ನವೆಂಬರ್ 1ರಂದು ಕನ್ನಡಿಗರಿಗೆ ಸಂತಸದ ದಿನ ಏಕೆಂದರೆ ಅಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ದಿನ. ಮೈಸೂರು ರಾಜ್ಯ ಅಂದರೆ ಈಗಿನ ಕರ್ನಾಟಕ 1956ರ ನವೆಂಬರ್ 1ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯೋತ್ಸವ ಅಥವಾ ಕನ್ನಡ ದಿನವನ್ನು ಕರ್ನಾಟಕ ರಚನೆ ದಿನ ಅಥವಾ ಕರ್ನಾಟಕ ದಿನ ಎಂದೂ ಕರೆಯುತ್ತಾರೆ. 1956 ರ ನವೆಂಬರ್ ಒಂದರಂದು ದಕ್ಷಿಣ ಭಾರತದ ಎಲ್ಲ ಕನ್ನಡ ಭಾಷೆ ಮಾತನಾಡುವ ಪ್ರದೇಶ ಗಳನ್ನು ಕರ್ನಾಟಕ ಎಂಬ ಒಂದು ರಾಜ್ಯ ವನ್ನು ರೂಪಿಸಲು ವಿಲೀನಗೊಳಿಸಲಾಯಿತು.
ಈ ಕನ್ನಡ ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಸಂಭ್ರಮದಿಂದ ಆಚರಿಸುತ್ತಾರೆ. ಮಾತ್ರವಲ್ಲದೆ ವಿಶ್ವದಾದ್ಯಂತ ಹರಡಿರುವ ಕನ್ನಡಿಗರು ಈ ದಿನವನ್ನು ಆಚರಿಸುತ್ತಾರೆ.
ಕರ್ನಾಟಕ ಹುಟ್ಟಿಗೆ ಆಲೂರು ವೆಂಕಟರಾವ್ ಅವರು ಕಾರಣ ಏಕೆಂದರೆ, ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ 1905 ರಲ್ಲಿ ಆರಂಭಿಸಿದ್ದು ಅವರೆ. 1950 ರಲ್ಲಿ ಭಾರತವು ಗಣರಾಜ್ಯವಾದ ನಂತರ ಭಾಷೆಗಳ ಆಧಾರದ ಮೇಲೆ 1956 ನವೆಂಬರ್ 1 ರಂದು ರಾಜ್ಯ ಗಳನ್ನು ವಿಂಗಡಿಸಿದರು. ಅದರಂತೆ ಮದ್ರಾಸ್, ಮುಂಬೈ ಮತ್ತು ಹೈದ್ರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ನಂತರ ಮೈಸೂರು ರಾಜ್ಯವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಯಿತು. ಅವುಗಳೆಂದರೆ ಉತ್ತರ ಕರ್ನಾಟಕ, ಹಳೆಮೈಸೂರು, ಮಲೆನಾಡು. 1973 ರ ನವೆಂಬರ್ 1 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಅವಧಿಯಲ್ಲಿ ಮೈಸೂರು ರಾಜ್ಯ ವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ಕರ್ನಾಟಕ ಪದದ ಮೂಲದ ಬಗ್ಗೆ ಹಲವು ಅಭಿಪ್ರಾಯಗಳಿದ್ದರೂ ಸಾಮಾನ್ಯವಾಗಿ “ಕರು” ಮತ್ತು “ನಾಡು” ಸೇರಿ “ಎತ್ತರದ ಭೂಮಿ” ಎಂಬರ್ಥದ ಕರುನಾಡು ಪದದಿಂದ ಉಗಮವಾಗಿದೆ ಎನ್ನಲಾಗಿದೆ. ಕರು ಎಂದರೆ ಕಪ್ಪು, ನಾಡು ಎಂದರೆ ಪ್ರದೇಶ ಎಂದು ಅರ್ಥೈಸಿಕೊಂಡರೆ ಬಯಲು ಸೀಮೆಯ ಕಂಡು ಕಪ್ಪು ಹತ್ತಿ ಮಣ್ಣಿನಿಂದಾಗಿ ಹೆಸರು ಬಂದಿದೆ ಎಂದೂ ಹೇಳುತ್ತಾರೆ.