ಬೆಳ್ತಂಗಡಿ: ಅಡಕೆ ಎಲೆ ಚುಕ್ಕಿ ರೋಗ ಪ್ರಸ್ತುತ ಒಂದಿಷ್ಟು ಹತೋಟಿಯಲ್ಲಿದ್ದರೂ ರೋಗ ಹರಡಿರುವ ಕೆಲವು ತೋಟಗಳಲ್ಲಿ ತೀವ್ರತೆ ತಗ್ಗಿಸಲು ಡ್ರೋನ್ ಮೂಲಕ ಔಷಧ ಸಿಂಪಡಣೆಗೆ ಕೃಷಿಕರು ಮುಂದಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೃಷಿಕ ಲಿಜೋ ಸ್ಕರಿಯ ಅವರ ತೋಟದಲ್ಲಿ ನಡೆದಿದೆ. ಇವರಿಗೆ 5 ಎಕರೆ ಅಡಕೆ ತೋಟವಿದ್ದು,ಇವರ ತೋಟದ ಭಾಗದ ಅಲ್ಲಲ್ಲಿ ಎಲೆಚುಕ್ಕಿ ರೋಗ ಕಂಡುಬಂದಿದೆ.
ಇದೀಗ 20 ಲೀ. ಸಾಮರ್ಥ್ಯದ ಡ್ರೋನ್ ಮೂಲಕ ಸಂಪೂರ್ಣ ತೋಟಕ್ಕೆ ಔಷಧ ಸಿಂಪಡಣೆ ಮಾಡಲಾಗಿದೆ. 20 ಲೀ.ಟ್ಯಾಂಕ್ ಒಂದರ ಸಿಂಪಡಣೆಗೆ ರೂ.700 ಬಾಡಿಗೆ ಪಾವತಿಸಬೇಕು. ಐದು ಎಕರೆ ತೋಟಕ್ಕೆ ಮೂರು ಲೀ.ಔಷಧಿ ಖರ್ಚಾಗಿದೆ. ಸಿಂಪಡಣೆಗೆ ಸುಮಾರು ರೂ.6,000 ವೆಚ್ಚವಾಗಿದೆ.ಇಷ್ಟು ಪ್ರದೇಶದ ಸಿಂಪಡಣೆಗೆ ಸುಮಾರು 2 ಗಂಟೆ ಕಾಲ ತಗುಲಿದೆ.
ಡ್ರೋನ್ ಮೂಲಕ ಔಷಧ ಸಿಂಪಡಣೆ ಸಿಸ್ಟಮ್ಯಾಟಿಕ್ ಫಂಗಿಸೈಡ್ ಮಾದರಿಯಲ್ಲಿ ನಡೆದಿದ್ದು ಡ್ರೋನ್ ಮೂಲಕ ಅಡಕೆ ಮರಗಳ ಮೇಲ್ಭಾಗದಿಂದ ಸೋಗೆಗಳ ಮೇಲೆ ನಡೆಯುವುದರಿಂದ ಸೋಗೆಗಳ ಮೂಲಕ ಹರಡುವ ಎಲೆ ಚುಕ್ಕಿ ರೋಗದ ಮೇಲೆ ಇದು ಹೆಚ್ಚಿನ ಪರಿಣಾಮ ಬೀರುತ್ತದೆ. ಶೃಂಗೇರಿ, ಸುಳ್ಯ ಮೊದಲಾದ ಕಡೆ ಈಗಾಗಲೇ ಡ್ರೋನ್ ಮೂಲಕ ಸಿಂಪಡಣೆ ನಡೆದಿದ್ದು ಈಗ ಬೆಳ್ತಂಗಡಿ ತಾಲೂಕಿನಲ್ಲು ಮುಂದುವರಿದಿದೆ.
ಕಡಿಮೆ ಖರ್ಚು:
ಡ್ರೋನ್ ಮೂಲಕ ಔಷಧಿ ಸಿಂಪಡಣೆಯಿಂದ ಕಡಿಮೆ ಖರ್ಚು ಹಾಗೂ ಸಮಯದ ಉಳಿತಾಯವಾಗುತ್ತದೆ. ಪ್ರಕ್ರಿಯೆಗಳು ಪ್ರಾಯೋಗಿಕವಾಗಿ ನಡೆಯುತ್ತಿದ್ದರೂ ಇದು ಪರಿಣಾಮಕಾರಿಯಾಗಬಹುದು ಎಂಬುದು ಕೃಷಿಕರ ಅಭಿಪ್ರಾಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಡಕೆ ಮರ ಏರಿ ಔಷಧಿ ಸಿಂಪಡಿಸುವ ನುರಿತ ಕಾರ್ಮಿಕರ ಕೊರತೆ ಹೆಚ್ಚಿದ್ದು ಕೃಷಿಕರು ಔಷಧಿ ಸಿಂಪಡಣೆ ವಿಚಾರದಲ್ಲಿ ತೀವ್ರ ಆತಂಕಿತರಾಗಿದ್ದಾರೆ. ಬೆರಳೆಣಿಕೆಯ ನುರಿತ ಕಾರ್ಮಿಕರ ವೇತನವು ಹೆಚ್ಚಿದೆ.ಹೆಚ್ಚಿನ ವೇತನ ನೀಡಿದರು ಲಭ್ಯತೆ ಇಲ್ಲ. ಓರ್ವ ನುರಿತ ಕಾರ್ಮಿಕ ಹಲವಾರು ಎಕರೆ ತೋಟಗಳ ಔಷಧ ಸಿಂಪಡಣೆಯ ಜವಾಬ್ದಾರಿ ನಿರ್ವಹಿಸುವ ಕಾರಣ ಸಮಯಕ್ಕೆ ಸರಿಯಾಗಿ ಔಷಧ ಸಿಂಪಡಣೆಯು ಸಾಧ್ಯವಾಗುತ್ತಿಲ್ಲ. ಇದರಿಂದ ಡ್ರೋನ್ ಮೂಲಕ ಔಷಧ ಸಿಂಪಡಣೆ ನಡೆದರೆ ಸಮಸ್ಯೆಗೆ ಪರಿಹಾರ ಸಾಧ್ಯವಿದೆ.
ಬೋರ್ಡೋ ಮಿಶ್ರಣ ಸಿಂಪಡಣೆ ಸಾಧ್ಯವೇ
ಮಳೆಗಾಲದಲ್ಲಿ ಅಡಕೆ ತೋಟಗಳಲ್ಲಿ ಶಿಲೀಂದ್ರಗಳ ಮೂಲಕ ಅಡಕೆ ಗೊನೆಗಳಿಗೆ ಹರಡುವ ಕೊಳೆರೋಗವನ್ನು ಹತೋಟಿಗೆ ತರಲು ಮೂರರಿಂದ ನಾಲ್ಕು ಬಾರಿ ಅಡಕೆ ಗೊನೆಗಳಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಅಗತ್ಯವಿದೆ.ಇಲ್ಲೂ ನುರಿತ ಕಾರ್ಮಿಕರ ಸಮಸ್ಯೆ ಹೆಚ್ಚಿದೆ. ಇದಕ್ಕೂ ಕೂಡ ಡ್ರೋನ್ ಮೂಲಕ ಔಷಧಿ ಸಿಂಪಡಣೆ ಸಾಧ್ಯವೇ ಎಂಬುದು ರೈತರ ಪ್ರಶ್ನೆಯಾಗಿದೆ. ಎಲೆ ಚುಕ್ಕಿ ರೋಗಕ್ಕೆ ಮೇಲ್ಭಾಗದಿಂದ ಔಷಧಿ ಸಿಂಪಡಣೆ ನಡೆದರೆ ಕೊಳೆರೋಗ ನಿವಾರಣೆಗೆ ಗೊನೆಗಳಿಗೆ ಔಷಧಿ ಸಿಂಪಡಿಸಬೇಕು. ಇದನ್ನು ಡ್ರೋನ್ ಮೂಲಕ ನಿರ್ವಹಿಸುವ ತಂತ್ರಜ್ಞಾನ ರೂಪಿಸಿದರೆ ಬೋರ್ಡೋ ಮಿಶ್ರಣ ಸಿಂಪಡಣೆಗೂ ಅನುಕೂಲವಾದೀತು.
ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ಎಲೆ ಚುಕ್ಕಿ ರೋಗ ಕಂಡುಬಂದಿದ್ದು ಇದೀಗ ಬಿಸಿಲಿನ ವಾತಾವರಣದಿಂದ ಹತೋಟಿಯತ್ತ ಮುಂದುವರಿದಿದೆ. ಆದರೆ ಈ ಬಾರಿಯೂ ಕಳೆದ ವರ್ಷಗಳಂತೆ ಮಳೆ ಬೇಗನೆ ಆರಂಭವಾದರೆ ಮತ್ತೆ ರೋಗ ಉಲ್ಬಣಿಸುವ ಸಾಧ್ಯತೆ ಇದೆ. ಇದಕ್ಕೆ ಪೂರಕ ಎಂಬಂತೆ ಆಗಾಗ ಮೋಡ ಕವಿದ ವಾತಾವರಣವು ಪ್ರಸ್ತುತ ಕಂಡು ಬರುತ್ತಿದೆ. ಈ ಕಾರಣದಿಂದ ಭವಿಷ್ಯದ ಯೋಚನೆಯಿಂದ ರೋಗ ಹತೋಟಿಯಲ್ಲಿರುವ ತೋಟಗಳಲ್ಲೂ ಕೃಷಿಕರು ಸಿಂಪಡಣೆಗೆ ಮುಂದಾಗಿದ್ದಾರೆ.
“ಡ್ರೋನ್ ಮೂಲಕ ಕಡಿಮೆ ಖರ್ಚು ಹಾಗೂ ಸಮಯದಲ್ಲಿ ಔಷಧಿ ಸಿಂಪಡಣೆ ಸಾಧ್ಯವಾಗುತ್ತದೆ. ಪ್ರಸ್ತುತ ಎಲೆ ಚುಕ್ಕಿ ರೋಗ ಹತೋಟಿಯಲ್ಲಿದ್ದರೂ ಮುಂದಿನ ದಿನಗಳಲ್ಲಿ ವಾತಾವರಣದ ಏರುಪೇರಿನಿಂದ ರೋಗ ಹರಡಿದರೆ ಎಂಬ ಕಾರಣದಿಂದ
ಔಷಧಿ ಸಿಂಪಡಣೆ ಮಾಡಲಾಗಿದೆ. ಡ್ರೋನ್ ಮೂಲಕ ಔಷಧಿ ಸಿಂಪಡಣೆ ಪ್ರಕ್ರಿಯೆ ವೀಕ್ಷಿಸಿದ ಕೃಷಿಕರು ತಮ್ಮ ತೋಟಗಳಲ್ಲೂ ಇದನ್ನು ಅಳವಡಿಸಲು ಆಸಕ್ತಿ ತೋರಿದ್ದಾರೆ.”– ಲಿಜೋ ಸ್ಕರಿಯ, ಕೃಷಿಕರು, ಕಡಿರುದ್ಯಾವರ.