News Kannada
Saturday, March 25 2023

ವಿಶೇಷ

ಮಕ್ಕಳೇಕೆ ಹೀಗೆ?, ಪೋಷಕರು ಓದಲೇಬೇಕಾದ ಸಂಗತಿ

Why are children like this?, A must-read for parents
Photo Credit : Pixabay

ದಿನಪತ್ರಿಕೆ ತಿರುವುತ್ತಿದ್ದೆ. ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣ ಪರೀಕ್ಷೆಯಲ್ಲಿ ಚೀಟಿ ಇಟ್ಟಿದ್ದಳೆಂದು ತರಗತಿ ಶಿಕ್ಷಕಿ ಬೈದಿದ್ದರು. ಅವಮಾನ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಳು. ಪೋಷಕರು ಮತ್ತು ಊರವರು ಶಾಲೆಯ ಮುಂದೆ ವಿದ್ಯಾರ್ಥಿನಿಯ ಶವ ಇಟ್ಟು ಧರಣಿ ಕೂತಿದ್ದರು. ಅವರ ಬೇಡಿಕೆ ಸ್ಪಷ್ಟ “ಹುಡುಗಿಯ ಸಾವಿಗೆ ಶಿಕ್ಷಕಿಯೇ ಕಾರಣ, ಅವರನ್ನು ನಮ್ಮ ಕೈಗೆ ಕೊಡಿ” ಬಹುಶಃ ಕೈಗೆ ಸಿಕ್ಕರೆ ಮಗುವಿನೊಂದಿಗೆ ಶಿಕ್ಷಕಿಯನ್ನೂ ಸಮಾಧಿ ಮಾಡುವ ಯೋಚನೆ ಇರಬಹುದು. ಸ್ವಲ್ಪ ದಿನದ ಮುಂಚೆ ಇದೇ ರೀತಿಯ ಪ್ರಸಂಗ ನಡೆದಿತ್ತು. ಪರೀಕ್ಷೆಯಲ್ಲಿ ಚೀಟಿ ನೋಡಿ ಬರೆದು ಸಿಕ್ಕಿಬಿದ್ದ ಹುಡುಗನೊಬ್ಬನನ್ನು ಶಿಕ್ಷಕಿ ಹೊರಗೆ ನಿಲ್ಲುವಂತೆ ಸೂಚಿಸಿದ್ದರು. ಹುಡುಗ ನೇರ ಅಪಾರ್ಟ್‌ಮೆಂಟ್‌ಗೆ ತೆರಳಿ, ಕಟ್ಟಡದಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಕಾರಣ ಆತನಿಗೆ ಅದು ಸಹಿಸಲಾರದ ಅವಮಾನವಾಗಿತ್ತು. ಪೋಷಕರು ರೊಚ್ಚಿಗೆದ್ದು ಶಿಕ್ಷಕಿ ಮೇಲೆ ಕೇಸು ದಾಖಲಿಸಿದ್ದರು. ಈ ಎರಡೂ ಪ್ರಕರಣದಲ್ಲಿ ವಿದ್ಯಾರ್ಥಿಗಳು ಹತ್ತನೇ ತರಗತಿ ವ್ಯಾಸಂಗಿಸುತ್ತಿದ್ದರು.

ಈ ಮೇಲಿನ ಎರಡು ಘಟನೆಗಳಲ್ಲದೆ ಇಂತಹ ಹಲವಾರು ಘಟನೆಗಳು ನಮ್ಮ ಮುಂದಿವೆ. ಏಳನೇ ತರಗತಿ ವಿದ್ಯಾರ್ಥಿಯೊಬ್ಬ ಅಪ್ಪ ಬೈದ ಕಾರಣಕ್ಕಾಗಿ ಅವಮಾನಗೊಂಡು ಆತ್ಮಹತ್ಯೆ ಮಾಡಿಕೊಂಡದ್ದು ಅದರಲ್ಲೊಂದು, ಅಮ್ಮ ಮೊಬೈಲ್‌ ಮುಟ್ಟಬೇಡ, ಓದು ಎಂದು ಹೇಳಿದ ತಕ್ಷಣ ಮಗಳು ಮೊಬೈಲ್ ಬದಿಗಿಟ್ಟು, ಮೈಕೊಡವಿ ರೂಮಿನೊಳಗೆ ತೆರಳುತ್ತಾಳೆ. ಬಹಳ ಹೊತ್ತು ಹೊರಗೆ ಬರದಿದ್ದಾಗ, ಬಾಗಿಲು ತೆಗೆದು ಒಳಗಡೆ ನೋಡಿದರೆ ಮಗಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಧಿಕೃತ ವರದಿಯ ಪ್ರಕಾರ ಪ್ರತಿ 55 ನಿಮಿಷಕ್ಕೆ ಒಬ್ಬರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆತ್ಮಹತ್ಯೆ ಪ್ರಕರಣ ಕಳೆದವರ್ಷ ಶೇ. 7 ರಷ್ಟು ಹೆಚ್ಚಾಗಿರುವುದು ಪ್ರಜ್ಞಾವಂತ ಸಮಾಜವನ್ನು ಕಳವಳಕ್ಕೀಡು ಮಾಡಿದೆ.

ಹಿಂದೆ ನಾವು ಶಾಲೆಗೆ ಹೋಗುತ್ತಿದ್ದ ಕಾಲ ನೆನಪಾಗುತ್ತಿದೆ. ಸ್ವಲ್ಪ ಎಡವಟ್ಟಾದರೂ ಬಾಸುಂಡೆ ಬರುವಂತೆ ಮನೆಯಲ್ಲಿ ಅಪ್ಪನ ಪೆಟ್ಟು, ಕಡೆಗೆ ರಾತ್ರಿ ಅಮ್ಮ ಅಪ್ಪನಿಗೆ ಕದ್ದು ಎಣ್ಣೆ ಹಚ್ಚಿದ್ದೂ ಇದೆ. ಶಾಲೆಗೆ ಹೋದರೆ ಶಿಕ್ಷಕರ ಭಯ. ಸ್ವಲ್ಪ ತಪ್ಪಾದರೂ ಬೀಳುತ್ತಿದ್ದ ಛಡಿಯೇಟು. ಮನೆಗೆ ದೂರು ತಂದರೆ ಮನೆಯಲ್ಲಿ ಮತ್ತೆ ಪೆಟ್ಟು, ಹಾಗಾಗಿ ಶಾಲೆಯ ವಿಚಾರ ಮನೆಯ ತನಕ ಬರುತ್ತಲೇ ಇರಲಿಲ್ಲ. ತಂದೆ ತಾಯಂದಿರು ಕೆಲವೊಮ್ಮೆ ಮಕ್ಕಳನ್ನು ಹೆದರಿಸಲು, “ನಿನ್ನ ಶಿಕ್ಷಕರಿಗೆ ಹೇಳುತ್ತೇನೆ” ಎಂದು ಹೆದರಿಸಿ ಬಾಯಿ ಮುಚ್ಚಿಸಿದ್ದೂ ಇದೆ. ಆಶ್ಚರ್ಯವೆಂದರೆ ಅಂತಹ ಪರಿಸ್ಥಿತಿಯಲ್ಲೇ ಬೆಳೆದು ಬಂದ ಅನೇಕ ಮಹನೀಯರು ನಮ್ಮ ಮುಂದಿದ್ದಾರೆ.

ಇತ್ತೀಚೆಗೆ ಮಕ್ಕಳ ಮೇಲಿನ ಮಮತೆ ಬಹಳ ಅತಿರೇಕವಾಗಿದೆ. ಮಕ್ಕಳು ಕೇಳಿದರೆ ಚಂದ್ರನನ್ನೂ ತರಲು ಚಂದ್ರಯಾನಕ್ಕೂ ತಯಾರಿದ್ದೇವೆ. ಬಾಯಿಬಾರದ ಮಗು ಅತ್ತಾಗ ಮೊಬೈಲ್ ಕೈಗಿಟ್ಟು ಸಮಾಧಾನ ಪಡಿಸಲಾಗುತ್ತಿದೆ. ಮನೆಯಲ್ಲಿರುವ ನಾಲ್ಕು ಮಂದಿ ನಾಲ್ಕು ದಿಕ್ಕಿಗೆ ಮುಖಹಾಕಿ ಮೊಬೈಲ್‌ನಲ್ಲಿ ಬ್ಯುಸಿಯಾಗಿರುವ ಚಿತ್ರಣ ಬಹುತೇಕ ಮನೆಯದ್ದು. ಮನೆಯ ಯಾವ ಕೆಲಸವನ್ನೂ ಮಕ್ಕಳಿಂದ ಮಾಡಿಸಲಾರೆವು. ಏಕೆಂದರೆ ಅವರು ಓದಬೇಕು. ಪದವಿ ಪಡೆದ ಮಗಳಿಗೆ ಚಾಹುಡಿ ಮತ್ತು ಸಾಸಿವೆ ಇಲ್ಲವೇ ಸಕ್ಕರೆ ಮತ್ತು ಉಪ್ಪಿನ ನಡುವಿನ ವ್ಯತ್ಯಾಸ ಗೊತ್ತಿಲ್ಲವಾಗಿದೆ. ವೇದಿಕೆಯ ನಾಯಕಗಳಾದ ನಮ್ಮ ಮಕ್ಕಳು ಪ್ರಾಯೋಗಿಕವಾಗಿ ಶೂನ್ಯಗಳಾಗುತ್ತಿದ್ದಾರೆ. ಮಾನಸಿಕವಾಗಿ ಸದೃಡರಾಗಬೇಕಿತ್ತು, ಆದರೆ ವಿರುದ್ದವಾಗಿದ್ದಾರೆ ಎಂದರೆ ತಪ್ಪಾಗದು.

See also  ಕೋಲಾರ: ದಸರಾ ಮೆರವಣಿಗೆ ವಿಚಾರಕ್ಕೆ ಘರ್ಷಣೆ, 20 ಜನರ ವಿರುದ್ಧ ಪ್ರಕರಣ ದಾಖಲು

ಇವತ್ತು ಮಕ್ಕಳಲ್ಲಿ ಶಾಲಾ ಕೊಠಡಿ ಗುಡಿಸಲು ಹೇಳಿದರೆ ಅಪರಾಧ, ಕಸ ಹೆಕ್ಕಿಸಿದರೆ ಅಪರಾಧ, ಶುಚಿಗೊಳಿಸಿದರೆ ಅಪರಾಧ ಹೀಗೇ ಅಪರಾಧಗಳ ಪಟ್ಟಿಯೇ ಬೆಳೆಯುತ್ತದೆ. ಹಾಗಾದರೆ ಮಕ್ಕಳಲ್ಲಿ ಮಾಡಿಸೋ ಕೆಲಸ ಯಾವುದು? ಇಂದಿನ ಪರಿಸ್ಥಿತಿ ಅವಲೋಕಿಸಿದರೆ ಅತ್ಯಂತ ಕ್ಲಿಷ್ಟಕರವಾದ ವೃತ್ತಿಯೆಂದರೆ ಶಿಕ್ಷಕ ವೃತ್ತಿಯಾಗಿದೆ. ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಡಿಯಿಂದ ಮುಡಿಯವರೆಗೆ ಅವ್ಯವಹಾರ, ನಕಲು ನಡೆಯಲು ಕಾರಣವೇನು?.., ಅದು ಶಾಲೆಯ ಪರೀಕ್ಷೆಯಲ್ಲಿ ಚೀಟಿ ಇಟ್ಟು ಬರೆದ ಪ್ರತಿಫಲನವಾಗಿರಬಹುದಲ್ಲವೇ?… ಪರೀಕ್ಷೆಯಲ್ಲಿ ಚೀಟಿ ಇಟ್ಟರೂ ಶಿಕ್ಷಕರು ಮೌನವಾಗಿರಬೇಕೆಂದು ಸಮಾಜದ ನಿರೀಕ್ಷೆಯೇ?…ಹಾಗಾದರೆ ಪರೀಕ್ಷೆಯೆಂಬ ನಾಟಕವೇಕೆ?… ಹೋಮ್‌ವರ್ಕ್ ಕೊಡದಿದ್ದರೆ ಮೇಲಧಿಕಾರಿಯಿಂದ ತರಾಟೆ. ಹೋಂ ವರ್ಕ್ ಮಾಡಿದ ಬಗ್ಗೆ ವಿಚಾರಿಸಿದರೆ ಮಕ್ಕಳಿಗೆ ಅವಮಾನ. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದರೆ ಶಿಕ್ಷಕರು ಅಪರಾಧಿಗಳು, ಮಾರ್ಕ್ ಹೆಚ್ಚು ಬರಲು ಪ್ರಯತ್ನಿಸಿದರೆ ಮಕ್ಕಳಿಗೆ ಒತ್ತಡ.. ಹೀಗೆ ಮಕ್ಕಳಿಗೆ ರಕ್ಷಣೆ ನೀಡುವ ವಿಪರೀತ ಪ್ರಯತ್ನ ಮಕ್ಕಳ ಒತ್ತಡ ನಿರೋಧಕ ಶಕ್ತಿಯನ್ನೇ ಕಸಿದುಕೊಳ್ಳುತ್ತಿದೆಯೇನೊ ಎನಿಸುತ್ತದೆ.

ಮಕ್ಕಳಲ್ಲಿ ನಿದ್ರಾಹೀನತೆ ಇಂದು ಅಸಹಿಷ್ಣುತೆಗೆ ಬಹುಮುಖ್ಯ ಕಾರಣಗಳಲ್ಲಿ ಒಂದು. ಖಿನ್ನತೆ, ಅತಿಯಾದ ಮೊಬೈಲ್ ಬಳಕೆಗಳಲ್ಲದೆ ಮಾದಕ ವಸ್ತುಗಳು ಮಕ್ಕಳ ಮನಸ್ಸನ್ನು ಕದಡುತ್ತಿದೆ. ಇಂದು ಶಿಕ್ಷಕರು ಅಸಹಾಯಕರಾಗಿದ್ದಾರೆ. ಮಕ್ಕಳನ್ನು ಯಾವ ಬಗೆಯಲ್ಲಿ ನಿರ್ವಹಿಸಬೇಕೆಂಬುದೇ ಯಕ್ಷಪ್ರಶ್ನೆ, ಹೇಗಿರಬೇಕೆಂದು ಹೇಳುವುದಕ್ಕೂ, ಅದನ್ನು ಕಾರ್ಯರೂಪಕ್ಕೆ ತರುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ತರಗತಿಯಲ್ಲಿ ಮಕ್ಕಳನ್ನು ವಿಚಾರಿಸಿದಾಗ ನಾಲ್ಕು ಮಂದಿಯಲ್ಲಿ ಮೊಬೈಲ್ ಪತ್ತೆಯಾಯಿತು. ಮೊಬೈಲ್ ತೆಗೆದು ಒಳಗಿಟ್ಟೆವು. ಆದರೆ ರಾತ್ರಿಪೂರ್ತಿ ನಿದ್ರೆಯಿಲ್ಲ. ಮಕ್ಕಳು ಏನಾದರೂ ಅನಾಹುತ ಮಾಡಿಕೊಂಡರೆ..! ಮರುದಿನ ಗೌರವದಿಂದ ಅವುಗಳನ್ನು ಕೊಟ್ಟು ಕಳಿಸಿದೆವು. ಏಕೆಂದರೆ ನಾವು ಬದುಕಬೇಕಿತ್ತು.

ಇಂತಹದ್ದೇ ಇನ್ನೊಂದು ಪ್ರಸಂಗ ಹುಡುಗನೊಬ್ಬ ಶಾಲೆಗೆ ಆಗಾಗ ತಪ್ಪಿಸುತ್ತಿದ್ದ. ಪೋಷಕರ ಗಮನಕ್ಕೆ ತಂದಿದ್ದೆ. ಅಂದು ಆತ ಶಾಲೆಗೆ ಬಂದಿರಲಿಲ್ಲ. ಸಂಜೆ ಅಪ್ಪನಿಂದ ಷೋನಲ್ಲಿ ಮಗನ ಬಗ್ಗೆ ವಿಚಾರಿಸಿದರು. ಮಗ ಶಾಲೆಗೆ ಬಂದಿಲ್ಲ. ಅಂದೆ. ಆಗ ಮೊಬೈಲ್ ಮಗನ ಕೈಗೆ ಕೊಟ್ಟರು. “ಸರ್, ನೀವ್ಯಾಕೆ ಸುಳ್ಳು ಹೇಳೋದು, ನಾನು ಕ್ಲಾಸಲ್ಲೇ ಕುಳಿತಿದ್ದೆ. ನೀವೇ ಇವತ್ತು ಶಾಲೆಗೆ ಬಂದಿಲ್ಲ ಅನ್ನಬೇಕೆ. ನನಗೆ ಶಾಕ್, “ನಾನು ಎಂಟು ಗಂಟೆಗೆ ಶಾಲೆಯಲ್ಲಿದ್ದೆ. ನಿನ್ನ ಕ್ಲಾಸಿಗೆ ಎರಡು ಅವಧಿ ಪಾಠ ಮಾಡಿದ್ದೆ’ ಅಂದಾಗ “ಸರ್, ನೀವು ಈ ರೀತಿ ಸುಳ್ಳು ಯಾಕೆ ಹೇಳುತ್ತೀರಿ? ಮಾಸ್ಟಾಗಿ ನೀವು ಸುಳ್ಳು ಹೇಳಬಹುದಾ?” ಎಂದು ಕೇಳಿದಾಗ ನಾನು ತತ್ತರಿಸಿದ್ದೆ. ಕರೆ ಕಟ್ ಮಾಡಿ ಒಂದಿಬ್ಬರು ವಿದ್ಯಾರ್ಥಿಗಳಲ್ಲಿ ವಿಚಾರಿಸಿದೆ. ಶಿಕ್ಷಕರಲ್ಲೂ ವಿಚಾರಿಸಿದೆ. ಆತ ಶಾಲೆಗೆ ಬಂದಿಲ್ಲ ಎಂಬುವುದನ್ನು ದೃಢಪಡಿಸಿದೆ ಮತ್ತೆ ಕಾಲ್ ಮಾಡಿದೆ, ತೆಗೆದದ್ದು ಅಪ್ಪ. ಅಪ್ಪನಿಗೆ ನನ್ನ ಮಾತಲ್ಲಿ ನಂಬಿಕೆ ಬರಲೇ ಇಲ್ಲ. “ನನ್ನ ಮಗ ಯಾಕೆ ಸುಳ್ಳು ಹೇಳುತ್ತಾನೆ?” ಎಂದು ನನ್ನನ್ನೇ ಪ್ರಶ್ನಿಸಬೇಕೇ?..

ನಾವೆಲ್ಲಾ ಈ ನಿಟ್ಟಿನಲ್ಲಿ ಯೋಚಿಸುವ ಅಗತ್ಯವಿದೆ. ಇಲ್ಲವಾದಲ್ಲಿ ಕೆಲವೇ ವರ್ಷಗಳಲ್ಲಿ ತೀರಾ ಹದಗೆಟ್ಟ ಪರಿಸ್ಥಿತಿ ನಮ್ಮದಾಗಬಹುದು. ಸರಿಪಡಿಸಲಾರದ ಸ್ಥಿತಿಗೆ ತಲುಪಿದಾಗ ಪಶ್ಚತ್ತಾಪವೊಂದೇ ನಮ್ಮ ಮುಂದೆ ಉಳಿಯುವ ದಾರಿಯಾಗಬಹುದು, ಹಾಗಾಗದಿರಲಿ.

See also  ವೀರ ನಿಷ್ಠೆಯ ಶರಣರು ಮಡಿವಾಳ ಮಾಚಿದೇವರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

34905
ಮಣಿಕಂಠ ತ್ರಿಶಂಕರ್

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು