News Kannada
Sunday, December 04 2022

ವಿಶೇಷ

ಎಐಸಿಸಿ ಚುಕ್ಕಾಣಿ ಹಿಡಿದ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ

Photo Credit : Wikimedia

ಕರ್ನಾಟಕ ಕಾಂಗ್ರೆಸ್ ನ ಹಿರಿಯ ನಾಯಕ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಪ್ರತಿಸ್ಪರ್ಧಿ ಶಶಿತರೂರ್ ಅವರನ್ನು ಭಾರೀ ಮತಗಳ ಅಂತರದಲ್ಲಿ ಪರಾಭವಗೊಳಿಸಿದ್ದಾರೆ.

ಆ ಮೂಲಕ ಸುದೀರ್ಘ ಕಾಲ ಗಾಂಧಿ ಕುಟುಂಬದ ಮುಕುಟ ಮಣಿಯಾಗಿದ್ದ ಎಐಸಿಸಿ ಅಧ್ಯಕ್ಷ ಸ್ಥಾನ ಗಾಂಧಿ ಕುಟುಂಬದ ಹೊರಗಿನವರೊಬ್ಬರಿಗೆ ದಕ್ಕಿದಂತಾಗಿದ್ದು, ಚಾರಿತ್ರಿಕ ಬೆಳವಣಿಗೆಯಾಗಿ ದಾಖಲಾಗಿದೆ. ಈ ಮಧ್ಯೆ ಐದು ದಶಕಗಳಿಗೂ ಹೆಚ್ಚು ಕಾಲದ ನಂತರ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕರ್ನಾಟಕಕ್ಕೆ ಒಲಿದಿದ್ದು, ನಿಜಲಿಂಗಪ್ಪ ಅವರ ನಂತರ ಈ ಪಟ್ಟವೇರಿದ ಎರಡನೇ ನಾಯಕ ಎಂಬ ಕೀರ್ತಿಗೆ ಮಲ್ಲಿಕಾರ್ಜುನ ಖರ್ಗೆ ಪಾತ್ರರಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕಾಗಿ ಅಕ್ಟೋಬರ್ 17 ರ ಸೋಮವಾರ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ 7897 ಮತಗಳು ಬಂದಿದ್ದರೆ, ಅವರ ಪ್ರತಿಸ್ಪರ್ಧಿ ಶಶಿ ತರೂರ್ ಅವರಿಗೆ 1072 ಮತಗಳಷ್ಟೇ ಬಿದ್ದಿವೆ. ಉಳಿದಂತೆ 416 ಮತಗಳು ಅಸಿಂಧುಗೊಂಡಿದ್ದು, ಒಟ್ಟಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ಶಕ್ತಿ ಹೆಚ್ಚು ಎಂಬುದು ಸಾಬೀತಾಗಿದೆ. ಪ್ರಜಾಸತ್ತಾತ್ಮಕ ನೆಲೆಯಲ್ಲಿ ಚುನಾವಣೆ ನಡೆದೇ ಅಧ್ಯಕ್ಷರ ಆಯ್ಕೆಯಾಗಬೇಕು, ಆ ಮೂಲಕ ಅವಿರೋಧವಾಗಿ ಆಯ್ಕೆಯಾಗುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಬೇಕು ಎಂದು ಹೇಳಿದ್ದ ಶಶಿ ತರೂರ್ ಅವರು ಗೆಲ್ಲದೇ ಹೋದರೂ,ಅವರ ಉದ್ದೇಶ ಈಡೇರಿದಂತಾಗಿದೆ.

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ನೇಮಕಗೊಳ್ಳುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ನಲ್ಲಿ ಸಂಭ್ರಮದ ವಾತಾವರಣ ಕಾಣಿಸಿಕೊಂಡಿದ್ದು ಕೆಪಿಸಿಸಿ ಕಚೇರಿಯಲ್ಲಿ ಅದ್ಧೂರಿಯಾಗಿ ಹರ್ಷಾಚರಣೆ ನಡೆಸಲಾಗಿದೆ.

ಅಂದ ಹಾಗೆ 2009 ರ ವೇಳೆಗೆ ರಾಜ್ಯ ಕಾಂಗ್ರೆಸ್ ಅಧಿಪತ್ಯಕ್ಕಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿದ್ಧರಾಮಯ್ಯ ನಡುವೆ ಸಂಘರ್ಷ ಶುರುವಾದಾಗ ಮಧ್ಯೆ ಪ್ರವೇಶಿಸಿದ್ದ ಕೈ ಪಾಳೆಯದ ವರಿಷ್ಟರು ಮಲ್ಲಿಕಾರ್ಜುನ ಖರ್ಗೆ ದಿಲ್ಲಿಗೆ,ಸಿದ್ಧರಾಮಯ್ಯ ಇಲ್ಲಿಗೆ ಎಂಬ ಸೂತ್ರವನ್ನು ರೂಪಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಆ ಸಂದರ್ಭದಲ್ಲಿ ವರಿಷ್ಟರ ಮಾತಿಗೆ ಎದುರಾಡದ ಮಲ್ಲಿಕಾರ್ಜುನ ಖರ್ಗೆ ಅವರು 2009 ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ರಾಷ್ಟ್ರ ರಾಜಕಾರಣದ ದಡ ತಲುಪಿದ್ದರು.

ಖರ್ಗೆ ಅವರ ಪಕ್ಷ ನಿಷ್ಟೆಯನ್ನು ಪರಿಗಣಿಸಿದ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು,ಖರ್ಗೆ ಅವರು ಮನಮೋಹನ್ ಸಿಂಗ್ ಅವರ ಸಂಪುಟದಲ್ಲಿ ಕಾರ್ಮಿಕ ಮತ್ತು ರೈಲ್ವೇ ಸಚಿವರಾಗಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿ ಕೊಟ್ಟರು. ಮುಂದೆ 2014 ರಲ್ಲಿ ಕಾಂಗ್ರೆಸ್ ಪಕ್ಷ ದಿಲ್ಲಿಯಲ್ಲಿ ಅಧಿಕಾರ ಕಳೆದುಕೊಂಡರೂ,ಖರ್ಗೆ ಅವರನ್ನು ಲೋಕಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ನೇಮಿಸಲು ಸೋನಿಯಾಗಾಂಧಿ ಒಲವು ತೋರಿದರು. ಹೀಗೆ ತಮಗೆ ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರಮೋದಿ ಅವರಿಗೆ ತಕ್ಕ ಎದುರಾಳಿಯಾಗಿ ಕಾರ್ಯ ನಿರ್ವಹಿಸಿ ಯಶಸ್ವಿಯಾದರು.

See also  ಮೈಸೂರು: ಜಗನ್ಮೋಹನ ಅರಮನೆಯಲ್ಲಿ ಮಕ್ಕಳ ದಸರಾ

ಮುಂದೆ 2019 ರ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಸೋಲನುಭವಿಸಿದರೂ,ಅವರು ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವಂತೆ ಸೋನಿಯಾಗಾಂಧಿ ನೋಡಿ ಕೊಂಡರು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ತೀರ್ಮಾನವಾದಾಗ ಶುರುವಿನಲ್ಲಿ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಆ ಜಾಗಕ್ಕೆ ತರಲು ಸೋನಿಯಾಗಾಂಧಿ ನಿರ್ಧರಿಸಿದ್ದರಾದರೂ,ಮುಖ್ಯಮಂತ್ರಿ ಪಟ್ಟವನ್ನು ಕಳೆದುಕೊಳ್ಳಲು ಅಶೋಕ್ ಗೆಹ್ಲೋಟ್ ಅವರು ಇಷ್ಟಪಡಲಿಲ್ಲ. ಹೀಗಾಗಿ ತಮ್ಮ ಬೆಂಬಲಿಗ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದಾಗಿ ಕಾಂಗ್ರೆಸ್ ಹೈಕಮಾಂಡ್ ಗೆ ಅಶೋಕ್ ಗೆಹ್ಲೋಟ್ ಅವರು ಮನವರಿಕೆ ಮಾಡಿಕೊಟ್ಟಾಗ, ಸೋನಿಯಾ ಗಾಂಧಿ ಅವರ ಕಣ್ಣಿಗೆ ಕಾಣಿಸಿದವರೇ ಮಲ್ಲಿಕಾರ್ಜುನ ಖರ್ಗೆ.

ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಐದು ದಶಕಗಳಿಂದ ಪಕ್ಷದ ನಿಷ್ಟಾವಂತ ಸಿಪಾಯಿಯಾಗಿ ಕಾರ್ಯ ನಿರ್ವಹಿಸಿದ್ದು, ಕರ್ನಾಟಕದಲ್ಲಿ ಶಾಸಕರಾಗಿ, ಸಚಿವರಾಗಿ,ವಿರೋಧಪಕ್ಷದ ನಾಯಕರಾಗಿ,ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು. ಅದೇ ರೀತಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅವರು ಕಾರ್ಯ ನಿರ್ವಹಿಸಿದ ರೀತಿಯನ್ನು ಪರಿಗಣಿಸಿದ ಸೋನಿಯಾ ಗಾಂಧಿ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲ ನೀಡಿದರು ಎಂಬ ವಿಷಯ ರಹಸ್ಯವೇನಲ್ಲ.

ಇದಾದ ನಂತರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಅಕ್ಟೋಬರ್ 17 ರಂದು ಚುನಾವಣೆ ನಡೆದಿತ್ತಲ್ಲದೆ. ಅ.೧೯ ರಂದು ಫಲಿತಾಂಶ ಹೊರಬಿದ್ದಿದ್ದು ಮಲ್ಲಿಕಾರ್ಜುನ ಖರ್ಗೆ ಗೆದ್ದು ಹೊಸ ದಾಖಲೆ ನಿರ್ಮಿಸಿದ್ದಾರೆ. 1972 ರಲ್ಲಿ ಮೊದಲ ಬಾರಿ ಶಾಸನಸಭೆ ಪ್ರವೇಶಿಸಿದ್ದ ಮಲ್ಲಿಕಾರ್ಜುನ ಖರ್ಗೆ ಸತತ ಒಂಭತ್ತು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರಲ್ಲದೆ,ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು.

ಮಣಿಕಂಠ ತ್ರಿಶಂಕರ್, ಮೈಸೂರು

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

34905
ಮಣಿಕಂಠ ತ್ರಿಶಂಕರ್

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು