News Kannada
Monday, January 30 2023

ವಿಶೇಷ

ಪುಟಾಣಿ ಮಕ್ಕಳೊಂದಿಗೆ ಪುಟ್ಟ ಹೆಜ್ಜೆ…..

Photo Credit : By Author

ಮಕ್ಕಳೆಂದರೆ ಖುಷಿ, ಮಕ್ಕಳೆಂದರೆ ಸಂತೋಷ, ಅದರಲ್ಲೂ ಪುಟಾಣಿ ಮಕ್ಕಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅವರ ಆಟ- ತುಂಟಾಟ, ನಿಷ್ಕಲ್ಮಶ ಪ್ರೀತಿ, ಮುಗ್ಧ ಮನಸ್ಸು, ವಿಶಾಲ ಹೃದಯ ಎಲ್ಲರ ಮನ ಸೆಳೆಯುವಂತೆ ಮಾಡುತ್ತದೆ. ಇಂತಹ ಪುಟಾಣಿ ಮಕ್ಕಳ ಜೊತೆ ಇದ್ದಾಗ ದಿನವೂ ಕೂಡ ಕ್ಷಣಗಳಂತೆ ಕಳೆದುಹೋಗುವುದು ಎಲ್ಲರಿಗೂ ತಿಳಿದ ಸಂಗತಿ. ಇಂತಹ ಮುಗ್ಧ ಮನಸ್ಸಿನ ಮುದ್ದು ಮಕ್ಕಳ ಜೊತೆಗೆ 50 ದಿನಗಳ ಬಿ.ಇಡಿ ತರಬೇತಿಯ ಅವಧಿಯಲ್ಲಿ ಸಮಯ ಕಳೆಯುವಂತಹ ಅವಕಾಶ ಹಾರಡಿ ಶಾಲೆಯಲ್ಲಿ ಒದಗಿತ್ತು.

61 ವರ್ಷಗಳ ಇತಿಹಾಸವನ್ನು ಹೊಂದಿದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾರಡಿ. ಶಾಲೆಯು, ಪುತ್ತೂರಿನಲ್ಲಿ ತನ್ನ ಮಕ್ಕಳ ವಿಶೇಷ ಪ್ರತಿಭೆಯಿಂದ ಎಲ್ಲೆಡೆಯೂ ಪ್ರಖ್ಯಾತಿಯನ್ನು ಪಡೆದುಕೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಅದೇ ರೀತಿ ಈ ಒಂದು ಸರಕಾರಿ ಶಾಲೆಯಲ್ಲಿ ಸುಮಾರು 750 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿದ್ದು, ಇಲ್ಲಿ ನನಗೆ 50 ದಿನಗಳ ಬಿ.ಇಡಿ ಪ್ರಾಯೋಗಿಕ ತರಬೇತಿ ಪಡೆಯಲು ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ.

ಹೀಗೆ ಪ್ರಾಯೋಗಿಕ ತರಬೇತಿಯ ಒಂದು ದಿನ ನನ್ನ ಪಯಣವು ಹಾರಾಡಿ ಶಾಲಾ ಮಕ್ಕಳ ಜೊತೆಗೆ ಪ್ರವಾಸದ ನೆಪದಲ್ಲಿ ಮಂಗಳೂರಿನ ಕಡೆ ಸಾಗಿತ್ತು.

ಮೂರು ಮತ್ತು ನಾಲ್ಕನೇ ತರಗತಿಯ 137 ವಿದ್ಯಾರ್ಥಿಗಳು ಹಾಗೂ ಮುಖ್ಯೋಪಾಧ್ಯಾಯರು, ಮತ್ತು ಏಳು ಮಂದಿ ಸಹಶಿಕ್ಷಕರೊಂದಿಗಿನ ನನ್ನ ಈ ಅನುಭವವೂ ಮರೆಯಲಾಗದ ನೆನಪು…

ನಮ್ಮ ಮೊದಲ ಕ್ಷೇತ್ರ ಭೇಟಿಯು ಪಾಣೆಮಂಗಳೂರಿನ ಶ್ರೀ ನರಹರಿ ಪರ್ವತ ಸದಾಶಿವ ದೇವಸ್ಥಾನಕ್ಕೆ ತೆರಳಿ ದೇವರ ಅನುಗ್ರಹದಿಂದ ನಮ್ಮ ಪ್ರವಾಸವು ಆರಂಭವಾಯಿತು. ಮೊದಲ ಬಾರಿ, ಪುಟಾಣಿಗಳ ಜೊತೆ, ಸುಮಾರು 200 ಮೆಟ್ಟಿಲುಗಳನ್ನು ಏರಿ ದೇವಸ್ಥಾನವನ್ನು ತಲುಪಿದ ನನಗೆ ಆಯಾಸವೇ ತಿಳಿಯಲಿಲ್ಲ.

ಆದರೆ ಒಂದು ಹುಡುಗನ ನೀರಿನ ಬಾಟಲ್ ದೇವಸ್ಥಾನದಲ್ಲೇ ಮರೆತು ಬಂದ ಕಾರಣ ಆತನ ಎಡವಟ್ಟಿನಿಂದ ಎರಡೆರಡು ಬಾರಿ ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತಿ ಇಳಿದ ನನ್ನ ಪಾಡು ಹೇಳತಿರದು. ಆದರೂ ಆ ಪುಟ್ಟ ಹುಡುಗನ ನೀರಿನ ಬಾಟಲ್ ಇಟ್ಟ ಜಾಗದಲ್ಲೇ ಸಿಕ್ಕಿದ್ದು ಸಂತೋಷದ ವಿಷಯವಾಗಿತ್ತು.

ಹೀಗೆ ಪುಟಾಣಿಗಳ ಜೊತೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತ ಮೊದಲ ಬಾರಿಗೆ ಸದಾಶಿವನ ದರ್ಶನ ಪಡೆದ ಅನುಭವವು ಸೊಗಸಾಗಿತ್ತು. ನಂತರ ನಮ್ಮ ಮುಂದಿನ ಹಾದಿಯೂ ಹೊರಟಿತು ಮಂಗಳೂರಿನ ಕದ್ರಿ ಪಾರ್ಕಿಗೆ…

ಕದ್ರಿ ಪಾರ್ಕಿಗೆ ಹೋಗುತ್ತಲೇ ತೊಟ್ಟಿಲು, ಜಾರುಬಂಡಿಗಳನ್ನು ನೋಡಿ ಎಲ್ಲಾ ಪುಟಾಣಿಗಳು ಖುಷಿಯಿಂದ ಓಡಾಡಿಕೊಂಡು ಆಟವಾಡಲು ಹೋದರು. ಆಟದ ಲೋಕದಲ್ಲಿ ಮಗ್ನರಾದ ವಿದ್ಯಾರ್ಥಿಗಳನ್ನು ನಿಯಂತ್ರಿಸುವುದು ಬಹಳ ಕಷ್ಟವಾಯಿತು. ಆದರೂ, ಅವರೆಲ್ಲರ ಉತ್ಸಾಹವನ್ನು ನೋಡಿದಾಗ ನನಗೂ ಖುಷಿಯಾಯಿತು ನಂತರ ನಾವೆಲ್ಲರೂ ಮಕ್ಕಳ ರೈಲು ಬಂಡಿಯಲ್ಲಿ ಸಾಗಿ, ಮಕ್ಕಳೊಂದಿಗೆ ಹರುಷದಿಂದ ಸಮಯವನ್ನು ಕಳೆದೆನು.

ಅಲ್ಲಿಂದ ನಮ್ಮ ಮುಂದಿನ ಪಯಣವು ಕುಲಶೇಖರದಲ್ಲಿರುವ ಹಾಲಿನ ಡೈರಿಗೆ ಹೊರಟಿತು. ಪ್ರತಿದಿನ ನಾವು ಅಂಗಡಿಯಿಂದ ಹಾಲನ್ನು ತಂದು ಚಹಾ, ಕಾಫಿ ಮಾಡಿ ಕುಡಿಯುತ್ತೇವೆ. ಆದರೆ, ಈ ಹಾಲಿನ ಪ್ಯಾಕೆಟ್ ಎಲ್ಲಿ ತಯಾರಾಗುತ್ತದೆ? ಹೇಗೆ ತಯಾರಾಗುತ್ತದೆ? ಎಂದು ಹೆಚ್ಚಿನ ವಿಷಯವನ್ನು ನೋಡಿ ತಿಳಿಯುವ ಅವಕಾಶ ನಮಗೆ ಮಂಗಳೂರಿನ ಹಾಲಿನ ಡೈರಿಯಲ್ಲಿ ಸಿಕ್ಕಿತು. ಅಲ್ಲಿನ ಮಾರ್ಗದರ್ಶಕರು ನಮಗೆ ವಿವಿಧ ರೀತಿಯ ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಮೊಸರು, ಲಸ್ಸಿ, ಪನ್ನೀರ್, ಚೀಸ್ , ಮೈಸೂರ್ ಪಾಕ್, ಚಾಕ್ಲೇಟ್ ಇತ್ಯಾದಿಗಳು ತಯಾರಾಗುವ ಘಟಕಕ್ಕೆ ಕರೆದುಕೊಂಡು ಹೋಗಿ ಅದಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳನ್ನು ವೀಕ್ಷಿಸುವ ಸಣ್ಣ ಅವಕಾಶವನ್ನು ಕಲ್ಪಿಸಿದರು. ಮಕ್ಕಳೆಲ್ಲರೂ ಖುಷಿಯಿಂದ ಚಾಕ್ಲೇಟ್, ಸ್ವೀಟ್ ತಯಾರಾಗುವುದನ್ನು ನೋಡಿ ಸಂಭ್ರಮಿಸಿದರು.

See also  ಮಂಗಳೂರು: ಕಾಲಮಿತಿ ಯಕ್ಷಗಾನ ನಡೆಸಲು ಕಟೀಲು ಆಡಳಿತ ಮಂಡಳಿ ನಿರ್ಧಾರ

ನಂತರ ಹಾಲಿನ ಡೈರಿಯ ಸಂಸ್ಥೆಯವರು ಪ್ರವಾಸಕ್ಕೆಂದು ಬಂದ ನಮಗೆಲ್ಲರಿಗೂ ಕುಡಿಯಲು ಲಸ್ಸಿ, ಮಜ್ಜಿಗೆಗಳನ್ನು ನೀಡಿದರು.

ಮಕ್ಕಳೆಲ್ಲ ಖುಷಿ ಖುಷಿಯಿಂದ ತಾ -ಮೊದಲು ನಾ- ಮೊದಲೆಂದು ಹೋಗಿ ಲಸ್ಸಿಯನ್ನು ಪಡೆದು ಕುಡಿದರು. ಅಲ್ಲಿಂದ ನಂತರ ಮಧ್ಯಾಹ್ನದ ಭೋಜನವನ್ನು ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸ್ವೀಕರಿಸಿ ಅಲ್ಲಿಂದ ನಮ್ಮ ಮುಂದಿನ ದಾರಿಯೂ ವಾಮಾಂಜೂರಿನ ಪಿಲಿಕುಳದ ಕಡೆಗೆ ಸಾಗಿತು. ಅಲ್ಲಿ ಮೊದಲು ನಾವೆಲ್ಲರೂ ತಾರಾಲಯಕ್ಕೆ ತೆರಳಿ ಅಲ್ಲಿ 3D ಶೋ ವೀಕ್ಷಿಸಿದೆವು.

ಮಕ್ಕಳೆಲ್ಲರೂ 3D ಕನ್ನಡಕ ಹಾಕಿಕೊಂಡು ಖುಷಿ-ಖುಷಿಯಿಂದ 3D ಶೋ ನೋಡಲು ಕಾತುರದಿಂದ ಕಾಯುತ್ತಿದ್ದರು. ಸಮುದ್ರದ ಅಲೆಗಳು ಬಂದು ನಮ್ಮ ಮೇಲೆ ಬಂದು ಅಪ್ಪಳಿಸುವಂತೆ, ಹಾಗೂ ಡೈನೋಸರ್ನಂತಹ ಜೀವಿಗಳು ನಮ್ಮ ಮೇಲೆ ಬಂದು ನೆಗೆಯುವಂತೆ, ತಿಮಿಂಗಿಲಗಳು ಬಂದು ನಮ್ಮನ್ನು ನಂಗುವಂತಹ ಚಿತ್ರವನ್ನು ನೋಡಿ ಪುಟಾಣಿಗಳ ಕಿರಚಾಟಕ್ಕೆ ಪಾರವೇ ಇರಲಿಲ್ಲ. ಒಟ್ಟಿನಲ್ಲಿ ಸ್ವಲ್ಪ ಭಯವಾದರೂ ಕೂಡ, ಮಕ್ಕಳೆಲ್ಲರೂ ಹರುಷದಿಂದ ಸಂಭ್ರಮಿಸಿದ್ದು ಅವರ ಮುಖದಲ್ಲಿ ತೋಚುತ್ತಿತ್ತು. ಅದಷ್ಟೇ ಅಲ್ಲದೆ ವಿಜ್ಞಾನಕ್ಕೆ ಸಂಬಂಧಿಸಿದ ಅದೆಷ್ಟೋ ವಿಷಯಗಳನ್ನು ನಾನು ಇಲ್ಲಿ ತಿಳಿದುಕೊಂಡೆನು.

ಅದನಂತರ, ನಾವೆಲ್ಲರೂ ಪಿಲಿಕುಳ ನಿಸರ್ಗಧಾಮಕ್ಕೆ ತೆರಳಿ ಅಲ್ಲಿ ವಿವಿಧ ಜಾತಿಯ ಪ್ರಾಣಿ ಪಕ್ಷಿ ಸರಿಸೃಪಗಳನ್ನು ಕಣ್ಣಾರೆ ನೋಡಿ ಆನಂದಿಸಿದ ಸಮಯ ಹೇಳಲಸಾಧ್ಯ. ಹುಡುಗಿಯರಿಗಿಂತ ಹುಡುಗರು ಹುಲಿ ಸಿಂಹಗಳಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ನೋಡುವಾಗ ಆಶ್ಚರ್ಯ ಚಕಿತರಾಗಿ ಕುಣಿದಾಡುತ್ತ, ನೆಗೆಯುತ್ತ ಸಂಭ್ರಮಿಸಿದರು.

ಟಿ.ವಿ, ಪುಸ್ತಕದಲ್ಲಿ ನೋಡುವ ಪ್ರಾಣಿಗಳ ಚಿತ್ರಕ್ಕೂ, ನೈಜವಾಗಿ ಜೀವಿಗಳನ್ನು ನೋಡುವ ಅನುಭವವು ಬೇರೆಯದೇ ಆಗಿತ್ತು. ಅಲ್ಲಿಂದ ಮುಂದೆ ಸಾಗಿ ನಾವು ತಲುಪಿದ ಸ್ಥಳ ಪಣಂಬೂರ್ ಬೀಚ್… ಸೂರ್ಯಾಸ್ತವಾಗುವ ಸಮಯದಲ್ಲಿ, ಜನಸಂದಣಿ ಸೇರಿದ ಹೊತ್ತಿನಲ್ಲಿ, ಭೋರ್ಗರೆಯುವ ಅಲೆಗಳ ಸಪ್ಪಳವನ್ನು ನೋಡುತ್ತಾ, ಪುಟ್ಟ ಪುಟ್ಟ ಹೆಜ್ಜೆಯೊಂದಿಗೆ ಮರಳಿನ ಮೇಲೆ ನಡೆಯುತ್ತಾ ಕಡಲ ತೀರಕ್ಕೆ ಸಮೀಪಿಸಿದೆವು.

ಪುಟಾಣಿಗಳೆಲ್ಲರ ಖುಷಿಯು ಇಮ್ಮಡಿಯಾಗಿ ನೀರಿನಲ್ಲಿ ಆಟವಾಡುತ್ತಾ, ಬೊಬ್ಬೆ ಹಾಕುತ್ತಾ ಸಂಭ್ರಮದಿಂದ ಸಮಯವನ್ನು ಕಳೆದರು. ಅಲ್ಲಿಂದ ನಮ್ಮ ಮುಂದಿನ ಪಯಣವು ನಮ್ಮ-ನಮ್ಮ ಮನೆಯತ್ತ ಎಂದಾಗ ಸ್ವಲ್ಪ ಬೇಸರಗೊಂಡರು ಅನಿವಾರ್ಯವಾಗಿತ್ತು. ಒಟ್ಟಿನಲ್ಲಿ ನಾನಂತೂ ಒಂದು ದಿನದ ಪ್ರವಾಸದಲ್ಲಿ ಪುಟಾಣಿ ಮಕ್ಕಳೊಂದಿಗೆ ಮೈ ಮರೆತು ಖುಷಿಯ ಅನುಭವವನ್ನು ಪಡೆದನು.

ಅವರೊಂದಿಗೆ ಕಳೆದ ಪ್ರತಿ ಕ್ಷಣಗಳು ನನ್ನ ಜೀವನದ ಮರೆಯಲಾಗದ ನೆನಪುಗಳ ಸಾಲಿನಲ್ಲಿ ಸೇರಿವೆ. ಮೊಟ್ಟ ಮೊದಲ ಬಾರಿಗೆ ತರಬೇತಿ ಶಿಕ್ಷಕಿಯಾಗಿ, ಮಕ್ಕಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಪುಟಾಣಿಗಳ ಜೊತೆಗೆ ಪುಟ್ಟ- ಪುಟ್ಟ ಹೆಜ್ಜೆಯನಿಟ್ಟು ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಿಕೊಟ್ಟ ನಮ್ಮ ಹಾರಾಡಿ ಶಾಲೆಗೆ ನಾನು ಎಂದಿಗೂ ಚಿರಋಣಿಯಾಗಿರುತ್ತೇನೆ.

– ಸಿಂಚನ ಎನ್ ಆರ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು