ಹಿಂದೂ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ ಹಬ್ಬವಾಗಿ ಆಚರಣೆಯಾಗುವ ಹಬ್ಬವೇ ದೀಪಾವಳಿ. ಅಜ್ಞಾನದ ಅಂಧಕಾರವನ್ನು ಮೆಟ್ಟಿ ಜ್ಞಾನದ ಬೆಳಕನ್ನು ಹರಿಸುವ ಹಬ್ಬ. ಈ ವಿಶೇಷ ಹಬ್ಬದಂದು ಲಕ್ಷ್ಮಿದೇವಿಯ ಪೂಜೆಯು ಪ್ರಮುಖ ಅಂಶವಾಗಿದೆ.
ಲಕ್ಷ್ಮಿದೇವಿಯ ಜನನದ ಕಥೆ
ಲಕ್ಷ್ಮಿದೇವಿಯು ವಿಷ್ಣುವಿನ ಪತ್ನಿಯಾಗಿ ಸಂಪತ್ತಿನ ಅಧಿದೇವತೆಯಾಗಿದ್ದಾಳೆ. ವಿಷ್ಣು ಪುರಾಣದ ಪ್ರಕಾರ ದೇವತೆಗಳು ತಮಗೆ ಅಮರತ್ವ ಪಡೆಯಬೇಕು ಎನ್ನುವ ಸಲುವಾಗಿ ವಿಷ್ಣುವನ್ನು ಪ್ರಾರ್ಥಿಸಿ ಸಮುದ್ರ ಮಂಥನ ಮಾಡಲು ಒಪ್ಪಿಸಿದರು. ಅದರಂತೆ ಮಂದಾರ ಪರ್ವತವು ಕಡೆಗೋಲಾಗಿ, ವಾಸುಕಿಯನ್ನು ಹಗ್ಗವಾಗಿ ಮಾಡಿ ಸಮುದ್ರ ಮಂಥನವನ್ನು ಪ್ರಾರಂಭಿಸಿದರು. ಆಗ ಮಂದಾರ ಪರ್ವತವು ಯಾವುದೇ ಬಲವಿಲ್ಲದೆ ನಿಂತಕಾರಣ ಮುಳುಗಲು ಪ್ರಾರಂಭಿಸಿತು. ಆಗ ವಿಷ್ಣುವು ಕೂರ್ಮಾವತಾರವೆತ್ತಿ ಪರ್ವತ ಮುಳುಗದಂತೆ ತಡೆದನು. ಹೀಗೆ ಸಾಗರ ಮಂಥನ ನಡೆಯುವಾಗ ಬೆಲೆಬಾಳುವ ಚಿನ್ನ, ರತ್ನಗಳು ಹೊರಬಂದವು. ಮಂಥನದಲ್ಲಿ ಭಾಗವಹಿಸಿದ ಎಲ್ಲರೂ ತಮಗೆ ಬೇಕಾದದನ್ನು ಪಡೆದುಕೊಂಡರು. ಇದರ ಜೊತೆಗೆ ಅತಿ ಭಯಂಕರವಾದ ಹಾಲಾಹಲವು ಸಮುದ್ರದಿಂದ ಹೊರ ಬಂದಿತು, ಇದನ್ನು ಯಾರು ಪಡೆದುಕೊಳ್ಳಲು ತಯಾರಿರಲಿಲ್ಲ ಕಡೆಗೆ ಪರಶಿವನು ಹಾಲಾಹಲವನ್ನು ಕುಡಿದು ಲೋಕವನ್ನು ಕಾಪಾಡಿದನು.
ಈ ಮಂಥನದಿಂದ ಅಪ್ಸರೆಯರು ಹೊರಬಂದರು ಅವರುಗಳ ಜೊತೆಗೆ ಲಕ್ಷ್ಮಿ ದೇವಿಯು ಪ್ರತ್ಯಕ್ಷಳಾದಳು ಮತ್ತು ಲಕ್ಷ್ಮಿ ದೇವಿಯನ್ನು ವಿಷ್ಣುವು ತನ್ನ ಪತ್ನಿಯಾಗಿ ಸ್ವೀಕರಿಸಿದನು. ಇಲ್ಲಿಂದ ವಿಷ್ಣು ಪ್ರತಿಯೊಂದು ಯುಗದಲ್ಲೂ ಒಂದೊಂದು ಅವತಾರಗಳನ್ನು ಎತ್ತಿದಾಗಲೂ ಲಕ್ಷ್ಮಿ ದೇವಿ ಸದಾ ಜೊತೆಯಲ್ಲಿಯೇ ಇರುತ್ತಾಳೆ. ಶ್ರೀರಾಮನ ಪತ್ನಿಯಾಗಿ ಸೀತಾದೇವಿ, ಶ್ರೀ ಕೃಷ್ಣನ ಪತ್ನಿಯಾಗಿ ರುಕ್ಮಿಣಿ ಹೀಗಿ ಲಕ್ಷ್ಮಿ ದೇವಿಯು ಸದಾ ಶ್ರೀಹರಿಯೊಂದಿಗಿರುತ್ತಾಳೆ.
ಲಕ್ಷ್ಮಿದೇವಿಯ ಇತರ ರೂಪಗಳು
ಆದಿ ಲಕ್ಷ್ಮಿ , ಸಂತಾನ ಲಕ್ಷ್ಮಿ, ಗಜ ಲಕ್ಷ್ಮಿ, ಧನ ಲಕ್ಷ್ಮಿ, ಧಾನ್ಯ ಲಕ್ಷ್ಮಿ, ವಿಜಯ ಲಕ್ಷ್ಮಿ, ಹಾಗೂ ಮಹಾ ಲಕ್ಷ್ಮಿ ಯಾಗಿ ಜನರ ಮನೆ ಮನಗಳಲ್ಲಿ ನೆಲೆಸಿದ್ದಾಳೆ.