News Kannada
Sunday, January 29 2023

ಅಂಕಣ

ಇತಿಹಾಸಕಾರನಾಗಬೇಕೇ..? ಒಮ್ಮೆ ಯೋಚಿಸಿ…!

Photo Credit :

ಇತಿಹಾಸಕಾರನಾಗಬೇಕೇ..? ಒಮ್ಮೆ ಯೋಚಿಸಿ...!

‘ಚರಿತ್ರೆ’ ಅನ್ನುವ ಪದದೊಳಗೆ ಒಂದು ಮಾಯಾಜಾಲವಿದೆ. ಪ್ರತಿಯೊಂದು ದಿನವೂ ಹಳೆಯದಾಗುತ್ತಾ ಹೋಗುತ್ತಾ ಚರಿತ್ರೆ ಬೆಳೆಯುತ್ತಾ ಹೋಗುತ್ತದೆ. ಅದು ಒಳ್ಳೆಯ ಅಥವಾ ಕೆಟ್ಟ ಘಟನೆಯಾದರೂ ಇತಿಹಾಸವೇ. ವ್ಯಕ್ತಿಗಳು, ದಾಖಲೆಗಳು, ಸ್ಥಳಗಳು, ದೇಶಗಳು, ಆಚಾರ-ವಿಚಾರ, ಪ್ರಮುಖ ಘಟನೆಗಳು.. ಹೀಗೇ ಎಲ್ಲವೂ ಇತಿಹಾಸವೇ. ಒಂದೊಮ್ಮೆ ಕಾಲದಲ್ಲಿ, ಪದವಿ ವಿಭಾಗದಲ್ಲಿ ಇತಿಹಾಸ ವಿಷಯವನ್ನು ಆಯ್ಕೆ ಮಾಡಿಕೊಳ್ಳಲು ಮುಗಿಬೀಳುತ್ತಿದ್ದ ಕೋರ್ಸ್ಗಳು ಸದ್ಯಕ್ಕೆ ಮೂಲೆಗುಂಪಾಗಿವೆ. ಕಲಾ ವಿಭಾಗದ ಕಡೆಗೆ ಮುಖ ಮಾಡುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಬಹುಶಃ ಬೇರೆ ಬೇರೆ ಪದವಿಗಳ ಆಕರ್ಷಣೆ ಅಥವಾ ಕಲಾವಿಭಾಗದ ಬದಲಾಗದ ರೂಪಗಳು ಹಿನ್ನಡೆಗೆ ಕಾರಣವಿದ್ದರೂ ಇರಬಹುದು. ಅದೇನೇ ಇರಲಿ ಇಲ್ಲಿ ಇತಿಹಾಸ ವಿಷಯದ ಬಗ್ಗೆ ಒಂದಷ್ಟು ಚರ್ಚಿಸೋಣ.

 

ಕಲಾ ವಿಭಾಗದಲ್ಲಿ ಇತಿಹಾಸ:

ಎಸ್ಸೆಸ್ಸೆಲ್ಸಿ ಬಳಿಕ ಪಿಯುಸಿಯಲ್ಲಿ, ಕಲಾವಿಭಾಗದಲ್ಲಿ ಇತಿಹಾಸವನ್ನು ಆಯ್ಕೆ ಮಾಡಿಕೊಂಡು ಮುಂದಕ್ಕೆ ಪದವಿಯಲ್ಲಿ ಇತಿಹಾಸದ ಆಯ್ಕೆ ಉತ್ತಮ. ಆದರೆ ಪದವಿಯಲ್ಲಿ ಬರೇ ಇತಿಹಾಸವಿರುವುದಿಲ್ಲ ಅದರೊಂದಿಗೆ ಬೇರೆ ವಿಷಯಗಳನ್ನೂ ಕಲಿಯುವ ಅನಿವಾರ್ಯತೆಯಿರುತ್ತದೆ. ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಪತ್ರಿಕೋದ್ಯಮ, ಮನಶಾಸ್ತ್ರ, ಚಿತ್ರಕಲೆ ಹೀಗೇ ಹಲವು ವಿಷಯಗಳ ಜೊತೆಗೆ ಇತಿಹಾಸವನ್ನು ಅಧ್ಯಯನ ಮಾಡಬಹುದು. ಯಾವ ಆಯ್ಕೆಯಾದರೂ ಉತ್ತಮವೇ ಆದರೆ ಆಸಕ್ತಿದಾಯಕ ಕ್ಷೇತ್ರವನ್ನು ಉದ್ಯೋಗದ ಮಾದರಿಯನ್ನೂ ಮನದಲ್ಲಿಟ್ಟುಕೊಂಡು ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಜಾಣತನ. ಪದವಿಯ ಬಳಿಕ ಸ್ನಾತಕೋತ್ತರ ಅಧ್ಯಯನದಲ್ಲಿ ಇತಿಹಾಸವನ್ನ ತುಂಬಾ ಆಳವಾಗಿ ಅಧ್ಯಯನ ಮಾಡಬಹುದು. ಬಳಿಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಬರೆದು ಶಿಕ್ಷಕರಾಗಿಯೂ ಅಥವಾ ಸಂಶೋಧಕರಾಗಿಯೂ ಕೆಲಸ ಮಾಡಬಹುದು.

ಯಾವ ಕೌಶಲಗಳಿರಬೇಕು..?

ಇತಿಹಾಸ ಅಭ್ಯಸಿಸುವ ವಿದ್ಯಾರ್ಥಿಯು ತನ್ನಲ್ಲಿ ಹಲವು ಧನಾತ್ಮಕ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸಮಾಜದ ಆಗು-ಹೋಗುಗಳ ಬಗ್ಗೆ ಅರಿವಿರಬೇಕು. ಇತಿಹಾಸದಲ್ಲಿ ಆಸಕ್ತಿ ಹೊಂದಿದ್ದು ನಿರಂತರ ಅಧ್ಯಯನದ ಗುಣ ಹೊಂದಿರಬೇಕು. ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಗಳ ಸೂಕ್ಷ್ಮ ಅವಲೋಕನವೂ ಅತೀ ಅಗತ್ಯ. ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು; ಉದಾಹರಣೆಗೆ, ಹಳೆಯ ವಸ್ತುಗಳ ಸಂಗ್ರಹ, ನಾಣ್ಯ ಸಂಗ್ರಹ, ಅಪರೂಪದ ಪುಸ್ತಕಗಳ ಸಂಗ್ರಹ ಹೀಗೆ ವಿಶೇಷ ಹವ್ಯಾಸಗಳನ್ನು ಹೊಂದಿದ್ದರೆ ಉತ್ತಮ.

ಉದ್ಯೋಗಾವಕಾಶಗಳು:

ಇತಿಹಾಸ ವಿಷಯವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಹಲವು ಸರಕಾರಿ ಉದ್ಯೋಗಗಳಿಗೆ ಅವಕಾಶಗಳಿವೆ. ಆದರೆ ಇದು ಬಹಳ ವಿರಳ ಮತ್ತು ಸಣ್ಣ ಸಂಖ್ಯೆಯ ಸೀಮಿತ ಅವಕಾಶಗಳು ಮಾತ್ರ. ಅನೇಕ ಖಾಸಗಿ ಸಂಸ್ಥೆಗಳಲ್ಲಿಯೂ ಈ ಕಲಾ ವಿಭಾಗದ ವಿದ್ಯಾರ್ಥಿಗಳು ಉದ್ಯೋಗ ಪಡೆಯಬಹುದು. ಇಲ್ಲಿ ಕೆಲವು ಹುದ್ದೆಗಳನ್ನು ಹೆಸರಿಸಲಾಗಿದೆ:

ಪುರಾತತ್ವ ಇಲಾಖೆಗಳಲ್ಲಿ: ಇತಿಹಾಸದಲ್ಲಿ ಅತೀ ಆಸಕ್ತಿಯಿದ್ದು, ಸ್ನಾತಕೋತ್ತರ ಅಧ್ಯಯನದಲ್ಲಿ ಪ್ರಾಕ್ತನ ಶಾಸ್ತ್ರ (Archelogy) ವಿಷಯದಲ್ಲಿ ಸಂಶೋಧನೆ ಮಾಡಿದ್ದರೆ, ಈ ವಿಭಾಗದಲ್ಲಿಯೇ್ ಉದ್ಯೋಗದ ಅವಕಾಶಗಳಿವೆ. ದ ಆರ್ಕಿಯೋಜಿಕಲ್ ಸರ್ವೇ ಆಫ್ ಇಂಡಿಯಾ (The archeological Survey of India) ಕೆಲವು ವಿದ್ಯಾರ್ಥಿಗಳನ್ನು ಪ್ರಾಕ್ತನಶಾಸ್ತ್ರಜ್ಞರನ್ನಾಗಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ಮಾರಕಗಳ ಅಧ್ಯಯನ, ಸಮೀಕ್ಷೆ, ಸಂಶೋಧನೆ ಕುರಿತಂತೆ ಅನೇಕ ಜವಬ್ದಾರಿಗಳು ಇವರಿಗಿರುತ್ತವೆ. ಸರಕಾರಿ ಉದ್ಯೋಗವಾಗಿರುವುದರಿಂದ ಉತ್ತಮ ವೇತನ ಕೂಡ ದೊರೆಯಲಿದೆ.

See also  ಸುಮಂಗಲಿಯರ ಸಂಕೇತ ಬೆಳ್ಳಿ ಕಾಲುಂಗುರ

ಮ್ಯೂಸಿಯಂಗಳಲ್ಲಿ: ಮ್ಯೂಸಿಯಾಲಜಿಯಲ್ಲಿ ವಿಶೇಷ ಅಧ್ಯಯನ ಮಾಡಿದವರಿಗೆ ಅನೇಕ ಪ್ರದರ್ಶನಾಲಯಾಳಲ್ಲಿ, ವಸ್ತು ಸಂಗ್ರಹಾಲಯಗಳಲ್ಲಿ ಉದ್ಯೋಗಾವಕಾಶಗಳಿವೆ. ಮ್ಯೂಸಿಯಂನಲ್ಲಿ ವಿನ್ಯಾಸಕಾರನಾಗಿ, ಆಡಳಿತ ಮಂಡಳಿಯಲ್ಲಿ, ನಿರ್ವಹಣಾಕಾರರಾಗಿ ಕೂಡ ಕೆಲಸ ಮಾಡಬಹುದು. ಅಷ್ಟು ಮಾತ್ರವಲ್ಲದೆ, ಸಮೀಕ್ಷೆ ಮತ್ತು ಸಂಶೋಧನೆ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿಯೂ ಉದ್ಯೋಗಗಳಿವೆ.

ಪ್ರದರ್ಶನಾಲಯಗಳಲ್ಲಿ: ಸಾಮಾನ್ಯ ಇತಿಹಾಸದಲ್ಲಿ ವಿಶೇಷ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಲೋಹಗಳು, ಟೆರಕೋಟ, ಟೆಕ್ಸ್ಟೈಲ್ಸ್ (ಜವಳಿ), ಚಿತ್ರಕಲೆ ಮತ್ತು ಇತರೆ ವಿಷಯಗಳನ್ನು ಅಧ್ಯಯನ ಮಾಡಿದವರಿಗೆ ಅದರದ್ದೇ ಆದ ಉದ್ಯೋಗಾವಕಾಶಗಳು ದೊರೆಯುತ್ತವೆ. ಸಂಶೋಧನಾ ವಿದ್ಯಾರ್ಥಿಯಾಗಿಯೂ ಇಲ್ಲಿ ಕೆಲಸ ಮಾಡಬಹುದು. ಕೆಲವೊಂದು ಕಚೇರಿ ಕೆಲಸಗಳೂ ಸಿಗಬಹುದು; ಉದಾಹರಣೆಗೆ, ಪ್ರತೀ ವಸ್ತುಗಳ ದಾಖಲೆ ನಿರ್ವಹಣೆ, ಯಾವಾಗ ಆ ವಸ್ತುಗಳ ಆವಿಷ್ಕಾರ ಅಥವಾ ಹೊಂದುವಿಕೆ, ಪ್ರಾಯ (ವಸ್ತುವಿನ ವಯಸ್ಸು), ವಸ್ತುಗಳ ನಿರ್ವಹಣೆ ಹೀಗೆ ಹಲವು ಕೆಲಸಗಳು ಇಲ್ಲಿರುತ್ತವೆ.

ಇತಿಹಾಸಕಾರರಾಗಿ: ಸಂಶೋಧನೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸಮಾಡುವವರಿಗೆ ಇತಿಹಾಸ ವಿಫುಲ ಅವಕಾಶಗಳನ್ನು ನೀಡುತ್ತದೆ. ಲಿಖಿತ ಮತ್ತು ಪ್ರಕಟಿತ ಲೇಖನಗಳು, ದಾಖಲೆಗಳು, ಪುಸ್ತಕಗಳ ಕುರಿತಾದ ಅಧ್ಯಯನ, ಹೀಗೆ ಹಲವಾರು ಕಡೆಗಳಲ್ಲಿ ಕೆಲಸ ಮಾಡಬಹುದು. ಸರಕಾರಿ ಇಲಾಖೆಗಳಲ್ಲೂ, ಮ್ಯೂಸಿಯಂಗಳಲ್ಲೂ, ಅಧ್ಯಯನ ಕೇಂದ್ರಗಳಲ್ಲೂ ಇತಿಹಾಸಕಾರರಾಗಿ ಅವಕಾಶಗಳಿವೆ. ಅಷ್ಟು ಮಾತ್ರವಲ್ಲದೆ, ರಾಜಕೀಯ ಇತಿಹಾಸ, ಸೇನಾ ಇತಿಹಾಸ, ವಿಶ್ವದ ಇತಿಹಾಸ ಹೀಗೇ ಅನೇಕ ವಿಭಾಗಗಳಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿ ಇತಿಹಾಸಕಾರರಾಗಿ ಬೆಳೆಯಲು ಅವಕಾಶಗಳಿವೆ.

ದಾಖಲೆ ವಿಭಾಗಳಲ್ಲಿ: ದಾಖಲೆಗಳನ್ನು ಕಲೆಹಾಕುವ ಅನೇಕ ವಿಭಾಗಗಳಿವೆ, ಕೇಂದ್ರ ಮತ್ತು ರಾಜ್ಯ ದಾಖಲೆ ವಿಭಾಗಗಳಲ್ಲಿ ಈ ಕೆಲಸ ನಡೆಯುತ್ತದೆ. ದಾಖಲೆಗಳ ಸಂಗ್ರಹ, ಸಮೀಕ್ಷೆ, ಸಂಶೋಧನೆ, ಸಂರಕ್ಷಣೆ್ ಮತ್ತು ನಿರ್ವಹಣೆ ಹೀಗೆ ಹಲವು ಜವಾಬ್ದಾರಿಯುತ ಕೆಲಸಗಳಿರುತ್ತವೆ. ಮ್ಯೂಸಿಯಂಗಳಲ್ಲಿ, ಗ್ರಂಥಾಲಯಗಳಲ್ಲಿ, ಕೇಂದ್ರ ಮತ್ತು ರಾಜ್ಯ ಆರ್ಕೈವ್ಸ್ ವಿಭಾಗಗಳಲ್ಲಿ  ಕೆಲಸ ಮಾಡಬಹುದು.

ಇತಿಹಾಸ ತಜ್ಞರಾಗಿ: ಇತ್ತೀಚೆಗೆ ಇತಿಹಾಸ ಅಧ್ಯಯನ ಮಾಡಿದವರಿಗೆ ವಿವಿಧ ಬೇಡಿಕೆಗಳು ಬರಲು ಪ್ರಾರಂಭವಾಗಿದೆ. ಉದಾಹರಣೆಗೆ; ಚಲನಚಿತ್ರ ತಯಾರಿಯಲ್ಲಿ ಬೇರೆ ಬೇರೆ ರೀತಿಯಲ್ಲಿ ಇವರನ್ನು ಬಳಸಿಕೊಳ್ಳಲಾಗುತ್ತಿದೆ. ಸಾಂಪ್ರದಾಯಿಕ ವಸ್ತ್ರ ವಿನ್ಯಾಸಕ್ಕೆ, ಆಭರಣ ಹೊಂದಾಣಿಕೆಗೆ, ಚಲನಚಿತ್ರಕ್ಕೆ ಬೇಕಾಗುವ ಐತಿಹಾಸಿಕ ಸೆಟ್ ಗಳಿಗಾಗಿ, ಇವರು ಕೆಲಸ ಮಾಡಬಹುದು. ಇತ್ತೀಚೆಗೆ ಹಲವು ವಿದ್ಯಾರ್ಥಿಗಳು, ನಿರ್ದೇಶಕರಾಗಿ, ಸಿನೆಮಾಟೋಗ್ರಾಫರ್ ಆಗಿ ಬೆಳೆದವರೂ ಕಾಣಸಿಗುತ್ತಾರೆ.

ಶಿಕ್ಷಕರಾಗಿ: ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿಯಿರುವವರಿಗೆ ಶಿಕ್ಷಕರಾಗಿ ಕೆಲಸ ಮಾಡಲು ಅವಕಾಶಗಳಿವೆ. ಸಣ್ಣ ತರಗತಿಗಳಿಗೆ ಸಮಾಜ-ವಿಜ್ಞನ, ಪಿಯುಸಿಯ ಬಳಿಕ ಪದವಿ, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೂ ಇತಿಹಾಸವನ್ನು ಕಲಿಸಬಹುದು. ಸರಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲೂ ಅವಕಾಶಗಳಿವೆ.

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ: ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇತಿಹಾಸದ ಪ್ರಶ್ನೆಗಳು ಸಾಮಾನ್ಯ ವಿಷಯವಾಗಿದೆ. ನಾಗರಿಕ ಸೇವಾ ಪರೀಕ್ಷೆಗಳಿರಬಹುದು, ರೈಲ್ವೇ ಅಥವಾ ಯಾವುದೇ ಕೇಂದ್ರ ಹಾಗೂ ರಾಜ್ಯ ಪರೀಕ್ಷೆಗಳಿರಬಹುದು ಇತಿಹಾಸ ತೆಗೆದುಕೊಂಡ ವಿದ್ಯಾರ್ಥಿಗಳು ಬಹಳ ಸುಲಭವಾಗಿ ಪರೀಕ್ಷೆಯನ್ನು ನಿಭಾಯಿಸುತ್ತಾರೆ ಮಾತ್ರವಲ್ಲದೆ ಕೇಂದ್ರ ಅಥವಾ ರಾಜ್ಯದಲ್ಲಿ ಬರುವ ಹಲವಾರು ಸರಕಾರಿ ಉದ್ಯೋಗಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ.

See also  ಧರ್ಮಸ್ಥಳ: ಪಾವಿತ್ರ್ಯತೆ ಹಾಗೂ ಧರ್ಮದ ಸಮ್ಮಿಲನ

ಅನೇಕ ಇತರೆ ಹುದ್ದೆಗಳು:

ಇತಿಹಾಸ ಓದಿದವನು ಒಬ್ಬ ಒಳ್ಳೆಯ ರಾಜಕೀಯ ನೇತಾರನಾಗಿಯೂ ಬೆಳೆಯಬಹುದು. ಹೆರಿಟೇಜ್ ಮ್ಯಾನೇಜರ್ ಆಗಿ ಕೆಲವು ಸ್ಮಾರಕಗಳಲ್ಲಿ, ಗೈಡ್ ಆಗಿಯೂ ಕೆಲಸ ಮಾಡಬಹುದು. ಐತಿಹಾಸಿಕ ಉದ್ಯಾನಗಳಲ್ಲಿ, ರಾಷ್ಟ್ರೀಯ ಉದ್ಯಾನವನಗಳಲ್ಲಿ, ಸಮೀಕ್ಷಕರಾಗಿಯೂ ಹುದ್ದೆಗಳಿರುತ್ತವೆ.

ಕೊನೆಗೊಂದು ಕಿವಿಮಾತು:

ನೋಡಿದಿರಲ್ಲಾ ಗೆಳೆಯರೇ, ಇತಿಹಾಸ ಬೇರೆ ಬೇರೆ ವಿಷಯಗಳಿಗೆ ಸಂಬಂಧದ ಕೊಂಡಿ ಬೆಸೆದು ಹತ್ತು ಹಲವು ಉದ್ಯೋಗಗಳಿಗೆ ನಾಂದಿಯಾಗಿದೆ. ಯಾರೇ ಆಗಿರಲಿ ತನ್ನ ಅಚಲವಾದ ನಿಲುವಿನೊಂದಿಗೆ ಇತಿಹಾಸ ವಿಷಯದ ಬಗ್ಗೆ ಆಸಕ್ತಿ ತೋರುವನೋ, ಖಂಡಿತಾ ಉತ್ತಮ ಭವಿಷ್ಯವನ್ನು ತನ್ನದಾಗಿಸಿಕೊಳ್ಳೊತ್ತಾನೆ. ಇತಿಹಾಸದೊಂದಿಗೆ ಚರಿತ್ರೆಯ ಪುಟ ಸೇರಿಕೊಳ್ಳಲು ಇದೊಂದು ಸುವರ್ಣಾವಕಾಶ. ಹಾಗಾಗಿ ಕಲಾವಿಭಾಗದಲ್ಲಿ ಆಸಕ್ತಿಯಿರುವವರು ಒಮ್ಮೆ ಈ ಕಡೆ ಗಮನ ಹರಿಸಬಹುದು. ಮುಂದಿನ ವಾರ ಮತ್ತೆ ಸಿಗೋಣ ಇನ್ನೊಂದು ಡಿಗ್ರಿ.. ಮತ್ತು ನೌಕ್ರಿ.. ಜೊತೆ ಜೊತೆಯಲಿ..

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

197
Ashok K. G.

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು