News Kannada
Sunday, October 01 2023
ಅಂಕಣ

ಇತಿಹಾಸದ ಸತ್ಯವನ್ನು ತಿಳಿಸುವ ಉದ್ದೇಶದಿಂದ ಹೊರಬಂದ ಕಾದಂಬರಿ “ಆವರಣ”

The novel "Enclosure" came out with the aim of telling the truth of history
Photo Credit : Freepik

“ಆವರಣ” ಖ್ಯಾತ ಸಾಹಿತಿ ಎಸ್. ಎಲ್. ಭೈರಪ್ಪನವರ ಕಾದಂಬರಿ. ಭೈರಪ್ಪನವರ ಮಿಕ್ಕ ಕಾದಂಬರಿಗಳನ್ನು ಪ್ರಕಟಿಸಿರುವ ‘ಸಾಹಿತ್ಯ ಭಂಡಾರ’ ಈ ಕಾದಂಬರಿಯನ್ನೂ ಹೊರ ತಂದಿದೆ.

ಕನ್ನಡ ಸಾಹಿತ್ಯದಲ್ಲಿ ವಿವಾದದ ಅಲೆಯನ್ನೇ ಎಬ್ಬಿಸಿದ ಭೈರಪ್ಪನವರ ಕೃತಿಯಾದ ಆವರಣವು ಬಿಡುಗಡೆಗೆ ಮುನ್ನವೇ ಎಲ್ಲಾ ಮುದ್ರಿತ ಪ್ರತಿಗಳೂ ಮಾರಾಟಾವಾದ ಕೃತಿ. ಹಲವಾರು ಹೆಸರಾಂತ ಲೇಖಕರಿಂದ ಟೀಕೆಗೆ ಒಳಗಾದರೂ ಸಹ ಇತಿಹಾಸದ ಸತ್ಯವನ್ನು ತಿಳಿಸುವ ಉದ್ದೇಶದಿಂದ ಹೊರಬಂದ ಕನ್ನಡದ ಅತ್ತ್ಯುತ್ತಮ ರಚನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹತ್ತು ಬಾರಿ ಮರುಪ್ರಕಟಿತವಾಗಿ ಭಾರತದ ಸಾಹಿತ್ಯದಲ್ಲಿ ಇತಿಹಾಸ ಸೃಷ್ಟಿಸಿದೆ.

ಕಾದಂಬರಿಯ ಮುಖ್ಯ ಪಾತ್ರಗಳು ರಜಿಯಾ ಉರ್ಫ್ ಲಕ್ಷ್ಮೀ, ಆಕೆಯ ಗಂಡ ಅಮೀರ್ ಮತ್ತು ರಜಿಯಾಳ ಬೀಗರಾದ ಪ್ರೊಫೆಸರ್ ಶಾಸ್ತ್ರೀ.

ಪೂರ್ಣ ಇಸ್ಲಾಮಿ ಚೌಕಟ್ಟಿನಲ್ಲಿ ರಚಿಸಲ್ಪಟ್ಟಿರುವ ಈ ಕೃತಿಯ ಕಥಾನಾಯಕಿ ರಝಿಯಾ ಉರುಫ್ ಲಕ್ಷ್ಮಿ, ಕಥಾನಾಯಕ ಅವಳ ಶೌಹರ್ ಅಮೀರ, ಚಿತ್ರರಂಗದಲ್ಲಿ ಕೆಲಸ ಮಾಡುವ ದಂಪತಿಗಳು. ಮೂಲ ಹಿಂದೂ ಧರ್ಮದವಳಾದ ಲಕ್ಷ್ಮಿ, ಆಮೀರನಿಗಾಗಿ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ. ಧರ್ಮದಲ್ಲಿ, ಅದರ ಆಚರಣೆಗಳಲ್ಲಿ ನಂಬಿಕೆ ಇಲ್ಲವೆಂದು, ಕೇವಲ ತೋರ್ಪಡಿಕೆಗಾಗಿ ಧರ್ಮ ಬದಲಾವಣೆಯೆಂದು ಅಮೀರ ಹೇಳಿದರೂ ಸಹ, ಕಥೆ ಮುಂದುವರೆದಂತೆ, ತಾನು ತನ್ನ ಧರ್ಮದಲ್ಲಿ ತನಗಿರುವ ವಿಶೇಷ ಅಧಿಕಾರಗಳನ್ನು ಚಲಾಯಿಸುವುದನ್ನು ಕಾಣುತ್ತೇವೆ.

ಇತಿಹಾಸದ ಸತ್ಯವನ್ನು ತಿಳಿಯುವ ಹಾಗು ತಿಳಿಸುವ ಕೆಲಸವನ್ನು ಲೇಖಕರು ಕಥಾನಾಯಕಿಯ ಮೂಲಕ ಮಾಡಿಸುತ್ತಾರೆ. ಕಾದಂಬರಿಯೊಳಗೆ ಮತ್ತೊಂದು ಕಥೆಯನ್ನು ಸೃಷ್ಟಿಸಿ, ಅದರ ಮುಖಾಂತರ ಭಾರತದಲ್ಲಿ ಮುಘಲರ ಆಳ್ವಿಕೆಯ ರೀತಿಯನ್ನು ಹೇಳುತ್ತದೆ. ಭೂತಕಾಲದಲ್ಲಿ ನಡೆದಂತೆ ಹೇಳುವ ಬದಲು, ಸೆರೆಸಿಕ್ಕ ಓರ್ವ ರಾಜಪೂತ ಯುವರಾಜ ಕಂಡಂತೆ, ಅನುಭವಿಸಿದಂತೆ, ಆತನ ದೃಷ್ಟಿಯಿಂದ ಹೇಳಲಾಗಿದೆ. ಇದು ಕಥಾನಾಯಕಿಯು ರಚಿಸುವ ಕಾದಂಬರಿಯಾದರೂ, ಇತಿಹಾಸದ ಸತ್ಯದ ಮೇಲೆ ರಚಿಸಿರುವ ಕೃತಿಯಾಗಿದೆ.

ಇತಿಹಾಸವನ್ನು ತಿಳಿದ, ವಿದ್ಯಾವಂತನಾದ ಅಮೀರನು ತನ್ನ ಧರ್ಮದ ಸರಿ-ತಪ್ಪು ಎಂಬ ವಾದ ಬಂದಾಗ, ತನ್ನ ಧರ್ಮದ ಆಯಕಟ್ಟಿನಲ್ಲೇ ನಿಂತು ಯೋಚಿಸುವ ವಿಪರ್ಯಾಸವನ್ನು ಕಾಣುತ್ತೇವೆ. ಸಮಾಜದಲ್ಲಿ ಸಮಾನತೆಯನ್ನು, ಪರಧರ್ಮ ಸಹಿಷ್ಣುತೆಯನ್ನು ಸೃಷ್ಟಿಸಲು ಕಾರ್ಯ ನಿರ್ವಹಿಸುತ್ತಾ, ಅವರ ಅರಿವಿಲ್ಲದಂತೆ, ಒಂದು ಧರ್ಮವನ್ನು ಮೇಲೆತ್ತುವ ಹುರುಪಿನಲ್ಲಿ, ಮತ್ತೊಂದು ಧರ್ಮದ ಆಚರಣೆಗಳನ್ನು ಖಂಡಿಸುವ ಸಮಾಜದ ಭಾಗವನ್ನು ಲೇಖಕರು ಪ್ರೊಫೆಸರ್ ಶಾಸ್ತ್ರಿಗಳ ರೂಪದಲ್ಲಿ ಚಿತ್ರಿಸಿದ್ದಾರೆ.

ಸಮಾನತೆಯನ್ನು ತರಬಯಸುವ ಶಾಸ್ತ್ರಿಗಳೂ ಸಹ ಇತಿಹಾಸದ ಸತ್ಯವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ. ಮಾನವ ಸಂಬಂಧಗಳಿಗೆ ಧರ್ಮದ ಚೌಕಟ್ಟಿಲ್ಲವೆಂದು ಬಲ್ಲವರಾಗಿಯೂ, ತನ್ನ ಮಗಳು ಧರ್ಮಾಂತರವಾಗುವ ವಿಚಾರದಲ್ಲಿ ಕ್ಷಣಕಾಲ ತಳಮಳಗೊಳ್ಳುತ್ತಾರೆ.

ಸತ್ಯವನ್ನು ಒಪ್ಪಲು ನಿರಾಕರಿಸುವ ಸಮಾಜವು, ಸರ್ಕಾರವು, ರಝಿಯಾಳ ಕಾದಂಬರಿಯನ್ನು ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಲೇಖನಗಳೆಂದು ನಿರ್ಧರಿಸಿ, ಆಕೆಯನ್ನು ಬಂಧಿಸಲು ಆದೇಶಿಸುತ್ತಾರೆ. ಇದರ ಮುಖಾಂತರ ಲೇಖಕರು ಸಮಾಜದಲ್ಲಿ ಸತ್ಯವನ್ನು ಹೊರತರುವಲ್ಲಿ ಇರುವ ತೊಡಕುಗಳನ್ನು ಬಿಚ್ಚಿಡುತ್ತಾರೆ.

See also  ತುಟಿಯ ಸೌಂದರ್ಯವನ್ನು ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

ಇತಿಹಾಸಕ್ಕೆ ಯಾವ ಧ್ಯೇಯವಿಲ್ಲ, ಇರಕೂಡದು ಅದು ಕೇವಲ ಸತ್ಯಾನ್ವೇಷಣೆಯ ಹಾದಿಯಾಗಿರಬೇಕು. ಒಂದು ಧರ್ಮದ ಇತಿಹಾಸದಿಂದ ಆ ಧರ್ಮದ ಪ್ರಸ್ತುತ ಸ್ಥಾನಮಾನ ನಿರ್ಧಾರವಾಗುವುದಿಲ್ಲ. ಇತಿಹಾಸದ ಸತ್ಯವನ್ನು ತಿಳಿದು, ತಪ್ಪುಗಳನ್ನು ಅರಿತು, ತಿದ್ದಿ, ಮರುಕಳಿಸದಂತೆ ಸಾಗಬೇಕು ಎಂದು ರಝಿಯಾ ಪಾತ್ರದ ಮೂಲಕ ಲೇಖಕರು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

4383

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು