಿಟ್ಟು ಚೆಲುವನ್ನು ಸೂಸುತ್ತಿವೆ. ಮಲೆನಾಡಿನ ಬೆಟ್ಟಗುಡ್ಡಗಳಲ್ಲಿ ಹರಡಿ ಬೆಳೆಯುವ ಕುರುಂಜಿ ಗಿಡಗಳ ಆಯಸ್ಸು ಸುಮಾರು ಹನ್ನೆರಡು ವರ್ಷಗಳಾಗಿದ್ದು, ಇವು ಹೂ ಬಿಡುವ ಮೂಲಕ ನಾಶವಾಗಿ ಮರು ಹುಟ್ಟು ಪಡೆಯುತ್ತವೆ.

ಒಮ್ಮೆಲೇ ಹೂ ಬಿಡುವುದರಿಂದ ಇಡೀ ಬೆಟ್ಟಗುಡ್ಡಗಳು ನೀಲಿಯಾಗಿ ಗೋಚರಿಸಿ ನೋಡುಗರ ಕಣ್ಮನ ಸೆಳೆಯುತ್ತವೆ. ಕಳೆದ ವರ್ಷ ಕೊಡಗಿನ ಬೆಟ್ಟಗಳಲ್ಲಿ ಹೂ ಕಾಣಿಸಿತ್ತು. ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ಬೆಟ್ಟಗುಡ್ಡಗಳಲ್ಲಿ ಕುರುಂಜಿ ಹೂ ಕಾಣಿಸುತ್ತಿರುವುದು ವಿಶೇಷವಾಗಿದೆ.

ಹನ್ನೆರಡು ವರ್ಷಗಳ ಕಾಲ ತಮ್ಮಲ್ಲಿಯೂ ಅಗಾಧ ಚೆಲುವಿದೆ ಎಂಬ ಸತ್ಯವನ್ನು ಹೊರಗೆಡವದೆ ತಮ್ಮ ಪಾಡಿಗೆ ಇವು ಇದ್ದಕ್ಕಿದ್ದ ಹಾಗೆ ಹೂ ಬಿಟ್ಟು ಇಡೀ ಬೆಟ್ಟ ಗುಡ್ಡಗಳನ್ನೇ ನೀಲಮಯವಾಗಿಸಿ ಅಚ್ಚರಿ ಮೂಡಿಸುತ್ತದೆ. ಆದರೆ ಈ ಸುಂದರ ಅಪರೂಪದ ದೃಶ್ಯ ಸಿಗುವುದು ಹನ್ನೆರಡು ವರ್ಷಕ್ಕೊಮ್ಮೆ ಮಾತ್ರ.

ಕುರುಂಜಿ ಗಿಡಗಳು ಸುಮಾರು ಎರಡರಿಂದ ಏಳು ಅಡಿಗಿಂತಲೂ ಹೆಚ್ಚು ಎತ್ತರಕ್ಕೆ ಬೆಳೆಯುತ್ತವೆ. ಇದರಲ್ಲಿ ಸುಮಾರು 59ಕ್ಕೂ ಹೆಚ್ಚಿನ ತಳಿಗಳಿವೆ ಎಂದು ಹೇಳಲಾಗಿದೆ. ಒತ್ತೊತ್ತಾಗಿ ಪೊದೆಯಾಗಿ ಬೆಳೆಯುವ ಇವು ನೀರಿನಾಶ್ರಯವಿಲ್ಲದ ಗಿರಿಶ್ರೇಣಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಈ ಗಿಡಗಳಿಗೆ ಕುರುಂಜಿ ಎಂಬ ಹೆಸರನ್ನು ಗುಡ್ಡಗಾಡುಗಳಲ್ಲಿ ವಾಸಿಸುವ ಗಿರಿಜನರು ಇಟ್ಟರು ಎಂದು ಹೇಳಲಾಗುತ್ತದೆ. ತೆಳು ನೀಲಿ ಮಿಶ್ರಿತ ನೇರಳೆ ಬಣ್ಣದ ಹೂ ಗಿಡದ ಮೇಲಿನಿಂದ ಕೆಳಗಿನವರೆಗೂ ಹೂ ಬಿಡುತ್ತದೆ. Acanthaceae ಸಸ್ಯ ಜಾತಿಗೆ ಸೇರಿದ ಇದರ ವೈಜ್ಞಾನಿಕ ಹೆಸರು Strobilanthes kunthiana ಆಗಿದೆ.

ಕೆಲವರಿಗೆ ಇದು ಪವಿತ್ರ ಪುಷ್ಟವೂ ಹೌದು. ಇದು ಹೇಗೆ ಎಂಬುದನ್ನು ನೋಡಿದ್ದೇ ಆದರೆ ಕೇರಳ ಹಾಗೂ ತಮಿಳುನಾಡಿನ ನಡುವಿನ ಪಶ್ಚಿಮ ಘಟ್ಟದ ಗುಡ್ಡಗಳಲ್ಲಿ ವಾಸಿಸುವ ತೋಡಾ ಹಾಗೂ ಮುದ್ದಾ ಜನಾಂಗವು ಈ ಹೂವನ್ನು ದೇವಪುಷ್ಪವೆಂದು ಪೂಜಿಸುತ್ತಾರಂತೆ. ತಮಿಳುನಾಡಿನಲ್ಲಿಯೂ ಕುರುಂಜಿ ಹೂ ಆರಾಧ್ಯಪುಷ್ಪವಂತೆ. ಅದು ಹೇಗೆಂದರೆ ಕುರುಂಜಿ ಆಂಡವನ್ ಎಂದರೆ ಆರಾಧ್ಯದೈವ ಮುರುಗನ ಹೆಸರಂತೆ. ಹೂವಿನ ಬಗ್ಗೆಯೂ ಅಲ್ಲಿನ ಸಾಹಿತ್ಯಗಳಲ್ಲಿ ಪ್ರಸ್ತಾಪವಿದೆಯಂತೆ. ಮುರುಗನ್ ತನ್ನ ಮದುವೆ ಸಂದರ್ಭ ಪತ್ನಿ ವಲ್ಲಿಯನ್ನು ಕುರುಂಜಿ ಹೂವಿನ ಮಾಲೆ ಹಾಕಿ ವಿವಾಹವಾದನೆಂಬ ಐಹಿತ್ಯವಿದೆ. ಹೀಗಾಗಿ ಆರಾಧ‍್ಯ ದೈವ ಮುರುಗನ್ ಮೆಚ್ಚಿದ ಈ ಹೂವು ತಮಿಳರಿಗೆ ಪ್ರಿಯವಾದ ಪುಷ್ಪವಾಗಿದೆ.

ತನ್ನದೇ ಆದ ಬಣ್ಣ ಮತ್ತು ಸೌಂದರ್ಯದಿಂದ ಕಾನನದ ಪುಷ್ಪವಾಗಿ ಎಲ್ಲರ ಗಮನಸೆಳೆಯುವ ಕುರುಂಜಿಗೆ ಕಳೆದ ಒಂದೂವರೆ ದಶಕಗಳ ಹಿಂದೆಯೇ ಅಂಚೆ ಇಲಾಖೆ ಹದಿನೈದು ರೂಪಾಯಿಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಸ್ಥಾನ ನೀಡಿತ್ತು. ಆ ಮೂಲಕ ಕುರುಂಜಿ ತನ್ನ ಸ್ಥಾನಮಾನವನ್ನು ಹೆಚ್ಚಿಸಿಕೊಂಡು ಗಮನಸೆಳೆದಿತ್ತು. ಮೊದಲೆಲ್ಲ ಕುರುಂಜಿ ಹೂ ಬಿಟ್ಟರೆ ಹೆಚ್ಚಿನ ಸುದ್ದಿಯಾಗುತ್ತಿರಲಿಲ್ಲ. ಆದರೆ ಬದಲಾದ ಜನ ಜೀವನದಲ್ಲಿ ಕುರುಂಜಿ ಹೂ ಬಿಟ್ಟರೆ ಅದನ್ನು ನೋಡಲು ನಿಸರ್ಸ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರೊಂದಿಗೆ ಪ್ರವಾಸಿ ತಾಣವಾಗಿ ಮಾರ್ಪಡುತ್ತಿರುವುದಂತು ನಿಜ.

See also  ಮಂಡ್ಯ: ಶಿವನಸಮುದ್ರದಲ್ಲಿ ಕಾವೇರಿಯ ರುದ್ರನರ್ತನಕ್ಕೆ ಪ್ರವಾಸಿಗರು ಫಿದಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು