ಹೆಣ್ಣು ಮಕ್ಕಳು ಸೌಂದರ್ಯದ ಬಗ್ಗೆ ಅತೀ ಹೆಚ್ಚು ಕಾಳಜಿ ವಹಿಸುತ್ತಾರೆ. ಅಂತವರಿಗಾಗಿ ಅಲೋವೆರಾ ಸಹಕಾರಿಯಾಗಿರುತ್ತದೆ. ಚರ್ಮದ ಬಹುತೇಕ ಸಮಸ್ಯೆಗಳಿಗೆ ಅಲೋವೆರಾ ಜೆಲ್ ಉತ್ತಮ ಬಳಕೆಯಾಗಿದೆ. ಅಷ್ಟೇ ಯಾಕೆ ಕೂದಲಿನ ಸಮಸ್ಯೆಗೂ ಅಲೋವೆರಾ ಜೆಲ್ ಮುಂಚೂಣಿಯಲ್ಲಿ ಸಿಗುವ ಸುಲಭದ ಪರಿಹಾರವಾಗಿದೆ. ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳ ಪರಿಹಾರಕ್ಕೂ ಕೈಜೋಡಿಸುವ ಅಲೋವೆರಾ ಬೇಸಿಗೆಯಲ್ಲಿ ಹೆಚ್ಚು ಉಪಯುಕ್ತ.
ಇನ್ನು ಬೇಸಿಗೆ ಕಾಲದಲ್ಲಿ ಮೊಡವೆಗಳನ್ನು ತೊಡೆದು ಹಾಕುವುದರಿಂದ ಹಿಡಿದು, ಮಾಯಿಶ್ಚರೈಸರ್ ಮತ್ತು ಸನ್ಸ್ಟೀನ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಸಡಿಲವಾದ ಚರ್ಮವನ್ನು ಬಿಗಿಗೊಳಿಸುವುದು, ನಿಮ್ಮ ದೇಹವನ್ನು ಆರೋಗ್ಯಕರವಾಗಿಸುವುದು ಮತ್ತು ಉತ್ತಮ ಹೊಳಪನ್ನು ಪಡೆಯಲು, ಅಲೋವೆರಾ ಎಂಬುದು ಮೊದಲು ಬರುವ ಹೆಸರು. ಜೆಲ್ ರೂಪದಲ್ಲಿ ಅಲೋವೆರಾವನ್ನು ಸೌಂದರ್ಯವನ್ನು ವೃದ್ಧಿಸಲು ಹೇಗೆಲ್ಲಾ ಬಳಸಬಹುದು ಎಂಬುದನ್ನು ತಿಳಿಯೋಣ.
ಮೇಕಪ್ ಹೆಚ್ಚು ಹೊತ್ತು ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅಂತವರಿಗಾಗಿ ಅಲೋವೆರಾ ಜೆಲ್ ಸಹಕಾರಿಯಾಗಿರುತ್ತದೆ. ಮೇಕಪ್ ಹಾಕುವ ಹತ್ತು ನಿಮಿಷ ಮೊದಲು ಮುಖಕ್ಕೆ ಅಲೋವೆ ಜೆಲ್ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ. ನಂತರ ನೇರವಾಗಿ ಪೌಂಡೇಶನ್ ಕ್ರೀಮ್ನ್ನು ಹಚ್ಚಬಹುದು. ಇದು ಮೇಕಪ್ಅನ್ನು ಚೆನ್ನಾಗಿ ಹಿಟಿದುಟ್ಟುಕೊಂಡು ಹೆಚ್ಚು ಹೊತ್ತು ಮೇಕಪ್ ಉಳಿಯುವಂತೆ ಮಾಡುತ್ತದೆ.
ಇನ್ನು, ಒಣಗಿದ ಚರ್ಮ ಸುಕ್ಕುಗಟ್ಟಿದ ಚರ್ಮದಿಂದ ದೂರ ಇರಲು ಮತ್ತು ಪಾದಗಳಲ್ಲಿ ಚರ್ಮ ಸುಲಿದು ಬರುವುದನ್ನು ಸರಿಪಡಿಸಲು ಅಲೋವೆರಾ ಜೆಲ್ ಸಹಾಯಕಾವಾಗಿದೆ. ಚರ್ಮದ ಮೇಲಿನ ಸತ್ತ ಜೀವಕೋಶಗಳನ್ನು ನಾಶಪಡಿಸಿ ಮೃದು ಚರ್ಮವನ್ನು ಅಲೋವೆರಾ ಜೆಲ್ ನೀಡುತ್ತದೆ. ಒಂದು ಚಮಚ ಅಲೋವೆರಾ ಜೆಲ್ಗೆ ಸಕ್ಕರೆ ಅಥವಾ ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ ಸ್ಟ್ರಬ್ ಮಾಡಿ. ಇದು ಸುಲಿದ ಚರ್ಮವನ್ನು ತೆಗೆದುಹಾಕಿ ಹೊಸ ಚರ್ಮದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಟಾನ್ ಆದ ಚರ್ಮವನ್ನೂ ಸರಿಪಡಿಸುತ್ತದೆ.
ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ಮೇಕಪ್ ಹಚ್ಚಿಕೊಳ್ಳುವಾಗ ಹೇಗೆಲ್ಲಾ ಕಾಳಜಿ ವಹಿಸುತ್ತೀರೋ ಅದೇ ರೀತಿ ತೆಗೆಯುವಾಗಲೂ ಅದೇ ರೀತಿ ಕ್ರಮಗಳನ್ನು ಪಾಲಿಸಬೇಕು. ಇಲ್ಲವಾದರೆ ಚರ್ಮಕ್ಕೆ ಹಾನಿಯಾಗಿ ರಾಶಸ್ನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದಕ್ಕೆ ಅಲೋವೆರಾ ಜೆಲ್ ಬೆಸ್ಟ್ ಯಾಕೆಂದರೆ ಇದು ಚರ್ಮವನ್ನು ರಕ್ಷಿಸುತ್ತದೆ ಅಲ್ಲದೆ ಕೆಮಿಕಲ್ ಚರ್ಮದ ಮೇಲೆ ಮಾಡುವ ಹಾನಿಯನ್ನು ತಪ್ಪಿಸುತ್ತದೆ. ಒಂದು ಹತ್ತಿ ಉಂಡೆಯನ್ನು ಮಾಡಿಕೊಳ್ಳಿ. ನಂತರ ಅದಕ್ಕೆ ಅಲೋವೆರಾ ಜೆಲ್ನ್ನು ಹಾಕಿಕೊಂಡು ಮೊದಲು ಕಣ್ಣಿನ ಭಾಗದ ಮೇಕಪ್ ತೆಗೆಯಿರಿ. ನಂತರ ಕೆನ್ನೆ, ಹಣೆ ಮತ್ತು ಉಳಿದ ಭಾಗದ ಮೇಕಪ್ನ್ನು ತೆಗೆಯಿರಿ. ಇದರಿಂದ ಚರ್ಮಕ್ಕೂ ಹಾನಿಯಾಗದು ಜೊತೆಗೆ ಸುಲಭವಾಗಿ ಮೇಕಪ್ನ್ನೂ ತೆಗೆಯಬಹುದಾಗಿದೆ.
ಇನ್ನು ಬೇಸಿಗೆ ಸಮಯದಲ್ಲಿ ಧೂಳು, ನಿರ್ಜಲೀಕರಣದಿಂದ ಹಿಮ್ಮಡಿಗಳು ಒಣಗುತ್ತದೆ. ಇದರಿಂದ ಬಿರುಕು ಬಿಟ್ಟ ರೀತಿಯಲ್ಲಿ ಕಾಣುತ್ತದೆ. ಇದನ್ನು ಸರಿಪಡಿಸಲು ಅಲೋವೆರ್ ಜೆಲ್ ಉತ್ತಮ ಮದ್ದಾಗಿದೆ. ನಾಲ್ಕು ಚಮಚ ಅಲೋವೆರಾ ಜೆಲ್ ಜೊತೆಗೆ ಅರ್ಧ ಚಮಚ ಓಟ್ಮೀಲ್, ಒಂದು ಚಮಚ ಪರಿಮಳ ಇರದ ಬಾಡಿಲೋಷನ್ ಹಾಕಿ ಮಿಶ್ರಣ ಮಾಡಿ ಪಾದಗಳಿಗೆ ಮಾಸ್ಕ್ ರೀತಿ ಅಳವಡಿಸಿಕೊಳ್ಳಿ, ರಾತ್ರಿ ಮಲಗುವಾಗ ಇದನ್ನು ಹಾಕಿಕೊಂಡರೆ ಹೆಚ್ಚು ಹೊತ್ತು ಪಾದಗಳ ಉಳಿದು, ಚರ್ಮವನ್ನು ಮಾಶ್ಚರೈಸ್ ಮಾಡುತ್ತದೆ.