ಸಾವಿನ ಕುರಿತಾಗಿ ಸಾಹಿತಿ, ಜೋಗಿ ಅವರು ಬರೆದಿರುವ ಹೊಸ ಪುಸ್ತಕ ‘ಸಾವು’. ಸಾವಿನ ಕುರಿತಾಗಿ ಸುಮಾರು 50 ಬರಹಗಳಿರುವ, 240 ಪುಟಗಳ ಬೃಹತ್ ಪುಸ್ತಕವಿದು.
ಗರುಡ ಪುರಾಣ, ಉಪನಿಷತ್ತು, ಪುರಾಣದ ಕತೆಗಳೆಲ್ಲ ಸಾವಿನ ಚಿಂತನೆ ನಡೆಸಿವೆ. ಸಾವಿನ ನಂತರ ಏನು, ಪುನರ್ಜನ್ಮ ಇದೆಯೇ ಎಂದು ಹುಡುಕಾಡಿವೆ. ಕವಿಗಳೂ, ಕತೆಗಾರರೂ, ಚಿಂತಕರೂ, ಅಧ್ಯಾತ್ಮ ಬಲ್ಲವರೂ ಸಾವಿನ ಬೆನ್ನಟ್ಟಿ ಹೋಗಿದ್ದಾರೆ. ನಶ್ವರವಾದ ಬದುಕು, ಅಮರತ್ವದ ಆಶೆ ಮತ್ತು ಸಾವಿನ ಭಯ ನಮ್ಮನ್ನು ಸದಾ ಕಾಡುತ್ತಲೇ ಇರುತ್ತದೆ.
ಈ ಪುಸ್ತಕದಲ್ಲಿ ಸಾವನ್ನು ಎಲ್ಲಾ ಮಗ್ಗಲುಗಳಿಂದ ಸ್ಪರ್ಶಿಸಲಾಗಿದೆ. ಬದುಕುತ್ತಿದ್ದೇನೆ ಅಂದರೆ ಸಾಯುತ್ತಿದ್ದೇನೆ ಅಂತಲೇ ಅರ್ಥ. ಒಂದು ದಿನ ಬದುಕಿದರೆ, ನಮ್ಮ ಬದುಕಿನಿಂದ ಒಂದು ದಿನ ಕಳೆದುಹೋದ ಹಾಗೆ. ಎಲ್ಲ ದಿನಗಳೂ ಮುಗಿದ ನಂತರ ಆ ದಿನ ಬರುತ್ತದೆ. ಹಕ್ಕಿ ಹಾರಿಹೋಗುತ್ತದೆ. ಗಿಣಿಯು ಪಂಜರದೊಳಿಲ್ಲ ಅನ್ನುವುದು ಗೊತ್ತಾಗುತ್ತದೆ. ಆದರೆ ಆ ಗಿಣಿ ಮತ್ತೊಂದು ಪಂಜರವನ್ನು ಹುಡುಕಿಕೊಂಡು ಹೊರಡುತ್ತದೆಯೋ ಸ್ವಚ್ಛಂದವಾಗಿ ಹಾರಾಡುತ್ತಲೇ ಇರಲಿಕ್ಕೆ ಬಯಸುತ್ತದೆಯೋ ಗೊತ್ತಿಲ್ಲ. ಹುಟ್ಟಿನ ಜತೆಗೇ ಹುಟ್ಟುವ ಗುಟ್ಟು ಸಾವು, ಆ ಗುಟ್ಟಿನ ಕುರಿತು ಈ ಪುಸ್ತಕ.