News Kannada
Saturday, October 08 2022

ಅಂಕಣ

ಕನ್ನಡದೊಳಗುಂಟು… ಹಲವು ಉದ್ಯೋಗದ ನಂಟು..! - 1 min read

Photo Credit :

ಕನ್ನಡದೊಳಗುಂಟು... ಹಲವು ಉದ್ಯೋಗದ ನಂಟು..!

ಕನ್ನಡವೆಂದರೆ ಹಲವರಿಗೆ ನೆನಪಾಗುವುದು ನವೆಂಬರ್ ತಿಂಗಳು. ಮೊದಲ ದಿನ ಕನ್ನಡ ರಾಜ್ಯೋತ್ಸವದ ಶುಭಾಷಯದ ಮೊಬೈಲ್ ಸಂದೇಶ, ಸ್ಟೇಟಸ್ ಹಾಕಿಬಿಟ್ಟರೆ ಮತ್ತೆ ಆ ದಿನ ನೆನಪಾಗುವುದು ಮುಂದಿನ ವರ್ಷ. ಅದೆಷ್ಟೋ ಕನ್ನಡಿಗರಿಗೆ ಒಂದು ದಿನದ ಸರಕಾರಿ ರಜೆಯ ಹರ್ಷ. ಒಂದು ತಿಂಗಳು ಪೂರ್ತಿ ಆಚರಿಸುವ ಹಬ್ಬ ಇದು. ಈ ನೆಲೆಯಲ್ಲಾದರೂ ಕನ್ನಡಕ್ಕೊಂಚೂರು ನೆಮ್ಮದಿ ಸಿಕ್ಕರೆ ಅದೇ ಸ್ವರ್ಗ. ಕನ್ನಡ ಭಾಷೆ ಸರಳ ಸುಂದರ ಭಾಷೆ; ಆದರೆ ಈಗ ಪರಿಶುದ್ಧವಾದ ಕನ್ನಡ ಭಾಷೆ ಬಳಕೆಯಲ್ಲಿಲ್ಲ, ಬಳಕೆಯಲ್ಲಿದ್ದರೂ ಅದು ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತ ಎಂದಾಗಿದೆ. ಯುವ ಜನಾಂಗವನ್ನು ಕನ್ನಡದ ಕನ್ನಡಿಯೊಳಗೆ ಬಂಧಿಸುವುದು ಅದು ಕಷ್ಟಕರವಾದ ಕೆಲಸವಾಗಿಬಿಟ್ಟಿದೆ. ಶಾಲೆಯಿಂದಲೇ ಶುರುವಾಗುವ ಭಾಷೆಯ ತಾರತಮ್ಯಕ್ಕೆ ಯಾರನ್ನು ಹೊಣೆ ಮಾಡಿಯೂ ಪ್ರಯೋಜನವಿಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಅದರೊಟ್ಟಿಗೆ ಹೆಜ್ಜೆಹಾಕುವುದೂ ಅನಿವಾರ್ಯವಾಗಿಬಿಟ್ಟಿದೆ. ಕನ್ನಡ ಭಾಷಿಗರಿಗೆ ಭಾಷಾಭಿಮಾನವಿದ್ದರೂ ಅದನ್ನು ಗಟ್ಟಿಯಾಗಿ ಹೇಳುವ ಪರಿಸ್ಥಿತಿಯಲ್ಲೂ ಅವ್ರಿಲ್ಲ. ಇದೇನು; ಬರೇ ನಕಾರತ್ಮಕವಾಗಿ ಮಾತ್ರ ಮಾತನಾಡುತ್ತಿದ್ದೇನೆ ಎನ್ನುವಿರಾ..! ಹಾಗಾದರೆ ಒಮ್ಮೆ ನಿಮ್ಮ ಮನೆಯ ಕಿಟಕಿ ಬಾಗಿಲು ತೆರೆದು ಅಕ್ಕಪಕ್ಕದ ಮನೆಗಳನ್ನು ಲೆಕ್ಕಹಾಕಿ, ನಿಮ್ಮ ಮನೆಯನ್ನೂ ಸೇರಿಸಿ ಒಟ್ಟು ಎಷ್ಟು ಮನೆಯಲ್ಲಿ ಕನ್ನಡ ಮತ್ತು ಆಂಗ್ಲಮಾಧ್ಯಮದಲ್ಲಿ ಕಲಿಯುವ ಮಕ್ಕಳಿದ್ದಾರೆ ಗುರುತಿಸಿ; ನಿಜ ವಿಷಯ ತಿಳಿಯುತ್ತದೆ. ಅದೇನೆ ಇರಲಿ, ಕೆಲವೊಂದು ಸಕಾರಾತ್ಮಕ ವಿಚಾರಗಳನ್ನೂ ನೋಡೋಣ. ಕನ್ನಡದ ಪದವಿ ಬಗ್ಗೆ ಹಾಗೇ ಒಂಚೂರು ಗಮನ ಹರಿಸೋಣ.

ಕನ್ನಡದಲ್ಲಿ ಬಿ.ಎ./ಎಂ.ಎ. ಪದವಿ:

ಒಂದು ದಶಕದ ಹಿಂದಿನ ಕನ್ನಡ ಪದವಿಯೇ ಬೇರೆ ಈಗಿನ ಕನ್ನಡ ಪದವಿಯ ಗುಣಮಟ್ಟವೇ ಬೇರೆ. ಇನ್ನು ಹತ್ತು ವರ್ಷದ ಬಳಿಕ ಕನ್ನಡದ ನೆಲದಲ್ಲಿ ನಾವೇ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹೋಗುವಂತಹ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಪದವಿಯಲ್ಲಿ ಕನ್ನಡ ಭಾಷೆಯನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡು ಮುಂದಕ್ಕೆ ಸ್ನಾತಕೋತ್ತರ ಪದವಿಯಲ್ಲಿ ಕನ್ನಡ ಎಂ.ಎ. ಮಾಡಿ ಅದರ ಬಳಿಕ ಎಂ.ಫಿಲ್ ಅಥವಾ ಪಿ.ಹೆಚ್.ಡಿ. ಮಾಡಿದರೆ ಕನ್ನಡ ಪದವೀಧರರಾಗುತ್ತೇವೆ. ಹಾಗಾದ್ರೆ ಮುಂದೇನು? ಬರೇ ಉಪನ್ಯಾಸಕನಾಗುವುದಕ್ಕೆ ಮಾತ್ರ ಈ ಪದವಿ ಲಾಯಕ್ಕಾಗಿರುವುದೇ? ಬಹುಶಃ ಅದೇ ಕಾರಣಕ್ಕೆ ಹಲವರು ಪದವಿ ಶಿಕ್ಷಣಕ್ಕೆ ಹಿಂಜರಿಕೆ ಮಾಡಿ; ಬಿ.ಎ. ಮುಗಿಸಿ ತಕ್ಷಣ ಬಿ.ಎಡ್. ಅಥವಾ ಎಂ.ಎಡ್. ಮಾಡಿ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಗೇ ಮೊರೆ ಹೋಗುತ್ತಾರೆ. ಕನ್ನಡದಲ್ಲಿ ಸಂಶೋಧನೆ ಮಾಡುವತ್ತ ವಿದ್ಯಾರ್ಥಿಗಳ, ಶಿಕ್ಷಕರ ಒಲವು ತೀರಾ ಕಡಿಮೆಯಾಗುತ್ತಾ ಬರುತ್ತಿದೆ. ತಾನು ಈ ಭಾಷೆಗೆ ಉತ್ತಮ ಕೊಡುಗೆ ನೀಡಬೇಕು; ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಹಠಕಟ್ಟಿ ನಿಲ್ಲುವ ಯಾವ ವಿದ್ಯಾರ್ಥಿಯೂ ಕರ್ನಾಟಕದಲ್ಲಿ ಸೋಲುವುದಿಲ್ಲ.

ಕನ್ನಡ ಪದವಿಯ ಮುಂದಿರುವ ಸವಾಲುಗಳೇನು?

ಕನ್ನಡ ಪದವಿ ಕೇವಲ ಶಿಕ್ಷಕರಾಗುವುದಕ್ಕೆ ಮಾತ್ರ ಎಂಬ ಕಲ್ಪನೆಯಿದೆ. ಅದೆಷ್ಟೋ ಉದ್ಯೋಗಗಳಿಗೆ ಕನ್ನಡ ವಿದ್ಯಾರ್ಥಿಗಳ ಆಯ್ಕೆಯಾಗದಿರುವುದೇ ಇದಕ್ಕೆ ಕಾರಣ. ಹಾಗಾದರೆ ನಮ್ಮ ಮುಂದಿರುವ ಸವಾಲುಗಳೇನು, ಈ ಪರಿಸ್ಥಿಯಿಂದ ಹೊರಬರುವುದು ಹೇಗೆನ್ನುವುದನ್ನು ಸ್ವಲ್ಪ ಗಮನ ಹರಿಸೋಣ:

See also  ಸುಮಂಗಲಿಯರ ಸಂಕೇತ ಬೆಳ್ಳಿ ಕಾಲುಂಗುರ

* ಬದಲಾಗುತ್ತಿರುವ ಶಿಕ್ಷಣ ಪದ್ದತಿ: ಕ್ಷಿಪ್ರವಾಗಿ ಸಾಗುತ್ತಿರುವ ಈ ಶಿಕ್ಷಣ ವ್ಯವಸ್ಥೆಯಲ್ಲಿ ಕನ್ನಡದವರಾದ ನಾವು ಎಲ್ಲಿ ಹಿಂದುಳಿದು ಬಿಡುತ್ತೇವೋ ಎನ್ನುವ ಧಾವಂತ, ರಾಜಕೀಯದ ಪ್ರಭಾವ ಮತ್ತು ಬಾಹ್ಯ ಒತ್ತಡ ಒಟ್ಟು ಶಿಕ್ಷಣದ ನೀತಿಯನ್ನೇ ಬದಲಿಸಿಬಿಟ್ಟಿದೆ. ಕೇಂದ್ರ ಸರಕಾರದ ನೀತಿಗಳ ಜೊತೆ ಹೊಂದಿಕೊಂಡು ರಾಜ್ಯ ಭಾಷೆಗೆ ಹೆಚ್ಚು ಒತ್ತು ನೀಡಬೇಕಾದ ಅವಶ್ಯಕತೆಯಿದೆ.

* ಕೀಳರಿಮೆ: ಕನ್ನಡ ಮಾಧ್ಯಮದಲ್ಲಿ ಕಲಿತರೆ ಮುಂದಕ್ಕೆ ಉದ್ಯೋಗ ದೊರಕುವುದಿಲ್ಲ ಎಂಬ ಕೀಳರಿಮೆ ನಮ್ಮಲ್ಲಿ ಬೇರೂರಿಬಿಟ್ಟಿದೆ. ಆಂಗ್ಲ ಮಾಧ್ಯಮದಲ್ಲಿ ಓದಿದವರು ದೊಡ್ಡ ಕಂಪೆನಿಗಳಲ್ಲಿ ಅತೀ ಹೆಚ್ಚು ಸಂಬಳ ತಗೊಳ್ಳುತ್ತಾರೆ ಎನ್ನುವ ತಪ್ಪು ಕಲ್ಪನೆ ಮತ್ತು ಹೋಲಿಕೆ ಮಾಡಿಕೊಳ್ಳುವುದೂ ಇದೆ. ಆದರೆ ನಿಜವಾಗಿಯೂ ಹಾಗಿಲ್ಲ. ಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ಸಂವಹನ ಕೌಶಲ್ಯ ಹೊಂದಿದವರು ಖಂಡಿತಾ ಉದ್ಯೋಗ ಪಡೆದುಕೊಳ್ಳುತ್ತಾರೆ.

* ಗಡಿನಾಡ ಶಾಲಾ/ಕಾಲೇಜುಗಳ ಸ್ಥಿತಿ: ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಒಂದು ವರದಿಯನ್ನು ಮಾಡಿತ್ತು; ಅದು ಗಡಿನಾಡ ಶಾಲೆಗಳು ಎದುರಿಸುತ್ತಿರುವ ಕಷ್ಟಗಳ ಬಗ್ಗೆ. ಇಂಗ್ಲೀಷ್ ಮಾಧ್ಯಮದ ಕಡೆ ವಿದ್ಯಾರ್ಥಿಗಳು ಗಮನ ನೀಡುತ್ತಿದ್ದು ದಾಖಲಾತಿ ಕಡಿಮೆಯಾಗಿದ್ದಲ್ಲದೆ ಹತ್ತಕ್ಕಿಂತ ಕಡಿಮೆಯಿದ್ದ ಶಾಲೆಗಳನ್ನು ಮುಚ್ಚಲಾಗಿತ್ತು. ಈ ಸ್ಥಿತಿಯಲ್ಲಿನ ಕನ್ನಡ ವಿದ್ಯಾರ್ಥಿಗಳಲ್ಲಿ ಹಲವರು ಮಲಯಾಳಂ, ತೆಲುಗು ತಮಿಳು ಭಾಷೆಗಳಿಗೂ ಮಾರು ಹೋದರು. ಕಾಲೇಜುಗಳಲ್ಲಿಯೂ ಹಾಗೆ ಪದವಿ ಕಾಲೇಜುಗಳನ್ನು ವರ್ಗಾವಣೆಯೂ ಮಾಡಲಾಗಿತ್ತು. ಕರ್ನಾಟಕ ಸರಕಾರದ ಮಾನ್ಯತೆ ಪಡೆದ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯದ ಶಿಕ್ಷಣ ಎಲ್ಲಾ ಕ್ಷೇತ್ರದಲ್ಲೂ ಪರಿಗಣಿಸಲಾಗುತ್ತದೆ.

* ಉದ್ಯೋಗ ಮಾಹಿತಿ ಕೊರತೆ: ಕನ್ನಡ ಬಿ.ಎ./ಎಂ.ಎ. ಮಾಡಿದವರಿಗೂ ಅನೇಕ ಕಡೆ ಉದ್ಯೋಗಾವಕಾಶಗಳಿರುತ್ತವೆ. ಆದರೆ ಈ ಮಾಹಿತಿ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಅದೆಷ್ಟೋ ಹುದ್ದೆಗಳು ಖಾಲಿಯಿದ್ದರೂ ಭರ್ತಿಯಾಗುವುದಿಲ್ಲ ಹಾಗೆಯೇ ಬೇರೆ ಯಾರೋ ಅನರ್ಹ ವ್ಯಕ್ತಿಯೂ ಆ ಹುದ್ದೆಯನ್ನು ಕಸಿದುಕೊಳ್ಳಬಹುದು. ಈ ಎಲ್ಲಾ ಸವಾಲುಗಳನ್ನು ನಾವು ಎದುರಿಸಿದ್ದಲ್ಲಿ ಖಂಡಿತಾ ಉದ್ಯೋಗದ ನಿರೀಕ್ಷೆ ಹುಸಿಯಾಗದು.

ಉದ್ಯೋಗಾವಕಾಶಗಳು:

 

ಒಂದು ವರದಿ ಹೇಳುವ ಪ್ರಕಾರ ಕರ್ನಾಟಕದಲ್ಲಿ ಕನ್ನಡ ಬಿ.ಎ./ಎಂ.ಎ. ಪದವಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಮಹಿಳೆಯರು 51 ಶೇಕಡಾ ಇದ್ದರೆ, ಪುರುಷರು 49 ಶೇಕಡ. ಆದರೆ ವಾರ್ಷಿಕ ವರಮಾನ ನೋಡುವಾಗ 2 ಲಕ್ಷದಿಂದ 8 ಲಕ್ಷದವರೆಗೆ ಮಹಿಳೆಯರು ಗಳಿಸಿಕೊಂಡರೆ, ಪುರುಷರು 3 ಲಕ್ಷದಿಂದ 11 ಲಕ್ಷದವರೆಗೂ ವಾರ್ಷಿಕ ಆದಾಯ ಪಡೆಯುವವರಿದ್ದಾರೆ.

ಶಿಕ್ಷಕ/ಉಪನ್ಯಾಸಕ ಹುದ್ದೆಯನ್ನು ಹೊರತುಪಡಿಸಿ ಅನೇಕ ಉದ್ಯೋಗಗಳು ಕನ್ನಡ ಬಿ.ಎ./ಎಂ.ಎ. ಪದವೀಧರರಿಗಿದೆ. ಕಂಪೆನಿ ಉದ್ಯೋಗಳು ಕೂಡ ಇವೆ. ಕೆಲವೊಂದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

 • ಪತ್ರಿಕೋದ್ಯಮ ವಿಭಾಗದಲ್ಲಿ ನುರಿತ ಕನ್ನಡ ವಿದ್ಯಾರ್ಥಿಗಳಿಗೆ ಉದ್ಯೋಗಗಳು,
 • ಅನುವಾದಕಾರಾಗಿ ಅನೇಕ ಸರಕಾರಿ ಮತ್ತು ಖಾಸಗಿ ಕಛೇರಿಗಳಲ್ಲಿ,
 • ಸಂಶೋಧಕರಾಗಿ ಕನ್ನಡ ಭಾಷಾ ಅಧ್ಯಯನ ಕೇಂದ್ರಗಳಲ್ಲಿ,
 • ಸರಕಾರಿ ಉದ್ಯೋಗಿಗಳಾಗಿ ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳಲ್ಲಿ,
 • ಕನ್ನಡದ ಟಿವಿ ವಾಹಿನಿಗಳಲ್ಲಿ, ಕಿರುತೆರೆಯಲ್ಲಿ ಬರಹಗಾರರಾಗಿ, ತಪ್ಪು ತಿದ್ದುವವರಾಗಿ, ವಾರ್ತಾ ವಾಚಕರಾಗಿ,
 • ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ, ಸಂಪಾದಕರಾಗಿ, ಸಹಸಂಪಾದಕರಾಗಿ. ಬರಹಗಾರರಾಗಿ,
 • ಆಕಾಶವಾಣಿ ಕೇಂದ್ರಗಳಲ್ಲಿ, ರೇಡಿಯೋ ಎಫ್.ಎಂ, ಕೇಂದ್ರಗಳಲ್ಲಿ,
 • ಗ್ರಾಹಕ ಸಂಪರ್ಕ ಕೇಂದ್ರಗಳಲ್ಲಿ,
 • ದೂರವಾಣಿ ಕೇಂದ್ರಗಳಲ್ಲಿ, ಮಾಹಿತಿ ಕೇಂದ್ರಗಳಲ್ಲಿ,
 • ಪ್ರವಾಸೋದ್ಯಮ ಇಲಾಖೆಯಲ್ಲಿ, ಗೈಡ್ ಗಳಾಗಿ ಪ್ರವಾಸಿತಾಣಗಳಲ್ಲಿ,
 • ಅನೇಕ ಖಾಸಗಿ ಕಂಪೆನಿಗಳಲ್ಲಿ ಮಾಹಿತಿ ನೀಡುವ ಉದ್ಯೋಗದಲ್ಲಿಯೂ, ಅನುವಾದಕರಾಗಿಯೂ,
 • ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳಲ್ಲಿ,
See also  ದೃಶ್ಯ ಕಲೆಯ ಅದೃಷ್ಟದ ನೋಟ…

ಹೀಗೆ ಕನ್ನಡ ಬಿ.ಎ./ಎಂ.ಎ. ಪದವೀಧರರಿಗೆ ಹಲವಾರು ಅವಕಾಶಗಳಿವೆ. ಸ್ಪಷ್ಟವಾದ ಕನ್ನಡ ಉಚ್ಛಾರಣೆ ಮತ್ತು ಚುರುಕು ನಡವಳಿಕೆ ಹಾಗೂ ಸಂವಹನ ಕಲೆಯಿಂದ ಕರಗತನಾದ ಯಾವುದೇ ಕನ್ನಡದ ವಿದ್ಯಾರ್ಥಿ ಖಂಡಿತಾ ತನ್ನ ಕನಸಿನ ಗುರಿಯನ್ನು ಮುಟ್ಟುತ್ತಾನೆ.

ಕೊನೆಗೊಂದು ಕಿವಿಮಾತು:

ಕನ್ನಡದ ಮೇಲಿನ ಅಭಿಮಾನ ಒಂದಂಚಿಗಿದ್ದರೆ, ವರ್ತಮಾನದ ಓಟದ ಇನ್ನೊಂದೆಡೆ. ಕನ್ನಡದ ಮರೆವು ಪ್ರಾರಂಭವಾಗಿದೆ. ಇದು ಹೀಗೆ ಬೆಳೆಯುತ್ತಾ ಹೋದಲ್ಲಿ ಕನ್ನಡ ನಮ್ಮ ನೆಲದ ಕನ್ನಡವಾಗಿ ಉಳಿಯುವುದಿಲ್ಲ. ಈಗಾಗಲೇ ಹಲವು ಭಾಷೆಯ ಪದಗಳು ಈ ಭಾಷೆಯಲ್ಲಿ ಸೇರಿ ಕನ್ನಡದ ಪದಗಳಾಗಿ ಬಿಟ್ಟಿವೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರುವ ‘ಕನ್ನಡತಿ’ ಧಾರಾವಾಹಿಯ ಕೊನೆಗೆ ರಂಜನಿ ರಾಘವನ್ ಹೇಳುವ ‘ಸರಿ ಗನ್ನಡಂ ಗೆಲ್ಗೆ’ ಎಲ್ಲಾ ಶಾಲಾ/ಕಾಲೇಜುಗಳಲ್ಲಿ ಆದಲ್ಲಿ ಬಹುಶಃ ವಿದ್ಯಾರ್ಥಿಗಳಲ್ಲೂ ಕನ್ನಡದ ಸಂಶೋಧನೆಯ ಬಗ್ಗೆ ಆಸಕ್ತಿ ಹುಟ್ಟಬಹುದು. ಕನ್ನಡ ನಮ್ಮ ನೆಲದ ಭಾಷೆ, ಅದು ಅಳಿಯುವು ಉಳಿಯುವುದೂ ನಮ್ಮ ಕೈಲಿದೆ. ಕನ್ನಡದ ಪದವಿ ಮಾಡಿದವನು ಉತ್ತಮ ರೀತಿಯ ಬದುಕು ಸಾಗಿಸಲು ಹಲವು ಅವಕಾಶಗಳಿವೆ. ನಾವು ಬದಲಾಗಬೇಕು ಅಷ್ಟೇ..! ಮಗದೊಮ್ಮೆ ಭೇಟಿ.. ಇನ್ನೊಂದು ಪದವಿಯೊಂದಿಗೆ…

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

197
Ashok K. G.

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು