News Karnataka Kannada
Friday, April 26 2024
ಅಂಕಣ

ಕೌನ್ಸೆಲಿಂಗ್ ಮಾಡುವಾಗ ನಾವು ಕೇವಲ ಮಾತನಾಡುತ್ತೇವೆ. ಅದಕ್ಕಾಗಿ ನಾವು ತಜ್ಞರನ್ನು ಏಕೆ ಸಂಪರ್ಕಿಸಬೇಕು?

Photo Credit :

ಕೌನ್ಸೆಲಿಂಗ್ ಮಾಡುವಾಗ ನಾವು ಕೇವಲ ಮಾತನಾಡುತ್ತೇವೆ. ಅದಕ್ಕಾಗಿ ನಾವು ತಜ್ಞರನ್ನು ಏಕೆ ಸಂಪರ್ಕಿಸಬೇಕು?

ಕೌನ್ಸೆಲಿಂಗ್ ಅನ್ನುವುದು ಕೇವಲ ಮಾತನಾಡುವುದಷ್ಟೇ ಎಂಬುವುದು ತಪ್ಪು ಕಲ್ಪನೆ. 

ಕೌನ್ಸೆಲಿಂಗ್ ನಲ್ಲಿ ಮಾತನಾಡುವುದು ಒಂದು ಬಹು ಮುಖ್ಯ ಅಂಶವೇ ಆದರೂ ಅದು ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ.  

ಕೌನ್ಸೆಲಿಂಗ್ ನಲ್ಲಿ ಇನ್ನೂ ಅನೇಕ ಪ್ರಕ್ರಿಯೆಗಳಿವೆ. ಉದಾಹರಣೆಗೆ, ಕ್ಲೈಂಟ್ ತನ್ನ ಸಮಸ್ಯೆಯನ್ನು ಮಾತನಾಡುತ್ತಿರುವಾಗ, ಮನಶ್ಶಾಸ್ತ್ರಜ್ಞ ಅಥವಾ ಮನೋವೈದ್ಯರು ಸಮಸ್ಯೆಯ ಮೂಲ ಕಾರಣಗಳನ್ನು ಅಥವಾ ಕೆಲವು ಭಾವನೆಗಳನ್ನು ಹುಟ್ಟುಹಾಕಲು ಕಾರಣವಾದ ಪ್ರಚೋದಕಗಳನ್ನು ಕಂಡು ಹಿಡಿಯುತ್ತಾರೆ. ಇದಲ್ಲದೆ, ಸಮಸ್ಯೆಯ ಬಗ್ಗೆ ಕೆಲವು ಒಳನೋಟಗಳನ್ನು ಪಡೆಯಲು ಅವರು ಕ್ಲೈಂಟ್‌ಗೆ ಸಹಾಯ ಮಾಡುತ್ತಾರೆ.
ಈ ಎಲ್ಲಾ ಸಂಗತಿಗಳು ಸಾಧ್ಯವಾಗಬೇಕಾದರೆ, ಸಾಕಷ್ಟು ಗಮನವಿಟ್ಟು ಕೇಳಬೇಕು. ಇದನ್ನು ಆಕ್ಟಿವ್ ಲೀಸನಿಂಗ್ (ಸಕ್ರಿಯ ಆಲಿಸುವಿಕೆ) ಅಂತ ಕರೆಯುತ್ತಾರೆ. ಇದು ಮನಃಶಾಸ್ತ್ರಜ್ಞರಲ್ಲಿ ಇರುವ ಮುಖ್ಯವಾದ ಕೌಶಲ್ಯ. 

ಸಕ್ರಿಯ ಆಲಿಸುವಿಕೆಯು ಉತ್ತಮ ಸಂಬಂಧವನ್ನು ಬೆಳೆಸುವಲ್ಲಿ ತಜ್ಞರಿಗೆ ಸಹಾಯ ಮಾಡುತ್ತದೆ ಮತ್ತು ತನ್ಮೂಲಕ  ಕ್ಲೈಂಟ್ ಅವರು ಅನುಭವಿಸುತ್ತಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ತೆರೆದುಕೊಳ್ಳುವಂತೆ ಮಾಡುತ್ತದೆ.

ಕ್ಲೈಂಟ್‌ಗೆ ತಮ್ಮ ಪರಿಸರದಲ್ಲಿ ಅಥವಾ ತಮ್ಮ ವ್ಯವಸ್ಥೆಗಳಲ್ಲಿ (ಕೌಟುಂಬಿಕ ಮತ್ತು ಕಾರ್ಯಕ್ಷೇತ್ರ) ಲಭ್ಯವಿರುವ ಸಂಪನ್ಮೂಲಗಳನ್ನು ಗುರುತಿಸಲು ತಜ್ಞರು ಸಹಾಯ ಮಾಡುತ್ತಾರೆ.

ಮಾನಸಿಕ ಆರೋಗ್ಯ ತಜ್ಞರು ಕ್ಲೈಂಟ್ ಎದುರಿಸುತ್ತಿರುವ ಸಮಸ್ಯೆಗಳನ್ನು ಅವಲೋಕಿಸಿ  ಅವುಗಳನ್ನು ಪರಿಹರಿಸುವುದಕ್ಕೆ ತೆಗೆದುಕೊಳ್ಳಬೇಕಾದ ಸಂಭವನೀಯ ಕ್ರಮಗಳನ್ನು ಸೂಚಿಸುತ್ತಾರೆ.

ಒಂದು ದೊಡ್ಡ ಸಮಸ್ಯೆಯನ್ನು ತುಂಡರಿಸಿ, ಅನೇಕ ಸಣ್ಣ ಸಮಸ್ಯೆಗಳ ಸಮೂಹವನ್ನಾಗಿಸಿ, ಅವುಗಳಲ್ಲಿ ಯಾವವನ್ನು ಮೊದಲು ಪರಿಹರಿಸಿಕೊಳ್ಳಬೇಕು, ಹೇಗೆ ಪರಿಹರಿಸಿಕೊಳ್ಳಬೇಕು ಮುಂತಾದ ವಿಷಯಗಳ ಕುರಿತು ಮಾನಸಿಕ ಆರೋಗ್ಯ ತಜ್ಞರು ಬೆಳಕು ಚೆಲ್ಲುತ್ತಾರೆ. 

ಈ ಪ್ರಕ್ರಿಯೆಗಳ ಮೂಲಕ, ಒಬ್ಬ ವ್ಯಕ್ತಿಯು ತನ್ನ ಸಮಸ್ಯೆಗಳ ಬಗ್ಗೆ ಪ್ರತಿಬಿಂಬಿಸುವುದಕ್ಕೆ  ಮತ್ತು ಅವುಗಳ ಬಗ್ಗೆ ಹೆಚ್ಚಿನ ಒಳನೋಟಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ.

ಆದ್ದರಿಂದ, ಸ್ನೇಹಿತರು ಅಥವಾ ಬಂಧುಮಿತ್ರರ ಜೊತೆ ಮಾತನಾಡುವುದಕ್ಕೂ, ಮಾನಸಿಕ ಆರೋಗ್ಯ ತಜ್ಞರಲ್ಲಿ ಮಾತನಾಡುವುದಕ್ಕೂ ವ್ಯತ್ಯಾಸವಿದೆ. 

ಜೀವನದಲ್ಲಿ ಸ್ನೇಹಿತರು, ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಮಹತ್ವ ಖಂಡಿತವಾಗಿಯೂ ಇದೆ. ಅಲ್ಲದೆ, ಮಾನಸಿಕ ಅಸ್ವಸ್ಥತೆಗಳನ್ನು ಶುಶ್ರೂಷೆ ಮಾಡುವಲ್ಲಿ ಇವರುಗಳ ಪಾತ್ರ ಬಹಳ ಮುಖ್ಯವಾಗುತ್ತದೆ. ಅದರ ಕುರಿತು ಇನ್ನೊಂದು ದಿನ ಚರ್ಚಿಸೋಣ. 

—————————————–

ವೈಯಕ್ತಿಕ ಸಮಾಲೋಚನೆಗಳಷ್ಟೇ ಆನ್‌ಲೈನ್ ಸಮಾಲೋಚನೆಗಳೂ   ಪ್ರಯೋಜನಕಾರಿಯಾಗಿವೆಯೇ?

ಕಳೆದ ಕೆಲವು ವರ್ಷಗಳಲ್ಲಿ, ಆನ್‌ಲೈನ್ ಸಮಾಲೋಚನೆ ಹೆಚ್ಚು ಜನಪ್ರಿಯವಾಗಿದೆ. ಆನ್‌ಲೈನ್ ಕೌನ್ಸೆಲಿಂಗ್ ಸೆಷನ್‌ಗಳನ್ನು ಒದಗಿಸುವ ಸಾಕಷ್ಟು ಸಂಸ್ಥೆ‌ಗಳು ಇವೆ. ಇನ್ನೂ ಅನೇಕ ಮಂದಿ ಮನಃಶಾಸ್ತ್ರಜ್ಞರು ಮತ್ತು ಮನೋವೈದ್ಯರು ಆನ್‌ಲೈನ್ ಸಮಾಲೋಚನೆಯನ್ನು  ನೀಡುತ್ತಿದ್ದಾರೆ.

ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಆನ್‌ಲೈನ್ ಸಮಾಲೋಚನೆಯು ಸಹಾಯವಾಣಿಗಳು, ವೀಡಿಯೊ ಕರೆ ಸಮಾಲೋಚನೆಗಳು ಮುಂತಾದವುಗಳ ರೂಪದಲ್ಲಿ ಜನಪ್ರಿಯವಾಗಿವೆ.

ಆನ್‌ಲೈನ್ ಸಮಾಲೋಚನೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ. 

೧) ಅನಾಮಧೇಯವಾಗಿ ತಜ್ಞರ ಸಲಹೆಗಳನ್ನು ತೆಗೆದುಕೊಳ್ಳಲು ಸುಲಭ ಸಾಧ್ಯವಾಗುತ್ತದೆ.

೨) ಯಾರಿಗೂ ತಿಳಿಸದೆ ಮನಶ್ಶಾಸ್ತ್ರಜ್ಞನನ್ನು ತಲುಪಬಹುದು! ಆದ್ದರಿಂದ ತೀರಾ ವೈಯಕ್ತಿಕ ಸಮಸ್ಯೆಗಳನ್ನೂ ಕೂಡಾ ತಮ್ಮ ಪರಮಾಪ್ತರಿಗೂ ತಿಳಿಯದಂತೆ ಗೌಪ್ಯವಾಗಿಡಬಹುದು.

೩) ಇದು ಪ್ರಯಾಣದ ಸಮಸ್ಯೆಯನ್ನು ಸಹ ಪರಿಹರಿಸಿದೆ. ಮನಶ್ಶಾಸ್ತ್ರಜ್ಞರನ್ನು ಭೇಟಿ ಮಾಡಲು ಜನರು ಪ್ರಯಾಣಿಸಬೇಕಾಗಿಲ್ಲ. ಮನೆಯಲ್ಲೇ ಇದ್ದು ಅಥವಾ ತಮಗೆ ಸುರಕ್ಷಿತವೆನ್ನುವಂತಹ ಸ್ಥಳದಲ್ಲಿ ಇದ್ದುಕೊಂಡು ಸಮಾಲೋಚನೆಯನ್ನು ನಡೆಸಬಹುದು. 

೪) ಆನ್‌ಲೈನ್ ಮೂಲಕ, ಮನಶ್ಶಾಸ್ತ್ರಜ್ಞರ ಆಯ್ಕೆಗಳು ಸಹ ಹೆಚ್ಚು. ಒಬ್ಬರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ವಿಶ್ವದ ವಿವಿಧ ಭಾಗಗಳ ಮನಶ್ಶಾಸ್ತ್ರಜ್ಞರ ಜೊತೆ ಸಮಾಲೋಚನೆಯನ್ನು  ನಡೆಸಬಹುದು. ಆದ್ದರಿಂದ, ಒಬ್ಬರು ತಮ್ಮ ವಾಸಸ್ಥಳದಲ್ಲಿ ಲಭ್ಯವಿರುವ ಮನಶ್ಶಾಸ್ತ್ರಜ್ಞನಿಗೆ ತಮ್ಮನ್ನು ತಾವು ನಿರ್ಬಂಧಿಸಿಕೊಳ್ಳಬೇಕಾಗಿಲ್ಲ.

ಆನ್‌ಲೈನ್ ಕೌನ್ಸೆಲಿಂಗ್‌ಗೆ ಈ ಅನುಕೂಲಗಳು ಇದ್ದರೂ, ಅದರ ಜೊತೆಗೆ ಒಂದಷ್ಟು ಅನಾನುಕೂಲಗಳೂ ಇವೆ.

೧) ವೈಯಕ್ತಿಕ ಸಮಾಲೋಚನೆಗೆ ಆನ್‌ಲೈನ್ ಸಮಾಲೋಚನೆಯು ಪರಿಪೂರ್ಣ ಪರ್ಯಾಯವಲ್ಲ. 

೨) ಆನ್‌ಲೈನ್ ಮಾಧ್ಯಮದಲ್ಲಿ ಚಿಕಿತ್ಸಕನಿಗೆ ವ್ಯಕ್ತಿಯ ದೇಹ ಭಾಷೆ ಬಗೆಗಿನ ಮಾಹಿತಿ ವೈಯಕ್ತಿಕ ಕೌನ್ಸೆಲಿಂಗ್ ಸೆಷನ್ ನಲ್ಲಿ ಸಿಗುವಷ್ಟು ಸಿಗುವುದಿಲ್ಲ.  

೩) ವೈಯಕ್ತಿಕ ಸೆಷನ್‌ಗಳು ಸಲಹೆಗಾರ ಮತ್ತು ಕ್ಲೈಂಟ್‌ನ ನಡುವಿನ ಸಂಬಂಧವನ್ನು ಸುಲಭವಾದ ರೀತಿಯಲ್ಲಿ ನಿರ್ಮಿಸಲು ಸಹಾಯ ಮಾಡುತ್ತದೆ. ಆನ್‌ಲೈನ್ ಮಾಧ್ಯಮದಲ್ಲಿ ಅನೇಕರಿಗೆ ಒಂದು ಸಣ್ಣ ಅಪನಂಬಿಕೆ ಇರುತ್ತದೆ. 

೪) ಆನ್‌ಲೈನ್ ಸೆಷನ್‌ಗಳು ಅನೇಕರಿಗೆ ಆಕರ್ಷಕವಾಗಿದ್ದರೂ, ಕೆಲವು ಮಾನಸಿಕ ಸಮಸ್ಯೆಗಳನ್ನು ಆನ್‌ಲೈನ್ ಕೌನ್ಸೆಲಿಂಗ್‌ಗಿಂತ ವೈಯಕ್ತಿಕ ಸೆಷನ್‌ಗಳ ಮೂಲಕ ಉತ್ತಮವಾಗಿ ಪರಿಹರಿಸಲಾಗುತ್ತದೆ.

ಆದ್ದರಿಂದ ವೈಯಕ್ತಿಕ ಕೌನ್ಸೆಲಿಂಗ್ ಇನ್ನೂ ಅದರ ವಿಶೇಷತೆಯನ್ನು ಹೊಂದಿರುತ್ತದೆ. ಆದಾಗ್ಯೂ, ಮಾನಸಿಕ ಸಮಾಲೋಚನೆಯನ್ನು ಹೆಚ್ಚು ಸುಲಭವಾಗಿ ಮತ್ತು ಪ್ರಪಂಚದಾದ್ಯಂತ ಜನರಿಗೆ ಲಭ್ಯವಾಗುವಂತೆ ಮಾಡಲು ಆನ್‌ಲೈನ್ ಮಾಧ್ಯಮವನ್ನು  ಆರೋಗ್ಯಕರ ರೀತಿಯಲ್ಲಿ ಬಳಸಿಕೊಳ್ಳಬಹುದು.

—————————————–

ಕಾರಣಾಂತರಗಳಿಂದ ಕಳೆದ ವಾರದ ಅಂಕಣ ಪ್ರಕಟವಾಗಿಲ್ಲ. ಇಂದು ಎರಡು ವಾರದ ಬರಹಗಳನ್ನು ಒಟ್ಟಿಗೆ ಪ್ರಕಟಿಸಿದ್ದೇವೆ.

– ಸಂಪಾದಕ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
201
Akshara Damle

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು