ಚಾಮರಾಜನಗರ: ಸ್ಥಳೀಯ ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ನಡೆದ ಚಿಣ್ಣರ ಬೇಸಿಗೆ ಸಂಭ್ರಮ ಶಿಬಿರವು ಸಂಪನ್ನಗೊಂಡಿದೆ.
ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ದಾನೇಶ್ವರೀಜಿಯವರ ನೇತೃತ್ವದಲ್ಲಿ ನಡೆದ ಶಿಬಿರವು ಚಿಣ್ಣರಿಗೆ ಪ್ರತಿನಿತ್ಯ 10 ರಿಂದ 11 ರವರೆಗೆ ಧ್ಯಾನ ಮತ್ತು ಜ್ಞಾನ ನೈತಿಕ ಮೌಲ್ಯ ಶಿಕ್ಷಣ, ಪ್ರಶ್ನಾವಳಿಗಳು ತಮ್ಮಲ್ಲಿರುವ ನಿಶಕ್ತತೆಗಳನ್ನು ನಿರ್ಮೂಲನೆ ಮಾಡಿಕೊಳ್ಳುವುದು, ವಿಶೇಷತೆಗಳನ್ನು ತಮ್ಮದನ್ನಾಗಿಸುವ ಕಲೆಯನ್ನು ಜಾಗೃತಗೊಳಿಸಲಾಯಿತು. ಜೀವನ ಮೌಲ್ಯಗಳಾದ ರಾತ್ರಿ ಬೇಗ ಮಲಗುವುದು, ಪರಮಾತ್ಮನಿಗೆ ಗುಡ್ ನೈಟ್ ಹೇಳುವುದು, ಬೆಳಗ್ಗೆ ಬೇಗ ಏಳುವುದು ಪರಮಾತ್ಮನಿಗೆ ಗುಡ್ ಮಾರ್ನಿಂಗ್ ಮಾಡುವುದು, ಗುರು ಹಿರಿಯರಿಗೆ ಗೌರವಿಸುವುದು ವಂದಿಸಿ ಆಶೀರ್ವಾದ ಪಡೆಯುವುದು, ಆಯಾ ದಿನದ ಪಾಠ ಪ್ರವಚನಗಳನ್ನು ಓದಿ ಮನನಮಾಡಿಕೊಳ್ಳುವ ವಿಧಾನ ಗಳನ್ನು ತಿಳಿಸಿಕೊಡಲಾಯಿತು.
ಶಿಬಿರಾರ್ಥಿಗಳಿಗೆ ಹಾಡುಗಾರಿಕೆ ನೃತ್ಯ ಚಿತ್ರಕಲೆ ಭಾಷಣ ನಾಯಕತ್ವ ಗುಣ ನಿರ್ಗತಿಕರಿಗೆ ಸಹಾಯ ಶರೀರದ ಸ್ವಚ್ಚತೆಯ ಜೊತೆಗೆ ಮನಸ್ಸಿನ ಸ್ವಚ್ಛತೆ, ಪ್ರಕೃತಿಯ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಯಿತು. ಮಧ್ಯಾಹ್ನ ತಂಪು ಪಾನೀಯ ಭೋಜನವನ್ನು ಏರ್ಪಡಿಸಲಾಗಿತ್ತು. ಹಾಗೂ ವಿವಿಧ ಸ್ಪರ್ಧೆಗಳಾದ ಏಕಾಗ್ರತೆಯ ಆಟ ಲೆಮನ್ ಸ್ಪೂನ್, ಮ್ಯೂಸಿಕಲ್ ಚೇರ್, ಬಲೂನ್ ಓಟ , ಒಗಟು ಬಿಡಿಸುವುದು, ಪ್ರಶ್ನಾವಳಿಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿಜೇತರಾದವರಿಗೆ ಅತ್ಯಾಕರ್ಷಕ ಬಹುಮಾನ ನೀಡಲಾಯಿತು.
ಈ ವೇಳೆ ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ಮಾತನಾಡಿ ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ಮಾಡಬೇಕಾದರೆ ಗುರುಕುಲ ಪದ್ದತಿಯಲ್ಲಿ ಚಾಲ್ತಿಯಲ್ಲಿತ್ತು. ರಾಮ ಕೃಷ್ಣಾಧಿಯಾಗಿ ಗುರುಕುಲ ಪದ್ಧತಿಯಲ್ಲಿ ಅಭ್ಯಾಸ ಮಾಡಿದರು. ಅವರು ಕಾಡಿಗೆ ಹೋಗಿ ಕಟ್ಟಿಗೆ , ನೀರು ತರುತ್ತಿದ್ದರು ಹೀಗೆ ಗುರುಗಳ ಸೇವೆ ಮಾಡಿದ ನಂತರ ವಿದ್ಯಾಭ್ಯಾಸ ಮಾಡುತ್ತಿದ್ದರು. ಇಂದಿನ ಶಿಕ್ಷಣ ಪದ್ದತಿ ತಳಪಾಯರಹಿತ ಶಿಕ್ಷಣ ಪದ್ದತಿಯಾಗಿದೆ. ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಿ ಮಾಘಸ್ನಾನ ಮಾಡಿಸುವಂತಾಗಿದೆ. ಮಾರಲ್ ಶಿಕ್ಷಣ ಕೊಡದೆ ಇರುವುದರಿಂದ ಅವರ ಜೀವನ ಕ್ವಾರಲ್ ಆಗಿಬಿಟ್ಟಿದೆ. ಕೇವಲ ಸರ್ಟಿಫಿಕೇಟ್, ಹಣ ಸಂಪಾದನೆಯ ಶಿಕ್ಷಣವನ್ನು ಕೊಡುತ್ತಾ ಇದ್ದೇವೆ ಹೊರತು ಅವರ ಜೀವನದಲ್ಲಿ ಬರುವ ಪರೀಕ್ಷೆ ಪರಿಸ್ಥಿತಿಗಳನ್ನು ಎದುರಿಸುವ ಶಕ್ತಿಯನ್ನು ತುಂಬುತ್ತಿಲ್ಲ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಓಂಶಾಂತಿ ನ್ಯೂಸ್ ಸರ್ವಿಸ್ ನ ಬಿ.ಕೆ.ಆರಾಧ್ಯ, ಡಾ. ವಿನಯ್, ಗೀತಾ, ಆಶಾ, ಶ್ರೀನಿವಾಸ, ಸತೀಶ, ಗೋವಿಂದರಾಜು, ಶೋಭಾ, ಸುಧಾ, ಸರಳ, ತುಳಸಿ, ಮರಗತಮ್ಮ, ಪ್ರಮಿಳಾ ಊದಗಡ್ಡಿ ಮಹೇಶ ಹಾಜರಿದ್ದರು.