News Kannada
Tuesday, March 21 2023

ವಿಶೇಷ

ನೋಡ ಬನ್ನಿ ಕನ್ನಡದ ಕಾಶಿ ಬನವಾಸಿಯ ಕನ್ನಡ ರಾಜ್ಯೋತ್ಸವ ಸಪ್ತಾಹ

Kannada Rajyotsava Saptah of Kasi Banavasi
Photo Credit : By Author

ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ಆಗುವುದು ಎಂಬ ನುಡಿಯಂತೆ ಅಂದು ಲೋಕಧ್ವನಿ ದಶಮಾನೋತ್ಸವ ಅಂಗವಾಗಿ 1992ರಲ್ಲಿ ಹಮ್ಮಿಕೊಂಡಿದ್ದ ಬನವಾಸಿಯ ಕನ್ನಡ ರಾಜ್ಯೋತ್ಸವದ ಸಪ್ತಾಹ ಆಚರಣೆಯೇ ಇಂದಿನ ಕದಂಬೋತ್ಸವಕ್ಕೆ ನಾಂದಿಯಾಗಿದೆ.

ಸರ್ವೆ ಸಾಮಾನ್ಯವಾಗಿ ಬನವಾಸಿ ಎಂದೊಡನೆ ಆದಿಕವಿ ಪಂಪ, ಕದಂಬರು, ಮಧುಕೇಶ್ವರ ದೇವಾಲಯ ನೆನಪು ಬರುತ್ತದೆ. ಆದರೆ ಬನವಾಸಿ ಕನ್ನಡದ ಕಾಶಿ, ಕನ್ನಡದ ಪ್ರಥಮ ರಾಜಧಾನಿ ಎಂಬ ವಿಚಾರ ಬರುವುದು ಕಡಿಮೆ. ಬನವಾಸಿ ಕನ್ನಡದ ಪ್ರಥಮ ರಾಜಧಾನಿ ಎಂಬ ವಿಚಾರ ಮುಂಚೂಣಿಯಲ್ಲಿ ತರಬೇಕೆಂಬ ಉದ್ದೇಶದಿಂದ ಜನಜಾಗೃತಿಗಾಗಿ ವರ್ಷಕ್ಕೊಮ್ಮೆಕನ್ನಡ ರಾಜ್ಯೋತ್ಸವ ಬನವಾಸಿಯಲ್ಲಿ ಆಚರಣೆಗೆ ಬಂದಿತು.
ಆಂದಿನ ಬನವಾಸಿ ಗತವೈಭವದ ಸಾಂಸ್ಕೃತಿಕತೆಯ ಇತಿಹಾಸ ವ್ಯಾಪಕವಾಗಿ ತಿಳಿಸಬೇಕೆಂದು ಸಂಕಲ್ಪಿಸಿತು.

ಪ್ರಥಮವಾಗಿ ಜಿಲ್ಲೆಯ ಪ್ರಥಮ ದಿನ ಪತ್ರಿಕೆ ಸಂಪಾದಕರಾದ ಗೋಪಾಲಕೃಷ್ಣ ಆನವಟ್ಟಿ ಹುಟ್ಟು ಹಾಕಿದ ರಾಜ್ಯೋತ್ಸವದ ಸಾಮಾಜಿಕ ಪ್ರಜ್ಞೆಗೆ ಇಂಬಾಗಿ ಬಂದಿದ್ದು ಕದಂಬೋತ್ಸವ. ಆನವಟ್ಟಿ ಅವರ ನೇತೃತ್ವದಲ್ಲಿ ಆರಂಭಗೊಂಡ ಉತ್ಸವ ಸಮಿತಿಯ ಅಧ್ಯಕ್ಷರಾದರು, ದ.ರಾ.ಭಟ್ ಕಾರ್ಯಾಧ್ಯಕ್ಷರಾಗಿ, ರಾಘವೇಂದ್ರ ಆನವಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ, ಎಂಟು ಉಪ ಸಮಿತಿ ರಚಿತವಾಗಿ 250 ಕಾರ್ಯಕರ್ತ ಸಮಿತಿ ರಚನೆಗೊಂಡಿತು. ಎಲ್ಲಾಸದಸ್ಯರ ಪರಿಶ್ರಮ ಫಲವಾಗಿ ಹೊಮ್ಮಿದ ರಾಜ್ಯೋತ್ಸವದಲ್ಲಿ ಬನವಾಸಿ ಗತವೈಭವ ಸಾಕಾರಗೊಂಡಿತು. ಅಂದಿನ ಕ.ಸಾ.ಪ ಅಧ್ಯಕ್ಷ ಗೊ. ರೂ.ಚನ್ನಸಪ್ಪ, ಗೆಜೆಟೀಯರ್ ಸಂಪಾದಕರಾದ ಸೂರ್ಯನಾಥ ಕಾಮತ್, ಮಾಜಿ ಸಂಪಾದಕ ಕೆ.ಅಭಿಶಂಕರ್, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶ್ರೀಧರ್, ಜಿಲ್ಲಾಧಿಕಾರಿ ಆಗಿದ್ದ ಪ್ರದೀಪ್ ಸಿಂಗ್ ಕರೋಲ ಅವರುಗಳು ರಾಜ್ಯೋತ್ಸವದ ವೈಭವದ ಮೆರವಣಿಗೆ ನೋಡಿ ವಿಸ್ಮಿತಗೊಂಡಿದ್ದು ಸತ್ಯವೇ ಆಗಿತ್ತು.

ಅಂದು ಹಾರಿಸಿದ ಕದಂಬ ಶ್ವೇತ ವರ್ಣದ ಧ್ವಜದಲ್ಲಿ ಕದಂಬ ಲಾಂಛನ, ಕದಂಬ ಜ್ಯೋತಿ ಮುಂತಾದವುಗಳಿಂದ ಕನ್ನಡ ಉತ್ಸವ 1995ರವರೆಗೂ ಜನರೇ ನಿಸ್ವಾರ್ಥವಾಗಿ ರಾಜ್ಯೋತ್ಸವ ನಡೆಸುತ್ತಾ ಬಂದಂತಹ ಫಲವೆ ಕದಂಬೋತ್ಸವ ಆಗಿದೆ.

ಬನವಾಸಿಯಲ್ಲಿ ಕದಂಬೋತ್ಸವ ಆಚರಿಸಬೇಕೆಂಬ ಜನತೆಯ ಹೆಬ್ಬಯಕೆ ಹಾಗೂ ಬನವಾಸಿ ಮಹತ್ವ ಅರಿತ ಅಂದಿನ ಉ.ಕ.ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸರ್ಕಾರದ ಮಟ್ಟದಲ್ಲಿ ಬನವಾಸಿಯಲ್ಲಿ ಕದಂಬೋತ್ಸವ ಆಚರಿಸ ಬೇಕೆಂಬದನ್ನು ಮನಗಾಣಿಸಿ ಪ್ರತಿವರ್ಷ ಎರಡು ದಿನ ಕಾಲ ಬನವಾಸಿಯಲ್ಲಿ ಕದಂಬೋತ್ಸವ ಕನ್ನಡ ನಾಡ ಹಬ್ಬ ನಿರಂತರ ನಡೆಯ ಬೇಕೆಂದು ಸರ್ಕಾರಿ ಆಜ್ಞೆ ನಂ 370 ಬೆಂಗಳೂರು, ದಿನಾಂಕ 27 ಸೆಪ್ಟೆಂಬರ್ 1996ರಲ್ಲಿ ಸರ್ಕಾರದ ಪತ್ರಾಂಕಿತ ಪತ್ರದಲ್ಲಿ ಘೋಷಿಸಿಸುವುದರ ಮೂಲಕ ಜಿಲ್ಲೆಯ ಜನತೆಯಿಂದ ದೇಶಪಾಂಡೆ ಮಾನ್ಯರಾದರು.
ಕನ್ನಡ ನಾಡಿನ ಉಜ್ವಲ ಭವಿಷ್ಯಕ್ಕೆ ಕದಂಬರು ಕೊಟ್ಟ ಕಾಣಿಕೆ ಬನವಾಸಿಯಿಂದಲೆ ಆಗಿದ್ದರಿಂದ ಬನವಾಸಿಯ ಇತಿಹಾಸಕ್ಕೆ ಕದಂಬೋತ್ಸವವು ನಾಂದಿ ಹಾಡಿತು.

ಇತಿಹಾಸದಲ್ಲಿ ಬನವಾಸಿ ಕನ್ನಡಿಗರ ಪ್ರಪ್ರಥಮರಾಜಧಾನಿಯಾಗಿ ವೈಭವದಿಂದ ಮೆರೆದಿದ್ದಕ್ಕೆ ಈಗಿನ ಕದಂಬೋತ್ಸವ ಸಾರ್ಥಕತೆಯನ್ನು ನೀಡುತ್ತಿದೆ. ಮಯೂರಶರ್ಮ(ವರ್ಮ)ನಿಂದ ಹಿಡಿದು ಎಲ್ಲಾ ಕದಂಬ ದೊರೆಗಳು ಬನವಾಸಿಯನ್ನು ರಾಜಧಾನಿಯನ್ನಾಗಿಸಿ ಕೊಂಡು ಸಮಸ್ತ ಕುಂತಲ ರಾಜ್ಯವನ್ನು ಅತ್ಯಂತ ವೈಭವದಿಂದ ಆಳಿದರೆಂದು ಚಂದ್ರವಳ್ಳಿ ಶಾಸನ ಕಾಕುಸ್ವ ವರ್ಮನ ತಾಳಗುಂದ ಶಾಸನ, ರವಿವರ್ಮನ ಗುಡ್ನಾಪುರ ಶಾಸನ ಮುಂತಾದ ಶಾಸನಗಳಿಂದ ತಿಳಿದು ಬರುತ್ತದೆ.

See also  ಸುರತ್ಕಲ್: ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾದ ಯುವಕನ ಮೃತದೇಹ ಪತ್ತೆ

ಬನವಾಸಿ ಚತುರ್ ಯುಗಗಳಲ್ಲಿಯು ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಟ್ಟಿದೆ ಎಂಬುದು ಇತಿಹಾಸದಿಂದ ತಿಳಿದುಬರುತ್ತದೆ. ಕೃತಯುಗದಲ್ಲಿ ಕೌಮುದಿ, ತ್ರೇತಯಲ್ಲಿ ಬೈಂದವಿ, ದ್ವಾಪರದಲ್ಲಿ ಜಯಂತಿ, ಕಲಿಯುಗದಲ್ಲಿ ಬನವಾಸಿ ಎಂದು ಹೆಸರಿಸಲ್ಪಟ್ಟಿದೆ. ವೇದಶಾಸ್ತ್ರಪಾರಂಗತನಾದ ಮಯೂರ ಶರ್ಮ ಪಲ್ಲವರಿಂದ ಅವಮಾನಿತನಾಗಿ, ಪಲ್ಲವರ ಸೋಲಿಸಲು ಸೈನ್ಯ ಕಟ್ಟಿ ಪಲ್ಲವರ ವಿರುದ್ಧ ಹೋರಾಡಿ ಅವರನ್ನು ಸೋಲಿಸಿ ಬನವಾಸಿಗೆ ಬಂದು ಸ್ವತಂತ್ರ ರಾಜ್ಯ ಕಟ್ಟಿರುತ್ತಾನೆ.

ಬನವಾಸಿ ಕನ್ನಡಿಗರ ಪ್ರಥಮ ರಾಜಧಾನಿಯಾಗಿ ಕದಂಬ ರಾಜ್ಯವಾಗಿ ಕರ್ನಾಟಕ ಇತಿಹಾಸದಲ್ಲಿ ವಿಜೃಂಭಿಸುತ್ತಿದೆ. ಕ್ರಿ.ಶ.3ನೇ ಶತಮಾನದ ಕೊನೆ ಭಾಗದಿಂದ 4ನೇ ಶತಮಾನದ ಆರಂಭದಲ್ಲಿ ಕದಂಬರ ಆಳ್ವಿಕೆಯು ಬನವಾಸಿಯಿಂದ ಆಳ್ವಿಕೆ ನಡೆಸಿದೆ. ಮಯೂರವರ್ಮನ ನಂತರ ಮೂರು ಶತಮಾನಗಳ ಕಾಲ ಬನವಾಸಿ ಸ್ವತಂತ್ರ ಕನ್ನಡ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿದ್ದು ಕರ್ನಾಟಕ ಇತಿಹಾಸದಲ್ಲಿ ಕಾಣಬಹುದಾಗಿದೆ.

ಇದೀಗ ಕದಂಬೋತ್ಸವದಿಂದ ಕದಂಬರ ಇತಿಹಾಸ ಬಿಚ್ಚಿಡುತ್ತಿದೆ.ಬನವಾಸಿ, ಕದಂಬರ ಆಳ್ವಿಕೆಯ ಕೇಂದ್ರವಾಗಿ, ಕನ್ನಡಕ್ಕಾಗಿ ಕಟ್ಟಿದ ನಾಡಾಗಿ, ಸಾಹಿತ್ಯ,ಕಲೆ, ಸಂಸ್ಕೃತಿಗಳ ನೆಲೆಯಾಗಿ, ನಿಸರ್ಗದ ಸೊಬಗಿನ ತಾಣವಾಗಿ,ಕವಿಗಳ ಸ್ಪೂರ್ತಿ ಯ ಸೆಲೆಯಾಗಿರುವ ಬನವಾಸಿಯಲ್ಲಿ ನಡೆಯುವ ಕದಂಬೋತ್ಸವ ಕಾರ್ಯಕ್ರಮದಿಂದ ಬನವಾಸಿ ಸರ್ವೊತ್ತಮವಾಗಿ ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಬೇಕಾಗಿದೆ.

ಆದಿಕವಿ ಪಂಪನಿಂದ “ಆರಂಕುಶವಿಟ್ಟುಡಂ ನೆನವುದೆಮ್ಮ ಮನಂ ಬನವಾಸಿ ದೇಶಮಂ”, “ಮರಿದುಂಬಿಯಾಗಿ ಮೋಣ್ ಕೋಗಿಲೆಯಾಗಿ ಪುಟ್ಟುವುದು ನಂದನವನದೊಳ್ ವನವಾಸಿ ದೇಶದೊಳ್ “ಎಂದು ಪ್ರಶಂಸಲ್ಪಟ್ಟ ಬನವಾಸಿ ಪುನಃ ತನ್ನ ಇತಿಹಾಸದ ಮೆರುಗನ್ನು ಹೊಂದುವಂತಾಗಲಿ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

34905
ಮಣಿಕಂಠ ತ್ರಿಶಂಕರ್

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು