“ಬೆಳಗು ಬಾ ಜ್ಯೋತಿಯನು, ಎದೆಯ ಮಂದಿರದಲ್ಲಿ
ಜಗಕೆ ಬೆಳಕಾಗುವೇ ಶುಭ ಘಳಿಗೆಯಲ್ಲಿ
ಇನಿತುಜಡ ನಾನು ಬಂದಚೇತನ ನೀನು
ನಿನ್ನ ಶಕ್ತಿಯ ಬಲದಿ – ವ್ಯಕ್ತಿಯಾದೆನು ನಾನು ಈ ಲೋಕದಲ್ಲಿ
ಬೆಳಗು ಬಾ ಹಣತೆಯನು . . . ನನ್ನೆದೆಯ ಗುಡಿಯಲ್ಲಿ
ಚಿರಕಾಲ ಪ್ರಜ್ವಲಿಸಿ ಬೆಳಗುವಂತೆ”
ಜಿ. ಎಸ್. ಶಿವರುದ್ರಪ್ಪನವರ ಅದ್ಬುತ ಸಾಲುಗಳಿವು. ಬದುಕಿಗೆ ಬೆಳಕಿನ ಮಹತ್ವವನ್ನು ಸಾರುವ ನುಡಿಗಳಿವು. “ಬಂದರೇಸು ಧರೆಗೆ ಕತ್ತಲು ತುಂಬಿದ ಜಗಕೆ” ಸೂರ್ಯ ಮುಳುಗಿ ಕತ್ತಲು ಜಗತ್ತನ್ನೇ ಆವರಿಸಿದಾಗ, ನಿಶಾಚರಿಗಳನ್ನು ಹೊರತು ಪಡಿಸಿ, ಜಗತ್ತಿನ ಸಕಲ ಜೀವಜಂತುಗಳು ವಿರಮಿಸುವ ಸಮಯ, ಕ್ರಿಸ್ಮಸ್ ನಡುರಾತ್ರಿಯಲ್ಲಿ ಬೆಳಕಿನ ಆಗಮನವಾಯಿತು. “ನಿನಗೆ ಬೆಳಕು ಬಂದಿದೆ, ಜೆರುಸಲೇಮೆ, ಏಳು ಪ್ರಕಾಶಿಸು” ಪ್ರವಾದಿ ಯೆಶಾಯನ ಮಾತುಗಳು ಕ್ರಿಸ್ತಜಯಂತಿಯಂದು ಘನೀಕೃತವಾದವು. ಕತ್ತಲ ಬದುಕಿಗೆ ಬೆಳಕಿನ ಆಹ್ವಾನವಾಯಿತು. ನೀರಸ ಬದುಕಿಗೆ ಚೈತನ್ಯದ ಸೆಲೆ ಮೂಡಿತು. ನಿಸ್ತೇಜ ಜೀವನಕ್ಕೆ ಜೀವದ ಸಂಚಾರವಾಯಿತು. ದೇವ ಜಗಜ್ಯೋತಿಯಾಗಿ ಭುವಿಯ ಅಂಧಕಾರ ನೀಗಿಸಿದರು. ಕ್ರಿಸ್ಮಸ್ ಮನುಜನ ಬದುಕನ್ನು ಜ್ಯೋತಿಯಾಗಿ ಆಲಂಗಿಸಿ ಪ್ರೀತಿಯ ಸಿಂಚನವೆರೆದ ಹಬ್ಬ. “ಕ್ರಿಸ್ಮಸ್, ನಮ್ಮ ಬದುಕಿನ ಬೆಳಕಿನ ಹಬ್ಬ”.
ನಡುರಾತ್ರಿಯಲ್ಲಿ ಕ್ರಿಸ್ತನ ಜನನವಾಯಿತು. ಜ್ಯೋತಿಯ ಉದಯವಾಯಿತು. ಸೂರ್ಯ ಮುಳುಗಿದ್ದರೂ ಅಂಧಕಾರ ಜಗವನ್ನು ಆವರಿಸಿದ್ದರೂ, ಜಗದ ರಕ್ಷಕ ಕ್ರಿಸ್ತನ ಜನನದಿಂದ ಮೂಡಿದ ಬೆಳಕು ಮನುಜರ ಬಾಳಲ್ಲಿ ಹೊಸತನ ಮೂಡಿಸಿತು. ನೊಂದು ಬೆಂದ ಮನುಜನಿಗೆ ಬೆಚ್ಚನೆಯ ಪ್ರೀತಿಯ ಅನುಭವ ನೀಡಿದ ಬೆಳಕದು. ಅಂಧಕಾರದಲ್ಲಿದ್ದು ರಕ್ಷಕನ ಅರಸಿದ ಮನಗಳನ್ನು ತಣಿಸಿದ ಬೆಳಕದು. ನಮ್ಮ ಮನೆಮನಗಳ ಅಂಧಕಾರ ನೀಗಿಸುವ “ಬೆಳಕು” ಪ್ರಭು ಯೇಸುವಾದರು. ಯೇಸುಬಾಲರು ಈ ಧರೆಗೆ ಬಂದದ್ದು ಪ್ರೀತಿಯ ಭಾಷೆಯನ್ನು ಸರ್ವರಿಗೂ ಕಲಿಸಲು, ಪ್ರೀತಿಯ ಪ್ರತೀಕವಾಗಿರುವ ಪುಣ್ಯ ಪ್ರಭಾತ ಪಿತದೇವರನ್ನು ಅವರ ಪ್ರೀತಿ – ವಾತ್ಸಲ್ಯದ ಸಾಮ್ರಾಜ್ಯವನ್ನು, ನಮ್ಮ ತನುಮನಗಳಲ್ಲಿ ಹೃದಯ ಹೃನ್ಮನಗಳಲ್ಲಿ ಸಂಜೀವಿನಿಯಾಗಿ, ಬಿತ್ತಿ ಬೆಳೆಯಲು. “ಪ್ರೀತಿಯೇ ಪರಮಾತ್ಮ – ಪ್ರೀತಿಯೇ ಪರಂಧಾಮ” ಎನ್ನುವ ಸತ್ಯವನ್ನು ನೈಜವಾಗಿಸಲು ಪ್ರಭುಯೇಸು ಮಾನವರಾದರು. ಜಗದಲ್ಲಿರುವ ಅಸತ್ಯವನ್ನು ಅಳಿಸಿ, ಸತ್ಯವನ್ನು ಉಳಿಸಿ ಮೇಳೈಸಲು, ಸಾವಿನ ಕರಾಳ ಛಾಯೆಯ ಬಂಧನ ಬಿಡಿಸಿ, ಪುನರುತ್ಥಾನದ ಮೂಲಕ ನಿತ್ಯಜೀವಕ್ಕೆ ನಮ್ಮನ್ನು ಎಬ್ಬಿಸಲು, ದೇವ ಮಾನವನ ನಡುವೆ ಸತ್ಸಂಬಂಧ ಬೆಳೆಸುವ, ಮಾನವ-ಮಾನವರ ಮಧ್ಯೆ ಮೈತ್ರಿಯನ್ನು ಮೊಳಗಿಸುವ ಮಹಾಪುರುಷ ಪ್ರಭುಯೇಸುವಾದರು; ಪ್ರೀತಿಯ ಸೆಳೆತವಿರುವ, ಪ್ರೇಮದ ಸ್ಪಂದನ ಇರುವ, ವಾತ್ಸಲ್ಯದ ಸ್ಪರ್ಶವಿರುವ ಸೇತುವೆ ಅವರಾದರು.
“ನಿಮ್ಮ ಜ್ಯೋತಿಯು ಜಗದೆಲ್ಲಡೆ ಪ್ರಕಾಶಿಸಲಿ”, ನಾವೆಲ್ಲರೂ ಬೆಳಕಿನಲ್ಲಿ ನಡೆಯುವ ಹಂಗಿನಲ್ಲಿದ್ದೇವೆ. ಕ್ರಿಸ್ತಜಯಂತಿ ದೈವಿ ಪ್ರೀತಿಯ ಉಗಮವಾಗಿದೆ. ಜಗಜ್ಯೋತಿಯಾದ ಯೇಸು ಪ್ರೀತಿಯ ಕ್ಷಮೆಯ ಶಿಖರವಾಗಿದ್ದಾರೆ. ಸೂರ್ಯನ ಪ್ರಕಾಶ ಜಗದ ಸರ್ವವನ್ನು ಆಲಂಗಿಸುವAತೆ, ಪ್ರಭುಯೇಸು ಸರ್ವರನ್ನೂ ಆಲಂಗಿಸುತ್ತಾರೆ. ಕ್ರಿಸ್ತಜಯಂತಿಯ ಸಂಭ್ರಮದಲ್ಲಿರುವ ನಾವು ಬರಿಯ ಜ್ಯೋತಿಗಳಾಗುವುದಲ್ಲ ಬದಲಾಗಿ ದೀಪಸ್ಥಂಭದ ಮೇಲಿಟ್ಟ ದೀಪಗಳಾಗಬೇಕು. ಪ್ರಭುವಿನ ಸಹನೆ, ನಮ್ಮಲ್ಲಿ ನೆಲೆಯಾಗಬೇಕು. ಆಗ ಮಾತ್ರ ನೈಜ ಕ್ರಿಸ್ತಜಯಂತಿಯ ಸಂಭ್ರಮ ನಮ್ಮದಾಗುತ್ತದೆ. ಕ್ರಿಸ್ತಜಯಂತಿಯಲ್ಲಿನ ಜಗಜ್ಯೋತಿ ಯೇಸು ನಮ್ಮ ಹೃದಯಲ್ಲಿ ಜನಿಸಿದಾಗ, ಆತನ ಪ್ರಭೆಯಿಂದ ಪುಳಕಿತರಾಗಿ, ಸ್ವಾರ್ಥದ್ವೇಷ ತೊರೆದು, ಐಕ್ಯತೆ, ಅನ್ಯೋನ್ಯತೆಯಿಂದ ಬದುಕಿದಾಗ ನಮ್ಮ ಮೂಲಕ ಕ್ರಿಸ್ತನ ಜ್ಯೋತಿಯ ಪ್ರಭೆ ಸರ್ವರನ್ನೂ ಆಲಂಗಿಸುತ್ತದೆ. ಓದುಗರೆಲ್ಲರಿಗೂ ಕ್ರಿಸ್ತಜಯಂತಿಯ ಹಾಗೂ ಹೊಸವರ್ಷದ ಶುಭಾಶಯಗಳು.