News Kannada
Sunday, November 27 2022

ಅಂಕಣ

“ಶ್ರೀಕೃಷ್ಣಾರ್ಪಣಂ”- ಮಮತೆಯ ಮಾತೃಛಾಯೆ - 1 min read

Photo Credit :

ಓಡದಿರೋಡದಿರೋಡದಿರೋ ಗೋವಿಂದ | ಕಂದ |
ಬಾಡುವುದೀ ಬಿರುಬೇಸಗೆಯೊಳ್ ನಿನ್ನಂದ | ಆನಂದ|

ಹೋದರೆ ಹೋಯಿತು ಹೊಸ ಬೆಣ್ಣೆ |
ಸೀದು ಹೋದೀತು ಕಣ್ಣೆ ||
ನಿನ್ನ ಹೂಗಾಲು ಕಂದೆ ಕಂಗಾಲು |
ನನ್ನ ಮನವು ತಂದೆ | ಬನ್ನ ಬಿಡುವುದೊಂದೇ |

ಬಾಲಕೃಷ್ಣ ನವನೀತ ಕದ್ದು ಓಡಲು ಪ್ರಾರಂಭಿಸಿದಾಗ ಮಾತೆ ಯಶೋದೆ ಬಾಲ ಮುಕುಂದನನ್ನು ತಡೆವ ಸುಂದರ ದೃಶ್ಯವಿದು. ” ಅನ್ಯರ ಮನೆಗೇಗಲೇಕೋ ದಾಮೋದರ ಮಾನ್ಯತೆ ಮಾಸುವುದೋ,
ಮೇಲಾದ ಪಾಲ್ಬೆಣ್ಣೆ ನಾನೀವೆ ಸುಂದರ ಸಾಲದೆ ನಿನಗಿನ್ನಿದು” ಎಂದು ಬೆಣ್ಣೆ ಕದಿಯಲು ಹೋಗುತ್ತಿರುವ ತುಂಟ ಕೃಷ್ಣನಿಗೆ ಯಶೋದೆಯಾಡುವ ನುಡಿಯ ಸೊಗಸಿದು. “ಓಟವ ನಿಲ್ಲಿಸು ನಿನ್ನ ಒಡನಾಟವ ಸಲ್ಲಿಸು ಚೆನ್ನ” ಎಂದು ಹೇಳುವ ಜೊತೆಗೆ “ದಾಟದಿರಂಗಳದಂಚನು ಮುನಿವೆನು ಕಾಟವನಿತ್ತರೆ ಗುಮ್ಮನ ಕರೆವೆನು ” ಎಂದು ಕಾಡುವ ಕೃಷ್ಣನನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವ ಜೊತೆಗೆ ಗುಮ್ಮನನ್ನು ಕರೆಯುವೆನು ಎಂದು ಹೆದರಿಸುವ ಯಶೋದೆಯ ಮಾತೃ ವಾತ್ಸಲ್ಯವದು.

ಯಶೋದಾಕೃಷ್ಣ, ರುಕ್ಮಿಣಿ ಕೃಷ್ಣ, ಮತ್ತು ದ್ರೌಪದಿಕೃಷ್ಣವೆಂಬ ಶ್ರೀಮದ್ಭಾಗವತದ ಮೂರು ಪ್ರಕರಣಗಳನ್ನು ಆಯ್ದುಕೊಂಡು ಶತಾವಧಾನಿ ಡಾ. ರಾ. ಗಣೇಶ್ ರವರು ರಚಿಸಿರುವ ಸಾಹಿತ್ಯ ಏಕವ್ಯಕ್ತಿ ಯಕ್ಷಗಾನದ ಪ್ರಯೋಗದಲ್ಲಿ ” ಶ್ರೀಕೃಷ್ಣಾರ್ಪಣಂ ” ಎಂಬ ಹೆಸರಿನಲ್ಲಿ ಜನನಿತವಾದ ದೃಶ್ಯಕಾವ್ಯವಾಗಿದೆ. ಏಕವ್ಯಕ್ತಿ ಯಕ್ಷಗಾನ ಸಾಧಕ ಮಂಟಪ ಪ್ರಭಾಕರ ಉಪಾಧ್ಯ ಮತ್ತು ಅವರ ಸಂಗಡಿಗರು ಸಾದರಪಡಿಸುತ್ತಿದ್ದ ಶ್ರೀಕೃಷ್ಣನ ಬಾಲಲೀಲಾವಿನೋದದ ದಿಗ್ದರ್ಶನದ ಒಂದು ಭಾಗವೇ ಯಶೋದೆಯ ವಾತ್ಸಲ್ಯ ಭಕ್ತಿ. ಶ್ರೀಕೃಷ್ಣನ ಬಾಲಲೀಲೆಯನ್ನು ಉದ್ದೇಶಿಸಿ ಆರ್ ಗಣೇಶ್ ರವರು ಬರೆದಿರುವ ಈ ಸಾಹಿತ್ಯ ಏಕವ್ಯಕ್ತಿ ಯಕ್ಷಗಾನಕ್ಕೆ ಪೂರಕವಾಗಿರುವ ಜೊತೆಗೆ ಯಶೋದೆಯ ಸಾತ್ವಿಕ ಭಾವದ ಆವಿರ್ಭಾವಕ್ಕೆ ರಸನಿಮಿಷದ ವೇದಿಕೆಯನ್ನು ನಿರ್ಮಿಸಿರುವುದು ಸಾಹಿತ್ಯ ಸಿರಿವಂತಿಕೆಯಾಗಿದೆ.

ಬೆಣ್ಣೆಯ ಮುದ್ದೆಯಂತಿದ್ದ ಮುಕುಂದ ಬೆಣ್ಣೆಯನ್ನು ಕದ್ದು ಓಡುತ್ತಿದ್ದ ವೇಳೆ ಆತನನ್ನು ತಡೆದು ನಿಲ್ಲಿಸಿದಾಗ ಕೃಷ್ಣನು ಅಳುವುದಕ್ಕೆ ಪ್ರಾರಂಭಿಸುತ್ತಾನೆ. ಅಳುತ್ತಿರುವ ಬಾಲಕೃಷ್ಣನಿಗೆ ಯಶೋದೆಯು “ಕೋಪವೇನೋ ಕಂದ ತಾಪವೇನೋ ಮುಕುಂದ ಈ ಪರಿಯ ಸಂತಾಪ ಪ್ರಲಾಪವೇನೋ? ತಪ್ಪಾಯಿತೋ ದೊರೆಯೆ ಸೊಪ್ಪಾದೆನೋ ಸಿರಿಯೇ, ಉಪ್ಪು – ತುಪ್ಪಾನ್ನ ತಿನೆ ಬಪ್ಪೆಯೇನೋ” ಎಂದು ಸಮಧಾನಿಸಲೆಳಸುವುದು, ತನ್ನದು ತಪ್ಪಾಯಿತು ಎಂದು ಯಶೋದೆ ನುಡಿದು ಬಾಲನ‌ ಮುಂದೆ ಶರಣಾಗುವ ಮಾತೃ ಛಾಯೆ ಶ್ರೀಕೃಷ್ಣಾರ್ಪಣಂ ಪ್ರಯೋಗದ ಸಾಹಿತ್ಯ ಸಿರಿ ಹೊಸತನದ ಹರಿವನ್ನು ಹರಿಸಿದೆ.

ಮಗನನ್ನು ಸಮಧಾನಪಡಿಸಲು ಬಗೆಬಗೆಯಾಗಿ ಪ್ರಯತ್ನ ಪಡುವಲ್ಲಿ ಯಶೋದೆಯು ಗೆಲ್ಲುತ್ತಾಳೆ. ಬುಗುರಿಯಾಡಿಸುತ್ತಾ ಕೃಷ್ಣನ ಮನಸ್ಸು ಬುಗುರಿಯ ಮೇಗಡೆ ಕೇಂದ್ರೀಕರಿಸಿ ಹಾಲಿನ ಗಡಿಗೆಯನ್ನು ಹಿಡಿದು ಮುಂದುವರಿಯುತ್ತಾಳೆ. ಆಗ ಯಶೋಧೆಯನ್ನು ಕಂಡು ಕೃಷ್ಣ ಕೇಳುವ ಮಾತು ಬಾಲತನದ ಭಾಷೆಯಾಗಿ ಮೂಡಿ ಬಂದಿರುವುದು ಬಲು ಸೊಗಸಾಗಿದೆ.

ಅಮ್ಮ ಕೊಡು ಬಟ್ಟಲನು | ಏಕೆ ಮಗು ? ಪಾಲ್ಕುಡಿಯೆ| ಸುಮ್ಮಾನವಾಯ್ತು ಈಗಲ್ಲ ಹಾಲು |
ಆವ ಹೊತ್ತಿಗೊ ಮತ್ತೆ? ರಾತ್ರಿ ಹಾಲ್ಕುಡಿಯುವುದು | ಆವುದದು ರಾತ್ರಿ? ಕಣ್ ಕತ್ತಲಾಗೆ ||
ತಾನೆ ಕಂಗಳ ಮುಚ್ಚಿ ಕತ್ತಲಾದುದು ನೀಡು | ಪಾನಕ್ಕೆ ಪಾಲನೆಂದುಮ್ಮನನ್ನು |
ಕಾಡುತಿರ್ಪ ಕುಮಾರಲೀಲೆಯಂ ಕಂಡು ಕೊಂ |
ಡಾಡಿ ಮೆಯ್ ಮರೆತಳ್ ಯಶೋದೆ ಮುದದೆ ||

See also  ಸಮಾಜಶಾಸ್ತ್ರ ಪದವಿ ನವ ಸಮಾಜಕ್ಕೊಂದು ಕೊಡುಗೆ

ಅಮ್ಮನ ಬಳಿಯಲ್ಲಿ ” ಬಟ್ಟಲನ್ನು ಕೊಡು ” ಎಂದು ಕೇಳಿದ ಕೃಷ್ಣನಬಳಿಯಲ್ಲಿ ” ಏಕೆ ಮಗು? “ಎಂದು ಪ್ರಶ್ನಿಸುವ ಯಶೋದೆಗೆ ” ಹಾಲುಕುಡಿಯಲು ” ಎಂದು ಕೃಷ್ಣ ಉತ್ತರಿಸುತ್ತಾನೆ. “ಈಗ ಹಾಲು ಕುಡಿಯುವ ಸಮಯವಲ್ಲ” ಎಂದು ಯಶೋದೆ ಉತ್ತರಿಸಿದಾಗ “ಮತ್ತ್ಯಾವ ಹೊತ್ತಿಗೆ ? “ಎಂದು ಬಾಲಕೃಷ್ಣ ಪ್ರಶ್ನೆಯನ್ನು ಕೇಳಲು ಪ್ರಾರಂಭಿಸಿದಾಗ “ರಾತ್ರಿ ಹಾಲು ಕುಡಿಯುವುದು” ಎಂಬುದಾಗಿ ಉತ್ತರಿಸುತ್ತಾಳೆ. “ಆವುದದು ರಾತ್ರಿ?” ಎಂದು ಕೃಷ್ಣನ‌ಮೂಲಕ ಹೇಳಿಸುವ ಕವಿ ಕತ್ತಲೆಯ ಜೊತೆಗೆ ಬಾಲಕೃಷ್ಣನ ಬಾಲಲೀಲೆಯ ಬೆಳಕನ್ನು ಚಿತ್ರಿಸಿರುವುದು, ಕೃಷ್ಣನ ಉತ್ತರವನ್ನು ಕೇಳಿ ಯಶೋದೆ ಕುಮಾರಲೀಲೆಯನ್ನು ಕಂಡು ಸಂತೃಪ್ತಿ ಹೊಂದುವುದು ಸಾಹಿತ್ಯ ಪ್ರೇಮಿಗಳ ಚಿತ್ತವನ್ನು ಸೆಳೆಯುವಲ್ಲಿ ಸಫಲವಾಗಿದೆ.

ತಾಯಿಯಾದವಳು ತನ್ನ ಮಗುವಿಗೆ ತುತ್ತನ್ನು ನೀಡುವ ಸಂದರ್ಭ ಮಾಡುವ ತ್ರಾಸ-ಹಾಸದಾಯಕ ಸ್ಥಿತಿಯನ್ನು ಕವಿ ಈ ಸಂದರ್ಭದಲ್ಲಿ ಚಿತ್ರಿಸಿರುವುದು ಸೊಗಸಾದ ರಚನೆ. ಆಟವಾಡುತ್ತಾ- ಆಟವಾಡಿಸುತ್ತಾ, ಮಗುವಿಗೆ ಊಟ ಮಾಡಿಸುವಲ್ಲಿ ತಾಯಾದವಳು ಮುಂದಾಗುವ ಬಗೆ ಕವಿಯ ಮೂಲಕ ಈ ರೀತಿಯಾಗಿ ಹೊರಹೊಮ್ಮಿದೆ.

ಮಮ್ಮು ತಿನ್ನೆಲೋ | ಮಗುವೆ | ಮಮ್ಮು ತಿನ್ನೆಲೋ |
ಅಮ್ಮನೀವ ಸುಮ್ಮಾನದ ಮಮ್ಮು ತಿನ್ನೆಲೋ | ಅಣ್ಣಗಿಲ್ಲ ಅಪ್ಪಗಿಲ್ಲ ಬೆಣ್ಣೆ ತುಪ್ಪ ಜೇನು ಬೆಲ್ಲ |
ಹಣ್ಣು ಹಾಲು ಸೇರಿದಂಥ ಮಮ್ಮು ತಿನ್ನೆಲೊ |
ಕತೆಯ ಹೇಳುವೆ | ನಿನ್ನ | ಜೊತೆಯೊಳಾಡುವೆ |
ತುತ್ತು ತುತ್ತಿಗೊಂದು ಮುತ್ತನಿತ್ತು ತಿನಿಸುವೆ ||
ಸುತ್ತಿ ಕುಣಿಸುವೆ ನಿನ್ನ ಚಿತ್ತ ತಣಿಸುವೆ |
ಜತನದಿಂದ ನಿನ್ನಿಚ್ಛಾಶತವ ಮಾಡುವೆ ||

ಕೃಷ್ಣನಿಂದಲೇ ತನ್ನ ದಿನಚರಿಯನ್ನು ಆರಂಭಿಸುವ ಯಶೋದೆ ಕೃಷ್ಣನ ಮೂಲಕವೇ ತನ್ನ ದಿನಚರಿಯನ್ನು ಮುಕ್ತಾಯಮಾಡುತ್ತಾಳೆ. “ಇರುಳಾಯಿತು ಕಂದ ಚಂದ ಮರಳೆನ್ನಾನಂದ, ಮಲಗೆನ್ನಯ ಮಣಿ ಬಲು ಭಾಗ್ಯದ ಗಣಿ, ಒಲುಮೆಯ ಅರಗಿಣಿ, ಬಲುಮೆಯ ಮಾಣಿ ” ಎಂದು ಹೇಳಿ ಕೃಷ್ಣನನ್ನು ತೊಟ್ಟಿಲಲ್ಲಿ ಮಲಗಿಸಿ ಜೋಗುಳ ಹಾಡಲು ಮುಂದಾಗುತ್ತಾಳೆ.

ಕಂಗಳ ಒಳಮನೆಯಲ್ಲಿ | ತಿಂಗಳ ತೊಟ್ಟಿಲಿನಲ್ಲಿ ||
ಕನಸಿನ ಹಾಸಿನ ಮೇಲೆ | ಮನಸಿನ ಮುಸುಗೊಳು ತೇಲೆ |
ಪವಳಿಸು ಮೋಹದ ಮುದ್ದೆ | ಸವಿಯುತ ಸಕ್ಕರೆ ನಿದ್ದೆ | ಜೋ ss ಜೋ ssss ಲಾಲಿ

ತಾನು ತೊಟ್ಟಿಲನ್ನು ತೂಗುತ್ತಿರುವ ವೇಳೆ ಜೋರಾಗಿ ಬೀಸುತ್ತಿದ್ದ ಗಾಳಿಯನ್ನು ಕಂಡ ಯಶೋದೆ “ಏನೆಲೆ ತಂಗಾಳಿ ನೀ ಬಲು ಮಾತಾಳಿ ಸದ್ದು ಮಾಡಿಯೇ ನೀ ಜೋಕೆ ನಿದ್ದೆ ನೀಗಿಸುವೆ ನೀನೇಕೆ?” ಎಂದು ಗಾಳಿಯನ್ನು ಪ್ರಶ್ನಿಸಿ, ಕೃಷ್ಣನ ನಿದ್ದೆಗೆ ಭಂಗವನ್ನು ತಾರದಿರು ಎಂದು ನಿವೇದಿಸಿಕೊಳ್ಳುತ್ತಾಳೆ. ಅರಳಲಿರುವ ಹೂವು ಪಿಸು ಮಾತನಾಡುವುದನ್ನು ಕೇಳಿದ ಯಶೋದೆ “ಹೂಗಳೆ ನೀಗಿರಿ ನಿಮ್ಮಯ ಗುಸಗುಸ ಮಾಗಿದ ನಿದ್ದೆ ಮುರುಟೀತು ಶಾಂತಿಯ ಮುದ್ರೆ ಸೊರಗೀತು” ಎಂದು ಹೇಳಿ “ಹೂವುಗಳೇ ಮೌನವನ್ನು ತಾಳಿರೆಂದು” ವಿನಂತಿಸಿಕೊಳ್ಳುತ್ತಾಳೆ. ಮುಕುಂದ ನಿದ್ದೆಗೆ ಜಾರಿರುವುದನ್ನು ಗಮನಿಸುತ್ತಾ ತೊಟ್ಟಿಲನ್ನು ತೂಗುತ್ತಾ ತೂಗತ್ತಾ ಅಲ್ಲೇ ನಿದ್ದೆಗೆ ಜಾರಿ ಬಿಡುತ್ತಾಳೆ.

ಮುಂಜಾನೆಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಯಶೋದೆ ತೊಟ್ಟಿಲ ಬಳಿಯಿಂದೆದ್ದು ತೊಟ್ಟಿಲೊಳಗೆ ಪವಡಿಸಿದ ಮುಂಕುಂದನನ್ನು ಎಬ್ಬಿಸಲು ಪ್ರಾರಂಭಿಸುತ್ತಾಳೆ.

See also  ಷೋಡಶಿಯಾದಳಾ ಮುದಿರಕ್ಕಸಿ.....

ಏಳಯ್ಯ ಬೆಳಗಾಯ್ತು | ಕೇಳಯ್ಯ ಬೆಣ್ಣೆಯ | ಬಾಳಯ್ಯ ಒಳಿತಾಯಿತು |
ಎನ್ನ ಕಂಗಳ ಕಮಲಸುಂದರ | ಎನ್ನ ಮಂಗಳಮಧುರಮಂದಿರ ||

ಬಾಲ‌ಮುಕುಂದ ಏಳದಿರುವುದನ್ನು ಕಂಡು ತನ್ನ ದೈನಂದಿನ ಕೆಲಸಕ್ಕೆ ಮುಂದಾಗುವ ಯಶೋದೆಗೆ ಕೆಲಸದ ವೇಳೆ ಕೃಷ್ಣನು ಸನಿಹವಿರಬೇಕು ಎಂಬ ಬಯಕೆ ತಲೆದೋರುತ್ತದೆ. ಕೃಷ್ಣನ ಸಾಮೀಪ್ಯ ದೊರಕಿದ ಬಗೆ ಭಾಸವಾದ ಕೂಡಲೇ ಸನಿಹವಿರಬಾರದು ಎಂದು ಬಾಲನಿಗೆ ಹೇಳುವ ಸಾಹಿತ್ಯ ಭಾವುಕವಾದ ರಚನೆಯೇ ಸರಿ.

ನೊರೆಹಾಲು ಕರೆವಾಗ ತುರುಗಳ ತಿರಿವಾಗ ಬರಬಾರದೆ | ಬಳಿ | ಇರಬಾರದೆ |
ಬರಬಾರದು | ಬಳಿ | ಇರಬಾರದು ||
ಸಜ್ಜುಗೈದಿರುವಾಗ ಮಜ್ಜಿಗೆ ಕಡೆವಾಗ | ಬರಬಾರದೆ | ಬಳಿ ಇರಬಾರದೆ ||
ಬರಬಾರದು | ಬಳಿ ಇರಬಾರದು |

ಎದ್ದು ಬಂದು ಬೆಣ್ಣೆ ಮೆಲ್ಲಲು ಮೆಲ್ಲನೆ ಬಂದ ಕೃಷ್ಣನನ್ನು ಕಂಡ ಯಶೋಧೆ ಕೃಷ್ಣನನ್ನು ಸ್ನಾನಮಾಡಿಸಲು ಅಣಿಯಾಗುತ್ತಾಳೆ. “ಎಣ್ಣೆಯನೊತ್ತುವೆ ಬಾರೋ ಹೊಸ ಬೆಣ್ಣೆಗೆ ಬಾಯನು ತೋರೋ” ಎಂದು ಹೇಳುತ್ತಾ ಕೃಷ್ಣನಿಗೆ ಮಜ್ಜನ ಮಾಡಲು ತೊಡಗುತ್ತಾಳೆ. ಸ್ನಾನ ಮಾಡಿಸಿದ ತರುವಾಯ ತಂಗದಿರಿನ ಛವಿ ಹೊಂದಿರುವ ಬಾಲಕನನ್ನು ಸಿಂಗರಿಸಲು ಮುಂದಾಗುತ್ತಾಳೆ

ಗೆಜ್ಜೆ ಕಟ್ಟುವೆ ನಿನ್ನ ಹೆಜ್ಜೆಗೆ ಸಜ್ಜುಗೊಳಿಸುವೆ ನಾಡಲು | ತೋರಮುತ್ತಿನ ಹಾರ ಹಾಕುವೆ ಚಾರುತಿಲಕವ ತೀಡುವೆ ||
ಬಣ್ಣ ಬಣ್ಣದ ನವಿಲುಗರಿಯನು ಚಿಣ್ಣ |ಮುಡಿಯೊಳು ಸೂಡುವೆ | ಮಧುರಮುರಳೀನಾದನಾಳವ ಅಧರಪುಟದೊಳು ನೀಡುವೆ ||

ತುಟಿಯ ಪುಟಗಳಿಗೆ ಕೊಳಲನ್ನಿತ್ತು ಮುರಳಿ ನಾದವನ್ನು ಕೇಳುತ್ತಾ ಕಾಲ ಕಳೆಯುತ್ತಿದ್ದ ಯಶೋದೆ ಕಡೆಗೆ ಬಾಲ ಮುಕುಂದನ ಬಾಯೊಳು ಬ್ರಹ್ಮಾಂಡವನ್ನು ಕಂಡು ಬೆರಗಾಗುವ ದೃಶ್ಯ ತಲೆದೋರುತ್ತದೆ. ಯಶೋದೆಗೆ ತನ್ನ ಸುತನ ಅವತರಣದ ಅರ್ಥ ತಿಳಿಯದಿದ್ದರೂ ದಿಗ್ಭ್ರಾಂತಳಾಗುವ ಪರಿ ಈ ಪ್ರಯೋಗದ ಅಂತಿಮ ಭಾಗ.”ಕಲ್ಲು – ಸಕ್ಕರೆ – ಬೆಲ್ಲವೆಲ್ಲ ಮನೆಯೊಳಿರೆ ಖುಲ್ಲ ಮಣ್ಣನು ತಿಂಬರೆ? ಛೀ, ಹೊಲ್ಲ..ತೆರೆ ತೆರೆ ಬಾಯನು ತೆರೆ ಪರಿಕಿಸುವೆನು, ತರವಲ್ಲವೋ ಮೊಂಡಾಟ ,ತುಂಟಾಟ” ಎಂದು ಕವಿ ಯಶೋದೆಯ ಬಳಿಯಲ್ಲಿ ಹೇಳಿಸುವಲ್ಲಿ ಜಗನ್ನಾಟಕ ಸೂತ್ರಧಾರನ ಲೀಲಾ ವಿನೋದ ಸುಂದರವಾಗಿ ಬಿಂಬಿಸಲ್ಪಟ್ಟಿದೆ. ಅಭಿನಯದ ವಿಸ್ತರಣೆಗೆ ಪೂರಕವಾದ ಇಲ್ಲಿನ ಸಾಹಿತ್ಯ ಸರಳವೂ- ಸುಲಭವಾಗಿ ಕಂಡರೂ ಅದರೊಳಗೆ ನಿಹಿತವಾದ ವಾತ್ಸಲ್ಯದ ಸಿರಿವಂತಿಕೆ ನಿತ್ಯ ಶೋಭಿತವಾದುದು. ಏಕವ್ಯಕ್ತಿಯ ಪರಿಮಿತಿಯೊಳಗೆ ಶ್ರೀಕೃಷ್ಣಾರ್ಪಣಂ ಪ್ರಯೋಗದ ಒಳಗೆ ಮೂಡಿರುವ ಯಶೋದೆಯ ವಾತ್ಸಲ್ಯ ಛಾಯೆ ಪುರಾಣದೊಳಗೆ ನವೀನ ಮಾದರಿಯಾಗಿಯೂ- ಮಮತೆಯ ಛವಿಯಾಗಿಯೂ ಮೂಡಿ ಬಂದಿರುವುದು ವಿಶೇಷ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

200
Deevith S. K. Peradi

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು