News Kannada
Friday, December 09 2022

ಅಂಕಣ

ಜನಜಾಗೃತಿಯ ರೂಪಕ “ಘೋರಮಾರಕ”

Photo Credit :

ಜನಜಾಗೃತಿಯ ರೂಪಕ

ಧಾರಿಣಿಯೊಳಿಹ ನರಕುಲಕೆ ಬಲು |

ಘೋರ ಮಾರಕ ಪೀಡೆಯಾಗುತೆ |
ನಾರಕೀಯ ಮಹಾದುರಿತ ದುರ್ಯೋಗಗಳನೊಡ್ಡಿ ||

ಗಾರುಗೆಡಿಸುವ ರುಜಿನಗಳ ಪರಿ |

ವಾರವನು ಭಂಜಿಸುತ ಶುಚಿ ರುಚಿ |
ದೋರಿ ಬಾಳನು ಹಸನುಗೈಯಲಿ ವರದೆ ಕ್ಷೇಮಾಂಬೆ ||

ಯಕ್ಷಗಾನ ಅರ್ಥಧಾರಿ ಭಾಸ್ಕರ ರೈ ಕುಕ್ಕುವಳ್ಳಿ ಅವರ ಕಥಾಸಂಗ್ರಹವನ್ನು ಆಧರಿಸಿ ಕವಿ ಪ್ರೊ. ಅಮೃತ ಸೋಮೇಶ್ವರರು ರಚಿಸಿದ ” ಘೋರಮಾರಕ ” ಯಕ್ಷಗಾನ  ಪ್ರಸಂಗ ಸಮಕಾಲೀನ ಸಮಸ್ಯೆಯೊಂದನ್ನು ಜನಪದ ಮಾಧ್ಯಮದ ಮೂಲಕ ಬಿಂಬಿಸುವ ಅಪೂರ್ವ ಪ್ರಯತ್ನವಾಗಿದೆ. ಏಡ್ಸ್ ಮಹಾವ್ಯಾಧಿಯೇ ಇಲ್ಲಿ ಘೋರಮಾರಕನ ನೆಲೆಯಲ್ಲಿ ಅವತರಿಸಿದ ಪಾತ್ರವಾಗಿದ್ದು ಮಾನವ ಜಗತ್ತನ್ನು ತಲ್ಲಣಗೊಳಿಸುತ್ತಿರುವ ಈ ವ್ಯಾಧಿಯ ಕುರಿತು ಜನಜಾಗೃತಿಯನ್ನು ಮೂಡಿಸಬೇಕು ಎನ್ನುವ ಸದಾಶಯದೊಂದಿಗೆ ಮೂಡಿ ಬಂದಿರುವ ಪ್ರಸಂಗವಾಗಿದೆ.

ಯಕ್ಷಗಾನವೆಂಬ ಕಲಾ ಮಾಧ್ಯಮದ ಮೂಲಕ ಕೇವಲ ಪೌರಾಣಿಕ ಕಥಾನಕಗಳನ್ನಲ್ಲದೆ ಇತರ ವಿಷಯಗಳನ್ನೂ ಸಾದರಪಡಿಸಲು ಸಾಧ್ಯವಿದೆ ಎಂಬುದಕ್ಕೆ ಘೋರ ಮಾರಕ ಯಕ್ಷಗಾನ ನಿದರ್ಶನವಾಗಿ ನಿಂತಿದೆ. ಕಲಾ ಮಾಧ್ಯಮದ ನೆಲೆಗೆ ಒಂದಿನಿತೂ ಧಕ್ಕೆಬಾರದ ರೀತಿಯಲ್ಲಿ ಸಮಕಾಲೀನ ಸಮಾಜಕ್ಕೆ ಸಾರಬೇಕಾದ ಸಂದೇಶವನ್ನು ಯಕ್ಷಗಾನ ರಂಗದ ಮೂಲಕ‌ ಈ ಆಧುನಿಕ ಪ್ರಸಂಗ ಪರಿಣಾಮಯುಕ್ತವಾಗಿ ನೀಡಿದೆ. ಯಕ್ಷಗಾನವೆಂಬ ರಂಗಭೂಮಿಯಲ್ಲಿ ಏಡ್ಸ್ ವ್ಯಾಧಿಯ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಮೈದಳೆದ ಈ ಯಕ್ಷ ಸಾಹಿತ್ಯ ಸೃಜನಶೀಲತೆಯ ದ್ಯೋತಕವೇ ಸರಿ.

ರಾಮಣೀಯಕ ಮಹಾಕೈಲಾಸದಲ್ಲಿ ಶೈಲಜೆಯ ಜೊತೆಗೆ ಲೀಲೆಯಿಂದ ಪ್ರೇಮ ತತ್ತ್ವದ ಬಗ್ಗೆ ಶಿವನು ಮಾತನಾಡುತ್ತಿರಬೇಕಾದರೆ ತ್ರೈಭುವನ ಸಂಚಾರಿಯಾದ ನಾರದನು ಮರ್ತ್ಯಲೋಕದಲ್ಲಾಗುತ್ತಿರುವ ಸ್ವೇಚ್ಛಾಚರಣೆಯ ಬಗ್ಗೆ ಶಿವನಲ್ಲಿ ಅರುಹುತ್ತಾನೆ. ಶೀಲವನು ತೊರೆದು ಮುಕ್ತಕಾಮದ ಭ್ರಮೆಯಲ್ಲಿ ವಿಹರಿಸುತ್ತಿರುವ ಮಾನವರ ಅವಿವೇಕದ ನಡೆಯನ್ನರಿತ ಶಿವನಿಗೆ ನಾರದನು, “ಮಿತಿಯಿರದೆ ಜನಸಂಖ್ಯೆ ವರ್ಧಿಸಿದೆ, ರುಚಿಹೀನ ಚಪಲತೆ ಅತಿವಿಲಾಸವು ಮತಿಯ ಕೆಡಿಸುತಿದೆ, ನುತ ಸದಾಚಾರಂಗಳನು ತಾನತಿಗಳೆದು ಮಧುಪಾನ, ದ್ಯೂತದಿ ಮತಿವಿಕಳರಂದದಲಿ ಮುಳುಗುತ ರತಿಪತಿಯೇ ಪರದೈವವೆಂಬರು” ಎಂಬುದಾಗಿ ತಿಳಿಸಿದಾಗ ಕಾಮಾರಿ ಕನಲುತ್ತಾನೆ. ಮಾನವತೆಯನ್ನು ಮರೆತು ಸೊಕ್ಕಿರುವ ಮನುಜ ಕುಲದ ಹೀನ ರುಚಿಯ ವಿಲಾಸ ಭೋಗವನ್ನು ನಿಲ್ಲಿಸಬೇಕೆಂದು ತನ್ನ ಪಾದವನ್ನು ಮೇದಿನಿಗೆ ಒದೆದಾಗ ಘೋರಮಾರಕನು ಉದ್ಭವಿಸುತ್ತಾನೆ.

ರೌದ್ರಾಕಾರದಿಂದ ಪ್ರಕಟನಾದ ಘೋರಮಾರಕ ತನ್ನ ಸೃಷ್ಟಿಗೆ ಕಾರಣವನ್ನು ಭೂತೇಶನಲ್ಲಿ ಕೇಳಿದಾಗ ಪುರಹರ ನುಡಿಯುವ ಮಾತು ಅತಿ ಮುಖ್ಯವೆನಿಸಿದೆ.

ಮಗನೆ ಕೇಳೆಲೋ ಜಗದ ನೀತಿಯ |

ಸೊಗವನುಳಿಸಲು ನಿನ್ನ ಸೃಜಿಸಿದೆ |
ವಿಗಡ ದುರಿತಾಸಕ್ತ ದುರ್ನೀತಿಗಳ ಜನರ ||
ಮಾರಕ ಮಹಾ ವ್ಯಾಧಿರೂಪದಿ |

ಭೂರಿ ತಲ್ಲಣಗೊಳಿಸಿ ದುರ್ಜನ |
ವಾರವನು ಮರ್ದಿಪುದು ಭಯವನು | ಬೀರಿ ಜಗದಿ ||

ಕುಜನರ ಪಾರಣೆಗೈಯ್ಯಬೇಕೆಂಬ ಶಿವನ ನಿರ್ದೇಶವನ್ನು ಶಿರದೊಳು ಧರಿಸಿದ ಘೋರಮಾರಕ ” ನೀತಿಯುತರ ನಿಯಮಿತ ಸುಜನರ ನಾ ಘಾತಿಸನೆಂದೆಂದೂ ಪಾತಕಿಗಳ ದುರ್ನೀತರನದ್ದುವೆ ಭೀತಿಯ ಸಾಗರದಿ” ಎಂದು ನಿರ್ಧರಿಸುತ್ತಾನೆ. ಅದನ್ನು ಮೆಚ್ಚಿದ ಹರನು ಭುವಿಯಲಿ ದುರಿದ ದುರ್ಮದ ದುಷ್ಟಕಾಮನೆಯನ್ನೊರಸಿ ಲೋಕ ಕ್ಷೇಮವನ್ನು ಸ್ಥಿರಗೊಳಿಸು ಎಂಬ ಸದಾಶಯಗಳೊಂದಿಗೆ ಘೋರಮಾರಕನನ್ನು ಧಾರಿಣಿಗೆ ಕಳುಹಿಸುತ್ತಾನೆ. ಘೋರ ಮಾರಕನ ಉದಯ ಇಲ್ಲಿ ಕಲ್ಪನೆಯಾಗಿ ಕಂಡರೂ ಯಕ್ಷಗಾನ ರಂಗದ ಪ್ರಯೋಗದಲ್ಲಿ ಚಿರಪರಿಚಿತವಾದ ರಂಗಪ್ರಕ್ರಿಯೆಯಾಗಿ ಮೂಡಿರುವುದನ್ನು ನಾವು ಇಲ್ಲಿ ಗಮನಿಸಬಹುದು.

ರೋಗಮುಖಿ ಎನ್ನುವವಳ ಜೊತೆಗೆ ಘೋರಮಾರಕನ ಸಾಂಗತ್ಯ ಪ್ರಸಂಗದ ಶೃಂಗಾರ ಭಾಗ. ಸರ್ವಾರಿಷ್ಟ ಪುರದ ದೈತ್ಯಪತಿ ರುಜಿನಾಸುರನ ಅನುಜೆಯಾದ ರೋಗಮುಖಿ ” ತನಗೆ ಬೇಕಾದ ವರನನ್ನು ತಾನೇ ಶೋಧಿಸುತ್ತೇನೆ” ಎಂದು ಉನ್ಮಕ್ತಳಾಗಿ ಛಪ್ಪನ್ನ ದೇಶಗಳನ್ನು ಸುತ್ತಿ ಖಿನ್ನಮಾಸಳಾಗುತ್ತಾಳೆ. ಮ್ಲಾನ ವದನೆಯಾದ ರೋಗಮುಖಿ ಅಂಧಕ ಖಂಡದ ವಿಪಿನದ ಬಳಿ ಸುಳಿದಾಡುತ್ತಿರಬೇಕಾದರೆ ದೂರದಿಂದ ಬರುತ್ತಿರುವ ಮಾರಕಾಸುರನನ್ನು ಕಾಣುತ್ತಾಳೆ. ಮಾರಕಾಸುರನನ್ನು ಕಂಡು ಮಾರನ ಶರದುರಿಯನ್ನು ತಾಳಿಕೊಳ್ಳಲಾರದ ರುಜಿನನುಜೆ ಹಾಸವಿಲಾಸವನ್ನು‌ ಬೀರಿ ಘೋರಮಾರಕನನ್ನು ಸೆಳೆಯಲು ಯತ್ನಿಸುತ್ತಾಳೆ. ಶೃಂಗಾರವೇ ಮೈವೆತ್ತು ಬಂದ ರೋಗಮುಖಿಯನ್ನು ಕಂಡ ಘೋರಮಾರಕನ ಚಿತ್ತಾಪಹಾರವಾದಾಗ ತಾರುಣ್ಯವುಕ್ಕುವ ರಮಣಿಯ ಬಳಿಯಲ್ಲಿ ಮಾತನಾಡಲು ಮುಂದಾಗುತ್ತಾನೆ.

ಉಭಯರೂ ಕುಶಲೋಪರಿಯನ್ನು ವಿಚಾರಿದ ಬಳಿಕ ಆಗಮನದ ಕಾರಣವನ್ನು ತಿಳಿಸುವ ಜೊತೆಗೆ ರೋಗಮುಖಿ ಮಾಡಿದ ಪ್ರೇಮ ನಿವೇದನೆಗೆ ಸಮ್ಮತಿಯನ್ನು ಸೂಚಿಸಿದ ಘೋರಮಾರಕ ಗಾಂಧರ್ವ ವಿಧದ ಮೂಲಕ ಲಗ್ನವಿರಚಿಸಿ, ಕಂದರ್ಪನಾಟದಲಿ ತೊಡಗಿಕೊಂಡು, ನಾನಾ ದೇಶಗಳನ್ನು ಸುತ್ತಿ ಸರ್ವಾರಿಷ್ಟಪುರಕ್ಕೆ ಆಗಮಿಸುತ್ತಾರೆ.

ಸರ್ವಾರಿಷ್ಟ ಪುರದಲ್ಲಿ ರುಜಿನಾಸುರನ ಒಡ್ಡೋಲಗ. ಕವಿ ಅಮೃತ ಸೋಮೇಶ್ವರರ ಸೃಜನಶೀಲತೆಯೇನೋ ಎಂಬಂತೆ ರುಜಿನಾಸುರನ ಒಡ್ಡೋಲಗ ಪ್ರಸಂಗದಲ್ಲಿ ಒಂದು ಪ್ರಯೋಗವಾಗಿ ಮೂಡಿದೆ.

ಇತ್ತ ಸರ್ವಾರಿಷ್ಟ ಪತ್ತನದಿ ಭೀಕರತೆ |
ವತ್ತು ರುಜಿನಾಸುರನು ತಾನು ||
ಪೃಥ್ವಿಪೀಡಕ ವ್ಯಾಧಿದೈತ್ಯ ಪರಿವಾರದೊಡ |
ನಿತ್ತನೊಡ್ಡೋಲಗವನಂದು ||
ವಾತ ಕಫ ಪಿತ್ಥವತಿ ಶೀತೋಷ್ಣ ವಿಷದನುಜ
ವ್ರಾತ ವಿಜೃಂಭಿಸುತಲಿರಲು ||
ಘಾತಿಸುವ ಕ್ಷಯ ಕುಷ್ಠ ಅರ್ಬುದಾಸುರ ಸಹಿತ |

See also  ಹಬ್ಬಗಳು ವ್ಯಕ್ತಿಯ ಮನಸ್ಸಿನ ಮೇಲೆ ಏನಾದರೂ ಪರಿಣಾಮ ಬೀರುತ್ತವೆಯೇ?

ಸಾತಿಶಯದಿಂದ ತಾ ಮೆರೆದ ||

ವಿವಿಧ ರೋಗಗಳ ಜೊತೆಗೆ ಒಡ್ಡೋಲಗವನ್ನಿತ್ತ ರುಜಿನಾಸುರ ” ಉಗ್ರ ಭೀಕರ ರೂಪದಿಂದ ಕಾಡಿದರೂ ಜಗದ ಜನರು ಜಗ್ಗದಿರಲು ಶೀಘ್ರದಲ್ಲಿ ಪ್ರತ್ಯಸ್ತ್ರವಿಲ್ಲದಿರುವತಿ ಘೋರ ಮಾರ್ಗವನು ಶೋಧಿಸಬೇಕು ” ಎಂಬುದಾಗಿ ಮಾತನಾಡುತ್ತಿರಲು ನೂತನ ವಧುವರರ ಆಗಮನದ ವಿಚಾರವನ್ನು ದ್ವಾರ ಪಾಲಕ ಬಂದು ಅರುಹುತ್ತಾನೆ. ಘೋರಮಾರಕನ ಬಗ್ಗೆ ತಿಳಿದುಕೊಂಡ ರುಜಿನಾಖ್ಯ ತನ್ನ ಸೋದರಿಯ ಆಯ್ಕೆಯನ್ನು ಪ್ರಶಂಸಿಸುತ್ತಾನೆ.

ಭದ್ರಾಂಗ ಭೂಪನಾಳುವ ಶೃಂಗಾರಪುರದ ಜನರು ರೋಗರುಜಿನಗಳಿಂದಾಗಿ ತತ್ತರಿಸುತ್ತಿರಲು ನೈಮಿತ್ತಿಕರನ್ನು ಕರೆಯಿಸಿದ ಭದ್ರಾಂಗ ರೋಗ ರುಜಿನಕ್ಕೆ ಕಾರಣವೇನೆಂದು ಕೇಳುತ್ತಾನೆ. ಆಗ ನೈಮಿತ್ತಿಕರು, ” ಖ್ಯಾತ ರುಜಿನಾಸುರನ ಬಳಗದ ದುಷ್ಟ ಚೇಷ್ಟೆಯಿದು ” ಎಂದು ತಿಳಿಸಿದಾಗ ” ಘೋರ ಸ್ವರೂಪಿಗಳನ್ನು ವಿದಾರಿಸುವಂತಹ ವೀರರು ಯಾರಿಹರು?” ಎಂಬ ಚಿಂತೆಯ ಭಾರದಿ ಬಳಲುತ್ತಿರಬೇಕಾದರೆ ಭದ್ರಾಂಗನ ಮಗ ಶುಭ್ರಾಂಗನು ಪ್ರವೇಶಿಸುತ್ತಾನೆ.

ತೆರ ನೃಪ ಚಿಂತಿಸುತಿರಲಾತನ |ಜಾತನು ಶುಭ್ರಾಂಗ ||

ತಾತನ ಬಳಿಗೈದುತಲೆಂದನು ಚಿಂ| ತಾತುರವೇಕೆನುತ ||

ಅರಿತೆನು ಸರ್ವಾರಿಷ್ಟಪುರದ ಖಳ | ಪರಿವಾರದ ಪರಿಯ ||

ಕರುಣಿಸು ವೀಳ್ಯವ ದುರುಳರ ಮರ್ದಿಸಿ | ಬರುವೆನು ಶೀಘ್ರದಲಿ ||

ಖಳರ ವಧೆಗಾಗಿ ಸಿದ್ಧನಾಗಿ ನಿಂತ ಮಗನ ವೀರಾವೇಶದ ನುಡಿಗಳನ್ನು ಕೇಳಿದ ಭದ್ರಾಂಗ ಶುಭ್ರಾಂಗನಿಗೆ ರಣವೀಳ್ಯವನ್ನು ಕೊಟ್ಟು ಧುರಕ್ಕೆ ಕಳುಹಿಸುತ್ತಾನೆ. ಯುದ್ಧಕ್ಕೆ ತನ್ನ ಪತಿ ತೆರಳುತ್ತಿದ್ದಾನೆ ಎಂಬ ವಿಚಾರವನ್ನರಿತುಕೊಂಡ ಶುಭ್ರಾಂಗನ ಸತಿ ಶೀಲವತಿ ಪತಿಯ ಪ್ರಾಣ ರಕ್ಷಣೆಗಾಗಿ ಮಾಡುವ ಕೆಲಸ ಪ್ರಸಂಗದ ವಿಶಿಷ್ಟ ಭಾಗಗಳಲ್ಲಿ ಒಂದು.

ಸಿದ್ಧಮೂಲಿಕೆಯೊಂದ ನೀಡುವೆನಿದು ವಶ | ವಿದ್ದರೆ ರೋಗಾದಿ ಭಯವು ||

ಹೊದ್ದದು ಸರ್ವರುಜಾಪಹಾರಿಣಿಯತಿ | ಶ್ರದ್ಧೆಯೊಳಿದ ಧರಿಸುವುದು ||

ರುಜಿನಾಖ್ಯ ಹಾಗೂ ಆತನ ಪರಿವಾರದವರನ್ನು ಸೋಲಿಸುವುದಕ್ಕಾಗಿ ಯುದ್ಧಕ್ಕೆ ಹೊರಟು ನಿಂತಂತಹ ಶುಭ್ರಾಂಗನಿಗೆ ಸತಿ ಶೀಲವತಿಯು ಸಿದ್ಧಮೂಲಿಕೆಯನ್ನು ನೀಡಿ ಅಕ್ಕರೆಯಲ್ಲಿ ಮುತ್ತಿನಾರತಿಯೆತ್ತಿ ವೀರತಿಲಕವನ್ನಿತ್ತು ಶುಭ ಹಾರೈಸಿ ಅನುವರದ ಭೂಮಿಗೆ ಕಳುಹಿಸಿಕೊಡುತ್ತಾಳೆ.

ಶುಭ್ರಾಂಗನ ದಾಳಿಯ ಕುರಿತು ದೂತನಿಂದ ತಿಳಿದುಕೊಂಡ ರುಜಿನಾಸುರ ನರ ಪಿಳ್ಳೆಗೆ ಬುದ್ಧಿ ಕಲಿಸುತ್ತೇನೆ ಎಂಬುದಾಗಿ ಬಗೆದು ಕುಷ್ಠ, ಕ್ಷಯರನ್ನು ಕರೆಯಿಸಿ ಧುರವೀಳ್ಯವಿತ್ತು ಕಳುಹಿಸಿಕೊಡುವ ದೃಶ್ಯದಲ್ಲಿ ಯಕ್ಷಗಾನ ಪ್ರಸಂಗದ ಸಾಮಾನ್ಯ ವಸ್ತುಸ್ಥಿತಿ ಮೂಡಿ ಬಂದಿದೆ.

ಕುಷ್ಠ, ಕ್ಷಯರನ್ನು ಯುದ್ಧದಲ್ಲಿ ಸೋಲಿಸಿದ ಶುಭ್ರಾಂಗನನ್ನು ಎದುರಿಸಲು ರುಜಿನಾಸುರನೇ ಮುಂದಾಗುತ್ತಾನೆ.

’’ಮರುಳೆ ಹುಲು ತರಳ ಹಾರದಿರೆಲವೊ ನಿನ್ನ ನೀನರಿಯದಂದದಿ ಮೂರ್ಖತನದಿ
ಧರೆಯೆಲ್ಲ ಥರಗುಟ್ಟಿ ನಡುಗುತಿದೆ ಸಿಡಿಲೆದುರು ಸರಸವೇ ಬಡ ಬಾಳೆ ಗಿಡಕೆ” ಎಂದು ರುಜಿನಾಸುರನು ಶುಭ್ರಾಂಗನನ್ನು ಜರೆದಾಗ, ಶುಭ್ರಾಂಗ “ಬಾಳೆಯೆಂದರಿತೆಯೇನೋ ನಿನ್ನಯ ಬಾಳ್ಗೆ ಬಾಳಾಗಿ ಬಂದವನೋ. ಖಳನೆ ನಿನ್ನಯ ಕೋಲಾಹಲವನೀಗ ಬೀಳಾಗಿಸುವೆ ಚಣದಿ” ಎಂದು ಪ್ರತ್ಯುತ್ತರಿಸಿ ಕಾದಾಡಲು ಮುಂದಾಗುತ್ತಾನೆ. ಸಿದ್ಧಮೂಲಿಕೆಯ ಪ್ರಭಾವದಿಂದಾಗಿ ರುಜಿನ ದಾನವನು ಶುಭ್ರಾಂಗನಲ್ಲಿ ಸೋತು ಪಲಾಯನಮಾಡುತ್ತಾನೆ.

“ಮೂರುಗೇಣಷ್ಟಿಲ್ಲದಾ ನರ ಪೋರನಿಂದ ಪರಾಭವವೆ, ಶಿವ ಶಿವ…. ಮಾರಕಾಸುರನೇ ನನಗೆ ಹಾದಿ” ಎಂದು ಮಾರಕಾಸುರನನ್ನು ರುಜಿನೇಶನು ನೆನೆದಾಗ ರೋಗಮುಖಿಯೊಡಗೂಡಿ ಪ್ರಣಯದ ಭೋಗಯಾತ್ರೆಯೊಳಿರ್ದ ಮಾರಕ ತನ್ನ ಭಾವನಿಗಾದ ಮಾರಕಕ್ಕೆ ಪ್ರತಿಕಾರವನ್ನು ಗೈಯ್ಯಲು ಶುಭ್ರಾಂಗನಿಗೆ ಇದಿರಾಗುತ್ತಾನೆ. ಮಾನನಿಧಿಯಾದ ಶುಭ್ರಾಂಗನ ಮುಂದೆ ಘೋರಮಾರಕನ ಯಾವುದೇ ಪ್ರಕೋಪಗಳು ನಿಲ್ಲಲಿಲ್ಲ. ಶುಭ್ರಾಂಗನಿಂದ ಕೊಳುಗುಳದಿ ಸೋತು ಓಡುವುದೇ ಕಡೆಗುಳಿದ ಹಾದಿಯಾಗಿತ್ತು. ಸೋಲಾಂತು ಘೋರಮಾರಕ ತಲೆಯ ಮರೆಸುತ್ತ ಮತ್ತೆ ತನ್ನಯ ಪಟ್ಟದರಸಿ ರೋಗಮುಖಿಯನ್ನು ಕರೆದು ಪರಿಭವದ ಕಥನವನ್ನು ಆಕೆಯಲ್ಲಿ ಬಿತ್ತರಿಸುವ ಜೊತೆಗೆ ರಮಣಿಗೆ ,” ತಿಳಿದೆಯಲ್ಲವೆ ಪರಿಭವವ ನೀ ಚೆಲುವೆಯಾಗುತ ಸುಳಿದು ನೃಪಜನೊಳೊಲುಮೆ ಬೆಳೆಸುತ ರೋಗ ಪಾಶದಿ ಬಂಧಿಪುದು ರಿಪುವ” ಎಂಬಂತೆ ನುಡಿದು ಶುಭ್ರಾಂಗನ ವಿನಾಶಕ್ಕೆ ಒಂದು ಯೋಜನೆಯನ್ನು ರೂಪಿಸುವ ದೃಶ್ಯ ಈ ಪ್ರಸಂಗದ ಮುಖ್ಯ ಭಾಗ.

ರೋಗಮುಖಿಯಂದು ಬೇಗ ಮಾಯಕದಲ್ಲಿ|
ರಾಗಮುಖಿಯಂದೆನಿಸಿ ಸುಂದರಿ |
ಯಾಗಿ ಸುಳಿದಳು ಒಯ್ಯನೆ ||

ಶೀತಮುಖಿ ಪಿತ್ಥಮತಿ ಕಫಶೀಲೆಯ |
ರೋತು ಬಂದರು ಜೊತೆಯೊಳಾಗಲೆ |
ಪ್ರೀತಿಯಿಂದ ವಿಹಾರಕೆ ||

ನಲ್ಲನಾಡಿದ ನುಡಿಗೆ ಖುಲ್ಲೆ ಪ್ರಫುಲ್ಲೆಯಾಗುತ ಸಮ್ಮತಿ ಸೂಚಿಸಿ ಕಾರ್ಯ ಪ್ರವೃತ್ತಳಾಗುತ್ತಾಳೆ.
ರೋಗಮುಖಿ ಮಾಯಕದಲ್ಲಿ ರಾಗಮುಖಿಯಾಗಿ ವೇಷಮರೆಸಿ ಶೀತಮುಖಿ, ಪಿತ್ಥಮತಿ, ಕಫಶೀಲೆಯರೆಂಬ ಸಖಿಯರ ಜೊತೆಗೆ ಶುಭ್ರಾಂಗನನ್ನು ಇದಿರಾಗಲು ವಿಹಾರಕ್ಕೆ ತೆರಳುತ್ತಾಳೆ. ವಿಹಾರದ ಬಗೆಯಲ್ಲಿ ಕವಿ ಕಲ್ಪನೆ ಮೇಳೈಸಿರುವುದು, ನೋಡುಗನಿಗೂ, ಓದುಗನಿಗೂ ಹಾಸಪ್ರಜ್ಞೆಯನ್ನು ಮೂಡಿಸುವಲ್ಲಿ ಈ ಭಾಗ ಪ್ರಯೋಗಮತಿಯೆನಿಸಿದೆ ಎಂದರೆ ಉತ್ಪ್ರೇಕ್ಷೆಯೆನಿಸದು.

ತೀಡುತಿದೆ ದುರ್ಗಂಧ ಮಾರುತ | ಹಾಡುತಿರುವುದು ವಾಯಸ ||
ಕೂಡಿ ಪಂಕವು ತುಂಬಿರುವ ಕೊಳ | ಕೋಡಿ ಬರ್ಪುದು ಸೂಕರ ||
ವ್ರಣ ವಿನೋದಿಗಳಾದ ನೊಣಗಳ | ಬಣದ ದಿಬ್ಬಣ ಬಂದಿದೆ ||
ಮನಕೆ ಮಸಣದ ಜಂಬುಕದ ಗಾ | ಯನವು ಮುದವನು ತಂದಿದೆ ||

See also  ಪಾರ್ಥಸಾರಥಿಯಾದನಾ ಮುಕುಂದ

ಯುದ್ಧಭೂಮಿಯಿಂದ ಪಲಾಯನಗೈದ ಮಾರಕನನ್ನು ಹುಡುಕುತ್ತಿದ್ದ ಶುಭ್ರಾಂಗ ವಿಹರಿಸುತ್ತಿದ್ದ ರಾಗಮುಖಿಯನ್ನು ನೋಡಿದ ಕೂಡಲೇ ಅನುರಾಗ ವಶನಾಗುತ್ತಾನೆ. ತರುಣಿಯರ ಮೇಳದಲಿ ಮೆರೆಯುವ ಉರಗವೇಣಿಯ ನೋಡುತಿರೆ ಸ್ಮರ ಶರಕಲಾಪದಿ ಶುಭ್ರಾಂಗನ ಮನವು ಸಂಚಲನಗೊಳ್ಳಲು ಪ್ರಾರಂಭಿಸುತ್ತದೆ. ಚಂಚಲಾಕ್ಷಿಯನ್ನು ಕರೆದು ವನಜವದನೆಯ ಬಳಿಯಲ್ಲಿ‌ ಮಾತನಾಡಲು ತೊಡಗಿದಾಗ ಕಿರುನಗೆ ಬೀರಿದ ಇಂದುಮುಖಿ ರಾಗಮುಖಿ ಎಂಬುದಾಗಿ ತನ್ನನ್ನು ಪರಿಚಯಿಸಿ  ಯೋಗ್ಯ ವರಾನ್ವೇಷಣೆಯ ಕಾರ್ಯದಲ್ಲಿ ನಿರತಳಾಗಿರುವೆಳೆಂದು ಸುಳ್ಳನ್ನಾಡುತ್ತಾಳೆ. ಪರಿಚಯ ಪ್ರೇಮಾಂಕುರಕ್ಕೆ ಪ್ರೇರಕವಾದಾಗ ರಾಗಮುಖಿಗೆ ಮನಸೋತ ಶುಭ್ರಾಂಗ, ” ಸಿಂಗಾರಿಯಾಗೆನ್ನ ಬಾಳ್ಗೆ, ಬಾಳು ಬಂಗಾರವಪ್ಪುದು ನೋಡುಭಯರಿಗೆ” ಎಂಬುದಾಗಿ ತನ್ನ ಮನೋಭಿಷ್ಟವನ್ನು ರಾಗಮುಖಿಯಲ್ಲಿ ವ್ಯಕ್ತಪಡಿಸುತ್ತಾನೆ. ಯೋಜನೆ ಸಫಲವಾಯಿತೆಂದರಿತುಕೊಂಡ ರೋಗಮುಖಿ, ” ಮಹನೀಯ ನಿನ್ನ ವಾಂಛೆಯ ತಿರಸ್ಕರಿಸಲಾರೆನು. ಆದೊಡೊಂದು ಕಿರು ಶರ್ತವಿದೆ. ಸರ್ವರೋಗಾಪಹಾರಿಣಿ ವರ ಮೂಲಿಕೆಯನು ನೀಡುವುದು ” ಎಂದಾಗ ಮೋಹಪಾಶದಿ ಮೈಮರೆತ ಶುಭ್ರಾಂಗ ಮೂಲಿಕೆಯನು ಮೋಹಿನಿಯ ಕೈಗಿರಿಸುತ್ತಾನೆ. ರಾಗಮುಖಿಯ ಜೊತೆಗೆ ಮಂದಪ್ರಜ್ಞನೆನಿಸುತಲಿ ದೇಹ ಭಾವವ ಮರೆತು ಕಾಮಕೇಳಿಯಲ್ಲಿ ತೊಡಗಿ ತನ್ನ ಶುಭ್ರತೆಯನ್ನು ಶುಭ್ರಾಂಗನು ಕಳೆದುಕೊಳ್ಳುತ್ತಾನೆ. ತನ್ನ ಮಡದಿ ನೀಡಿದ ಸರ್ವರುಜಾಪಹಾರ ರಕ್ಷೆಯನ್ನು ಕಳೆದುಕೊಂಡ ಶುಭಾಂಗ ರೋಗಮುಖಿಯ ಸಂಗದಿಂದ ಮಲಿನಗೊಂಡು ಮಾರಕವ್ಯಾಧಿಗ್ರಸ್ತನಾಗುತ್ತಾನೆ.

ರೋಗಮುಖಿಯಿಂದ ವಾಸ್ತವವನ್ನು ತಿಳಿದ ಶುಭ್ರಾಂಗ ತನುವಿಗಂಟಿದ ರೋಗವನು ತಾನೆಣಿಸಿ ಭಯದಿಂದ, ” ಶಿವ ಶಿವ…. ಕವಿದುದು ಭ್ರಾಂತಿಯು, ಜೀವಚ್ಛವನಾನಾದೆನಲಾ….‌ಆಶಾಪಾಶದಿ ಸಿಲುಕುತ ಶೀಲವ ನಾಶವಗೈದೆನಲಾ… ಸಾರುವೆನೆಂತೈ ಪುರವನು? ಈ ರೋಗವು ಸಂಕ್ರಮಿಸುವುದನಾರು ತಡೆಯುವರು?” ಎಂದು ದುಃಖಿಸಲು ಪ್ರಾರಂಭಿಸುತ್ತಾನೆ. ಸುತನು ಹಿಂತಿರುಗಿ ಬಾರದಿದ್ದುದ್ದನ್ನು ಕಂಡ ಭದ್ರಾಂಗ ಮಂತ್ರಿಯನ್ನು ಕರೆಸಿ ಸುತನನ್ನು ಹುಡುಕಿಸುತ್ತಾನೆ. ಸತ್ತ್ವಗುಂದಿದ ವೈರೂಪವಾಗಿಹ ರಾಜಕುಮಾರನನ್ನು ಕಂಡ ಮಂತ್ರಿ ಖೇದಗೊಂಡಾಗ ಶುಭ್ರಾಂಗ ತನಗಂಟಿದ ಭೀಕರ ಘೋರಮಾರಕದ ಬಗೆಯ ವೃತ್ತಾಂತ ವಿವರಿಸುತ್ತಾನೆ. ಯುವರಾಜನ ಈ ದುರವಸ್ಥೆಯನ್ನು ತಿಳಿದು ಶೃಂಗಾರಪುರವೆಲ್ಲ ಶೋಕಗ್ರಸ್ತವಾಗುತ್ತದೆ. “ಭೇಷಜಕ್ಕೆ ಬಗ್ಗದಂಥ ಹೇಸಿ ರೋಗ ಹೊತ್ತು ಬರಲು ಹೇಸುತಿಹೆನು ದೂರದಲ್ಲೆ ವಾದಗೈವೆನು” ಎಂದು ಶುಭ್ರಾಂಗ ನಿರ್ಧರಿಸಲು ಧಾರಿಣಿಪನಿದನರಿತು ತನ್ನ ಕುಮಾರನ ವಿಕಾರರೂಪವನ್ನು ಕಂಡು ಮೂರ್ಛಿತನಾಗುತ್ತಾನೆ. ಮೂರ್ಛಿತನಾದ ತಂದೆಗೆ ಶುಭ್ರಾಂಗ ನುಡಿಯುವ ಮಾತು ಈ ಸಮಾಜ ಅರಿಬೇಕಾದ ವಾಸ್ತವವಾಗಿದೆ.

ಎನ್ನ ಜನಕನೆ | ಮರುಗಬಾರದು ||
ಮುನ್ನಗೈದಿಹ | ಕರ್ಮಫಲವಿದು ||
ಎನ್ನ ಸಾಧ್ವಿಗೆ | ದ್ರೋಹ ಬಗೆದಿಹೆ ||
ಅನ್ನೆಯದ ಫಲ | ವೀಗ ಉಣ್ಣುವೆ ||
ತಾತ ನಿನ್ನಯ | ನೀತಿಧರ್ಮಕೆ ||
ನಾ ತಿಲಾಂಜಲಿ | ಇತ್ತು ಸೊಕ್ಕಿದೆ ||
ಪಾತಕಿಯನು ನೀ | ಕ್ಷಮಿಸು ದಯೆಯೊಳು ||
ಚೇತರಿಪೆನೆಂಬಾ | ಮಾತ ಮರೆವುದು ||

ಪತಿಗೊದಗಿದ ದುಸ್ಥಿತಿಯನ್ನು ಕಂಡ ಶೀಲವತಿ ಮಮ್ಮಲ ಮರುಗುತ್ತಾಳೆ. ಅಕಳಂಕ ಶೀಲೆ ತನ್ನ ಪತಿಯ ಪ್ರಾಣವನ್ನು ಉಳಿಸಲು ಕರುಣಾಳು ಗಿರಿಜೇಶನ ಮೊರೆಹೋಗಲು ನಿಟಿಲಾಕ್ಷ ಶಿವಭೂತಿ ನಾಮದಲಿ ವೈದ್ಯರೂಪದಲಿ ಬಂದು ನೃಪಾತ್ಮಜನನ್ನು ಪರೀಕ್ಷಿಸಿ ಎಲ್ಲರಿಗೂ ಘೋರ ಮಾರಕದ ಸತ್ಯವನ್ನು ವೇದ್ಯವಾಗಿಸುವನು. ಘೋರಮಾರಕವಾಗಿಹ ಏಡ್ಸ್ ವ್ಯಾಧಿಯ ಕಾರಣ- ಪರಿಣಾಮಗಳನ್ನು ತಿಳಿಸುವಲ್ಲಿ ಮೂಡಿ ಬಂದಿರುವ ಕವಿಯ ಸಾಹಿತ್ಯ ಪರಿಚಾರಿಕೆ ಈ ಪ್ರಸಂಗವನ್ನು ಜಾಗೃತಿಯ ನೆಲೆಯನ್ನಾಗಿ ಪರಿವರ್ತಿಸಿದೆ.

ಮಾರಕವ್ಯಾಧಿಯ ಸ್ಪರ್ಶವಾಗಿಹುದತಿ | ಘೋರತರವು ಪರಿಣಾಮ ||
ಜಾರವೃತ್ತಿಯೆ ಮೂಲಕಾರಣವಿದಕೆ ಸಂ | ಸಾರವೆ ನರಕ ತಾನಹುದು ||
ಎಚ್ಚರವಿಲ್ಲದೆ ವರ್ತಿಸಲಿದು ಬಲು | ಚೆಚ್ಚರದಲಿ ಸಂಕ್ರಮಿಪುದು ||
ಅಚ್ಯುತ ಬ್ರಹ್ಮ ಮಹೇಶರಿಗಳವಲ್ಲ | ತುಚ್ಛವ್ಯಾಧಿಯ ನಿವಾರಿಸಲು ||
ಶುಚಿರುಚಿ ನಿಯಮಿತ ಜೀವನಗೈವರ | ವಿಚಲಿತಗೊಳಿಸಲಸಾಧ್ಯ ||
ಉಚಿತಾಹಾರ ವಿಹಾರಲೋಪದಿ ರುಜೆ | ಖಚಿತವಾಗಿಹುದು ಲೋಕದಲಿ||

ಘೋರಮಾರಕಗೆ ಶುಭ್ರಾಂಗನು ಬಲಿಯಾದ ತರುವಾಯ ಪತಿಯ ಸಾವನ್ನು ನೋಡಲಾಗದೆ ಸತಿ ಶೀಲವತಿಯ ಪ್ರಾಣಪಕ್ಷಿಯು ಹಾರಿಹೋಗುತ್ತದೆ. ಮಾರಕ ಪೀಡೆ ಏಕಪತ್ನೀವ್ರತರ ವಿವೇಕಿಗಳ ಕಾಡದೆ ಅತಿವಿಲಾಸದಿ, ತಾಮಸದಿ ಭ್ರಮಿಸುವ ಕಾಮಕುತ್ಸಿತ ಚೇಷ್ಟರ ಕ್ಷೇಮಗೆಡಿಸಲು ಮುಂದುವರಿಯುತ್ತದೆ. ಶುಭ್ರಾಂಗನಾಗಿ ಇರುವವರೆಗೆ ಯಾವ ರೋಗವೂ ಮನುಷ್ಯನನ್ನು ಬಾಧಿಸದು, ಸಚ್ಚಾರಿತ್ರ್ಯವನ್ನು ಕಳಕೊಂಡಾಗ ರೋಗಮುಖನಾಗುತ್ತಾನೆ ಎಂಬ ಅಂಶವನ್ನು ಬಲು ಸುಂದರವಾಗಿ ಈ ಯಕ್ಷ ಪ್ರಸಂಗ ತಿಳಿಸುತ್ತದೆ.

ಇಲ್ಲಿ ಬಳಸಲ್ಪಟ್ಟ ಕಥೆ ಪುರಾಣದ್ದೇ ಎನಿಸಿದರೂ ವೀರ, ರೌದ್ರ, ಶೃಂಗಾರ, ಹಾಸ್ಯ ಮುಂತಾದ ರಸಾಭಿವ್ಯಕ್ತಿಗೆ ಅವಕಾಶವಿರುವ ಕಥಾನಕವಾಗಿದೆ. ವಿಭಿನ್ನ ವಸ್ತು ಯಕ್ಷಗಾನದ ಚೌಕಟ್ಟಿಗೆ ಹೊಂದಿಕೊಂಡಿದೆ. ಅಭಿವೃದ್ಧಿಪರ ಸಂದೇಶಗಳನ್ನು ಜನರಿಗೆ ಬಿಂಬಿಸುವಲ್ಲಿ ಜನಪದ ಮಾಧ್ಯಮಗಳು ಬಲು ಸೂಕ್ತ ಮಾಧ್ಯಮಗಳೆಂಬುದನ್ನು ಯಕ್ಷಗಾನ ಕಲೆಯು ಸಾಬೀತು ಪಡಿಸಿದೆ. ಈ ಕಥಾನಕವನ್ನು ಏಡ್ಸ್‌ ವಿರುದ್ಧ ಜನಜಾಗೃತಿಗಾಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಾಗಿದೆ. ಹೊಸ ದಿಕ್ಕು ಪ್ರಯೋಗಗಳ ಅನ್ವೇಷಣೆಯಲ್ಲಿ ತೊಡಗಿರುವ ಯಕ್ಷಗಾನ ಕ್ಷೇತ್ರದಲ್ಲಿ “ಘೋರಮಾರಕ” ಯಕ್ಷಗಾನ ಪ್ರಸಂಗ ಹೊಸ ಯೋಚನೆಗೆ ಅವಕಾಶ ನೀಡಿದೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

200
Deevith S. K. Peradi

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು