News Kannada
Wednesday, December 07 2022

ಅಂಕಣ

ಹಾಲಾಹಲವನ್ನೆರೆದಳಾ ಪೂತನಿ

Photo Credit :

ಹಾಲಾಹಲವನ್ನೆರೆದಳಾ ಪೂತನಿ

ನಂದನ ಮನೆಗಾನಂದದೆ

ಬಂದಾ ಪೂತನಿಯು ಕಂಡು ತೊಟ್ಟಿಲ ಮಗುವಂ

ಕಂದನನಾಡಿಪೆನೆನುತುಂ

ಚಂದದೆ ನುಡಿದೆಲ್ಲರಲ್ಲಿ ವಂಚಿಸಿ ಮೆರೆದಳ್

 

ಗೋಕುಲದಲ್ಲಿ ಬೆಳೆಯುತ್ತಿದ್ದ ರಂಗನನ್ನು ವಧಿಸಲು ಕಂಸ ಯೋಜಿತೆಯಾದ ಪೂತನಿಯು ನಂದಗೋಪನ‌ ಮನೆಗೆ ಆಗಮಿಸುವ ದೃಶ್ಯವದು. ತನ್ನ ಘೋರರೂಪವನ್ನು ಮರೆಯಿಸಿ ಹೆಮ್ಮಾರಿಯಾದ ಪೂತನಿಯು ಎಲ್ಲರೆದುರು ಒಂದಿನಿತೂ ಸಂಶಯ ಬಾರದಂತೆ ಮೈದೋರಿ ಬರುವ ಸಂದರ್ಭವದು. ಜಗವನ್ನಾಡಿಸುವ ರಂಗನನ್ನು ತಾನಾಡಿಸುವೆ ಎಂಬ ದುರಾಲೋಚನೆಯನ್ನು ಇರಿಸಿ ಕೋರೆ ದಾಡೆಗಳನ್ನು ಮರೆಮಾಚಿ ಕ್ರೂರವದನವನ್ನುಳಿದು ಚಾರುಸದನೆಯಾಗಿ ಬರುವ ಪೂತನಿ ಬಳ್ಳಿಯಂದದಿ ಚೆಲುವಾಗಿ ಚೆಂದುಳ್ಳಿಯಂದದಿ ಸೊಗಸಾಗಿ ಆಗಮಿಸುವ ದೃಶ್ಯವದು.

 

ಶತಾವಧಾನಿ ಡಾ. ಆರ್ ಗಣೇಶರು ರಚಿಸಿರುವ “ಪೂತನಾ ಮೋಕ್ಷ” ಪ್ರಯೋಗ ಏಕವ್ಯಕ್ತಿ ಯಕ್ಷಗಾನ ರಂಗದಲ್ಲಿ ಅನನ್ಯ ಸಾಧ್ಯತೆಯನ್ನು ಸೃಷ್ಟಿಸಿದ ರೂಪಕ. ರೌದ್ರ, ಭಯಾನಕ ರಸಗಳೊಂದಿಗೆ ಪ್ರಾರಂಭವಾಗುವ ರಂಗನಡೆ ಹಾಸ್ಯ, ಶೃಂಗಾರ ಭಾವದೆಡೆಗೆ ತಿರುಗಿ ಆ ಬಳಿಕ ಭಕ್ತಿ, ಶಾಂತ ರಸದೊಳಗೆ ಲೀನವಾಗಿ ಮರು ನಿಜ ಭೂಮಿಕೆಯನ್ನು ನಿಭಾಯಿಸುವಲ್ಲಿ ಪೂತನಿ ಜಾಗೃತಳಾಗುವ ಭಾವಸಂಧಾನದ ಅಪೂರ್ವ ಯಕ್ಷ ಪ್ರಯೋಗ ಪೂತನಾ ಮೋಕ್ಷ.

 

” ದೂರದಿಂದ ನೋಳ್ಪ ಜನರನ್ನೋರೆ ನೋಟದಿಂದ ನೋಡಿ, ಜಾರುತಿರುವ ಸೆರಗನೆಂತೊ ಚಾರುತೆಯೊಳು ಬಿಗಿದು ತೀಡಿ, ಮರೆಯುತಿರುವ ನರತೆಯನ್ನು ಮೆರೆಯುತಿರುವ ಖರತೆಯನ್ನು

ಸರಿಯ ಹಾದಿಯಲ್ಲಿ ನಿಲಿಸಿ, ನಿರಿಗೆಚಿಮ್ಮಿ ಬರುವಳಿನ್ನು ದುರುಳ ರಕ್ಕಸಿ” ಎಂದು ಪೂತನಿ ಬರುವ ಬಗೆಯನ್ನು ಕವಿ ಈ ರೀತಿಯಾಗಿ ಬಣ್ಣಿಸಿದರೆ “ಸೀರೆ-ಹಾರಗಳಿಂದ ಶೋಭಿಸಿ ನೀರೆ ಸಡಗರವಾದಳು, ಸಂಸಾರಸುಂದರಿಯಾದಳು” ಎಂಬುದಾಗಿ ಪೂತನಿ ಬದಲಾಗುವ ಬಗೆಯನ್ನು ಕವಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಪೂತನಿಯು ನಂದಗೋಪನ ಮನೆಗೆ ಕಪಟದಾಕೃತಿಯನ್ನು ತಳೆಯುತ್ತ ಗೋಕುಲದ ಬಾಲನಿಗೆ ಮೃತ್ಯುಸದೃಶಳಾಗಲು ಅಡಿಯಿಡುತ್ತಾಳೆ. ನಂದಗೋಪನ‌ ಮನೆಯೊಳಗಾಗಮಿಸಿದ ಮಾಯಾರಕ್ಕಸಿ ತೊಟ್ಟಿಲೊಳಿದ್ದ ಮುಕುಂದನನ್ನು ಕಂಡು ಬೆರಗಾಗುತ್ತಾಳೆ.

 

ಎಂತು ಚೆಲ್ವಿನ ಕಂದನೇ | ಯಶೋದೆ ಈ

ಕಂತುವೆನ್ನಲು ಸಂದನೇ |

ಬಣ್ಣವೇ ಬಾಂಬಣ್ಣವು | ಕಣ್ಗಳೇ ಕಮಲಂಗಳು |

ಬಣ್ಣಿಸಲು ಬಾಯ್ಸೋತು ಸುಯ್ಯುವ ಚಿಣ್ಣನಿವ ಬೆಳ್ದಿಂಗಳು |

 

ಕೃಷ್ಣನ ಚೆಲುವಿಗೆ ಮರುಳಾದಳೇನೋ ಎಂಬಂತೆ ನಟಿಸಿದ ಪೂತನಿ ಯಶೋದೆಯ ಬಳಿಯಲ್ಲಿ ಮುಕುಂದನ ಸೌಂದರ್ಯವನ್ನು ಬಣ್ಣಿಸಲು ಪ್ರಾರಂಭಿಸುತ್ತಾಳೆ. ತನಗೂ ಕೃಷ್ಣನನ್ನು ಎತ್ತಿ‌ಮುದ್ದಾಡಿಸಬೇಕು, ತಾನೂ ತಾಯ್ತನದ ಸುಖವನ್ನು ಅನುಭವಿಸಬೇಕು ಎಂಬುದಾಗಿ ಯಶೋಧೆಯ ಬಳಿಯಲ್ಲಿ ಹೇಳಿ ಯಶೋಧೆಯ ಮನವೊಲಿಸಲು ಪ್ರಯತ್ನಿಸುತ್ತಾಳೆ. ಮಾಯೆಗೆ ಮರುಳಾದ ಯಶೋಧೆಯ ಒಪ್ಪಿಗೆಯ ಮೇರೆಗೆ ಮಲಗಿರುವ ಬಾಲಮುಕುಂದನನ್ನು ಎತ್ತಿ ಮುದ್ದಾಡುತ್ತಾಳೆ.

 

ಹಸಿದ ಹಾಗಿದೆ ಶಿಶುವಿದು ಮಧು

ರಸದ ಹಾಗಿದೆ ಹಾಲಿದು |

ಒಲವಿನಿಂದಲಿ ಎದೆಯ ಸುಧೆಯನು

ಸಲಿಸಿ ಸಲ್ಲುವೆ ನಾನಿದೋ |

 

“ಮಗುವಿಗೆ ಹಸಿವಾಗಿಹುದು, ನನ್ನ ಎದೆಯ ಹಾಲನ್ನು ಬಾಲಕೃಷ್ಣನಿಗೆ ನಾನುಣಿಸುತ್ತೇನೆ” ಎಂದು ಯೋಜಿಸಿ ಮುಂದಾದ ಪೂತನಿಗೆ ತನ್ನ ಮರಣ ಸಮೀಪಿಸಿರುವ ವಿಚಾರ ತಿಳಿಯದಾಯ್ತು. ಪಾಲ್ಗಡಲ್ಲಿ ಮಲಗಿರುವ ಮಹಾಮಹಿಮನ ಮುಂದೆ ಪೂತನಿಯ ಯಾವ ಮಾಯೆಯೂ ನಿಲ್ಲಲಿಲ್ಲ. ವಿಷದ ಹಾಲನ್ನು ಉಣಿಸಿ ಮುಕುಂದನನ್ನು ಕೊಲ್ಲುವುದಾಗಿ ಚಿಂತಿಸಿದ್ದ ಪೂತನಿಗೆ ಮಾತೃಸೌಖ್ಯವನ್ನು ಪಡೆಯುವ ಅಂತಿಮ ಕ್ಷಣ ಅದಾಗಿತ್ತು. ತಡಮಾಡದ ಪೂತನಿ ಯಾರಿಗೂ ತಿಳಿಯದ ರೀತಿಯಲ್ಲಿ ಮುಕುಂದನಿಗೆ ಎದೆಹಾಲನ್ನು ನೀಡಲು ಮುಂದಾಗುತ್ತಾಳೆ.

See also  ಒತ್ತಡವು ಒಂದು ಸೈಲೆಂಟ್ ಕಿಲ್ಲರ್

 

ಹಾಲು ಕುಡಿಸುವ ನೆವದೆ ಹಾಲಾ

ಹಲವನೇ ತಾನೆರೆಯೆ ನೋಂತ ಕು

ಶೀಲೆ ಪೂತನಿ ಬೆರಗುಮಗುವಿಗೆ ಮೊಲೆಯನೂಡಿಸಿರೆ |

ಹೇಳಲಾಗದ ಧನ್ಯತಾಹಿಂ

ಡೋಲದೊಳು ತುಯ್ದಾಡಿ ಅರೆಚಣ

ಖೂಳತನಕೇ ಮತ್ತೆ ಬಂದಳು ಕಂಸಯೋಜಿತೆಯು |

 

ಮುಕುಂದನಿಗೆ ಹಾಲುಣಿಸುತ್ತಾ ಹಾಲುಣಿಸುತ್ತಾ ತಾಯ್ತನದ ಸುಖವನ್ನು ಅನುಭವಿಸತೊಡಗಿದ ಪೂತನಿಯು ವಾಸ್ತವವನ್ನೇ ಮರೆತುಬಿಟ್ಟಳು. ಆಸುರೀ ಭಾವದೆಡೆಗೊಮ್ಮೆ, ಮಾತೃ ಪ್ರೇಮದೆಡೆಗೊಮ್ಮೆ ತುಯ್ದಾಡುತ್ತಿದ್ದ ಪೂತನಿ ಮಕುಂದನನ್ನು ಕಂಡು ಬೆರಗಾದಳು. ಮಾತೃವಾತ್ಸಲ್ಯದ ಪರಾಕಾಷ್ಠೆಯನ್ನು ತಲುಪಿದಳು. ಮಾತೃಸೌಖ್ಯವನ್ನು ಅನುಭವಿಸಿದ ಪೂತನಿಯು ಕಡೆಗೆ ವಾಸ್ತವ ಪ್ರಪಂಚಕ್ಕೆ ಇಳಿದಾಗ ಆಕೆಗೆ ಆಘಾತವೇ ಕಾದಿತ್ತು. ಮುಕುಂದನನ್ನು ಅಂತ್ಯಗಾಣಿಸಲು ಬಂದ ಮಾಯಾ ರಕ್ಕಸಿಯೇ ಅಂತ್ಯವಾಗುವ ಕಾಲ ಸನಿಹವಾಗಿತ್ತು.

 

ಹಾಲನು ಹೀರುವ ಹಸುಕಂದನೆ ಇವ

ನಾಳದುಸಿರನೇ ಹೀರುವ ಜವನೇ ?

ತಾಳಲಾಗದಿದೆ ವೇದನೆಯಯ್ಯೋ

ಬಾಳು ಬಿರಿಯುತಿಹುದಯ್ಯಯ್ಯೋ !

ಹೀರಿದನೇ ಎನ್ನುಸಿರನು ?

ತೂರಿದನೇ ಎನ್ನಸುವನು ?

ಪಾರಗಾಣಿಸಿದನೆಂದು ಪೂತನಿಯು

ಜಾರಿಹೋದಳೀ ಭವದಿಂದ |

 

ವಿಷಪೂರಿತ ಹಾಲನ್ನು ಉಣಿಸಿ‌ ಮುಕುಂದನನ್ನು ಕೊಲ್ಲಲು ಹವಣಿಸಿದ ಪೂತನಿಗೆ ಮರಣ ನಿಶ್ಚಿತವಾಗಿತ್ತು. ಎದೆಹಾಲನನ್ನು ಹೀರುವ ನೆವದಲಿ ಮುಕುಂದನು ಪೂತನಿಯ ಹರಣವನ್ನೇ ಹೀರಲು ತೊಡಗಿದ್ದನು. ಉಸಿರನೇ ಹೀರುವ ಜವನಾಗಿ ಪೂತನಿಯ ಮಡಿಲೇರಿದ್ದನು. ತಾಳಲಾರದ ನೋವನ್ನು ಅನುಭವಿಸಿದ ರಕ್ಕಸಿಯ ಹರಣ ಹಾರಿ ಹೋದಾಗ ಗೋಕುಲಕ್ಕೆ ಮುಂಕುಂದನ ಬಾಲ ವಿನೋದದ ಪರಿಚಯವಾಗತೊಡಗಿತು. ಪೂತನಿಯ ಕಪಟ ಬುದ್ಧಿ, ಕೃಷ್ಣನನ್ನು ಕಂಡಾಗ ಆಕೆಯಲ್ಲಿ ಹುಟ್ಟಿದ ಮಾತೃವಾತ್ಸಲ್ಯ, ಕಾಯಕನಿಷ್ಠೆ, ಭಾವಾನುಸಂಧಾನ ಸೇರಿದಂತೆ ಪ್ರಯೋಗ- ಪರಿಣಾಮವನ್ನು ಸಾಕಾರಗೊಳಿಸುವಲ್ಲಿ ಏಕವ್ಯಕ್ತಿ ಯಕ್ಷಗಾನದ ” ಪೂತನಾಮೋಕ್ಷ ” ಪ್ರಸಂಗ ಸಾಹಿತ್ಯ ಹೊಸತನದ ಹೊಳಪಾಗಿದೆ ಎಂದರೆ ಅತಿಶಯೋಕ್ತಿಯೆನಿಸದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

200
Deevith S. K. Peradi

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು