ರಾಯಚೂರಿನಲ್ಲಿ ಪತ್ತೆಯಾಗುವ ಮೂಲಕ ಝೀಕಾ ವೈರಸ್ ರಾಜ್ಯಕ್ಕೆ ಕಾಲಿಟ್ಟಿರುವುದರಿಂದ ಈಗ ಸಣ್ಣದಾದ ಆತಂಕ ಶುರುವಾಗಿದೆ. ಆದರೆ ಈ ವೈರಸ್ ನತ್ತ ಹೆಚ್ಚು ಭಯಪಡುವ ಬದಲು ಅದನ್ನು ತಡೆಗಟ್ಟಲು ನಾವುಗಳು ಒಂದಷ್ಟು ಕ್ರಮಗಳನ್ನು ಅನುಸರಿಸುವುದು ಬಹು ಮುಖ್ಯವಾಗಿದೆ.
ಸೊಳ್ಳೆಗಳ ಮೂಲಕ ಹರಡುವ ಸೋಂಕು ಇದಾಗಿದ್ದು, ಏಡಿಸ್ ಪ್ರಭೇದಕ್ಕೆ ಸೇರಿದ ಸೊಳ್ಳೆಗಳು ಕಚ್ಚುವುದರಿಂದ ಈ ಸೋಂಕು ಹರಡುತ್ತದೆ. ಈ ಸೊಳ್ಳೆಗಳು ರಾತ್ರಿ ಮಾತ್ರವಲ್ಲದೆ, ಹಗಲು ಕೂಡ ಕಚ್ಚುವ ಸಾಧ್ಯತೆ ಇದೆ. ರಕ್ತ ವರ್ಗಾವಣೆ ಮತ್ತು ಅಸುರಕ್ಷಿತ ಲೈಂಗಿಕತೆಯಿಂದಲೂ ಸೋಂಕು ಹರಡುವ ಸಾಧ್ಯತೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ಸೊಳ್ಳೆಗಳಿಂದ ರೋಗ ಹರಡುವುದರಿಂದ ಸೊಳ್ಳೆಗಳು ಉತ್ಪತ್ತಿ ಆಗದಂತೆ ನೋಡಿಕೊಳ್ಳುವುದು ಬಹು ಮುಖ್ಯವಾಗಿದೆ. ಆದ್ದರಿಂದ ಮಳೆ ನೀರು ಒಂದೇ ಕಡೆ ಸಂಗ್ರಹವಾಗಿದ್ದರೆ, ಸೊಳ್ಳೆಗಳ ಸಂತತಿ ಜಾಸ್ತಿಯಾಗಲಿದೆ. ಹಾಗಾಗಿ ಮಳೆ ನೀರು ನಿಲ್ಲದಂತೆ ನೋಡಿಕೊಂಡು, ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಬೇಕು. ಹೂವಿನ ಕುಂಡ, ಬಿಸಾಡಿದ ಟಯರ್, ತೊಟ್ಟಿ, ನೀರಿನ ಬಾಟಲಿಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗಲಿದೆ. ಅಂಥ ಕಡೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.
ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ, ಶುಚಿಗೊಳಿಸಬೇಕು. ಸೊಳ್ಳೆಗಳು ಮೊಟ್ಟೆ ಇಡಲು ಅವಕಾಶವಿಲ್ಲದಂತೆ ಕ್ರಮ ವಹಿಸಬೇಕು. ಸೊಳ್ಳೆಗಳ ತಾಣಗಳನ್ನು ಗುರುತಿಸಿ, ನಾಶಪಡಿಸಬೇಕು. ನೀರು ಸಂಗ್ರಹವಾಗುವ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು. ಹೆಚ್ಚು ದಿನಗಳ ಕಾಲ ಸಂಗ್ರಹವಾಗುವ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಆಗಲಿದೆ. ಇಂಥ ಸ್ಥಳಗಳನ್ನು ಗುರುತಿಸಿ, ಔಷಧ ಸಿಂಪಡಣೆ ಮಾಡಿ ಸೊಳ್ಳೆಗಳ ಸಂತತಿಯನ್ನು ನಾಶಪಡಿಸುವುದು ಅಗತ್ಯ.
ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ ಅಥವಾ ಪ್ರಸವ ಸಂದರ್ಭದಲ್ಲಿ ಹರಡುವ ಸಾಧ್ಯತೆ ಹೆಚ್ಚಿದೆ. ಈ ಸಮಯದಲ್ಲಿ ವೈರಸ್ ಸೋಂಕು ಕಂಡುಬಂದರೆ ಶಿಶುವಿನ ತಲೆಯ ಗಾತ್ರ ಅದೇ ವಯಸ್ಸಿನ ಇತರ ಶಿಶುಗಳಿಗಿಂತ ಚಿಕ್ಕದಾಗಿರುತ್ತದೆ. ನರಮಂಡಲದ ಸಮಸ್ಯೆಗಳಿಂದ ಗೊಲೆಬ್-ಬ್ಯಾರಿ ಲಕ್ಷಣಗಳು ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿವೆ. ಆದ್ದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ಗರ್ಭಿಣಿಯರು ಇರುವ ಮನೆಗಳಿಗೆ ಹೋಗಿ ತಪಾಸಣೆ ನಡೆಸುವುದು ಅಗತ್ಯವಾಗಿದೆ.
ಝೀಕಾ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ. ಸೊಳ್ಳೆಗಳ ಕಡಿತದಿಂದ ಸ್ವಯಂ ಹಾಗೂ ಕುಟುಂಬವನ್ನು ರಕ್ಷಿಸಬೇಕು. ಸಾಧ್ಯವಾದರೆ ಹವಾನಿಯಂತ್ರಿತ ಕೊಠಡಿಗಳನ್ನು ಬಳಸಬೇಕು. ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ ಬಳಸಬೇಕು. ಹೊರಾಂಗಣದಲ್ಲಿ ಮಲಗುವುದನ್ನು ತಪ್ಪಿಸಬೇಕು. ಸಾಧ್ಯವಾದಷ್ಟು ಉದ್ದನೆಯ ತೋಳಿನ ಶರ್ಟ್ ಮತ್ತು ಉದ್ದವಾದ ಪ್ಯಾಂಟ್ ಧರಿಸಬೇಕು
ಇನ್ನು ಝೀಕಾ ವೈರಸ್ಗೆ ತುತ್ತಾದರೆ ಜ್ವರ, ಸ್ನಾಯುನೋವು, ದೇಹದ ದದ್ದುಗಳು, ತಲೆನೋವು, ಕೀಲುನೋವು, ಕಣ್ಣು ಕೆಂಪಾಗುವುದು ಇದರ ಲಕ್ಷಣ. ಅನೇಕ ದಿನಗಳವರೆಗೆ ಈ ಲಕ್ಷಣಗಳು ಕಾಣಿಸಿಕೊಳ್ಳಲಿವೆ. ಝೀಕಾ ಲಕ್ಷಣಗಳು ಸೊಳ್ಳೆಗಳಿಂದ ಹರಡುವ ಡೆಂಗ್ಯೂ ಮತ್ತು ಚಿಕೂನ್ಗುನ್ಯಾದಂತಹ ಇತರ ಕಾಯಿಲೆಗಳಿಗೆ ಹೋಲುತ್ತವೆ. ರಕ್ತ ಮತ್ತು ಮೂತ್ರವನ್ನು ಪರೀಕ್ಷಿಸಿದಾಗ ಈ ಸೋಂಕು ಇರುವುದು ಕಂಡುಬರುತ್ತದೆ.
ಈ ಸೋಂಕು ಕಂಡುಬಂದವರು ಸಾಕಷ್ಟು ದ್ರವ ಆಹಾರಗಳನ್ನು ತೆಗೆದುಕೊಳ್ಳುವ ಮೂಲಕ ನಿರ್ಜಲೀಕರಣ ತಡೆಯಬೇಕು. ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಜ್ವರ ಮತ್ತು ನೋವು ಕಡಿಮೆ ಮಾಡಲು ಔಷಧಗಳನ್ನು ತೆಗೆದುಕೊಳ್ಳಬೇಕು. ಜತೆಗೆ ತಾವೇ ಸ್ವಯಂ ಚಿಕಿತ್ಸೆ ಪಡೆಯದೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ನಡೆಸಿ ಬಳಿಕ ಚಿಕಿತ್ಸೆ ಪಡೆಯುವುದು ಬಹು ಮುಖ್ಯವಾಗಿದೆ.