News Kannada
Friday, December 09 2022

ಅಂಕಣ

ಸುಧನ್ವನ ಸತ್ವ ಪರೀಕ್ಷೆ

Photo Credit :

ಸುಧನ್ವನ ಸತ್ವ ಪರೀಕ್ಷೆ

ಆವಲ್ಲಿಗೆ ಪಯಣವಯ್ಯ ಪ್ರಾಣಕಾಂತ | ರಾಜ
ಠೀವಿಯಿಂದ ಪೊರಟೆಯೆಲ್ಲಿ | ಪ್ರಾಣಕಾಂತ
ಸ್ಯಂದನವಡರಿಕೊಂಡು | ಪ್ರಾಣಕಾಂತ | ಬಲು
ಚಂದದಿಂದ ಪೋಪುದೆಲ್ಲಿ | ಪ್ರಾಣಕಾಂತ

ಮೊಗದಲ್ಲಿ‌ ಮಿಗುವನ್ನು ಹೊತ್ತು ತೇರನ್ನೇರಿ ಗಂಭೀರ ಗತಿಯಲ್ಲಿ ಬರುತ್ತಿದ್ದ ಸುಧನ್ವನನ್ನು ಕಂಡ ಆತನ ಮಡದಿ ಪ್ರಭಾವತಿಯು “ಆವಲ್ಲಿಗೆ ಪಯಣವಯ್ಯ ಪ್ರಾಣಕಾಂತ ” ಎಂಬುದಾಗಿ ಪ್ರಶ್ನಿಸುವ ಸಂದರ್ಭವದು. ಕವಚ, ಕೈಕಾಪು, ಕೈದುಗಳನ್ನು ಧರಿಸಿ ಹೊರಟ ಕಾಂತನ ಹೊಸ ಹುರುಪಿನ ಬಗೆಗೆ ಬೆರಗಾದ ಮಾನಿನಿ ಭಾವ ಭಕ್ತಿಯಿಂದ ತನ್ನಿನಿಯನಲಿ ಪಯಣದ ಕಾರಣ ಕೇಳುವ ದೃಶ್ಯವದು.

ಯಕ್ಷಗಾನ ರಂಗದಲ್ಲಿ ಮನೆಮಾತಾದ ಪ್ರಸಂಗ “ಸುಧನ್ವಾರ್ಜುನ “. ಮೂಲಿಕೆ‌ ರಾಮಕೃಷ್ಣ ವಿರಚಿತ ಈ ಪ್ರಸಂಗ ಹಲವು ಭಾವೋತ್ಕರ್ಷಗಳನ್ನು ಸಾದರಪಡಿಸುವಲ್ಲಿ ಅವಕಾಶವಿರುವ ಯಕ್ಷಸಾಹಿತ್ಯ. ಈ ಪ್ರಸಂಗದ ಪದ್ಯಗಳು ಒಂದಕ್ಕೊಂದು ವಿಭಿನ್ನವಾದುದು.ವೀರ, ರೌಧ್ರ, ಶಾಂತ, ಭಕ್ತಿ, ಶೃಂಗಾರ, ಹಾಸ ಸೇರಿದಂತೆ ನವರಸಗಳನ್ನು ಸೃಜಿಸುವ ಸಾಹಿತ್ಯ ಸೃಜನಶೀಲತೆಯ ಭೂಮಿಕೆ ಈ ಪ್ರಸಂಗದಲ್ಲಿದೆ.

ಅಶ್ವಮೇಧಾರ್ಥವಾಗಿ ಬಿಟ್ಟ ಪಾಂಡಾವಾಶ್ವ ಚಂಪಕಾವತಿಯನ್ನು ಪ್ರವೇಶಿಸಿದ ವೇಳೆ ಅದನ್ನು ಕಟ್ಟಿ ಹಾಕುವಂತೆ ಸುಧನ್ವನ ತೀರ್ಥರೂಪರಾದ ಹಂಸಧ್ವಜ ಮಹಾರಾಜ ಆಜ್ಞಾಪಿಸುತ್ತಾನೆ. ಸೇನೆಯ ಪ್ರಾಥಮಿಕ ವ್ಯವಸ್ಥೆಯನ್ನು ಮುಗಿಸಿ ತಾಯಿಯಿಂದ ಆಶೀರ್ವಾದ ಪಡೆದುಕೊಂಡು ತಂಗಿಯಿಂದ ಶುಭ ಹಾರೈಕೆಗಳನ್ನು ಪಡೆದು ದೇಹಾರ್ಧ ಶರೀರೆಯಾದ ಪ್ರಭಾವತಿಯನ್ನು ಭೇಟಿಯಾಗುವುದಕ್ಕಾಗಿ ಪ್ರಭಾವತಿಯೆಡೆಗೆ ಸುಧನ್ವನ ಆಗಮನವಾಗುತ್ತದೆ.
ಪತಿಯ ಬರುವಿಕೆಗಾಗಿಯೇ ಕಾಯುತ್ತಿದ್ದ ಪ್ರಭಾವತಿಯ ಸಿಂಗರದ ಸೊಗಸನ್ನು ಕವಿ ಸೊಗಸಾಗಿ ಚಿತ್ರಿಸಿದ್ದಾನೆ.

ಸತಿ ಶಿರೋಮಣಿ ಪ್ರಭಾವತಿ ಸೊಬಗಿನಲಿ
ರತಿಯ ಸೋಲಿಪ ರೂಪಿನತಿ ಸೊಬಗಿನಲಿ
ರತುನಾಭರಣಗಳ ದ್ಯುತಿ ಬೆಳಗುತಲಿ
ಪ್ರತಿಮದಗಜದಂತೆ ಗತಿಯನಿಡುತಲಿ
ಚತುರತೆಯ ನಿರಿಯುಡುಗೆಗಳ ಶೋ
ಭಿತದ ಚೆಲ್ವಿನ ಅರ್ಧ ಚಂದ್ರಾ
ಕೃತಿಯ ಫಣಿ ಕಸ್ತೂರಿ ತಿಲಕ ಭ್ರೂ
ಲತೆಯ ಮಾನಿನಿ ಅತಿ ಹರುಷದಲಿ
ಪತಿಗೆ ಎದುರಾಗುತಲಿ ಬಂದಳು

ಚಂಪಕಾವತಿಯ ಸೊಸೆಯಾದ ಪ್ರಭಾವತಿ ಪುರಜನ ಹಾಗೂ ಪರಿಜನರೆಲ್ಲರ ಗೌರವಕ್ಕೆ ಪಾತ್ರಳಾದವಳು. ರಾಜಮನೆತನದ ಹಿರಿಯ ಸೊಸೆಯಾಗಿ ಕುಲವನ್ನುದ್ಧರಿಸುವ ಸೌಭಾಗ್ಯವನ್ನು‌ಪಡೆದುಕೊಂಡು ಬಂದಂತಹ ಪ್ರಭಾವತಿ ಪ್ರತಿವೈಕುಂಠದಂತೆ ಮೆರೆಯುವ ಚಂಪಕಾವತಿಯ ಭಾಗ್ಯಲಕ್ಷ್ಮೀ. ಸುಧನ್ವನ‌ ಮನ ಮೆಚ್ಚಿದ‌ ಮಡದಿಯಾದ ಪ್ರಭಾವತಿ ಚಿತ್ತ ಚಕೋರನನ್ನು ಸ್ವಾಗತಿಸಲು ದಾರಿ ನೋಡುತ್ತಾ ಕುಳಿತಿದ್ದಾಳೆ. ಆದರೆ ವೀರ ವೈಷ್ಣವ ಸುಧನ್ವನು ಕಂಡುಕೊಂಡ ಮೋಕ್ಷದ ದಾರಿಯ ಬಗೆ ಪ್ರಭಾವತಿಗೆ ತಿಳಿದಿರಲಿಲ್ಲ.

ನಳಿನಾಕ್ಷಿ ಕೇಳೆ ಈಗ|  ನರನೊಡನೆ|
ಕಲಹಕಯ್ದುವೆನು ಬೇಗ |
ಕಳವಳಿಸಬೇಡ ಮನದಿ | ಕುಂತಿಸುತ |
ಗಳಕುವವನಲ್ಲ ರಣದಿ |

ನಲ್ಲೆಯೆಡೆಗೆ ಬರುವ ನಲ್ಲ ಬಿಲ್ಲು ಹಿಡಿದುಕೊಂಡು ಬಂದಿರುವನಲ್ಲ ಎಂದು ವಲ್ಲಭನ ಒಲವಿಗಾಗಿ ಕಾಯುತ್ತಿದ್ದ ಪ್ರಭಾವತಿ ಸುಧನ್ವ ಬಂದ ಬಗೆಗೆ ಬೆರಗಾಗುತ್ತಾಳೆ.ಕುಂತಿಸುತನ್ನು ಕಂತುಪಿತನ ಮುಂದೆ ಎದುರಿಸಲು ಹೊರಟಿರುವ ತನ್ನ ಪತಿಯ ಅಮಿತ ಉತ್ಸಾಹವನ್ನು ಕಂಡು ಕಳೆಗುಂದುತ್ತಾಳೆ. ಗಾಬರಿಗೊಂಡ ಪ್ರಭಾವತಿ, “ಕಾಂತ ಕೇಳೆನ್ನ ಸೊಲ್ಲ, ಪಾರ್ಥನನು ಕಂತು ಪಿತ ಬಿಡುವನಲ್ಲ.ಎಂತು ಗೆಲವಹುದೊ ನಿನಗೆ,ಶ್ರೀ ಕೃಷ್ಣ ಸಂತಸದಿ ಸಾಧ್ಯನವಗೆ” ಎಂಬುದಾಗಿ ನುಡಿಯುವ ಹಿಂದೆ ಕವಿ ಪ್ರಭಾವತಿಯ ತಳಮಳವನ್ನು ಕೆಲವೇ ಕೆಲವು ಅಕ್ಷರಗಳಲ್ಲಿ ಹಿಡಿದಿಟ್ಟಿರುವುದು ವಿಶೇಷ.

See also  ನನಗೆ ಉತ್ತಮ ಸೈಕೊಲಾಜಿಸ್ಟ್ ಯಾರು ಎಂದು ಕಂಡುಹಿಡಿಯುವುದು ಹೇಗೆ!?

ಪುಂಡರೀಕಾಕ್ಷನ ಅಕ್ಷಯ ಕೃಪಾ ಕಟಾಕ್ಷ ವೀಕ್ಷಣೆಗೆ ಪಾತ್ರನಾದ ಪಾರ್ಥನಲ್ಲಿ ಸೆಣಸಾಡಲು ಹೊರಟು ನಿಂತಿರುವ ಸುಧನ್ವ ತನ್ನ ಪ್ರಿಯೆಯ ಮೊಗದಲ್ಲೊಗೆದ ಕಳವಳವನ್ನು ಕಂಡು, “ಸೆಣಸಿ ಕೃಷ್ಣಾರ್ಜುನರನು ಸಾಹಸದಿ ದಣಿಸಿ ಹಿಮ್ಮೆಟ್ಟಿಸುವೆನು.ವನಿತೆ ತನು ಸ್ಥಿರವಲ್ಲಿದು ರವಿ ಶಶಿಯುಳ್ಳನಕ ಸತ್ಕೀರ್ತಿಬಹುದು” ಎಂಬುದಾಗಿ‌ ನುಡಿದು ಮನೋಪ್ರೀತೆಯನ್ನು ಸಮಧಾನಿಸಲು ಮುಂದಾಗುತ್ತಾನೆ. ನಶ್ವರ ದೇಹದ ವಿಭ್ರಮವನ್ನು ಕಳೆಯಲು, ನರ ನಾರಾಯಣರ ದಿವ್ಯ ದರ್ಶನದ ಸಂಭ್ರಮವನ್ನು ಪಡೆಯಲು ಮುಂದಾದ ಸುಧನ್ವನಲ್ಲಿ “ಇದನೆಲ್ಲನರಿತೆ ನಿಜವು, ಸುತಹೀನಗುದಿಸುವುದೆ ಕೈವಲ್ಯವು, ಇದುವೆ ಋತುಸಮಯವೆನಗೆ ಲಾಲಿಪುದು ಹದಗಾಲ ಬೆಳೆ ಮಾಳ್ಕೆಗೆ” ಎಂದು ನುಡಿದು ಸಂತಾನ ಭಿಕ್ಷೆಯನ್ನು ಪ್ರಭಾವತಿ ಬೇಡುತ್ತಾಳೆ.

ಒಂದು ವರ್ಷಕ್ಕೆ ಹತ್ತಿರವಾದ ಈ ಜೋಡಿಬಾಳಿನಲ್ಲಿ ಇಂದು ಬೆನ್ನಿಗಂಟಿದ ಮೃತ್ಯು ದಾಂಪತ್ಯಕ್ಕೆ ನಾಳೆ ಎಂಬುದನ್ನು ಮೀಸಲಾಗಿ ಇಟ್ಟಿರಲಾರದೆಂಬ ಸತ್ಯವನ್ನು ಸುಧನ್ವನು ಅರಿತಿದ್ದರೂ ” ನಿನ್ನೊಡನೆ ದಿನ ಕಳೆಯಲು ಪಿತನಾಜ್ಞೆಯಿನ್ನು ತನಗಿಹುದು ಕೇಳು ” ಎಂಬುದಾಗಿ‌ ನುಡಿದು ಮನದನ್ನೆಯ ಆಸೆಯನ್ನು ತಿರಸ್ಕರಿಸಲು ಮುಂದಾಗುತ್ತಾನೆ. ಸತಿಯ ಬೇಡಿಕೆ ಕಾಲೋಚಿತವಲ್ಲ ಎಂದು ಬಗೆದ ಸುಧನ್ವನಿಗೆ “ಹೆಣ್ಣಿನ ಹೆಣ್ತನ‌ ಪೂರ್ಣವಾಗುವುದು ಸಂತಾನದಿಂದ” ಎಂಬ ವಾಸ್ತವನ್ನು ಪರಿಪರಿಯಾಗಿ  ಅರ್ಥೈಸಲು ಪ್ರಯತ್ನಿಸಿದಷ್ಟೂ ಪ್ರಭಾವತಿ ವಿಫಲಳಾಗುತ್ತಾಳೆ. ಋತುಕಾಲದ ಈ ಸಂದರ್ಭ ಮಿಂದು ಆರನೆಯ ದಿನ ಎಂಬುದಾಗಿ ನಾಚಿಕೆಬಿಟ್ಟು ಹೇಳಿದರೂ ಸುಧನ್ವನಿಗೆ ತನ್ನ ಮೋಕ್ಷದ ಹಾದಿ- ತನ್ನ ಜವಾಬ್ದಾರಿಯೇ ಮುಖ್ಯವಾಗಿ ಕಾಣುತ್ತದೆ.

ಸತಿಗೆ ಷೋಡಶದ ಋತು ಸಮಯಮೇಕಾದಶೀ
ವೃತ ಮಲಂಘ್ಯ ಶ್ರಾದ್ಧಮಿನಿತೊಂದೆ ದಿನಮೆ ಸಂ
ಗತ ಮಾದೊಡೆಂತು ಕರ್ತವ್ಯಮೆನೆ ಪೈತೃಕದ ಶೇಷಾನ್ನಮಾಘ್ರಾಣಿಸೆ ||
ಕೃತ ಭೋಜ್ಯಮಾದಪುದು ನಡುವಿರುಳ್ಗಳೆದಾ ವ
ನಿತೆಯನೊಡಗೂಡ ಬಹುದದರಿಂದ ಧರ್ಮ ಪ
ದ್ಧತಿಯ ನೀಕ್ಷಿಸಲಿವಳ ನಿಂದು ಮೀರುವುದು
ಮತವಲ್ಲೆಂದವಂ ತಿಳಿದನು ||

ಯಕ್ಷಗಾನ ರಂಗದಲ್ಲಿ‌ ಸದಾ ವಿನೂತನವಾಗಿ ವಿಮರ್ಶೆಗೆ ಒಳಪಡುವ ಸಾಹಿತ್ಯವಿದು. ಪತಿಗೆ ಅನುಕೂಲೆಯಾಗದ ಸತಿ ” ಬಿಡೆಬಿಡೆನು ಬಿಡೆನು ಈಗ, ಎನ್ನ ಕೂಡೊಡಗೂಡು ಕೂಡು ಬೇಗ ” ಎಂಬುದಾಗಿ ಹಠ ಹಿಡಿದಾಗ ಸುಧನ್ವನು ಸತ್ವಪರೀಕ್ಷೆಗೆ ಒಳಗಾಗುತ್ತಾನೆ. ಧರ್ಮದ ಪ್ರಧಾನ ಲಕ್ಷಣದೊಳಗಡೆ ವಿರೋಧ ಕಂಡು ಬಂದಾಗ ಸದಾಚಾರ, ಆತ್ಮಹಿತದ ಅನುಸರಣೆ ಶ್ರೇಯಸ್ಕರ ಎಂಬುದನ್ನು ಕಡೆಗೂ ಅರಿತುಕೊಂಡ ಸುಧನ್ವ ಧರ್ಮಜ್ಞನಾದ ತಂದೆಗೆ ತನ್ನ ನಿರ್ಧಾರ ಒಪ್ಪಿತವಾದೀತೆಂದು ಪ್ರಭಾವತಿಯನ್ನು ಕೂಡಲು ಮುಂದಾಗುತ್ತಾನೆ. ಹೆಂಡತಿ ಋತುಮತಿಯಾದ ಹದಿನಾರನೇ ದಿನವೂ, ಏಕಾದಶಿಯೂ, ಶ್ರಾದ್ಧವೂ, ಇವು ಮೂರು ಒಂದೇ ದಿನ ಒಟ್ಟಾದರೆ ಪಿಂಡ ಪ್ರದಾನವನ್ನು ಮಾಡಿ ಅನ್ನವನ್ನು ಆಘ್ರಾಣಿಸಿ, ಉಪವಾಸವಿದ್ದು ಅರ್ಧರಾತ್ರಿಯ ನಂತರ ಸತಿಯನ್ನು ಕೂಡುವುದರಿಂದ ಧರ್ಮಲೋಪವಿಲ್ಲದ ಸತ್ಫಲ ದೊರಕುತ್ತದೆ ಎಂಬ ಆಚಾರ ಸಂಹಿತೆಯನ್ನು ಗೋವಿಂದನ ಇಚ್ಛೆ ಇದು ಎಂದು ಭಾವಿಸಿ ಪ್ರಭಾವತಿಯನ್ನು ಕೂಡುತ್ತಾನೆ. ತನ್ನ ಮೋಕ್ಷದ ಹಾದಿಯೆಡೆಗೆ ಸಾಗುತ್ತಾನೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

200
Deevith S. K. Peradi

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು