ಇಂದಿನ ದಿನಗಳಲ್ಲಿ ನಾಯಿಗಳಿಗೆ ಅಥವಾ ಇತರೆ ಜೀವಿಗಳಿಗೆ ಸಮಸ್ಯೆಯಾದರೆ ತುಂಬಾ ಜನ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ರೀತಿಯಲ್ಲಿ ಮೀಮ್ ಕಲ್ಪಿಸುವುದು, ವಿಡಿಯೋಗಳನ್ನು ಮಾಡಿ ವೈರಲ್ ಮಾಡುವುದು, ಕರುಣೆಯನ್ನು ತೋರಿಸುತ್ತಾರೆ. ಆದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿನಿತ್ಯ ಮನುಷ್ಯರಿಗೆ ಹಾಲು ನೀಡಿ ರಕ್ಷಿಸುತ್ತಿರುವ, ಬದುಕಲು ಸಹಾಯ ಮಾಡುತ್ತಿರುವ ಜಾನುವಾರುಗಳು/ಗೋವುಗಳು ಕಾಯಿಲೆಗೆ ತುತ್ತಾಗುತ್ತಿದ್ದರು ಎಲ್ಲಿಯೂ ಸಂಚಾಲ ಮೂಡಿಸುವ ಕೆಲಸವಾಗಲೀ ಅಥವಾ ವರದಿಯಾಗಲೀ ಯಾವ ಮಾದ್ಯಮವೂ ಇಲ್ಲಿಯವರೆಗೆ ಇದರ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಧ್ವನಿ ಏರಿಸುತ್ತಿರಲ್ಲ. ಆದರೆ ಲಕ್ಷಾಂತರ ಸಂಖ್ಯೆಯಲ್ಲಿ ಗೋವುಗಳು ದಿನವೂ ಖಾಯಿಲೆಗೆ ಬಲಿಯಾಗಿ, ಸಾವಿರ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಳ್ಳುತ್ತಿವೆ.
ಲಂಪಿ ಚರ್ಮ ರೋಗ ವೈರಾಣುವನ್ನು ಎಲ್.ಎಸ್.ಡಿ ವೈರಾಣು ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಕ್ಯಾಪ್ರಿ ಪೋಕ್ಸ್ ವೈರಾಣಾಗಿದ್ದು, ಪೋಕ್ಸ್ ವಿರಡೆ ಎಂಬ ಕುಟುಂಬಕ್ಕೆ ಸೇರಿದೆ. ಮ.ಕಿ ಪೋಕ್ಸ್ ಹಾಗೂ ಸಣ್ಣ ಪೋಕ್ಸ್ ಕೂಡಾ ಈ ಕುಟುಂಬಕ್ಕೆ ಸೇರಿದೆ. ಎಲ್.ಎಸ್.ಡಿ ವೈರಾಣು, ಕುರಿ ಪೋಕ್ಸ್ ವೈರಾಣು ಹಾಗೂ ಮೇಕೆ ಪೋಕ್ಸ್ ವೈರಾಣು ಈ ಮೂರು ಒಂದೇ ಪ್ರತಿಜನಕವನ್ನು ಹಂಚಿಕೊಳ್ಳುತ್ತದೆ. ಈ ಚರ್ಮ ರೋಗ ವೈರಾಣು ಮನುಷ್ಯನಿಗೆ ಸಧ್ಯಕ್ಕೆ ಹರಡುವುದಿಲ್ಲ. ಆದರೆ, ಮುಂದೆ ರೂಪಾಂತರ ಹೊಂದಿ ಮಾನವರಿಗೆ ಹರಡುವ ಸಾಧ್ಯತೆಯಿದೆ. ಸೊಳ್ಳೆ, ನೊಣ, ಉಣುಕು [ಉಣ್ಣೆ]ಗಳಿಂದ ಈ ಸಾಂಕ್ರಾಮಿಕ ಕಾಯಿಲೆ ಹರಡುವ ಸಾಧ್ಯತೆಯಿದೆ. ಹಾಗೆಯೇ ಹಸು, ಕರು, ದನ ಮತ್ತು ಎಮ್ಮೆಯಂತಹ ಪ್ರಾಣಿಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ ಎಂದು ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.
ದನ – ಕರುಗಳಿಗೆ ಈ ರೋಗ ಹರಡಿತೆಂದರೆ ವೈರಾಣುಗಳು ಬಾಯಲ್ಲಿ ಜೊಲ್ಲಿನಲ್ಲಿ ಹಾಗೂ ಮೂಗಿನಲ್ಲಿ ನೀರಿನ ಮೂಲಕವೂ ಹೊರಬರುತ್ತದೆ. ಇದು ದನಗಳ ಆಹಾರ ಮತ್ತು ನೀರಿಗೆ ಸೇರುತ್ತದೆ. ಇದರಿಂದ ಬೇರೆ ಜಾನುವಾರುಗಳಿಗೆ ವೈರಾಣು ಹರಡುವ ಅಪಾಯವಿರುತ್ತದೆ. ಕೆಲವೊಂದು ಬಾರಿ ಕೃತಕ ಗರ್ಭಧಾರಣೆಯ ಸಂದರ್ಭದಲ್ಲಿ ಗಂಡು ಜಾನುವಾರುಗಳ ವೀರ್ಯದಲ್ಲಿ ಇದ್ದರೆ ಅದರ ಮೂಲಕವೂ ಹರಡುವ ಸಾಧ್ಯತೆಯಿದೆ ಎಂದು ಅಧ್ಯಯನ ಹೇಳುತ್ತದೆ.
ಈ ಎಲ್.ಎಸ್.ಡಿ ವೈರಾಣು ಪ್ರಾಣಿಗಳಲ್ಲಿ ದೇಹದ ಗಂಟಲಿನ ಭಾಗದಲ್ಲಿ ದುಗ್ದರಸ ಗ್ರಂಥಿಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ದುಗ್ದರಸ ಗ್ರಂಥಿ ಹಿಗ್ಗುತ್ತದೆ, ಚರ್ಮದ ಮೇಲೆ ಸಣ್ಣ ಸಣ್ಣ ಗಂಟುಗಳ ರೀತಿ ಕಾಣಿಸಿಕೊಳ್ಳುತ್ತದೆ. ಈ ಗಂಟುಗಳು ಸರಿಸುಮಾರು 2ರಿಂದ 5 ಸೆ.ಮೀ ರವರೆಗೆ ದೊಡ್ಡದಾಗಿರುತ್ತದೆ. ತಲೆ, ಕುತ್ತಿಗೆ, ಕೈ-ಕಾಲು, ಕೆಚ್ಚಲು ಮುಂತಾದ ಭಾಗಗಳಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಗಂಟುಗಳು ಹುಣ್ಣಾಗಿ ಬದಲಾಗುವ ಸಾಧ್ಯತೆಯಿದೆ. ಕೊನೆಯದಾಗಿ ಗಾಯದ ಸಿಪ್ಪೆಯಾಗಿ ವಿಕೃತವಾಗಿ, ಶೋಚನೀಯವಾಗಿರುತ್ತದೆ ಆ ಜಾನುವಾಋಉಗಳ ಪರಿಸ್ಥಿತಿ.
ರೋಗದ ಲಕ್ಷಣಗಳು: ತೀವ್ರ ಜ್ವರ, ಕಡಿಮೆ ಹಾಲು ಉತ್ಪತ್ತಿ, ಕಣ್ಣು ಮೂಗಲ್ಲಿ ನೀರು ಹಾಗೂ ಬಾಯಲ್ಲಿ ಜೊಲ್ಲು ಸುರಿಯುತ್ತದೆ, ಹಸಿವು ಕಡಿಮೆ, ಖಿನ್ನತೆಗೆ ಒಳಗಾಗಿದಂತೆ ವರ್ತಿಸುತ್ತದೆ, ದೇಹದ ಚರ್ಮಗಳೆಲ್ಲಾ ಗಾಯಗಳಿಂದ ಕೂಡಿರುತ್ತದೆ, ಸಣ್ಣವಾಗಿ ನಿತ್ರಾಣ ಪರಿಸ್ಥಿಗೆ ಒಳಗಾಗುತ್ತದೆ, ಬಂಜೆತನ ಅಥವಾ ಗರ್ಭಪಾತವಾಗುತ್ತದೆ.
ಗೋವುಗಳಿಗೆ ಈ ಸೋಂಕು ತಗುಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳಲು 28 ದಿನಗಳು ಬೇಕಾಗಬಹುದು ಎಂದು ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ. ಈ ಕಾಯಿಲೆ ಬಂತು ಎಂದರೆ ಜಾನುವಾರುಗಳ ಸಾವಿನ ಪ್ರಮಾಣ 10% ಗಿಂತ ಕಡಿಮೆಯಿದೆ. ಆದರೆ ಈಗ ಭಾರತ ದೇಶದಲ್ಲಿ ಈ ಕಾಯಿಲೆಯ ಸ್ಪೋಟ ಉಂಟಾದ ಕಾರಣ 15% ಸಾವಿನ ಪ್ರಮಾಣ ವರದಿಯಾಗುತ್ತಿದೆ. ವಿಶೇಷವಾಗಿ ರಾಜಸ್ಥಾನದಲ್ಲಿ ಕಾಯಿಲೆ ಹರಡುವ ವೇಗ ಮತ್ತು ಸಾವಿನ ಪ್ರಮಾಣ ಹೆಚ್ಚಿದೆ. ಕರ್ನಾಟಕದಲ್ಲಿ ಹಾವೇರಿ, ಗದಗ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಈ ಮಾರಕ ಸೋಂಕು ವ್ಯಾಪಿಸಿದೆ. ಹಾವೇರಿಯಲ್ಲಿ 100ಕ್ಕೂ ಹೆಚ್ಚು ಜಾನುವಾರುಗಳು ಮೃತಪಟ್ಟಿದೆ ಎಂದು ವರದಿಯಾಗಿದೆ.
ಭಾರತ ದೇಶ ಒಂದು ಕೃಷಿ ಪ್ರಧಾನ ರಾಷ್ಟ್ರ. ಕೃಷಿಯನ್ನು ಅವಲಂಬಿಸಿ ದೊಡ್ಡ ಜನಸಂಖೆ ಭಾರತದಲ್ಲಿದೆ. ಕೃಷಿ ಮತ್ತು ಪಶುಸಂಗೋಪನೆ ಜೊತೆಜೊತೆಗೆ ಸಾಗುತ್ತದೆ. ಭಾರತ ವಿಶ್ವದಲ್ಲೇ ಅತಿ ದೊಡ್ಡ ಹಾಲು ಉತ್ಪಾದನಾ ರಾಷ್ಟ್ರ. 1970ರ ದಶಕದಲ್ಲಿ ಶ್ವೇತ ಕ್ರಾಂತಿಯಾದ ಕಾರಣ ಹಾಲಿನ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ಉತ್ಕರ್ಷವಾಯಿತು. ಸಹಕಾರಿ ಜಾಲಗಳ ಮೂಲಕ ಭಾರತ ಇಡೀ ವಿಶ್ವಕ್ಕೆ ಮಾದರಿ ಆನ್ನುವ ರೀತಿಯಲ್ಲಿ ಹಾಲಿನ ಉತ್ಪಾದನೆ ಹಾಗೂ ಮಾರಾಟ ವ್ಯವಸ್ಥೆಯನ್ನು ಮಾಡಿಕೊಂಡಿದೆ.
ಪ್ರತಿದಿನಕ್ಕೆ ಭಾರತ ದೇಶ ಸರಿಸುಮಾರು 21 ಕೋಟಿ ಟನ್ ನಷ್ಟು ಹಾಲನ್ನು ಉತ್ತತ್ತಿ ಮಾಡುತ್ತದೆ. 37 ವಿವಿಧ ತಳಿಯ ಜಾನುವಾರುಗಳು ಭಾರತದಲ್ಲಿದೆ. ಕೋಟ್ಯಾಂತರ ಜನ ಈ ಹಸುಗಳು ಮತ್ತು ಅದರಿಂದ ಬರುವ ಆದಾಯದ ಮೇಲೆ ಹೆಚ್ಚಿನ ಜನರು ಅವಲಂಬಿತರಾಗಿದ್ದಾರೆ. ಅಷ್ಟಲ್ಲದೇ ಗೋವನ್ನು ಪೂಜನೀಯ ಪ್ರಾಣಿ ಎಂದು ಕರೆಯಲ್ಪಡುತ್ತಾರೆ.
ಈ ಕಾಯಿಲೆ 1929ರಲ್ಲಿ ಜಾಂಬಿಯಾ ಎಂಬ ದೇಶದಲ್ಲಿ ಕಂಡು ಬಂದಿತು. ನಂತರ ಆಫ್ರಿಕಾದ ಬೇರೆ ಬೇರೆ ದೇಶಗಳಲ್ಲಿ ಹರಡಲು ಶುರುವಾಯ್ತು. ಪಶ್ಚಿಮ ಏಷ್ಯಾ ದಕ್ಷಿಣ ಯೂರೋಪ್ ಮಧ್ಯ ಏಷ್ಯಾಗೂ ಹರಡಲು ಪ್ರಾರಂಭವಾಯಿತು.
೨೦೧೯ರಲ್ಲಿ ದಕ್ಷಿಣ ಏಷ್ಯಾ ಹಾಗೂ ಚೈನಾ ಗೂ ಹರಡಿತು. ಈ ರೋಗ ದಕ್ಷಿಣ ಏಷ್ಯಾಗೆ ಬಂದಾಗ ಮೊದಲು ೨೦೧೯ರ ಜುಲೈ ತಿಂಗಳಿನಲ್ಲಿ ಬಾಂಗ್ಲಾದೇಶದಲ್ಲಿ ಕಾಣಿಸಿಕೊಂಡಿತು ಅದೇ ವರ್ಷ ಆಗಸ್ಟ್ ನಲ್ಲಿ ಭಾರತಕ್ಕೆ ಲಗ್ಗೆ ಇಟ್ಟಿತು. ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಕಾಣಿಸಿಕೊಂಡಿತು. ಇದಕ್ಕೆ ಮೂಲಕಾರಣ ಗಡಿಯಲ್ಲಿ ಹಸುಗಳನ್ನು ಅನಿಧಿಕೃತವಾಗಿ ಸಾಗಾಣಿಕೆ ಮತ್ತು ಮಾರಾಟ ಮಾಡುತ್ತಿದ್ದರಿಂದ ಈ ಹರಡುವಿಕೆ ಆಗಿರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.
ಸೋಂಕಿತ ಪ್ರಾಣಿಗಳಿಂದ ಪಡೆದುಕೊಂಡ ಹಾಲಿನಲ್ಲಿ ಎಲ್.ಎಸ್.ಡಿ.ವಿ ಸಾಂಕ್ರಾಮಿಕ ವೈರಾಣು ಇರುತ್ತದೆ ಎಂದು ಎಲ್ಲೂ ಅಧ್ಯಯನದಲ್ಲಿ ಸಾಬೀತಾಗಿಲ್ಲ. ಏಷ್ಯಾದಲ್ಲಿ ಎಲ್ಲಾ ಕಡೆಗಳಿಂದ ಹಾಲನ್ನು ಸಂಗ್ರಹಿಸಿ ಬೇರೆ ಬೇರೆ ರೀತಿಯಲ್ಲಿ ಸಂಸ್ಕರಣೆ ಮಾಡುತ್ತಾರೆ, ಕೆಲವು ಬಾರಿ ಪರಿಷ್ಕರಣೆ ಮಾಡಲಾಗುತ್ತದೆ ಆಗ ಈ ವೈರಸ್ ಉಳಿಯಲು ಸಾಧ್ಯವಿಲ್ಲ ಎಂದು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ ನಿರ್ದೇಶಕ ತಿಳಿಸಿದ್ದಾರೆ.
ಈ ವೈರಾಣು ನಮ್ಮ ಭಾರತದ ರಾಜಸ್ಥಾನದಲ್ಲಿ ದೊಡ್ಡ ಪ್ರತಾಪ ತೋರಿಸಿ ದನಕರುಗಳ ಮರಣ ಮೃದಂಗ ಬಾರಿಸುತ್ತಿದೆ. ಹಾಗಾಗಿ ಹಾಲಿನ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಾಣಿಸುತ್ತಿದೆ. ಒಂದು ದಿನಕ್ಕೆ ೩ ರಿಂದ 6 ಲಕ್ಷ ಲೀಟರ್ ಹಾಲಿನ ಪ್ರಮಾಣ ಕಡಿತವಾಗಿದೆ.
ಜುಲೈ ತಿಂಗಳಲ್ಲಿ ರಾಜಸ್ಥಾನ ಮತ್ತು ಗುಜರಾತ್ ರಾಜ್ಯದಲ್ಲಿ ಈ ಸೋಂಕು ಏಕಾಏಕಿ ವೇಗ ಪಡೆದುಕೊಂಡಿತ್ತು. ಆಗಸ್ಟ್ ತಿಂಗಳಲ್ಲಿ ಪಂಜಾಬ್ ಹಿಮಾಚಲ ಪ್ರದೇಶ, ಉತ್ತರಾಖಂಡ, ಅಂಡಮಾನ್ ಮತ್ತು ನಿಕೋಬಾರ್, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ ಹಾಗೂ ಹರ್ಯಾಣ ರಾಜ್ಯಕ್ಕೂ ಹರಡಿದೆ. ಇತ್ತೀಚಿನ ವಾರಗಳಲ್ಲಿ ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ ಮತ್ತು ಜಾರ್ಖಂಡದಲ್ಲಿಯೂ ಹರಡಿದೆ ಎಂದು ವರದಿಯಾಗಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಸರಿಸುಮಾರು 197 ಜಿಲ್ಲೆಗಳಲ್ಲಿ 18 ಲಕ್ಷ ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ. 75 ಸಾವಿರ ಹಸುಗಳು ಸತ್ತು ಹೋಗಿದ್ದು ಅದರಲ್ಲಿ 50 ಸಾವಿರ ರಾಜಸ್ತಾನ ರಾಜ್ಯದಲ್ಲಿ ಅತಿ ಹೆಚ್ಚು ಎಂಬ ವರದಿಯಿದೆ.
ಸಂಯುಕ್ತ ರಾಷ್ಟ್ರಗಳ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್.ಎ.ಓ) ಮಾರ್ಗಸೂಚಿ:
1. ಯಾವ ಜಾನುವಾರುಗಳಿಗೆ ಈ ಸೋಂಕು ಹರಡಿದೆ ಅಂತಹ ೮೦%ದನಕರುಗಳನ್ನು ಗುರುತಿಸಿ ಲಸಿಕೆ ಹಾಕಿಸಬೇಕು .
2. ದನಕರುಗಳ ಸಾಗಾಟ ಮತ್ತು ಮಾರಾಟದ ಕಡೆ ಗಮನ ನೀಡಬೇಕು. ಸೋಂಕಿನ ಜಾನುವಾರುಗಳನ್ನು ಪ್ರತ್ಯೇಕವಾಗಿ ಬಿಟ್ಟು ನೋಡಿಕೊಳ್ಳಬೇಕು.
3. ಕೊಟ್ಟಿಗೆಯನ್ನು ಆಗಾಗ ಸ್ವಚ್ಛಗೊಳಿಸಿ ಸೊಳ್ಳೆ ಮತ್ತು ನೊಣ ಜಾಸ್ತಿ ಇರದಂತೆ ನೋಡಿಕೊಳ್ಳಬೇಕು
4. ಮೇಕೆ ಪೋಪ್ ಲಸಿಕೆ ಎಲ್.ಎಸ್.ಡಿ ಮಹಾಮಾರಿಗೆ ಅತ್ಯಂತ ಪರಿಣಾಮಕಾರಿ ಎಂದು ಕೇಂದ್ರ ಮೀನುಗಾರಿಕೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಹೇಳಿದ್ದಾರೆ.
ಸೆಪ್ಟೆಂಬರ್ ನ ಮೊದಲನೇ ವಾರದಲ್ಲಿ ೯೭ಲಕ್ಷ ಲಸಿಕೆಯನ್ನು ಹಾಕಲಾಗಿದ್ದು, ರಾಜಸ್ಥಾನ ಮಹಾರಾಷ್ಟ್ರ ದೆಹಲಿ ಹಾಗೂ ಉತ್ತರ ಪ್ರದೇಶದಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿ ಜನರಿಗೆ ಕಾಯಿಲೆಗಳ ವಿರುದ್ಧ ತಮ್ಮ ಜಾನುವಾರುಗಳನ್ನು ರಕ್ಷಿಸಲು ಮಾರ್ಗದರ್ಶನ ಕೊಡಲಾಗುತ್ತಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ೨ ಸಂಸ್ಥೆಗಳು ಈಗಾಗಲೇ ಎಲ್.ಎಸ್.ಡಿ ಸ್ವದೇಶಿ ಲಸಿಕೆಯನ್ನು ತಯಾರಿ ಮಾಡುತ್ತಿದ್ದಾರೆ ಇನ್ನೂ ೩-೪ ತಿಂಗಳೊಳಗೆ ಎಲ್ಲಾ ಕಡೆ ಲಭ್ಯವಾಗುತ್ತದೆ.
ಈ ಲಸಿಕೆಯನ್ನು ೨೦೧೯ರಲ್ಲಿ ರಾಂಚಿಯಲ್ಲಿ ಬಂದ ಎಲ್.ಎಸ್.ಡಿ ವೈರಾಣು ಸ್ಪೋಟಗೊಂಡಾಗ ಸಂಗ್ರಹಿಸಿದ ಮಾದರಿ ಮತ್ತು ೨೦೨೨ರಲ್ಲಿ ವೈರಾಣು ಬಂದು ಸ್ಫೋಟವಾದಾಗ ಸಂಗ್ರಹಿಸಿದ ಮಾದರಿಯನ್ನು ಬಳಸಿ ಈ ಲಸಿಕೆಯನ್ನು ತಯಾರಿಸಲಾಗಿದೆ. ಇದಕ್ಕೆ ಆದ ಪ್ರತ್ಯೇಕವಾದ ಚಿಕಿತ್ಸೆಯಿಲ್ಲದ ಕಾರಣ ರೋಗಲಕ್ಷಣದ ಆದಾರದ ಮೇರೆಗೆ ರೋಗಲಕ್ಷಣದ ಚಿಕಿತ್ಸೆ ನೀಡಲಾಗುತ್ತದೆ. ಲಸಿಕೆಯೇ ಮುಂಜಾಗ್ರತಾ ಮದ್ದು ಎಂದು ಪಶುಸಂಗೋಪನೆ ಇಲಾಖೆಯವರು ತಿಳಿಸಿದ್ದಾರೆ.
–ಮಣಿಕಂಠ ತ್ರಿಶಂಕರ್, ಮೈಸೂರು